ಇದೀಗ ಪ್ರೇಕ್ಷಕ ವಲಯದ ತುಂಬೆಲ್ಲ `ಕೆರೆಬೇಟೆ’ (kerebete movie trailer) ಚಿತ್ರದ ಟ್ರೈಲರ್ ಬಗೆಗಿನ ಚರ್ಚೆ ಕಾವೇರಿಕೊಂಡಿದೆ. ಗಟ್ಟಿಯಾದ, ಮಲೆನಾಡು ಸೀಮೆಯ ಗ್ರಾಮ್ಯ ಪರಿಸರದ ರಗಡ್ ಕಥಾನಕವನ್ನೊಳಗೊಂಡಿರುವ ಈ ಚಿತ್ರದ ಟ್ರೈಲರ್ ತಾಜಾತನದೊಂದಿಗೆ ಪ್ರೇಕ್ಷಕರನ್ನೆಲ್ಲ ಸೋಕುತ್ತಿದೆ. ಕೇವಲ ಈ ಟ್ರೈಲರ್ ಮೂಡಿ ಬಂದಿರುವ ರೀತಿಯಿಂದ ಮಾತ್ರವಲ್ಲ; ಅದನ್ನು ಬಿಡುಗಡೆಗೊಳಿಸಿದ್ದರ ವಿಚಾರದಲ್ಲಿಯೂ ಚಿತ್ರತಂಡ ಹೊಸತನ ಕಾಯ್ದುಕೊಂಡಿದೆ. ಮಲೆನಾಡು ಸೀಮೆಯ ಜಾನಪದ ಕಲೆಯಾಗಿದ್ದುಕೊಂಡು, ಜನಪದೀಯ ಪಸೆಯನ್ನೊಳಗೊಂಡಿರುವ ಅಂಟಿಗೆ ಪಿಂಟಿಗೆಯ ಮೂಲಕ ಈ ಟ್ರೈಲರ್ ಲಾಂಚ್ ಆಗಿದೆ!
ಅಂಟಿಗೆ ಪಿಂಟಿಗೆ ಎಂಬುದು ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವಂಥಾ ಆಚರಣೆ. ಅದೂ ಕೂಡಾ ಮೆಲ್ಲಗೆ ಕಣ್ಮರೆಯಾಗುತ್ತಾ ಬಂದಿದೆ. ಅಂಥಾದ್ದೊಂದು ಸಂಪ್ರದಾಯವನ್ನು ಬೆಂಗಳೂರಿಗೂ ಪರಿಚಯಿಸಿದ ಕೀರ್ತಿ ಕೆರೆಬೇಟೆ ಚಿತ್ರತಂಡಕ್ಕೆ ಸಲ್ಲುತ್ತದೆ. ಅಂಟಿಗೆ ಪಿಂಟಿಗೆಯಂತೆಯೇ ಮನೆ ಮನೆಗೆ ತೆರಳಿ, ಎಣ್ಣೆ ಎರೆಸಿಕೊಂಡು, ಎಲ್ಲರ ಆಶೀರ್ವಾದ ಪೊಡೆದುಕೊಂಡು ಈ ಟ್ರೈಲರ್ ಅನಾವರಣಗೊಳಿಸಲಾಗಿದೆ. ಅಂದಹಾಗೆ, ಯಾವುದೇ ಶುಭವಾದುದನ್ನು ಆರಂಭಿಸುವ ಮುನ್ನ ಇಂಥಾದ್ದೊಂದು ಪ್ರತೀತಿ ಇದೆ. ಅದರ ಮೂಲಕ ಆರಂಭವಾಗಿ, ಕಡೆಗೆ ಗೌರಿಶಂಕರ್ ಅವರ ಪುಟ್ಟ ಮಗು ಈಶ್ವರಿಮನ ಈ ಟ್ರೈಲರ್ ಅನ್ನು ಲೋಕಾರ್ಪಣೆಗೊಳಿಸಿದೆ.
ಇದು ನಿಜಕ್ಕೂ ಅರ್ಥವತ್ತಾದ ನಡೆ. ಯಾಕೆಂದರೆ, ಒಂದಿಡೀ ಕೆರೆಬೇಟೆ ಚಿತ್ರದ ಆಂತರ್ಯದ ಮೂಲಧಾತು ಇರುವುದೇ ಇಂಥಾ ಆಚರಣೆಗಳ ಸುತ್ತಾ. ಅದನ್ನು ಬೆಂಗಳೂರಿನಂಥಾ ಥರ ಥರದ ಸಂಸ್ಕøತಿ ಮಿಳಿತವಾಗಿರುವ ಮಹಾನಗರಿಗೆ ಪರಿಚಯಿಸಿರೋದು ನಿಜಕ್ಕೂ ಹೆಚ್ಚುಗಾರಿಕೆ. ಹೀಗೆ ಶಾಸ್ತ್ರೋಕ್ತವಾಗಿ ಬಿಡುಗಡೆಗೊಂಡಿರುವ ಈ ಟ್ರೈಲರ್ ಇದೀಗ ಟ್ರೆಂಡಿಂಗಿನತ್ತ ಹೊರಳಿಕೊಳ್ಳುತ್ತಿದೆ. ಇದು ಭಿನ್ನ ಕಥೆ ಹೊಂದಿರುವ ಅಪರೂಪದ ಚಿತ್ರವೆಂಬ ಸ್ಪಷ್ಟ ಚಿತ್ರಣವೂ ಪ್ರೇಕ್ಷಕರಿಗೆ ಲಭಿಸಿದೆ. ಈಗಾಗಲೇ ಒಂದಷ್ಟು ಸಿನಿಮಾಗಳ ಭಾಗವಾಗಿ ಕಾರ್ಯ ನಿರ್ವಹಿಸಿದ್ದ ರಾಜಗುರು ಬಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮೂಲತಃ ಕೃಷಿಕರೂ, ಗೌರಿಶಂಕರ್ ಸಹೋದರರೂ ಆಗಿರುವ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನುಳಿದಂತೆ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿರುವ ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿರುವ ಈ ಚಿತ್ರ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.