ಸೂರ್ಯ ವಸಿಷ್ಠ (surya vasishta) ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಾರಾಂಶ’ (saramsha movie) ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಇದು ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಅದು ಸುಳ್ಳೇನೋ ಎಂಬಂಥಾ ಅನುಮಾನ ಹುಟ್ಟುವಂಥಾದ್ದೊಂದು ಛಾಯೆ ಈಗಾಗಲೇ ಟ್ರೈಲರ್ ಮೂಲಕ ಕಾಣಿಸಿದೆ. ಅಂಥಾದ್ದೊಂದು ಮೋಡಿಯ ಹಿಂದೆ ಸೂರ್ಯ ಇದುವರೆಗೆ ಸಾಗಿ ಬಂದ ಹಾದಿ, ಪಡೆದುಕೊಂಡ ಅನುಭವ ಮತ್ತು ಅತೀವ ಸಿನಿಮಾ ವ್ಯಾಮೋಹದ ಪಾತ್ರವಿದೆ.
ಸಿನಿಮಾ ರಂಗ ಬಹುತೇಕ ಎಲ್ಲ ಕ್ಷೇತ್ರಗಳನ್ನೂ ತನ್ನತ್ತ ಸೆಳೆದುಕೊಳ್ಳುತ್ತಾ ಬಂದಿದೆ. ಅಂಥಾದ್ದೊಂದು ಸೆಳವಿಗೆ ಸಿಕ್ಕು, ನಟನಾಗಬೇಕೆಂಬ ಕನಸು ಹೊತ್ತು ಬಣ್ಣದ ಜಗತ್ತಿಗೆ ಅಡಿಯಿರಿಸಿದ್ದವರು ಸೂರ್ಯ ವಸಿಷ್ಠ. ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮಾಡಿಕೊಂಡಿದ್ದ ಸೂರ್ಯ ಪಾಲಿಗೆ ಆ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವ ವಿಪುಲ ಅವಕಾಶಗಳಿದ್ದವು. ಆದರೆ, ಶಾಲಾ ಕಾಲೇಜು ಹಂತದಲ್ಲಿಯೇ ತಮ್ಮೊಳಗೆ ಸಿನಿಮಾ ಕನಸು ಸಾಕಿಕೊಂಡಿದ್ದ ಸೂರ್ಯ ಅತ್ತ ತಿರುಗಿಯೂ ನೋಡಿರಲಿಲ್ಲ. ಸೀದಾ ನಟನಾಗಿ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹರಟವರು, ನಾನಾ ಸರ್ಕಸ್ಸುಗಳ ನಂತರ 2008ರಲ್ಲಿ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಪಡೆದುಕೊಂಡಿದ್ದರು.
ಆ ಕಾಲಕ್ಕೆ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಜೋಗುಳ ಧಾರಾವಾಹಿಯಲ್ಲೊಂದು ಪಾತ್ರ ಮಾಡುವ ಮೂಲಕ ನಟನಾಗಿ ಮೊದಲ ಹೆಜ್ಜೆ ಇಟ್ಟಿದ್ದರು. ಆ ಬಳಿಕವೂ ಸಾಕಷ್ಟು ಅವಕಾಶಗಳು ಕೂಡಿ ಬರಲಾರಂಭಿಸಿದ್ದವು. ಅದಾದ ನಂತರ ಭಾರೀ ಪ್ರಸಿದ್ಧಿ ಪಡೆದಿದ್ದ ಸಾಯಿಬಾಬಾ ಧಾರಾವಾಹಿಯಲ್ಲಿ ಸಾಯಿ ಬಾಬಾ ಆಗಿ ನಟಿಸಿದ್ದ ಸೂರ್ಯ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದರು. ಈ ಕ್ಷಣಕ್ಕೂ ಕಿರುತೆರೆ ಪ್ರೇಕ್ಷಕರ ಮನಸಿಂದ ಆ ಪಾತ್ರ ಮರೆಯಾಗಿಲ್ಲ. ಹೀಗೆ ನಟನಾಗಿಯೇ ಬದುಕು ಕಟ್ಟಿಕೊಳ್ಳುವ ಅವಕಾಶಗಳಿದ್ದರೂ ಸಹ ಸೂರ್ಯ ವಸಿಷ್ಠರ ಆಸಕ್ತಿ ನಿರ್ದೇಶನದ ಸುತ್ತ ಹೊರಳಿಕೊಳ್ಳಲಾರಂಭಿಸಿತ್ತು.
ಆ ಕಾರಣದಿಂದಲೇ ತಮಸ್ಸು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡಿದ್ದರು. ಆ ಹಂತದಲ್ಲಿ ನಿರ್ದೇಶನದ ಸೂಕ್ಷ್ಮಗಳನ್ನು ಅರಿತುಕೊಂಡಿದ್ದ ಸೂರ್ಯರೊಳಗೆ ಬೇರೆ ಥರದ ಕಥೆಯೊಂದು ಮೂಡಿಕೊಂಡಿತ್ತು. ತಮಸ್ಸು ಕಾಸ್ಟಿಂಗ್ ಸಮಯದಲ್ಲಿಯೇ ಸಾರಾಂಶದ ಕಥೆ ಹುಟ್ಟಿದ್ದು ವಿಶೇಷ. ಆ ಹಂತದಲ್ಲಿ ಕಥೆಗಾರನಿಂದ ಕಥೆಯೋ, ಕಥೆಯಿಂದ ಕಥೆಗಾರನೋ ಎಂಬಂಥಾ ಆಲೋಚನೆ ಮೊಳೆತುಕೊಂಡಿದ್ದೇ, ಅದರ ಸುತ್ತ ಕಥೆ ಮಾಡಿಕೊಂಡ ಸೂರ್ಯ, ಅದನ್ನು ಬೇರೆ ನಿರ್ದೇಶಕರಿಂದ ನಿರ್ದೇಶನ ಮಾಡಿಸುವ ಯೋಚನೆ ಹೊಂದಿದ್ದರು. ಆದರೆ ಸ್ನೇಹಿತರು ಮಾತ್ರ ನೀವೇ ಮಾಡಿದರೆ ಚೆಂದ ಎಂಬ ಅಭಿಪ್ರಾಯ ಹೊಮ್ಮಿಸಿದ್ದರಂತೆ.
ಈ ಬಗ್ಗೆ ಸಾಕಷ್ಟು ಆಲೋಚಿಸಿ, ಕಡೆಗೂ ನಿರ್ದೇಶಕರಾದ ಸೂರ್ಯ, ಇದೀಗ ಸಿಗುತ್ತಿರೋ ಪೆÇ್ರೀತ್ಸಾಹ ಕಂಡು ಖುಷಿಗೊಂಡಿದ್ದಾರೆ. ಈ ಚಿತ್ರದಲ್ಲೊಂದು ಪಾತ್ರವನ್ನೂ ನಿರ್ವಹಿಸಿರುವ ಅವರು, ಇನ್ನು ಮುಂದೆ ನಟನೆ ಹಾಗೂ ನಿರ್ದೇಶನವನ್ನು ಸರಿದೂಗಿಸಿಕೊಂಡು ಮುಂದುವರೆಯಲು ತೀರ್ಮಾನಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪೆÇ?ರಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ?ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.