ಅದ್ಯಾವ ಕ್ರೇಜು ಅದೆಂಥಾ ಆವೇಗದಲ್ಲಿ ಚಾಲ್ತಿಯಲ್ಲಿದ್ದರೂ ಕೂಡಾ ನೆಲಮೂಲದ ಕಥೆಗಳತ್ತ ಅಂದಾಜಿಗೆ ನಿಲುಕದಂಥಾ ನಿರೀಕ್ಷೆ ನಮ್ಮಲ್ಲಿದೆ. ಒಂದು ಪ್ರದೇಶದ ಗ್ರಾಮ್ಯ ಬದುಕಿಗೆ ಸಿನಿಮಾ ಫ್ರೇಮು ಹಾಕೋದೇ ಥ್ರಿಲ್ಲಿಂಗ್ ಸಂಗತಿ. ಅದರಲ್ಲಿಯೂ ಹಲವೂ ಅಚ್ಚರಿ, ನಿಗೂಢಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಮಲೆನಾಡು ಭಾಗದ ಕಥಾನಕಗಳತ್ತ ವಿಶೇಷ ಅಕ್ಕರೆ ಪ್ರೇಕ್ಷಕರಲ್ಲಿದೆ. ಅಂಥಾದ್ದೊಂದು ಕುರುಹುಗಳನ್ನು ಆರಂಭದಿಂದಲೂ ಹೊಮ್ಮಿಸುತ್ತಾ ಬಂದಿದ್ದ ಚಿತ್ರ (kerebete movie) `ಕೆರೆಬೇಟೆ’. (gowrishankar) ಗೌರಿಶಂಕರ್ ನಾಯಕನಾಗಿ ನಟಿಸಿರುವ ಈ ಚಿತ್ರ ಈಗಾಗಲೇ ನಾನಾ ಸ್ವರೂಪದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಇದೀಗ ಅದರ (kerebete tariler) ಟ್ರೈಲರ್ ಬಿಡುಗಡೆಗೊಂಡಿದೆ. ಅದು ಮೂಡಿ ಬಂದಿರುವ ರೀತಿ, ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಪುಷ್ಕಳವಾದೊಂದು ಗೆಲುವು ದಕ್ಕುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ!
ಕೆರೆಬೇಟೆಯ ಬಗೆಗಿನ ಒಂದಷ್ಟು ವಿಚಾರಗಳು ಹಂತ ಹಂತವಾಗಿ ಜಾಹೀರಾಗಿದ್ದವು. ಅದರ ಸುತ್ತ ಒಂದಷ್ಟು ಕುತೂಹಲ ಗಸ್ತು ತಿರುಗಲಾರಂಭಿಸಿದ್ದೂ ಕೂಡಾ ಆ ಕಾರಣದಿಂದಲೇ. ಹಾಗೆ, ಈ ಸಿನಿಮಾದಲ್ಲಿ ಗಹನವಾದದ್ದೇನೋ ಇದೆ ಎಂಬಂಥಾ ಭಾವವೊಂದು ತಂತಾನೇ ಮೂಡಿಕೊಂಡಿತ್ತು. ಇದೀಗ ಅದೆಲ್ಲವನ್ನೂ ನಿಜವಾಗಿಸುವಂತೆ ಕೆರೆಬೇಟೆಯ ಟ್ರೈಲರ್ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಕೆರೆಬೇಟೆ ಎಂಬುದು ಮಲೆನಾಡಿನ ಅಸ್ಮಿತೆಯಂಥಾ ಆಚರಣೆ. ಆದರೀಗ ಅದು ಆಧುನಿಕ ಬದುಕಿನ ಜಂಜಡಗಳ ನಡುವೆ ಅಳಿವಿನಂಚಿನತ್ತ ಸರಿಯುತ್ತಿದೆ. ಅಂಥಾ ಕೆರೆಬೇಟೆಯನ್ನು ಕೇಂದ್ರವಾಗಿಟ್ಟುಕೊಂಡು, ಮಲೆನಾಡಿನ ಜನಜೀವನ, ಕಟ್ಟುಪಾಡುಗಳು, ಪ್ರೀತಿ, ದ್ವೇಷದಂಥಾ ಸಂಕೀರ್ಣ ಕಥನದ ಸೂಚನೆ ಈ ಟ್ರೈಲರ್ ಮೂಲಕ ಸಿಕ್ಕಿದೆ.
ಈ ಹಿಂದೆ ಜೋಕಾಲಿ, ರಾಜಹಂಸದಂಥಾ ಸದಭಿರುಚಿಯ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದವರು ಗೌರಿಶಂಕರ್. ಆ ನಂಝತರ ಒಂದಷ್ಟು ಕಾಲ ತಣ್ಣಗಿದ್ದ ಅವರೀಗ ಕೆರೆಬೇಟೆಯ ನಾಯಕನಾಗಿ, ರಗಡ್ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಟ್ರೈಲರಿನಲ್ಲಿ ಪ್ರಧಾನವಾಗಿ ಆ ಪಾತ್ರದ ಛಾಯೆಗಳು ಅನಾವರಣಗೊಂಡಿವೆ. ವಿಶೇಷವಾಗಿ, ಮಲೆನಾಡು ಭಾಗದ ಭಾಷಾ ಶೈಲಿ ಪ್ರಧಾನವಾಗಿ ಗಮನ ಸೆಳೆಯುತ್ತದೆ. ಆರಂಭದಿಂದ ಇಲ್ಲಿಯವರೆಗೂ ಹಳ್ಳಿ ಸೊಗಡೆಂದರೆ ಮಂಡ್ಯ ಸೀಮೆಯ ಭಾಷೆ ಮಾತ್ರವೇ ಎಂಬಂತಾಗಿತ್ತು. ಸಲೀಸಾಗಿ ಅರ್ಥವಾಗಬಲ್ಲ, ನೇರವಾಗಿ ಮನಸಿಗೆ ತಾಕಬಲ್ಲ ಮಲೆನಾಡು ಶೈಲಿಯ ಕನ್ನಡ ಪದೇ ಪದೆ ಮರೆಗೆ ಸರಿಯುತ್ತಿತ್ತು. ಆದರಿಲ್ಲಿ ಆ ಭಾಷಾ ಶೈಲಿಯ ಅಸಲೀ ಫ್ಲೇವರ್ ತುಸುವೂ ಮುಕ್ಕಾಗದಂತೆ ಬಳಕೆಯಾದಂತಿದೆ!
ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿದ್ದ ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿ ನಟಿಸಿದ ಅನುಭವ ಹೊಂದಿರುವ ಬಿಂದು ಶಿವರಾಮ್ ನಾಯಕಿಯಾಗಿ, ಮಲೆನಾಡು ಹುಡುಗಿಯಾಗಿ ಸಾಥ್ ಕೊಟ್ಟಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿರುವ ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.