ತುಳು ಚಿತ್ರರಂಗದಲ್ಲಿ ಹೊಸತನದ ತಂಗಾಳಿ ಬೀಸುವಂತೆ ಮಾಡಿ, ಕರುನಾಡ ತುಂಬೆಲ್ಲ ಪರಿಚಿತರಾಗಿರುವವರು (devdas kapikad) ದೇವದಾಸ್ ಕಾಪಿಕಾಡ್. ಅತ್ಯಂತ ಸಭ್ಯ ಶೈಲಿಯ, ಕ್ರಿಯಾಶೀಲತೆಯೊಂದಿಗೆ ನಗಿಸುತ್ತಾ ಬಂದಿರುವ ಕಾಪಿಕಾಡ್ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ; `ಪುರುಷೋತ್ತಮನ ಪ್ರಸಂಗ’ (purushothamana prasanga movie) ಎಂಬ ಭಿನ್ನ ಕಥಾನಕದ ಚಿತ್ರದ ಮೂಲಕ. ಅಷ್ಟಕ್ಕೂ ಈ ಹಿಂದೆ ಅನೇಕರು ದೇವದಾಸ್ ರನ್ನು ಚಿತ್ರರಂಗಕ್ಕೆ ಕರೆತರಲು ಪ್ರಯತ್ನಿಸಿದ್ದಾರೆ. ಆದರೆ, ತುಳು ಚಿತ್ರರಂಗ, ರಂಗಭೂಮಿಯಲ್ಲಿ ಬ್ಯುಸಿಯಾಗಿದ್ದ ಅವರೀಗ ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರಿನ ಸಾರಥ್ಯದಲ್ಲಿ ಆಗಮಿಸಿದ್ದಾರೆ!
ಹಾಗೆ ನೋಡಿದರೆ, ಚಿತ್ರೀಕರಣ ಶುರುವಾದಂದಿನಿಂದಲೂ ಈ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಪುರುಷೋತ್ತಮನ ಪ್ರಸಂಗದ ಚೆಂದದ ಹಾಡೊಂದು ಬಿಡುಗಡೆಗೊಂಡಿದೆ. ಮೆಲುವಾದ ಸಾಹಿತ್ಯ, ಸಂಗೀತದ ಮಿಳಿತದೊಂದಿಗದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದೆ. ಸಾಮಾನ್ಯವಾಗಿ ಯಾವುದೇ ಧಾಟಿಯ ಹಾಡುಗಳು ಬಂದರೂ, ನೇರವಾಗಿ ಎದೆಯೊಳಗೆ ಬಿಡಾರ ಹೂಡಿ ಬಿಡುವಂಥಾ ಹಾಡುಗಳಿಗಾಗಿ ಧ್ಯಾನಿಸುವ ದೊಡ್ಡದೊಂದು ವರ್ಗವೇ ಇದೆ. ಅಂಥ ಮನಸುಗಳನ್ನೆಲ್ಲ ವಶವಾಗಿಸುವಂತೆ ಮೂಡಿ ಬಂದಿರೋ ಈ ಹಾಡಿಗೆ ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಅವರೇ ಹಾಡಿದ್ದಾರೆ.
ಅಜಯ್ ಪೃಥ್ವಿ ಮತ್ತು ರಿಷಿಕಾ ನಾಯಕ್ ಈ ಹಾಡಿನ ಮೂಲಕ ಮುದ್ದಾದ ಜೋಡಿಯಾಗಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಇದರೊಂದಿಗೆ ದೇವದಾಸ್ ಕಾಪಿಕಾಡ್ ಕನ್ನಡದಲ್ಲಿಯೂ ಕಮಾಲ್ ಮಾಡುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ. ದೇವದಾಸ್ ಕಾಪಿಕಾಡ್ ತುಳು ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ನಡೆಸಿರುವ ಪ್ರಯೋಗಗಳು, ಅವರ ಕ್ರಿಯಾಶೀಲತೆಯ ಅರಿವಿರುವವರೆಲ್ಲರಿಗೂ ಪುರುಷೋತ್ತಮನ ಪ್ರಸಂಗದ ಬಗ್ಗೆ ವಶೇಷ ನಿರೀಕ್ಷೆ ಮೂಡೋದರಲ್ಲಿ ಅಚ್ಚರಿಯೇನಿಲ್ಲ. ಇದೆಲ್ಲವನ್ನೂ ಮನಗಂಡಿರುವ ರಾಷ್ಟ್ರಕೂಟ ಪಿಕ್ಚರ್ ನ ರವಿ ಕುಮಾರ್ ಮತ್ತು ಸಂಶುದ್ದೀನ್ ಪಾಪಿಕಾಡ್ ರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ. ಅಜಯ್ ಪೃಥ್ವಿ, ರಿಷಿಕಾ ನಾಯಕ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಿಕಾ ದಿನೇಶ್, ಹರೀಶ್ ಪೂಂಜಾ, ರೂಪಶ್ರೀ ವರ್ಕಾಡಿ, ಮೈಮ್ ರಾಮದಾಸ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.