ವರನಟ ಡಾ. ರಾಜ್ ಕುಮಾರ್ (dr rajkumar) ಹೆಸರು ಕೇಳಿದಾಕ್ಷಣವೇ ಒಂದು ಪೂಜ್ಯ ಭಾವ ಕನ್ನಡಿಗರೆಲ್ಲರೊಳಗೂ ಪಡಿಮೂಡಿಕೊಳ್ಳುತ್ತೆ. ಅದು ಅಭಿಮಾನ, ಆರಾಧನೆಗಳ ಗೆರೆ ಮೀರಿದ ಮಾಯೆ. ಡಾ. ರಾಜ್ ಹೆಸರು ಕನ್ನಡತನದ ಕರುನಾಡಿನ ನರನಾಡಿಗಳನ್ನು ಆವರಿಸಿಕೊಂಡಿರುವ ಪರಿಯೇ ಅಂಥಾದ್ದಿದೆ. ತಲೆಮಾರುಗಳಾಚೆಗೂ ತುಸುವೂ ಮಂಕಾಗದಂತೆ ಹಬ್ಬಿಕೊಂಡಿರುವ ವರ ನಟನ ಪ್ರಭೆಯಿದೆಯಲ್ಲಾ? ಅದೊಂದು ಸಾರ್ವಕಾಲಿಕ ಅಚ್ಚರಿ. ಈ ಕಾರಣದಿಂದಲೇ ರಾಜ್ ಕುಮಾರ್ ಹುಟ್ಟಿದ ಮನೆ, ಅವರು ಓಡಾಡಿದ ಜಾಗ, ನಟಿಸಿದ ಸಿನಿಮಾ ಸೇರಿದಂತೆ ಎಲ್ಲದರ ಮೇಲೂ ಕನ್ನಡಿಗರಿಗೊಂದು ಭಾವುಕ ಬಂಧವಿದೆ. ಹೀಗಿರುವಾಗ ರಾಜ್ ಕುಡಿಗಳಿಗೇ ಅಪ್ಪಾಜಿ ಉಳಿಸಿ ಹೋದ ಕುರುಹುಗಳ ಮೇಲೆ ಪ್ರೀತಿ ಇಲ್ಲದೇ ಹೋಯಿತಾ?
ಬಹುಶಃ ಈ ಸುದ್ದಿಯ ಸಾರ ತಿಳಿದರೆ ಯಾರೊಳಗಾದರೂ ಅಂಥಾದ್ದೊಂದು ಪ್ರಶ್ನೆ ಹುಟ್ಟದಿರಲು ಸಾಧ್ಯವೇ ಇಲ್ಲ. ಇಷ್ಟೆಲ್ಲವನ್ನು ಹೇಳಲು ಖಂಡಿತವಾಗಿಯೂ ಕಾರಣವಿದೆ. ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಆಸರೆಯಂತಿದ್ದ, ಲೆಕ್ಕಕ್ಕೆ ನಿಲುಕಲಾರದಷ್ಟು ಕಲಾವಿದರ ಹೊಟ್ಟೆ ತಣಿಸುತ್ತಿದ್ದ, ಕನ್ನಡ ಚಿತ್ರರಂಗದ ಪಾಲಿಗೆ ಐತಿಹಾಸಿಕ ಸ್ಥಳದಂತಿದ್ದ ಡಾ. ರಾಜ್ ಕುಮಾರ್ ಅವರ ಚೆನೈನ ಮನೆಯನ್ನು ಶಿವರಾಜ್ ಕುಮಾರ್ ಮಾರಿದ್ದಾರೆನ್ನಲಾಗುತ್ತಿದೆ. ಶಿವಣ್ಣ ಸೇರಿದಂತೆ ರಾಜ್ ಕುಮಾರ್ ಅವರ ಮಕ್ಕಳೆಲ್ಲ ಹುಟ್ಟಿದ್ದು, ಆಡಿ ಬೆಳೆದಿದ್ದೆಲ್ಲವೂ ಚೆನೈನ ಆ ಮನೆಯಲ್ಲಿಯೇ. ರಾಜ್ ಕುಮಾರ್ ವರನಟನಾಗಿ ರೂಪುಗೊಳ್ಳುವ ಪ್ರಕ್ರಿಯೆಗೂ ಸಹ ಆ ಮನೆ ಮೂಕ ಸಾಕ್ಷಿಯಂತಿತ್ತು. ಸಾವಿರಾರು ನೆನಪುಗಳ ಕಟಾಂಜನದಂತಿದ್ದ ಅಂಥಾ ಮನೆಯನ್ನು ಶಿವಣ್ಣ ಮಾರಿದ್ದಾರೆಂದರೆ ತಕ್ಷಣಕ್ಕೆ ನಂಬಲು ಕಷ್ಟವಾಗೋದರಲ್ಲಿ ಅಚ್ಚರಿಯೇನಿಲ್ಲ; ನಂಬದೆ ಬೇರೆ ದಾರಿಯೂ ಉಳಿದಿಲ್ಲ!
ನಿಜ, ಅದು ರಾಜ್ ಕುಮಾರ್ ಕುಟುಂಬದ ಸ್ವತ್ತು. ಅದನ್ನು ಮಾರುವುದೂ ಸೇರಿದಂತೆ ಏನನ್ನಾದರೂ ಮಾಡಬಲ್ಲ ಹಕ್ಕು ಅವರಿಗಿದೆ. ಆದರೆ, ಆ ಮನೆ ಮಾರಾಟವಾಯ್ತೆಂಬ ಸುದ್ದಿ ತಿಳಿದಾಕ್ಷಣ ರಾಜ್ ಅಭಿಮಾನಿಗಳ ಕರುಳು ಚುರುಕ್ಕೆಂದಂತಾಗುತ್ತದಲ್ಲಾ? ಅದಕ್ಕೆ ಯಾವ ಹಕ್ಕು, ಅನಿವಾರ್ಯತೆಗಳ ಹಂಗೂ ಇಲ್ಲ. ಬಹುಶಃ ಡಾ.ರಾಜ್ ಮೇಲೆ ಅಭಿಮಾನವಿಟ್ಟುಕೊಂಡ ತಲೆಮಾರಿಗೆ ಚೆನೈನಲ್ಲಿದ್ದ ಅವರ ಮನೆಯ ಬಗೆಗಿನ ವಿವರಗಳು ಗೊತ್ತಿರುತ್ತವೆ. ಅಲ್ಲಿ ರಾಜ್ ಕುಟುಂಬ ನೆಲೆಗೊಂಡಿತ್ತಾದರೂ ಅದು ಆ ಕಾಲಘಟ್ಟದ ಕಲಾವಿದರ ಪಾಲಿನ ಬೆಚ್ಚಗಿನ ಗೂಡಾಗಿತ್ತು. ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ತಿರುಗೋ ಬಡಪಾಯಿ ಜೀವಗಳ ಪಾಲಿನ ಭರವಸೆಯ ವಿಳಾಸವಾಗಿತ್ತು. ಯಾವ ಹೊತ್ತಲ್ಲೇ ಹೋದರೂ ಒಂದಷ್ಟು ಪ್ರೀತಿ ಮತ್ತು ಹೊಟ್ಟೆ ತುಂಬ ಅನ್ನಕ್ಕೆ ತತ್ವಾರವಿಲ್ಲದ ಬೆಚ್ಚಗಿನ ತಂಗುದಾಣದಂತಿತ್ತು!
ಎಂಬತ್ತರ ದಶಕದ ಆಚೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗ ಎಲ್ಲದಕ್ಕೂ ಚೆನೈ ಅನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿತ್ತು. ಆ ಹೊತ್ತಿನಲ್ಲಿ ರಾಜ್ ಕುಮಾರ್ ಚೆನೈನ ಸದರಿ ಮನೆಯಲ್ಲಿಯೇ ಸಂಸಾರ ಸಮೇತ ಬೀಡುಬಿಟ್ಟಿದ್ದರು. ರಾಜ್ ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದರೂ ಕೂಡಾ, ಅವರ ಬಗ್ಗೆ ತಮಿಳುನಾಡಿನಲ್ಲಿಯೂ ಅಭಿಮಾನವಿದ್ದದ್ದು ಸತ್ಯ. ಸಿನಿಮಾ ಸಂಬಂಧಿತವಾದ ಯಾವುದೇ ಕೆಲಸ ಕಾರ್ಯಗಳಿಗಾದರೂ ಚೆನೈನತ್ತ ಹೋದವರ ಪಾಲಿಗೆ ರಾಜಣ್ಣನ ಮನೆಯೊಂದೇ ಆ ಕಾಲದ ಆಸರೆ. ಹೊನ್ನವಳ್ಳಿ ಕೃಷ್ಣ, ಎಸ್.ಕೆ ಭಗವಾನ್ ಮಾತ್ರವಲ್ಲದೇ, ಒಂದೇ ಸಲಕ್ಕೆ ಹೆಸರಿಸಲಾಗದಷ್ಟು ಸಂಖ್ಯೆಯ ಕಲಾವಿದರು, ನಿರ್ದೇಶಕರುಗಳೆಲ್ಲ ಆ ಮನೆಯ ಅನ್ನದ ಋಣ ಹೊಂದಿದ್ದವರೇ.
ಚೆನೈನಲ್ಲಿರುವ ರಾಜ್ ಕುಮಾರ್ ಮನೆಯೆಂದರೆ, ಆ ಕಾಲಮಾನದ ಪ್ರಧಾನ ಆಕರ್ಷಣೆಯಂತಿತ್ತು. ಎಂಭತ್ತರ ದಶಕದಲ್ಲಿ ಬೆಂಗಳೂರಿನಿಂದ ಎಸ್ ಆರ್ ಎಸ್ ಎಂಬ ಒಂದೇ ಒಂದು ಬಸ್ಸು ಚೆನೈಗೆ ಹೋಗಿ ಬರುತ್ತಿತ್ತು. ಆ ಬಸ್ಸಿನ ಡ್ರೈವರ್ ಅದೆಷ್ಟೇ ಒತ್ತಡವಿದ್ದರೂ ಸ್ವಯಂಪ್ರೇರಣೆಯಿಂದ ಬಸ್ಸನ್ನು ಅಣ್ಣಾವ್ರ ಮನೆಯ ಬೀದಿಗೆ ತಿರುಗಿಸಿ, ಪ್ರಯಾಣಿಕರಿಗೆಲ್ಲ ಉತ್ಸಾಹದಿಂದ ದರ್ಶನ ಮಾಡಿಸಿಕೊಂಡು ಬರುತ್ತಿದ್ದರಂತೆ. ಅದೆಷ್ಟೋ ವರ್ಷಗಳ ಕಾಲ ಅದು ಅನೂಚಾನವಾಗಿ ಮುಂದುವರೆದಿತ್ತು. ಬೆಂಗಳೂರಿನಿಂದ ಚೆನೈಗೆ ಜನ ಯಾವ ಉದ್ದೇಶವಿಟ್ಟುಕೊಂಡು ಹೋದರೂ ಕೂಡಾ ಅಣ್ಣಾವ್ರ ಮನೆಯ ಎದುರಿನಲ್ಲಿ ಸುಳಿದಾಡಿ ಬಂದರೇನೇ ಸಮಾಧಾನವೆಂಬಂಥಾ ವಾತಾವರಣವಿತ್ತು. ಯಾಕೆಂದರೆ, ಆಗ ರಾಜ್ ಕುಮಾರ್ ಅವರ ಆ ಮನೆ ಕನ್ನಡ ಚಿತ್ರರಂಗದ ಕೇಂದ್ರದಂತಿತ್ತು. ಈವತ್ತಿಗೂ ಒಂದಷ್ಟು ಮಂದಿ ಹಿರೀಕರು ಅಂಥಾ ನೆನಪುಗಳ ನೆತ್ತಿ ನೇವರಿಸಿ ಸಂಭ್ರಮಿಸುತ್ತಾರೆ.
ಆ ಮನೆಯನ್ನು ರಾಜ್ ಕುಮಾರ್ ಅತೀವವಾಗಿ ಹಚ್ಚಿಕೊಂಡಿದ್ದರು. ಇಡೀ ವಾತಾವರಣವನ್ನು ತಮಗೆ ಬೇಕಾದಂತೆ ರೂಪಿಸಿಕೊಂಡಿದ್ದರು. ಭಾವುಕ ಸ್ವಭಾವದ ರಾಜ್ ಅಲ್ಲಿನ ಅಂಗುಲಂಗುಲವನ್ನೂ ಉಸಿರಾಗಿಸಿಕೊಂಡಂತೆ ಬದುಕಿದ್ದರು. ಬಹುಶಃ 1984ರಲ್ಲಿ ಅದೊಂದು ಆಘಾತಕರ ಘಟನೆ ನಡೆಯದೇ ಹೋಗಿದ್ದಿದ್ದರೆ ರಾಜ್ ಕುಮಾರ್ ಇನ್ನೊಂದಷ್ಟು ವರ್ಷ ಆ ಮನೆಯಲ್ಲಿಯೇ ಬೀಡು ಬಿಡುತ್ತಿದ್ದರೋ ಏನೋ… ಆ ವರ್ಷದ ಮಾರ್ಚ್ 3ನೇ ತಾರೀಕಿನಂದು ಊಟಿಯಲ್ಲಿ ರಾಜ್ ಕುಮಾರ್ ಅಭಿನಯದ `ಯಾರಿವನು’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಘಳಿಗೆಯಲ್ಲಿ ರಾಜ್ ಮೇಲೆ ಭಾರೀ ಹಲ್ಲೆ ನಡೆದಿತ್ತು. ಆ ಕೊಲೆ ಯತ್ನದಿಂದ ಅದುಹೇಗೋ ವರನಟ ಪಾರಾಗಿ ಬಂದಿದ್ದರು. ಆ ನಂತರ ಅವರು ಬೆಂಗಳೂರಿಗೆ ಸ್ಥಳಾಂತರಗೊಂಡರಾದರೂ ಚೆನೈ ಮನೆ ಮೇಲಿನ ಮೋಹ ಮಾತ್ರ ಕಡಿಮೆಯಾಗಿರಲಿಲ್ಲ.
ಆ ಮನೆ ಈವತ್ತಿಗೆ ರಾಜ್ ಕುಟುಂಬದ ಉತ್ತರಾಧಿಕಾರಿಗಳ ಸ್ವಂತ ಸ್ವತ್ತಾಗಿರಬಹುದು. ಆದರದು ಕನ್ನಡ ಚಿತ್ರರಂಗದ ಐತಿಹಾಸಿಕ ಪಲ್ಲಟಗಳಿಗೆ ಸಾಕ್ಷಿಯಂತಿದ್ದ ಸ್ಥಳ. ಅದನ್ನು ಹೊರತಾಗಿಸಿ ಕನ್ನಡ ಚಿತ್ರರಂಗದ ಐತಿಹ್ಯವನ್ನು ಯಾರೂ ವಿಶ್ಲೇಷಿಸಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಆ ಮನೆಯ ಋಣವನ್ನು ಮರೆಯುವಂತೆಯೂ ಇಲ್ಲ. ಕನ್ನಡ ಸಿನಿಮಾ ಜಗತ್ತಿನ ಶಕ್ತಿಕೇಂದ್ರದಂತಿದ್ದ, ಅದೆಷ್ಟೋ ಜನರಿಗೆ ಅನ್ನ ಹಾಕಿ, ಬದುಕಿನ ದಿಕ್ಕು ಬದಲಿಸಿದ್ದ ಆ ಮನೆ ಶಿವರಾಜ್ ಕುಮಾರ್ ಪಾಲಿಗೂ ಅಮೂಲ್ಯ ನೆನಪುಗಳ ಉಗ್ರಾಣದಂಥಾದ್ದು. ಹಾಗೆ ನೋಡಿದರೆ, ಅದನ್ನು ಉಳಿಸಿಕೊಳ್ಳುವುದು ಅವರಿಗೇನೂ ಕಷ್ಟದ ಕೆಲಸವಾಗಿರಲಿಕ್ಕಿಲ್ಲ. ಆದರೂ ಅವರು ಮಾರಿದ್ದಾರೆ. ಈ ಕ್ಷಣದಲ್ಲಿ ನಿಜಕ್ಕೂ ಪುನೀತ್ ರಾಜ್ ಕುಮಾರ್ ನೆನಪಾಗುತ್ತಾರೆ. ಅವರಿದ್ದಿದ್ದರೆ ಈ ಮನೆಯನ್ನು ಮಾರಲು ಆಸ್ಪದ ಕೊಡುತ್ತಿರಲಿಲ್ಲವೇನೋ… ವ್ಯಾವಹಾರಿಕ ಜಗತ್ತಿನ ಪಾಲಿಗೆ ಶಿವಣ್ಣ ಸೇಲು ಮಾಡಿರೋದು ಒಂದು ನಿರ್ಜೀವ ಕಟ್ಟಡವನ್ನು ಅನ್ನಿಸಬಹುದು. ಆದರೆ, ನಿಜವಾಗಿಯೂ ಮಾರಿರುವುದು ಭಾವುಕತೆಯನ್ನು. ಕನ್ನಡ ಚಿತ್ರರಂಗದ ಅನೂಹ್ಯ ನೆನಪುಗಳ ಕಟಾಂಜನವನ್ನು!
ಹಾಗಾದರೆ, ಶಿವಣ್ಣ ಯಾಕೆ ಆ ಮನೆಯನ್ನು ಮಾರಾಟ ಮಾಡಲು ಮನಸು ಮಾಡಿದರು? ಯಾವುದೇ ಕಾರ್ಯಕ್ರಮಗಳಿಗೆ ಹೋದರೂ, ಸಾರ್ವಜನಿಕ ಸಮಾರಂಭಗಳಿಗೆ ತೆರಳಿದರೂ ಅವರ ಕಡೆಯಿಂದ ಅಪ್ಪಾಜಿಯ ಸ್ಮರಣೆ ಆಗದಿರೋದಿಲ್ಲ. ಹತ್ತಿರದಿಂದ ಬಲ್ಲವರಿಗೆ ಶಿವಣ್ಣನೋರ್ವ ಭಾವಜೀವಿಯಾಗಿಯೇ ಗೋಚರಿಸುತ್ತಾರೆ. ಆದರೆ ಈ ಮನೆ ಮಾರಾಟದ ವಿಚಾರದಲ್ಲಿ ಅವರ ನಿರ್ಭಾವುಕ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಶಿವರಾಜ್ ಕುಮಾರ್ ಇಂಥಾದ್ದೊಂದು ನಿರ್ಧಾರ ತಳೆಯಲು ನಿಜವಾಗಿಯೂ ಕಾರಣವೇನು ಅಂತ ನೋಡ ಹೋದರೆ ಲೋಕಸಭಾ ಚುನಾವಣೆ ಕಣ್ಣೆದುರು ನಿಲ್ಲುತ್ತದೆ. ಈ ಬಾರಿ ಗೀತಾ ಶಿವರಾಜ್ ಕುಮಾರ್ ಕಾಂಗ್ರಸ್‍ನಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆಗಳಿದ್ದಾವೆ. ಅದನ್ನು ಜಯಿಸಿಕೊಳ್ಳಲು ಬೇಕಾದ ಖರ್ಚಿನ ಬಾಬತ್ತಿಗಾಗಿ ಕನ್ನಡಿಗರ ಭಾವುಕ ನಂಟನ್ನೇ ಶಿವಣ್ಣ ಪಣಕ್ಕಿಟ್ಟರಾ ಅಂತೊಂದು ಅನುಮಾನವೂ ಕಾಡುತ್ತದೆ. ಇದರ ಆಚೀಚೆ ಎಂತೆಂಥಾ ಕಿಸುರುಗಳಿವೆಯೋ ಗೊತ್ತಿಲ್ಲ; ಆದರೆ, ವರನಟನ ಅಭಿಮಾನಿಗಳ ನೆನಪುಗಳು, ಅದರ ಸುತ್ತ ಹಬ್ಬಿಕೊಂಡಿದ್ದ ಭಾವುಕತೆ ಮತ್ತು ಕನ್ನಡ ಚಿತ್ರರಂಗದ ಸಮೃದ್ಧ ಪಲ್ಲಟಗಳ ಸಜೀವ ಕುರುಹೊಂದು ಮಾರಾಟವಾಗಿರೋದಂತೂ ನಿಜ!