ಯಾರೂ ಮುಟ್ಟದ ಕಥೆ ಮತ್ತು ಮಾಮೂಲಿ ಪಥದಾಚೆ ಹೊರಳಿಕೊಂಡು ರೂಪುಗೊಂಡಿದ್ದರ ಸ್ಪಷ್ಟ ಸೂಚನೆ… ಇವಿಷ್ಟನ್ನು ಒಳಗೊಂಡಿರುವ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲೊಂದು ಅತೀವ ಪ್ರೀತಿ ಇದೆ. ತನ್ನ ಆಂತರ್ಯದ ಕಸುವಿನ ಕಾರಣದಿಂದಲೇ ಸದ್ದು ಮಾಡುವ ಇಂಥಾ ಚಿತ್ರಗಳನ್ನು ಪ್ರೇಕ್ಷಕರು ಅತ್ಯಂತ ಪ್ರೀತಿಯಿಂದ ಗೆಲ್ಲಿಸಿದ ಉದಾಹರಣೆಗಳೂ ಇದ್ದಾವೆ. ಅಂಥಾ ಅಪರೂಪದ ಗೆಲುವೊಂದನ್ನು ತನ್ನದಾಗಿಸಿಕೊಳ್ಳುವ ಎಲ್ಲ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ (ravike prasanga) ರವಿಕೆ ಪ್ರಸಂಗ. ಸಂತೋಷ್ ಕೊಡಂಕೇರಿ ನಿರ್ದೇಶನದ ಈ ಚಿತ್ರ ಈ ರಾತ್ರಿ ಕಳೆದರೆ ನಿಮ್ಮ ಮುಂದೆ ತೆರೆದುಕೊಳ್ಳುತ್ತೆ. ಈ ಹೊತ್ತಿನಲ್ಲಿ ಸದರಿ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡು, ಕುತೂಹ ಹರಳುಗಟ್ಟುವಂತೆ ಮಾಡಿದ ರೀತಿಯೇ ಸಮ್ಮೋಹಕ!
ಸೂಕ್ಷ್ಮವಾದ ಅಂಶಗಳಿಗೂ ಕೂಡಾ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಸಂತೋಷ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಗಿರುವಾಗ, ಅದರ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ವಿಚಾರದಲ್ಲಿಯೂ ಖಂಡಿತವಾಗಿ ಅನ್ವೇಷಣೆ ನಡೆಸಿರುತ್ತಾರೆ. ಇಲ್ಲಿನ ಪಾತ್ರಗಳು ಮತ್ತು ಅದನ್ನು ನಿರ್ವಹಿಸಿರುವ ಕಲಾವಿದರ ವಿವರ ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತೆ. ಅದು ಸಿನಿಮಾದುದ್ದಕ್ಕೂ ಕ್ಯಾರಿ ಆಗುವ ಪಾತ್ರವಿರಲಿ, ಸೀಮಿತ ಸಮಯಧ ಪಾತ್ರವೇ ಆಗಿದ್ದರೂ ಅದಕ್ಕೊಪ್ಪುವ ಕಲಾವಿದರೇ ಬಣ್ಣ ಹಚ್ಚುವಂತೆ ನೋಡಿಕೊಳ್ಳಲಾಗಿದೆ. ಈ ಕಾರಣದಿಂದಲೇ ಅಡ್ವೋಕೇಟ್ ಪಾತ್ರವೊಂದನ್ನು ಖ್ಯಾತ ನಟ ಹನುಮಂತೇಗೌಡರು ನಿರ್ವಹಿಸಿದ್ದಾರೆ.
ಅದು ಸಣ್ಣ ಸಮಯದಲ್ಲಿ ಬಂದು ಹೋಗುವ ಪಾತ್ರ. ನಾಯಕಿಯ ವಿರುದ್ಧವಾಗಿ ವಾದ ಮಂಡಿಸುವ ಆ ಪಾತ್ರಕ್ಕೆ ಹನುಮಂತೇಗೌಡರೇ ಸೂಕ್ತ ಎಂದರಿತ ಸಂತೋಷ್ ಕೊಡಂಕೇರಿ ಅವರನ್ನು ಒಪ್ಪಿಸಿದ್ದರು. ಹನುಮಂತೇಗೌಡ ಆ ಪಾತ್ರದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರತಂಡದ ಉತ್ಸಾಹ, ಶ್ರದ್ಧೆಗಳನ್ನು ಕಂಡು ಖುಷಿಗೊಂಡಿದ್ದಾರೆ. ತನ್ನ ಪಾತ್ರದಾಚೆಗೂ ಇದೊಂದು ಭಿನ್ನ ಕಥಾನಕ. ಇಂಥಾ ಸಿನಿಮಾದ ಪಾತ್ರವಾದ ಬಗ್ಗೆ ಹನುಮಂತೇಗೌರೊಳಗೊಂದು ತೃಪ್ತ ಭಾವವಿದೆ. ದಶಕಗಳಿಗೂ ಹೆಚ್ಚು ಕಾಲದಿಂದ ಸೂಪರ್ ಹಿಟ್ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಮಿಂಚುತ್ತಾ ಬಂದಿರುವ ಹನುಮಂತೇಗೌಡರು ಧಾರಾವಾಹಿಗಳ ಮೂಲಕವೂ ಪ್ರಸಿದ್ಧರು. ಅವರ ಪಾತ್ರ ಕೂಡಾ ರವಿಕೆ ಪ್ರಸಂಗದ ಪ್ರಧಾನ ಆಕರ್ಷಣೆ ಅನ್ನೋದರಲ್ಲಿ ಅನುಮಾನವಿಲ್ಲ!
ಇದು ಹೆಣ್ತನದ ತುಮುಲಗಳನ್ನು ಒಳಗೊಂಡಿರುವ, ಅಂದಾಜಿಗೆ ನಿಲುಕದ ಸಂಕೀರ್ಣ ಗುಣ ಹೊಂದಿರುವ ಸಿನಿಮಾ. ಈ ವಿಚಾರ ನಾನಾ ಸ್ವರೂಪಗಳಲ್ಲಿ ಈಗಾಗಲೇ ಸಾಬೀತಾಗಿದೆ. ಅಂದಹಾಗೆ ನಿರ್ದೇಶಕ ಸಂತೋಷ್ ಕೊಡಂಕೇರಿ ಅವರ ಮಡದಿ ಪಾವನಾ ಸಂತೋಷ್ ಅವರೇ ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ರವಿಕೆ ಪ್ರಸಂಗಕ್ಕೆ ಸಾಥ್ ಕೊಟ್ಟಿದ್ದಾರೆ.