ಅದ್ಯಾವುದೇ ಭಾಷೆಯದ್ದಾಗಿರಲಿ; ಸಿನಿಮಾ ರಂಗದಲ್ಲಿ ಗೆಲುವು ದಕ್ಕಿಸಿಕೊಳ್ಳೋದೇ ಒಂದು ಸಾಹಸವಾದರೆ, ಸಿಕ್ಕಿದ ಗೆಲುವನ್ನು ಮುಕ್ಕಾಗದಂತೆ ಕಾಪಿಟ್ಟುಕೊಳ್ಳುವುದೊಂದು ಸವಾಲು. ಅದೆಷ್ಟೇ ಎಚ್ಚರದಿಂದ ಹೆಜ್ಜೆಯಿಟ್ಟರೂ, ಸ್ಪರ್ಧೆ ಎಂಬುದು ನಿಂತ ನೆಲವನ್ನೇ ಅದುರಿಸಿ ಬಿಡುತ್ತೆ. ಅಂಥಾದ್ದೊಂದು ಮಾಯೆ ಈವತ್ತಿಗೆ ನಂಬರ್ ಒನ್ ರೇಸಿನಲ್ಲಿರುವವರನ್ನು ನಾಳೆಯ ಹೊತ್ತಿಗೆಲ್ಲ ನೇಪಥ್ಯಕ್ಕೆ ಗದುಮಿ ಬಿಡಬಹುದು. ಇಂಥಾ ಸವಾಲುಗಳ ನಡುವೆಯೂ ಜಾಗರೂಕತೆಯಿಂದ ಬೇಡಿಕೆ ಉಳಿಸಿಕೊಂಡು ಮಿಂಚುತ್ತಿರುವ ನಟಿಯರ ಸಾಲಿಗೆ ಕಿಯಾರಾ ಅಡ್ವಾಣಿ (actress kiara advani) ನಿಸ್ಸಂದೇಹವಾಗಿಯೂ ಸೇರಿಕೊಳ್ಳುತ್ತಾಳೆ; ಜ್ಯೂನಿಯರ್ ಎನ್ ಟಿ ಆರ್ ಗೆ ಮತ್ತೊಮ್ಮೆ ನಾಯಕಿಯಾಗುವ ಮೂಲಕ!
ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಅವಕಾಶ ಗಿಟ್ಟಿಸಿಕೊಂಡ ಅದೃಷ್ಟವಂತ ನಟಿಯರ ಸಾಲಿನಿಂದ ಕಿಯಾರಾಳನ್ನು ಕೈ ಬಿಡುವಂತಿಲ್ಲ. ಯಾಕೆಂದರೆ, ಆರಂಭದಿಂದಲೇ ಬಾಲಿವುಡ್ಡಿನ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಆಕೆಗೆ ಸಿಗುತ್ತಾ ಬಂದಿವೆ. ಇತ್ತೀಚೆಗಂತೂ ಪಕ್ಕಾ ಆಕ್ಷನ್ ಮೂವಿಗಳ ಅವಕಾಶಗಳ ಕಿಯಾರಾಳನ್ನು ಅರಸಿಕೊಂಡು ಬರಲಾರಂಭಿಸಿವೆ. ಅದರ ಭಾಗವಾಗಿಯೇ ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ವಾರ್ 2 ಚಿತ್ರಕ್ಕೂ ಸಹಿ ಹಾಕಿದ್ದಾಳಂತೆ. ಈ ಚಿತ್ರದ ಚಿತ್ರೀಕರಣ ಶುರುವಾಗಿ ತಿಂಗಳಾಗುತ್ತಾ ಬಂದಿದೆ. ಮುಂದಿನ ವಾರದಿಂದ ಹೃತಿಕ್ ಚಿತ್ರೀಕರಣದಲ್ಲಿ ಭಾಗಿಯಾದರೆ, ಜ್ಯೂನಿಯರ್ ಎನ್ ಟಿ ಆರ್ ಏಪ್ರಿಲ್ ತಿಂಗಳಿನಿಂದ ಹಾಜರಾಗಲಿದ್ದಾರಂತೆ.
ಅಷ್ಟು ಮಾತ್ರವಲ್ಲದೇ ಡಾನ್ 3 ಎಂಬ ಮತ್ತೊಂದು ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಸರಣಿಯ ಮೊದಲೆರಡು ಭಾಗಗಳ ನಾಯಕನಾಗಿ ಶಾರೂಖ್ ಖಾನ್ ನಟಿಸಿದ್ದರು. ಅದು ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಈ ಯಶದ ಪ್ರಭೆಯಲ್ಲಿ ಮೂರನೇ ಆವೃತ್ತಿಗೆ ಶಾರೂಕ್ ನನ್ನು ಅಪ್ರೋಚ್ ಮಾಡಲಾಗಿತ್ತಾದರೂ ಆತ ಅದನ್ನು ಅದನ್ನು ತಿರಸ್ಕರಿಸಿದ್ದ. ಇದೀಗ ಆ ಪಾತ್ರಕ್ಕೆ ರಣ್ವೀರ್ ಸಿಂಗ್ ಆಯ್ಕೆಯಾಗಿದ್ದಾನೆ. ಆತನಿಗೆ ಕಿಯಾರಾ ಜೋಡಿಯಾಗೋದೂ ಕೂಡಾ ನಿಕ್ಕಿಯಾಗಿದೆ. ಅಂದಹಾಗೆ, ಮಳೆಗಾಲ ಶುರುವಾಗೋ ಹೊತ್ತಿಗೆಲ್ಲ ಈ ಸಿನಿಮಾದ ಚಿತ್ರೀಕರಣ ಚಾಲೂ ಆಗಲಿದೆ.