ಮುಸುಡಿಯೆದುರಿಗೊಂದು ಮೈಕು, ಎದುರಿಗೊಂದಷ್ಟು ಮಂದಿ ಮತ್ತು ಆಸುಪಾಸಲ್ಲಿ ಮೈ ಕುಲುಕಿಸಿಕೊಂಡು ನಗೋ ಪ್ಯಾದೆಗಳಿದ್ದು ಬಿಟ್ಟರೆ (actor jaggesh) ನವರಸ ನಾಯಕ ಜಗ್ಗೇಶ್ ಗೆ ಅಕ್ಷರಶಃ ಬಾಯಿಭೇದಿ ಶುರುವಾಗಿ ಬಿಡುತ್ತೆ. ಅಷ್ಟಕ್ಕೂ ಜಗ್ಗೇಶ್ ವ್ಯಕ್ತಿತ್ವಕ್ಕೇ ಇತ್ತೀಚೆಗೇಕೋ ಆಮಶಂಕೆ ಬಾಧಿಸಿದಂತಿದೆ. ಮಾತೆತ್ತಿದರೆ ಗುರುರಾಯರ ಹೆಸರು ಹೇಳುವ ಜಗ್ಗೇಶ್, ಅದೇ ಬಾಯಲ್ಲಿ ಅಸಹ್ಯ ಕಾರಿಕೊಳ್ಳೋದು ಹೊಸತೇನಲ್ಲ. ಆ ನಂತರ ಥೇಟು ಜ್ಯೋತಿಷ್ಯ ಪಂಡಿತನಂತೆ ಅದಕ್ಕೊಂದು ಗ್ರಹಗತಿ, ಶನಿಪೀಡೆ ಅಂತೆಲ್ಲ ಕಾಗೆ ಹಾರಿಸೋದರಲ್ಲಿಯೂ ಈತ ನಿಸ್ಸೀಮ. ಅದೆಂಥಾ ಪಂಡಿತನೂ ಇದ್ಯಾವ ಲಿಪಿಯೆಂದು ತಲೆ ಕೆರೆದುಕೊಳ್ಳುವ ರೇಂಜಿಗೆ ಕನ್ನಡದಲ್ಲಿ ಬರೆಯುವ ಈ ಪುಣ್ಯಾತ್ಮ ಕಾಲಿಟ್ಟಲ್ಲೊಂದು ವಿವಾದ ಖಾಯಂ ಎಂಬಂತಾಗಿದೆ. ಮೊನ್ನೆ ದಿನ (ranganayaka movie) ರಂಗನಾಯಕ ಚಿತ್ರದ ಕಾರ್ಯಕ್ರಮವೊಂದರ ವೇದಿಕೆಯಲ್ಲೂ ಕೂಡಾ ಜಗ್ಗೇಶಿಗೆ ಮತ್ತದೇ ಕಾಯಿಲೆ ಮರುಕಳಿಸಿದೆ. ದುರಂತವೆಂದರೆ, ತನ್ನ ಕೀಳು ಮಾತುಗಳನ್ನು ಟೀಕಿಸಿದವರ ಮೇಲೇ ಒಂದು ಕೇಸು ದಾಖಲಿಸುವ ಮೂಲಕ ಜಗ್ಗೇಶ್ ಸ್ವಸಮರ್ಥನೆಗಿಳಿದುಬಿಟ್ಟಿದ್ದಾರೆ!
ಅದು ಗಡ್ಡದ ಗುರುವಿನ ವಿಕೃತಿ!
ಒಂದಷ್ಟು ಕಾಲದಿಂದ ಖಾಸಗೀ ಬದುಕಿನ ಕಿಸುರುಗಳಲ್ಲಿ ಕಳೆದು ಹೋಗಿದ್ದಾತ ಮಠ ಗುರುಪ್ರಸಾದ್. ಈ ಪ್ರಭೃತ್ತಿಗೆ ಕಾಮಿಡಿಗೂ, ವಿಕೃತಿಗೂ ಇರುವ ಗೆರೆಯೂ ಕಾಣಿಸದಷ್ಟು ಕಣ್ಣು ಮಂಜಾದಂತಿದೆ. ಹೀನಾಮಾನ ಮಾತಾಡಿ, ತಾನು ಪ್ರಚಂಡ ಬುದ್ಧಿವಂತನಂತೆ ಪೋಸು ಕೊಟ್ಟು ಜೂಲುಗಡ್ಡ ನೀವಿಕೊಳ್ಳೋದು ಈತನ ಜಾಯಮಾನ. ಇಂಥಾ ಗುರುಪ್ರಸಾದ್ ಇದೀಗ `ರಂಗನಾಯಕ’ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದಾನೆ. ಒಂದು ಕಾಲದಲ್ಲಿ ಮಠದಂಥಾ ಚಿತ್ರಗಳ ಮೂಲಕ ನಿರೀಕ್ಷೆ ಮೂಡಿಸಿದ್ದಾತ ಗುರು ಪ್ರಸಾದ್. ಆ ನಂತರದಲ್ಲಿ ಒಳ್ಳೊಳ್ಳೆ ಸಿನಿಮಾಗಳ ನಿರೀಕ್ಷೆ ಪ್ರೇಕ್ಷಕರಲ್ಲಿತ್ತು. ಆದರೆ, ಲೂಸ್ ಟಾಕ್ ಗಳನ್ನೇ ಚಟವಾಗಿಸಿಕೊಂಡ ಗುರು ಪ್ರಸಾದ್ ಕಳೆದು ಹೋಗಿ ವರ್ಷಗಳೇ ಸಂದಿವೆ!
ಇಂಥಾ ಗುರುಪ್ರಸಾದ್ ಖರ್ಚೇ ಇಲ್ಲದಂತೆ ರಂಗನಾಯಕ ಚಿತ್ರದ ಪ್ರಮೋಷನ್ನು ಮಾಡಲು ನೀಲನಕ್ಷೆ ಸಿದ್ಧಪಡಿಸಿಕೊಂಡಂತಿದೆ. ಅದರ ಭಾಗವಾಗಿಯೇ ಹಾಡೊಂದರಲ್ಲಿ ಮೀಟೂ ಶ್ರುತಿ ಅಂತೆಲ್ಲ ಸೇರಿಸಿ ಒಂದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದ. ಅಂಥಾ ಬಿಟ್ಟಿ ಪ್ರಮೋಷನ್ನಿನ ಭಾಗವಾಗಿಯೇ ಮೊನ್ನೆ ದಿನ ಜಗ್ಗೇಶ್ ಬಾಯಿಂದ ವರ್ತೂರು ಸಂತೋಷ್ ವಿರುದ್ಧ ನಿಂದನಾತ್ಮಕ ನುಡಿಗಳು ಹೊರಬಿದ್ದಿವೆ. ಆ ವೇದಿಕೆಯಲ್ಲಿ ಮಾಮೂಲು ಭೋಳೇ ಮಾತುಗಳನ್ನಾಡುತ್ತಿದ್ದ ಜಗ್ಗೇಶಿಗೆ ಹುಲಿ ಉಗುರಿನ ಮ್ಯಾಟರ್ ಒದರುವಂತೆ ಉತ್ತೇಜಿಸಿದ್ದೇ ಗುರುಪ್ರಸಾದ್. ಹಾಗಂತ ಅದು ಆ ಕ್ಷಣದ ನಿರ್ಧಾರವಾಗಿರಲಿಕ್ಕಿಲ್ಲ. ಅದು ಪಕ್ಕಾ ಸ್ಕ್ರಿಪ್ಟೆಡ್ ಅಂತ ಎಂಥವರಿಗಾದರೂ ಅರ್ಥವಾಗುತ್ತೆ. ಇದೇ ಭರದಲ್ಲಿ ಜಗ್ಗೇಶಿ ವರ್ತೂರು ಸಂತೋಷ್‍ಗೆ `ಕಿತ್ತೋದ್ ನನ್ಮಗ’ ಎಂಬರ್ಥದಲ್ಲಿ ನಿಂದಿಸಿದ್ದಾರೆ. ಮಗ್ಗುಲಲ್ಲಿ ನಿಂತಿದ್ದ ಪ್ರಳಯಾಂತಕ ಗುರುಪ್ರಸಾದ ಜೂಲುಗಡ್ಡ ನೀವಿಕೊಂಡಿದ್ದಾನೆ!
ಆಡುಮಾತೆಂಬ ಅಸ್ತ್ರ!
ಹಾಗೆ ನೋಡಿದರೆ, ಸಾರ್ವಜನಿಕ ಬದುಕೆಂದ ಮೇಲೆ ಒಂದಷ್ಟು ವಿವಾದಗಳು ಮಾಮಾಲು. ಆದರೆ, ಈ ಜಗ್ಗೇಶ್ ಮಾತಾಡಿದ್ದೆಲ್ಲವೂ ವಿವಾದವಾಗಿ ಬಿಡುತ್ತದೆ. ಅದಕ್ಕೆ ಕಾರಣ ಈ ಆಸಾಮಿ ಕಾಮಿಡಿಯ ಹೆಸರಲ್ಲಿ ತನ್ನೊಳಗೆ ಸಾಕಿಕೊಂಡಿರುವ ವಿಚಿತ್ರ ಮನಃಸ್ಥಿತಿ. ಈಗಂತೂ ಹಸಿದ ಹುಲಿಯೊಂದು ಪಂಜ ಸೆಟೆಸಿ ಬೇಟೆಗೆ ಸನ್ನದ್ಧವಾಗಿರುವಾಗ ಅದರೆದುರು ಲಂಗೋಟಿ ಕಳಚಿ ನಿಂತಂತಾಗಿದೆ ಜಗ್ಗೇಶ್ ಪರಿಸ್ಥಿತಿ. ಯಾವಾಗ ತಾನಾಡಿದ ಮಾತು ತನಗೇ ಮುಳುವಾಗುವ, ಒಂದಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ರುಬ್ಬಿ ಬಿಸಾಡುವ ಹಂತ ತಲುಪಿತೋ, ಜಗ್ಗೇಶ್ ಮತ್ತೊಂದು ಪಟ್ಟು ಪ್ರದರ್ಶನಕ್ಕಿಳಿದಿದ್ದಾರೆ. ಅಷ್ಟಕ್ಕೂ ಬಾಯಿಗೆ ಬಂದಂತೆ ಒದರಿ, ಕ್ಷಮೆ ಕೇಳೋದು ಜಗ್ಗಣ್ಣನಿಗೇನು ಹೊಸತಲ್ಲ. ವರ್ತೂರು ಸಂತೋಷ್ ಬಗ್ಗೆ ತಾನಾಡಿದ ಮಾತಿಗೂ ಕ್ಷಮೆ ಕೇಳಿ ಪಾರಾಗುವ ಅವಕಾಶವಿತ್ತು. ಆದರೆ, ಅವರು ಕಾನೂನು ಸಮರದ ಹಾದಿ ಹಿಡಿದಿದ್ದಾರೆ!
ಜಗ್ಗೇಶ್ ಇಂಥಾ ಮಾತಾಡುತ್ತಲೇ ಅನೇಕ ದಿಕ್ಕುಗಳಿಂದ ವಿರೋಧ ವ್ಯಕ್ತವಾಗಿತ್ತಲ್ಲಾ? ಅದು ಗಂಭೀರ ಸ್ವರೂಪ ಪಡೆಯುತ್ತಲೇ ಅವರು ಮಲ್ಲೇಶ್ವ್ವರ ಪೊಲೀಸ್ ಠಾಣೆಯಲ್ಲೊಂದು ದೂರು ದಾಖಲಿಸಿದ್ದಾರೆ. ಇಬ್ಬರ ಹೆಸರನ್ನು ಅದರಲ್ಲಿ ಉಲ್ಲೇಖಿಸಿ, ತಾನಾಡಿದ ಮಾತಿಗೆ ಅವರು ಜಾತಿ ಸ್ವರೂಪ ನೀಡಿ ಹಾದಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಇನ್ನೂ ಕಾಮಿಡಿಯೆಂದರೆ, ಕಿತ್ತೋದ್ ನನ್ಮಗ ಅನ್ನೋದು ಗ್ರಾಮೀಣ ಆಡುಭಾಷೆ ಅಂತಲೂ ಜಗ್ಗೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ವರ್ತುರು ಸಂತೋಷ್ ಬಗ್ಗೆ ತಾನಾಡಿರುವ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇಂಥಾ ಕಾನೂನು ಸಮರ ಜಗ್ಗೇಶ್ ಗೆ ಮುಳುವಾದೀತೇ ಹೊರತು, ಅದರಿಂದ ಮಾನ ಮುಚ್ಚಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ!
ಆ ಮಾತು ಅನ್ವಯವಾಗೋದು ಅವರಿಗೇ!
ಅಷ್ಟಕ್ಕೂ ಅದು ರಂಗನಾಯಕ ಚಿತ್ರದ ಪತ್ರಿಕಾಗೋಷ್ಠಿ. ಅಲ್ಲಿ ಚರ್ಚೆಯಾಗಬೇಕಿರೋದು ಕೇವಲ ಆ ಚಿತ್ರದ ಬಗ್ಗೆ ಮಾತ್ರ. ಬೇಕಂತಲೇ ಜಗ್ಗೇಶಿ ಎಂದೋ ಆಗಿ ಹೋದ ಹುಲಿ ಉಗುರಿನ ಪ್ರಕರಣದ ಬಗ್ಗೆ ನಾಲಿಗೆ ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಒಂದರ್ಥದಲ್ಲಿ ತಾವೇ ಶ್ರಮವಹಿಸಿ ಮುಚ್ಚಿಹಾಕಿದ್ದ ಪ್ರಕರಣಕ್ಕೆ ಮರುಜೀವ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ತಮ್ಮ ಕತ್ತಿಗೆ ನೇತು ಬಿದ್ದಿದ್ದ ಹುಲಿ ಉಗುರಿನ ಲಾಕೆಟ್ಟು ತೋರಿಸಿ ಅದು ಅಮ್ಮ ಕೊಟ್ಟಿದ್ದು ಅಂತ ಇಡೀ ನಾಡಿಗೆ ಟಾಂ ಟಾಂ ಹೊಡೆದಿದ್ದವರು ಇದೇ ಜಗ್ಗೇಶ್. ಜೊತೆಗೆ ಇದು ಒರಿಜಿನಲ್ಲು ಅಂತ ಬೇರೆ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು.
ಈಗ ರಂಗನಾಯಕ ವೇದಿಕೆಯಲ್ಲಿ ನಿಂತು `ಅವನ್ಯಾರೋ ಕಿತ್ತೋದ್ ನನ್ಮಗ ಒರಿಜನಲ್ಲೇ ಹಾಕ್ಕಂಡು ತಗಲಾಕ್ಕಂಡವ್ನೆ’ ಎಂಬರ್ಥದಲ್ಲಿ ಮಾತಾಡಿದ್ದಾರೆ. ಒರಿಜಿನಜಲ್ ಹುಲಿ ಉಗುರು ಹಾಕಿದೋನು ಕಿತ್ತೋದವ್ನು ಅನ್ನೋ ಜಗ್ಗೇಶ್ ಮಾತನ್ನು ಒಪ್ಪಿಕೊಳ್ಳೋಣ. ಅಂಥಾದ್ದೇ ಲಾಕೆಟ್ಟು ಧರಿಸಿ ಓಡಾಡಿದ್ದ ಜಗ್ಗೇಶ್ ಕೂಡಾ ಅದೇ ಸಾಲಿಗೆ ಸೇರೋದಿಲ್ಲವೇ? ಹಾಗೊಂದು ವೇಳೆ ಜಗ್ಗೇಶ್ ಧರಿಸಿದ್ದ ಒರಿಜಿನಲ್ ಹುಲಿ ಉಗುರಿನ ಲಾಕೆಟ್ಟಲ್ಲ ಅಂದುಕೊಳ್ಳೋಣ; ಅರಣ್ಯಾಧಿಕಾರಿಗಳು ಎದುರು ನಿಂತಾದ ಆ ಪಾಟಿ ಅದುರಿ ಹೋಗುವ ಅವಶ್ಯಕತೆ ಏನಿತ್ತು? ಡಿಕೆಶಿಗೆ ಮಸ್ಕಾ ಹೊಡೆದು ಇಡೀ ಪ್ರಕರಣವನ್ನೇ ಹಳ್ಳ ಹಿಡಿಸೋ ದರ್ದೇನಿತ್ತು. ಈ ವಿಚಾರವನ್ನೆಲ್ಲ ಕೂಲಂಕಷವಾಗಿ ಪರಾಮರ್ಶಿಸಿದರೆ, ಜಗ್ಗೇಶ್ ವರ್ತೂರ್ ಸಂತೋಷ್ ನನ್ನು ನೆಪವಾಗಿಟ್ಟುಕೊಂಡು ಆ ಮಾತನ್ನು ತಮಗೆ ತಾವೆ ಹೇಳಿಕೊಂಡಿರಬಹುದೆನ್ನಿಸುತ್ತೆ!
ಡಿಕೆಶಿಗೂ ಗುನ್ನ!
ನವರಸ ನಾಯಕನ ನವರಂಗೀ ಆಟಗಳೇನು ಒಂದೆರಡಲ್ಲ. ಈತನ ರಾಜಕೀಯ ಬೆಳವಣಿಗೆಯ ಹಿಂದೆಯೂ ನಾನಾ ಕಥೆಗಳಿದ್ದಾವೆ. ಆರೋಪಗಳೂ ಇದ್ದಾವೆ. ಈಗಂತೂ ಜಗ್ಗೇಶ್ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅದು ಯಾವ ಪಕ್ಷದಿಂದಲೇ ಈ ಸ್ಥಾನದಲ್ಲಿ ನಿಂತರೂ ಕೂಡಾ ಘನತೆಯಿಂದ ವರ್ತಿಸಬೇಕು. ಸಾರ್ವಜನಿಕವಾಗಿಯೂ ಹದ್ದು ಮೀರದಂತೆ ನಡೆದುಕೊಳ್ಳಬೇಕು. ಹಾಗಂತ ಅದೇನೂ ಬೈಲಾ ಅಲ್ಲ; ಸಣ್ಣದೊಂದು ಕಾಮನ್ ಸೆನ್ಸ್ ಅಷ್ಟೆ. ಆದರದು ಜಗ್ಗೇಶ್ ಪಾಲಿಗೆ ಅಪರಿಚಿತ. ಸಾರ್ವಜನಿಕ ವಲಯದಲ್ಲಿ ನಿಂತಾಗ ಯಾವುದನ್ನು ಮಾತಾಡಬೇಕು, ಯಾವುದನ್ನು ಬಿಡಬೇಕೆಂಬ ಕನಿಷ್ಠ ಖಬರೂ ನವರಸ ನಾಯಕನಿಗಿಲ್ಲ. ಬದಲಾಗಿ ನಾಕು ಜನ ಕೇಳುವವರು ಸಿಕ್ಕರೆ ಜಗ್ಗೇಶ್ ಗೆ ಅಕ್ಷರಶಃ ಬಾಯಿ ಭೇದಿ ಕಿತ್ತುಕೊಂಡು ಬಿಡುತ್ತೆ!
ಮೇಲ್ಕಂಡ ಮಾತಿಗೆ ರಂಗನಾಯಕ ಪತ್ರಿಕಾಗೋಷ್ಠಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸುಖಾಸುಮ್ಮನೆ ಹುಲಿಉಗುರು ಕೆರೆಯಲು ನಿಂತ ಜಗ್ಗೇಶ್, ಇದೇ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿಕೆಶಿಗೂ ಖೆಡ್ಡಾ ತೋಡಿದ್ದಾರೆ. ಹುಲಿ ಉಗುರು ಪರಚೋದು ಗ್ಯಾರೆಂಟಿ ಅಂತ ಅರ್ಥವಾದಾಗ ಡಿಕೆಶಿಗೆ ಮಸ್ಕಾ ಹೊಡೆದು, ಇಡೀ ಕೇಸನ್ನೇ ಹಳ್ಳ ಹಿಡಿಸಿದ್ದನ್ನೂ ಆತ ರಸವತ್ತಾಗಿ ವಿವರಿಸಿದ್ದಾರೆ. ಈ ಮೂಲಕ ಯಾವುದೇ ಪಕ್ಷದಲ್ಲಿದ್ದರೂ ಕೂಡಾ ತನಗೆ ಕಂಟಕ ಎದುರಾದಾಗ ಯಾರ ಮನೆ ಬಾಗಿಲು ಬಡಿಯಲೂ ಸೈ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಜಾತಿ ಎಂಬುದು ಅದು ಹೇಗೆ ಪಕ್ಷ ಮೀರಿ ಹೆಡೆ ಎತ್ತಿ ನಿಂತಿದೆ ಅನ್ನೋದನ್ನೂ ಕೂಡಾ ಋಜುವಾತುಗೊಳಿಸಿದ್ದಾರೆ!
ಅದು ಗ್ರಹಗತಿಯಲ್ಲ; ನಶೆಯ ಕಿತಾಪತಿ!
ವರ್ತೂರು ಸಂತೋಷ್ ಎಂಬಾತನಿಗೆ ಕಿತ್ತೋದ್ ನನ್ಮಗ ಅಂದಿದ್ದಾರಲ್ಲಾ ಜಗ್ಗೇಶ್? ಆ ಮಾತನ್ನು ಅವರು ನಿ9ಜವಾಗಿಯೂ ಹೇಳಬೇಕಾಗಿರೋದು ಅವರೇ ಜನ್ಮವಿತ್ತ ಪ್ರೀತಿಯ ಪುತ್ರನಿಗೆ. ಜಗ್ಗೇಶ್ ಪುತ್ರ ಯತಿರಾಜನ ಅಧ್ವಾನಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತವೆ. ಇಂಥವನು 2021ರಲ್ಲಿ ಮಹಾ ಯಡವಟ್ಟು ಮಾಡಿಕೊಂಡಿದ್ದ. ಚಿಕ್ಕಬಳ್ಳಾಪುರದ ಅಗಲಕುರ್ಕಿ ಬಳಿ ಯತಿರಾಜ್ ಚಲಾಯಿಸುತ್ತಿದ್ದ ಕಾರು ಅದ್ಯಾವ ಪರಿಯಾಗಿ ಆಕ್ಸಿಡೆಂಟಿಗೀಡಾಗಿತ್ತೆಂದರೆ, ಆತ ಬದುಕಿದ್ದೇ ಹೆಚ್ಚು. ಮಾರು ದೂರ ಮಗುಚಿಬಿದ್ದಿದ್ದ ಐಶಾರಾಮಿ ಕಾರಿನಿಂದ ಎದ್ದು ಬಂದವನೇ, ಮಾಧ್ಯಮದವರು ಕೇಳಿದ ಪ್ರಶ್ನೆಗೆ `ಟಿಶ್ಕ್ಯಾಂವ್ ಅಂತ ಹಾರಿಬಿಡ್ತು’ ಅಂತ ಉತ್ತರ ನೀಡಿದ್ದ!
ಆ ಕ್ಷಣದಲ್ಲಿ ಅವನಿದ್ದ ಸ್ಥಿತಿಯೇ ನೆತ್ತಿಗೆ ನಶೆಯ ಪಸೆ ಅಡರಿಕೊಂಡಿರೋದನ್ನು ಸಾಬೀತುಗೊಳಿಸುವಂತಿತ್ತು. ನಶೆಯಿಂದಲೇ ಅಂಥಾ ಭೀಕರ ಅಪಘಾತ ಸಂಭವಿಸಿದೆ ಅಂತ ಕರುನಾಡಿಗೆಲ್ಲ ಗೊತ್ತಾಗಿತ್ತು. ಮಾತೆತ್ತಿದ್ದರೆ ಗುರುರಾಯರು, ಭಕ್ತಿ ಅನ್ನುವ ಜಗ್ಗೇಶ್ ಸ್ವಂತ ಮಗನನ್ನು ಹೀಗ್ಯಾಕೆ ಬೆಳೆಸಿದರು ಅಂತ ಅವರನ್ನು ಮೆಚ್ಚಿಕೊಳ್ಳುವ ಮಂದಿಯೇ ಮಾತಾಡಿಕೊಂಡಿದ್ದರು. ನಿಜಕ್ಕೂ ಜಗ್ಗೇಶ್ ವರ್ತೂರು ಸಂತೋಷ್ ವಿಚಾರದಲ್ಲಿ ಆಡಿರೋ ಮಾತು ಖುದ್ದು ಅವರ ಮಗ ಯತಿರಾಜನಿಗೆ ಅನ್ವಯಿಸುತ್ತೆ. ಆತನ ಬಗ್ಗೆ ಅರಿತಿರುವವರೆಲ್ಲ ಹಾಗಂತ ಅಭಿಪ್ರಾಯ ಪಡುತ್ತಿದ್ದಾರೆ. ದುರಂತವೆಂದರೆ, ಈ ಜಗ್ಗಣ್ಣ ಹಾದಿಬಿಟ್ಟ ಮಗನನ್ನು ಗ್ರಹಗತಿಗಳ ಕಥೆ ಕಟ್ಟಿ ಮುಚ್ಚಟೆ ಮಾಡಿಕೊಳ್ಳುವ ದರ್ದಿಗೆ ಬಿದ್ದಿದ್ದಾರೆ. ಅದೂ ಕೂಡಾ ನೋಡೋ ಮಂದಿಗೆ ಕಾಮಿಡಿ ಅನ್ನಿಸಿದರೆ ಅಚ್ಚರಿಯೇನಿಲ್ಲ!
ಸರ್ವರ್ ಸೋಮಣ್ಣ ಬಚಾವಾಗೋದು ಕಷ್ಟ!
ಇದೆಲ್ಲ ಏನೇ ಇದ್ದರೂ ಈ ಬಾರಿ ಜಗ್ಗೇಶ್ ಆಡಿರುವ ಮಾತುಗಳು ಅವರಿಗೆ ಉರುಳಾಗುವ ಲಕ್ಷಣಗಳಿದ್ದಾವೆ. ಯಾಕೆಂದರೆ, ಅದು ಜಾತಿ ಸ್ವರೂಪ ಪಡೆದುಕೊಂಡಿದೆ. ಹೇಳಿಕೇಳಿ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾನೆ. ಆತನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆತನ ಸಮುದಾಯದ ಮಂದಿ ಕ್ಷಮೆ ಕೇಳದಿದ್ದರೆ ಜಗ್ಗೇಶ್ ಮನೆ ಬಾಗಿಲಲ್ಲೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಜಗ್ಗೇಶ್ ತನ್ನ ಲೂಸ್ ಟಾಕ್ ಅನ್ನು ಪ್ರಶ್ನಿಸಿದವರ ವಿರುದ್ಧವೇ ಕೇಸು ದಾಖಲಿಸಿ ತಣ್ಣಗಾಗಿಸೋ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅದು ಹುಲಿ ಉಗುರಿನ ಕೇಸಿನಷ್ಟು ಸಲೀಸಾಗಿ ಮುಕ್ತಾಯವಾಗೋ ಲಕ್ಷಣಗಳಿಲ್ಲ. ಇದೀಗ ವರ್ತೂರು ಅಭಿಮಾನಿ ಪಡೆ ಸಿಡಿದೆದ್ದಿದೆ. ಇದೆಲ್ಲವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಗ್ಗೇಶ್ ವರ್ತೂರು ಟೀಮಿನ ವಿರುದ್ಧವೂ ಮತ್ತೊಂದು ಕೇಸು ದಾಖಲಿಸಿದ್ದಾರೆ.
ನಿಜ, ಜಗ್ಗೇಶ್ ಓರ್ವ ಉತ್ತಮ ನಟ. ಆದರೆ ಬರಬರುತ್ತಾ ತನ್ನ ನಟನಾ ಶಕ್ತಿಯನ್ನು ವಿಕೃತ ಆಂಗಿಕ ಅಭಿನಯ, ಮುಜುಗರಕ್ಕೆ ದೂಡುವ ಸಂಬಾಷಣೆಗಷ್ಟೇ ಸೀಮಿತಗೊಳಿಸಿಕೊಂಡಿದ್ದಾರೆ. ಅದ್ಯಾವುದೋ ಕಾಮಿಡಿ ಶೋಗಳನ್ನು ಸೊಂಟದ ಕೆಳಗಿನ ಅಭಿರುಚಿಗೆ ಸೀಮಿತಗೊಳಿಸಿದ ಕುಖ್ಯಾತಿಗೂ ಜಗ್ಗೇಶ್ ಭಾಜನರಾಗಿದ್ದಾರೆ. ಇಂಥಾದ್ದನ್ನೆಲ್ಲ ಮಾಡಿ ಹತ್ತೂ ಬೆರಳಿಗೆ ಉಂಗುರ ಧರಿಸಿ (ಹನ್ನೊಂದನೇ ಬೆರಳಿನ ಕಥೆ ಗೊತ್ತಿಲ್ಲ!), ಕತ್ತಿನ ತುಂಬಾ ಬಗೆಬಗೆಯ ಸರ ನೇತಾಕಿಕೊಂಡರೆ ಅದಕ್ಕೆ ಭಕ್ತಿ ಅನ್ನೋದಿಲ್ಲ. ಅದು ವ್ಯಕ್ತಿತ್ವದಲ್ಲಿ, ವರ್ತನೆಯಲ್ಲಿ, ಮಾತುಗಳಲ್ಲಿ ಪ್ರತಿಫಲಿಸದೇ ಹೋದರೆ, ಭಕ್ತಿ ಬೂಟಾಟಿಕೆಯಾಗಿಯಷ್ಟೇ ದಾಖಲಾಗುತ್ತದೆ. ತನ್ನನ್ನು ಗುರುರಾಯರ ಪರಮ ಭಕ್ತ ಅಂತ ಹೇಳಿಕೊಳ್ಳುವ ಜಗ್ಗೇಶ್ ಅದೇ ಬಾಯಲ್ಲಿ ಏನೇನೋ ವದರಾಡಿದರೆ, ಅದು ಗುರು ರಾಘವೇಂದ್ರ ಸ್ವಾಮಿಗೆ ಮಾಡಿದ ಅಪಚಾರವಾಗೋದಿಲ್ಲವೇ?