ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ (ravike prasanga movie) ರವಿಕೆ ಪ್ರಸಂಗ’ ಚಿತ್ರ ಇದೇ ಹದಿನಾರರಂದು ಬಿಡುಗಡೆಗೊಳ್ಳಲಿದೆ. ನಿರ್ದೇಶಕ (director santhosh kodankeri) ಸಂತೋಷ್ ಕೊಡಂಕೇರಿ ಸೂಕ್ಷ್ಮ ಕಥಾ ಹಂದರಕ್ಕೆ ದೃಷ್ಯರೂಪ ನೀಡಿ, ಒಂದೊಂದು ಪಾತ್ರವನ್ನೂ ಪ್ರೇಕ್ಷಕರ ಮನಸಲ್ಲಿ ಅಚ್ಚಾಗುವಂತೆ ರೂಪಿಸಿದ್ದಾರಂತೆ. ಟ್ರೈಲರ್ ಮತ್ತು ಚಿತ್ರತಂಡ ಜಾಹೀರು ಮಾಡಿರುವ ಒಂದಷ್ಟು ವಿಚಾರಗಳ ಮೂಲಕ ಅಂಥಾದ್ದೊಂದು ನಂಬಿಕೆ ಪ್ರೇಕ್ಷಕರಿಗೂ ದಾಟಿಕೊಂಡಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ಹೆಸರಾಗಿರುವ ಗೀತಾ ಭಾರತಿ ಭಟ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನಾಯಕಿಯ ತಂದೆಯ ಪಾತ್ರಕ್ಕೆ ಜೀವ ತುಂಬಿರುವವರು ಖ್ಯಾತ ರಂಗಕರ್ಮಿ, ನಟ, ನಿರ್ದೇಶಕರಾಗಿ ಪರಿಚಿತರಾಗಿರುವ (krishnamurthy kavathar) ಕೃಷ್ಣಮೂರ್ತಿ ಕವತ್ತಾರ್!
ಕೃಷ್ಣಮೂರ್ತಿ ಕವತ್ತಾರ್ ಧಾರಾವಾಹಿ, ಸಿನಿಮಾಗಳ ಮೂಲಕ ಕನ್ನಡಿಗರಿಗೆಲ್ಲ ಪರಿಚಿತರು. ಇದೀಗ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ `ಅಮೃತಧಾರೆ’ ಸೀರಿಯಲ್ಲಿನ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿರುವವರು ಕವತ್ತಾರ್. ರಂಗಭೂಮಿಯ ಅಸಲೀ ಕಸುವು ಹೊಂದಿರುವ ಅವರನ್ನು ನಿರ್ದೇಶಕ ಸಂತೋಷ್ ಕೊಡಂಕೇರಿ ನಾಯಕಿಯ ತಂದೆಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ, ಅದನ್ನು ಭಾವತುಂಬಿ ಕೃತಕ ಛಾಯೆಯಿಲ್ಲದಂತೆ ನಿಭಾಯಿಸೋದಕ್ಕೆ ಪಳಗಿದ ನಟರೇ ಆಗಬೇಕಿತ್ತು. ಅದನ್ನು ನಿಭಾಯಿಸುವ ಛಾತಿ ಹೊಂದಿರುವ ನಟರ ತಲಾಷಿನಲ್ಲಿದ್ದಾಗ ನಿರ್ದೇಶಕರಿಗೆ ಆತ್ಯಂತಿಕ ಆಯ್ಕೆಯಾಗಿ ಕಂಡಿದ್ದು ಕವತ್ತಾರರು!
ಹೇಳಿಕೇಳಿ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಕೃಷ್ಣಮೂರ್ತಿ ಕವತ್ತಾರ್. ಈ ಕಾರಣದಿಂದಲೇ ಅವರು ಸವಾಲಿನ, ಅಪರೂಪದ ಪಾತ್ರಗಳಿಗೆ ಹಂಬಲಿಸುತ್ತಾರೆ. ಅವರ ಮುಂದೆ ಅಚಾನಕ್ಕಾಗಿ ಇಂಥಾದ್ದೊಂದು ಅವಕಾಶ ಬಂದಾಗ ಥ್ರಿಲ್ ಆಗಿ ಒಪ್ಪಿಗೆ ಸೂಚಿಸಿದ್ದರಂತೆ. ಕವತ್ತಾರರು ದಕ್ಷಿಣ ಕನ್ನಡ ಸೀಮೆಯವರು. ಅಲ್ಲಿನ ವ್ಯಕ್ತಿತ್ವಗಳೆಲ್ಲ ಅವರ ಬವದುಕಿನ ಭಾಗ. ಅಂಥಾದ್ದೊಂದು ವಿಶೇಷ ಚಹರೆಯನ್ನು ಈ ಪಾತ್ರ ಒಳಗೊಂಡಿತ್ತಂತೆ. ಅದು ತನ್ನ ಮಗಳ ಪ್ರೀ ಹೆಜ್ಜೆಗಳನ್ನೂ ಗಮನವಿಟ್ಟು ದಿಟ್ಟಿಸುತ್ತಾ, ಆಕೆಯ ಪ್ರತೀ ನಿರ್ಧಾರಗಳನ್ನೂ ಬೆಂಬಲಿಸಿ ಜೊತೆಯಾಗುವ ಪಾತ್ರ. ಬಹುಶಃ ಆ ಪಾತ್ರ ಅದೆಷಟೋ ಹೆಣ್ಣು ಜೀವಗಳ ಮನಸಿಗೆ ತಾಕುವಂಥಾದ್ದು. ಸಿನಿಮಾ ಮಂದಿರಗಳಿಂದ ಹೊರ ಬಂದ ಮೇಲೂ ಆಪ್ಯಾಯವಾದ ಗುಂಗಾಗಿ ಕಾಡುವಂಥಾದ್ದು.
ಬದುಕಿನಲ್ಲಿ ಎಂಥಾದ್ದೇ ಸಂಕಷ್ಟಗಳು ಎದುರಾದರೂ ತುಟಿಯಂಚಲ್ಲೊಂದು ಮಂದಹಾಸ ಮಾಸದಂತೆ, ವ್ಯಕ್ತಿತ್ವದಲ್ಲಿ ಉತ್ಸಾಹದ ಪಸೆ ಆರದಂತೆ ಬದುಕೋದು ತ್ರಾಸದಾಯಕ ಸಂಗತಿ. ಹೊರಜಗತ್ತಿಗೆ ಹಾಗೆ ಮಜವಾಗಿ ಬದುಕೋ ವ್ಯಕ್ತಿಗಳಿಗೆ ತುಳುನಾಡ ಸೀಮೆಯಲ್ಲಿ `ಗಮ್ಮತ್ತಿನ ಜನ’ ಅನ್ನಲಾಗುತ್ತೆ. ಅಂಥಾದ್ದೊಂದು ಗಮ್ಮತ್ತಿನ ವ್ಯಕ್ತಿತ್ವ ಹೊಂದಿದ್ದರೂ, ಬದುಕಿನ ವಿಚಾರದಲ್ಲಿ ಸ್ಪಷ್ಟ ನೋಟವಿರುವ, ಮಗಳನ್ನೇ ಜಗತ್ತೆಂದುಕೊಂಡಿರುವ ಪಾತ್ರವನ್ನು ಭಾವನಾತ್ಮಕವಾಗಿ ಒಳಗಿಳಿಸಿಕೊಂಡು ನಟಿಸಿದ ತುಂಬು ಧನ್ಯತೆ ಕೃಷ್ಣಮೂರ್ತಿ ಕವತ್ತಾರರಲ್ಲಿದೆ.
ನಟರ ಪಾಲಿಗೆ ಸಿನಿಮಾ ಭಾಗವಾಗುವ ಅವಕಾಶ ಸಿಗುವುದು ವೃತ್ತಿಯ ಭಾಗ. ಆದರೆ ಚಿತ್ರೀಕರಣವೆಲ್ಲ ಮುಗಿದ ಮೇಲೆ ಒಂದೊಳ್ಳೆ ಸಿನಿಮಾದಲ್ಲಿ ನಟಿಸಿದ ಆತ್ಮತೃಪ್ತಿ, ಫ್ಯಾಷನೇಟ್ ತಂಡದೊಂದಿಗೆ ಕೆಲಸ ಮಾಡಿದ ಖುಷಿ, ಒಂದೊಳ್ಳೊ ಪಾತ್ರವಾದ ಧನ್ಯತೆ ಉಳಿಯೋದಿದೆಯಲ್ಲಾ? ಅದು ಬಲು ಅಪರೂಪ. ಅಂಥಾದ್ದೊಂದು ಭಾವವನ್ನು ಕೃಷ್ಣಮೂರ್ತಿ ಅವರೊಳಗೆ ರವಿಕೆ ಪ್ರಸಂಗ ತುಂಬಿದೆ ಅನ್ನೋದೆ ಈ ಸಿನಿಮಾದ ಅಸಲೀ ಕಿಮ್ಮತ್ತಿಗೊಂದು ಉದಾಹರಣೆ. ರಂಗಭೂಮಿ ನಿರ್ದೇಶಕರಾಗಿ, ಸಿನಿಮಾ, ಧಾರಾವಾಹಿ ನಟರಾಗಿ ಕವತ್ತಾರರದ್ದು ಸುದೀರ್ಘ ಯಾನ. ಬಹುಶಃ ರವಿಕೆ ಪ್ರಸಂಗ ಆ ಪಥದಲ್ಲೊಂದು ಹೆಗ್ಗುರುತಾಗಿ ಉಳಿಯುವ ಸಾಧ್ಯತೆಗಳಿದ್ದಾವೆ. ಅಂದಹಾಗೆ, ದಿನವೊಂದು ಹೊರಳಿಕೊಂಡರೆ, ರವಿಕೆ ಪ್ರಸಂಗ ನಿಮ್ಮ ಮುಂದೆ ತೆರೆದುಕೊಳ್ಳಲಿದೆ!