ಭಾರತೀಯ ಚಿತ್ರಪ್ರೇಮಿಗಳನ್ನು ಸಾರಾಸಗಟಾಗಿ ಆವರಿಸಿಕೊಂಡಿದ್ದಾಕೆ (actress sridevi) ಶ್ರೀದೇವಿ. ಓರ್ವ ನಟಿ ಅದೆಂಥಾ ಪ್ರಭಾವ ಬೀರಬಹುದೆಂಬುದಕ್ಕೆ ತಾಜಾ ಉದಾಹರಣೆಯಂತಿದ್ದ ಶ್ರೀದೇವಿ ಮರೆಯಾಗಿ ವರ್ಷಗಳು ಕಳೆದಿವೆ. ಇದೀಗ ಅವರ ಪುತ್ರಿ (janhvi kapoor) ಜಾನ್ವಿ ಕಪೂರ್ ಹಂತ ಹಂತವಾಗಿ ನಟಿಯಾಗಿ ಮಿಂಚುತ್ತಾ , ಅಮ್ಮನ ಹಾದಿಯಲ್ಲಿಯೇ ಹೆಜ್ಜೆಯೂರುತ್ತಿದ್ದಾಳೆ. ಬಾಲಿವುಡ್ ನಲ್ಲಿ ಒಂದಷ್ಟು ಯಶಸ್ವೀ ಸಿನಿಮಾಗಳ ನಾಯಕಿಯಾಗಿ ಬೇಡಿಕೆ ಹೊಂದಿರುವ ಜಾನ್ವಿ ಇದೀಗ ದಕ್ಷಿಣ ಭಾರತೀಯ ಚಿತ್ರರರಂಗಕ್ಕೂ ಪಾದಾರ್ಪಣೆ ಮಾಡಿದ್ದಾಳೆ. ಅಮ್ಮ ಹೆಜ್ಜೆಯೂರಿದ ಹಾದಿಯಲ್ಲಿ ನಡೆಯುತ್ತಾ, ಒಂದು ಕಾಲದಲ್ಲಿ ಆಕೆ ಪ್ರಸಿದ್ಧಿ ಪಡೆದಿದ್ದ ಚಿತ್ರರಂಗದಲ್ಲೇ ತಾನೂ ಮಿಂಚಲು ಅವಕಾಶ ಸಿಗೋದೇ ಥ್ರಿಲ್ಲಿಂಗ್ ವಿಚಾರ. ಸದ್ಯಕ್ಕೆ ಅಂಥಾದ್ದೊಂದು ಖುಷಿ ಜಾನ್ವಿ ಪಾಲಿಗೆ ಇಡಿಯಾಗಿ ಸಿಕ್ಕಿದೆ!
ಇದೀಗ ಭಾಎರತೀಯ ಚಿತ್ರರಂಗದಲ್ಲಿ ಜ್ಯೂನಿಯರ್ ಎನ್ ಟಿ ಆರ್ ನಟನೆಯ ದೇವರಾ ಚಿತ್ರ ಭಾರೀ ಕ್ರೇಜ್ ಹುಟ್ಟುಹಾಕಿದೆ. ಆ ಚಿತ್ರಕ್ಕೆ ನಾಯಕಿ ಯಹಾರಾಗುತ್ತಾರೆಂಬ ಕುತೂಹಲ ಬಹುತೇಕರಲ್ಲಿತ್ತು. ಆ ಸಾಲಿನಲ್ಲಿ ಒಂದಷ್ಟು ಹೆಸರುಗಳೂ ಓಡಾಡಿದ್ದವು. ಕಡೆಗೂ ಜಾನ್ವಿ ಕಪೂರ್ ಗೆ ಆ ಅವಕಾಶ ಸಿಕ್ಕ ಸುದ್ದಿ ಜಾಹೀರಾಗಿದೆ. ಇದು ಜಾನ್ವಿ ಪಾಲಿಗೆ ದಕ್ಷಿಣ ಭಾರತೀಯ ಚಿತ್ರರಂಗದ ಮಟ್ಟಿಗೆ ಮೊದಲ ಚಿತ್ರ. ಈ ಅವಕಾಶ ಸಿಕ್ಕ ಬಗ್ಗೆ ಭಾವುಕಳಾಗಿರುವ ಜಾನ್ವಿ `ನಾನು ನನ್ನ ಬೇರುಗಳಿಗೆ ಹತ್ತಿರಾಗುತ್ತಿದ್ದೇನೆ’ ಎಂಬರ್ಥದಲ್ಲಿ ಖುಷಿ ಹಂಚಿಕೊಂಡಿದ್ದಾಳೆ.
ಆ ಖುಷಿಗೆ ಕಾರಣ ಇಲ್ಲದಿಲ್ಲ. ಬಾಲಿವುಡ್ಡಿನಲ್ಲಿ ಆ ಕಾಲಕ್ಕೆ ದೊಡ್ಡ ಹೆಸರು ಮಾಡಿದ್ದ ಶ್ರೀದೇವಿ ಎನ್ ಟಿ ರಾಮರಾವ್ ಗೆ ನಾಯಕಿಯಾಗುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಆಗಮಿಸಿದ್ದರು. ಈಗ ಮಗಳು ಜಾನ್ವಿ ಅದೇ ಎನ್ಟಿಆರ್ ಮೊಮ್ಮಗನಿಗೆ ನಾಯಕಿಯಾಗೋ ಮೂಲಕ ತೆಲುಗಿಗೆ ಅಡಿಯಿರಿಸುತ್ತಿದ್ದಾಳೆ. ಆಕೆಯ ಪಾಲಿಗೆ ಇದಕ್ಕಿಂತಲೂ ಥ್ರಿಲ್ಲಿಂಗ್ ವಿಚಾರ ಬೇರೇನಿರಲು ಸಾಧ್ಯ? ಇದೀಗ ಚಿತ್ರೀಕರಣ ಆರಂಭಿಸಿರುವ ದೇವರಾ ಅಕ್ಟೋಬರ್ ಹೊತ್ತಿಗೆಲ್ಲ ತೆರೆಗಾಣಲಿದೆ ಎನ್ನಲಾಗುತ್ತಿದೆ. ಇದೇ ಹೊತ್ತಿನಲ್ಲಿ ಜಾನ್ವಿ ನಟಿಸಿರುವ ಒಂದೆರಡು ದೊಡ್ಡ ಬಾಲಿವುಡ್ ಚಿತ್ರಗಳೂ ಕೂಡಾ ಈ ವರ್ಷವೇ ಬಿಡುಗಡೆಗೊಳ್ಳಲಿವೆ. ಅಂತೂ ಜಾನ್ವಿ ಪಾಲಿಗೆ ಇದು ಯಶದ ಸಂವತ್ಸರವಾಗೋದರಲ್ಲಿ ಯಾವ ಸಂದೇಹವೂ ಇಲ್ಲ!