ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ ಇದೇ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಕಡೇ ಘಳಿಗೆಯಲ್ಲಿಯೂ ಕೂಡಾ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುತ್ತಾ, ಭಿನ್ನವಾದ ಪ್ರಚಾರದ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಇದೊಂದು ಸೂಕ್ಷ್ಮ ಕಥಾ ಹಂದರ ಹಾಗೂ ನಾನಾ ಹೊಸತನಗಳನ್ನು ಒಳಗೊಂಡಿರುವ ಸಿನಿಮಾವೆಂಬ ವಿಚಾರ ಎಲ್ಲರಿಗೂ ಖಾತರಿಯಾಗಿದೆ. ಈ ಕ್ಷಣಕ್ಕೆ ಪಡಿಮೂಡಿಕೊಂಡಿರುವ ವಾತಾವರಣವನ್ನು ಆಧರಿಸಿ ಹೋಳೋದಾದರೆ, (ravike pfrasanga movie) ರವಿಕೆ ಪ್ರಸಂಗ ಗೆದ್ದು ಬೀಗುವ ಲಕ್ಷಣಗಳು ದಟ್ಟವಾಗಿಯೇ ಗೋಚರಿಸುತ್ತಿವೆ. ಇಂಥಾ ಸಕಾರಾತ್ಮಕ ವಾತಾವರಣದ ನಡುವೆ ಮತ್ತೊಂದು ಖುಷಿ ರವಿಕೆ ಪ್ರಸಂಗ ಚಿತ್ರತಂಡವನ್ನು ಮುದಗೊಳಿಸಿದೆ!
ಖುದ್ದು ನಿರ್ದೇಶಕ ಸಂತೋಷ್ ಕೊಡಂಕೇರಿ ಈ ಖುಷಿಯ ವಿಚಾರವನ್ನು ಖಾತರಿಪಡಿಸಿದ್ದಾರೆ. ಅದರನ್ವಯ ಹೇಳೋದಾದರೆ, ರವಿಕೆ ಪ್ರಸಂಗ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಬಿಡುಗಡೆ ಪೂರ್ವದಲ್ಲಿಯೇ ಇಂಥಾದ್ದೊಂದು ಸುದ್ದಿಯನ್ನು ಎದುರುಗೊಂಡಿರುವ ಚಿತ್ರತಂಡ ಖುಷಿಗೊಂಡಿದೆ. ಇದು ಯಾವ ಸಿನಿಮಾ ತಂಡಕ್ಕೇ ಆದರೂ ಸಂಭ್ರಮದ ವಿಚಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ತಮ್ಮ ಸಿನಿಮಾ ಇಂಥಾ ಸಿನಿಮಮೋತ್ಸವಗಳಿಗೆ ಆಯ್ಕೆ ಆಗಲಿ ಅಂತ ಹಂಬಲಿಸುವವರು ಸಾಕಷ್ಟಿದ್ದಾರೆ. ಇದೀಗ ರವಿಕೆ ಪ್ರಸಂಗ ಈ ನಿಟ್ಟಿನಲ್ಲಿಯೂ ಪ್ರೇಕ್ಷಕರ ಗಮನ ಸೆಳೆದುಕೊಂಡಿದೆ.
ಯಾಕೆಂದರೆ, ಇಂಥಾ ಸಿನಿಮೋತ್ಸವಗಳಿಗೆ ಯಾವುದೇ ಸಿನಿಮಾ ಆಯ್ಕೆಯಾಗೋದೆಂದರೆ ಸಲೀಸಿನ ಸಂಗತಿಯೇನಲ್ಲ. ಹಲವು ಹಂತಗಳನ್ನು ದಾಟಿ, ತೇರ್ಗಡೆಗೊಂಡರೆ ಮಾತ್ರವೇ ಆ ಅವಕಾಶ ಒಲಿಯುತ್ತೆ. ಅದರಲ್ಲಿಯೂ ಕಂಟೆಂಟು, ಕ್ವಾಲಿಟಿಗಳಲ್ಲಿ ಮೇಲ್ಮಟ್ಟದಲ್ಲಿದ್ದರೆ ಮಾತ್ರವೇ ಇಂಥಾ ಸಿನಿಮೋತ್ಸವಗಳಿಗೆ ಒರವಚಚೇಶ ಸಿಗುತ್ತೆ. ಹಾಗಿರೋದರಿಂದಲೇ ರವಿಕೆ ಪ್ರಸಂಗದ ಆಂತರ್ಯದ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಮನೆ ಮಾಡಿಕೊಂಡಿದೆ.
ಒಟ್ಟಾರೆಯಾಗಿ ಎಲ್ಲವೂ ಈಗ ಈ ಸಿನಿಮಾಕ್ಕೆ ಪೂರಕವಾಗಿದೆ. ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿರುವ ರವಿಕೆ ಪ್ರಸಂಗದ ಪ್ರಧಾನ ಪಾತ್ರದಲ್ಲಿ ಗೀತಾ ಭಾರತಿ ಭಟ್ ನಟಿಸಿದ್ದಾರೆ. ಈ ಮೂಲಕ ಅವರ ವೃತ್ತಿ ಬದುಕು ಬೇರೊಂದು ದಿಕ್ಕಿನತ್ತ ಹೊರಳಿಕೊಂಡಿದೆ. ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ರವಿಕೆ ಪ್ರಸಂಗಕ್ಕೆ ಸಾಥ್ ಕೊಟ್ಟಿದ್ದಾರೆ.