ಯಾವುದೇ ಸಿನಿಮಾವನ್ನಾದರೂ ತಾನೇತಾನಾಗಿ ಪ್ರೇಕ್ಷಕರ ಕುತೂಹಲದ ಪರಿಧಿಗೆ ಕರೆದೊಯ್ದು ನಿಲ್ಲಿಸಬಲ್ಲ ಛಾತಿ ಹಾಡುಗಳಿಗಿದೆ. ಈ ಕಾರಣದಿಂದಲೇ ಹಾಡುಗಳನ್ನು ಸಿನಿಮಾವೊಂದರ ಕರೆಯೋದೆ ಎಂದೇ ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿಯೇ ಸಿನಿಮಾದಷ್ಟೇ ಹಾಡುಗಳಿಗೂ ಪ್ರಾಶಸ್ತ್ಯ ಕೊಟ್ಟು, ಚೆಂದಗೆ ರೂಪಿಸುವ ಪರಿಪಾಠವಿದೆ. ಈ ಹಾದಿಯಲ್ಲಿ ಕೆಲ ಚಿತ್ರಗಳು ಸಿದ್ಧಸೂತ್ರಗಳ ಜನಪ್ರಿಯ ಹಾಡಿಯಲ್ಲಿ ಹೊರಟರೆ, ಮತ್ತೆ ಕೆಲ ಸಿನಿಮಾಗಳದ್ದು ಭಿನ್ನ ಪಥ. ಈ ವಿಚಾರದಲ್ಲಿ (director surya vasista) ಸೂರ್ಯ ವಸಿಷ್ಠ ನಿರ್ದೇಶನದ (saramsha movie) `ಸಾರಾಂಶ’ ಚಿತ್ರ ಎರಡನೇ ಸಾಲಿಗೆ ಸೇರಲ್ಪಡುವ ಸಿನಿಮಾ. ಯಾಕೆಂದರೆ, ಅದರ ಒಂದೊಂದು ಹಾಡುಗಳೂ ಭಿನ್ನವಾಗಿವೆ. ಅಂಥಾದ್ದೊಂದು ವಿಶೇಷವಾದ ಘಮಲಿನಿಂದ ನಳನಳಿಸುವ ಸಾರಾಂಶದ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ.
ಸಂಗೀತ ನಿರ್ದೇಶಕ (music director udit harithas) ಉದಿತ್ ಹರಿತಾಸ್ ಸಾರಾಂಶದ ಒಂದೊಂದು ಹಾಡನ್ನೂ, ಒಂದೊಂದು ಬಗೆಯಲ್ಲಿ ರೂಪಿಸಿದ್ದಾರೆ. ಇದೀಗ ಅವರ ಸಮ್ಮೋಹಕ ಸಂಗೀತ ಸ್ಪರ್ಶ ಹೊಂದಿರುವ `ದೂರ ತೀರದಾಚೆ ಹಾರಿ ಹೋಗುವಾಸೆ’ (saramsha songs) ಎಂಬ ಹಾಡು ಬಿಡುಗಡೆಗೊಂಡಿದೆ. ಖುದ್ದು ಸೂರ್ಯ ವಸಿಷ್ಠ ಬರೆದಿರುವ, ಪಂಚಮ್ ಜೀವಾ ಹಾಡಿರುವ ಈ ಹಾಡು ಕಟ್ಟಿ ಕೊಡುವ ಭಾವಗಳನ್ನು ಒಂದೇ ಪರಿಧಿಯಲ್ಲಿ ಬಂಧಿಸೋದು ತುಸು ಕಷ್ಟ. ಯಾಕೆಂದರೆ, ಇದು ಮಾಮೂಲಿ ಪಥದ ಗೀತೆಗಳಂತೆ ಒಂದೇ ಸಲಕ್ಕೆ ಉದ್ದೀಪಿಸಿ ತಣ್ಣಗಾಗುವಂಥಾದ್ದಲ್ಲ; ತಣ್ಣಗೆ ನರನಾಡಿಗಳಿಗೆ ಪ್ರವಹಿಸಿ ನಾನಾ ಭಾವಗಳ ಬಿಸಿಯೇರಿಸುವಂಥಾದ್ದು!
ಈ ಹಾಡು ಸೂರ್ಯ ವಸಿಷ್ಠ ಹಾಗೂ ಶ್ರುತಿ ಹರಿಹರನ್ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿದೆ. ಪ್ರೇಮದ ಉನ್ಮಾದವನ್ನು ಹದವಾದ ಸಂಗೀತದ ಸರಹದ್ದಿನಲ್ಲಿ ಪಳಗಿದಂತೆ ಭಾಸವಾಗುವ ಈ ಹಾಡು ಬಹು ಕಾಲ ಸಂಗೀತಾಸಕ್ತರನ್ನು ಕಾಡಲಿದೆ. ಒಂದು ಭಿಮ್ಮ ಧಾಟಿಯ ಗೀತೆಯಾಗಿ ಬಹುಕಾಲ ನವಿರು ಪ್ರೇಮದ ಸಾಥಿಯಾಗುವ ಸಾಧ್ಯತೆಗಳೂ ಗೋಚರಿಸುತ್ತಿವೆ. ಅಂದಹಾಗೆ, ಈ ಹಿಂದೆ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟನಾಗಿ ಪರಿಚಿತರಾಗಿದ್ದವರು ಸೂರ್ಯ ವಸಿಷ್ಠ. ಅವರು ಸಾರಾಂಶದ ಮೂಲಕ ಸ್ವತಂತ್ಚರ ನಿರ್ದೇಶಕರಾಗಿದ್ದಾರೆ. ಮುಖ್ಯ ಪಾತ್ರಕ್ಕೂ ಜೀವ ತುಂಬಿದ್ದಾರೆ. ಅವರೊಂದಿಗೆ ದೀಪಕ್ ಸುಬ್ರಮಣ್ಯ, ಶ್ವೇತಾ ಗುಪ್ತಾ ಕೂಡಾ ಮುಖ್ಯಭೂಮಿಕೆಯಲ್ಲಿದ್ದಾರೆ.
ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ್ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.