ತಾರಕಾಸುರ (taharakasura movie) ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಕಂಗೊಳಿಸುತ್ತಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದವರು (ravi) ರವಿ. ಆರಂಭಿಕ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆವಾಹಿಸಿಕೊಂಡಿದ್ದ, ಅದಕ್ಕೆ ಪಳಗಿದ ನಟನಂತೆ ಜೀವ ತುಂಬಿದ್ದ ರವಿ ಆ ನಂತರದಲ್ಲಿ ಒಪ್ಪಿಕೊಂಡಿದ್ದ ಚಿತ್ರ `ಕೈಲಾಸ’. (kailasa kasidre muvie) ಕಾಸಿದ್ರೆ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರದಲ್ಲಿಯೂ ಅವರಿಗೆ ವಿಭಿನ್ನವಾದ ಪಾತ್ರವೇ ಸಿಕ್ಕಿದೆಯಂತೆ. ಇದೀಗ ಕೈಲಾಸ (kailasa) ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ನೋಡುಗರಿಗೆಲ್ಲ ಮತ್ತೇರಿಸುವಂಥಾ ನಶೆಯ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ!
ಅಂದಹಾಗೆ, ಈ ಚಿತ್ರವನ್ನು (director nag venkat) ನಾಗ್ ವೆಂಕಟ್ ನಿರ್ದೇಶನ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರುವುದು ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಹೊಸಾ ಫೀಲ್ ನೀಡುವಂಥಾ ಟ್ರಾನ್ಸ್ ಶೈಲಿಯ ಹಾಡು. ಇದುವರೆಗೂ ಈ ಬಗೆಯ ಹಾಡಿನ ಸಣ್ಣ ಸಣ್ಣು ತುಣುಕುಗಳು ಒಂದಷ್ಟು ಸಿನಿಮಾಗಳಲ್ಲಿ ತೇಲಿ ಬಂದಿವೆ. ನಶೆಯ ಉನ್ಮತ್ತ ಘಳಿಗೆಯನ್ನು ನಿಗಿನಿಗಿಸುವಂತೆ ಮಾಡುವುದು, ಮ್ಯೂಸಿಕ್ಕು, ವಿಶಿಷ್ಟ ಲೈಟಿಂಗುಗಳ ಮೂಲಕ ಅದನ್ನು ಕಟ್ಟಿ ಕೊಡುವುದು ಇಂಥಾ ಹಾಡುಗಳ ಶೈಲಿ. ಈ ಚಿತ್ರದ ಕಥೆಗನುಗುಣವಾಗಿ ಈ ಶೈಲಿಯ ಹಾಡನ್ನು ಪೂರ್ಣಪ್ರಮಾಣದಲ್ಲಿ ರೂಪಿಸಲಾಗಿದೆ. ಈ ಹಾಡೀಗ ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್ ಒಂದನ್ನು ಹುಟ್ಟುಹಾಕುತ್ತಾ, ವೈರಲ್ ಆಗುವ ಹಾದಿಯಲ್ಲಿದೆ.
ನಶೆಯ ಲೋಕದ ತುಣುಕೊಂದನ್ನು ದೃಷ್ಯ ರೂಪಕವಾಗಿ ಪೋಣಿಸಿದಂತೆ ಭಾಸವಾಗುವ ಈ ಹಾಡು ಆಶಿಕ್ ಅರುಣ್ ಸಂಗೀತ ಸಂಯೋಜನೆಯಲ್ಲಿ ರೂಪುಗೊಂಡಿದೆ. ಲೇಖಕ್ ಸಿದ್ಧಾರ್ಥ ಬರೆದಿರುವ ಸಾಲುಗಳು ಮಾದಕ ಛಾಯೆಯ ಧ್ವನಿಯಲ್ಲಿ ಅಲ್ಲಲ್ಲಿ ಹಣಕಿ ಹಾಕುತ್ತವೆ. ಇದೆಲ್ಲದರ ನಡುವೆ ರವಿ ಪಾತ್ರವೂ ಪರಿಚಯವಾಗುತ್ತಾ, ಸದರಿ ಟ್ರಾನ್ಸ್ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಳವಿಗೆ ಸಿಕ್ಕು ನಾನಾ ಕ್ಷೇತ್ರಗಳ ಮಂದಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಲ್ಲಿ ಐಟಿ ಜಗತ್ತಿನವರ ಸಂಖ್ಯೆ ಹೆಚ್ಚಾಗಿದೆ. ಈ ಸಿನಿಮಾ ನಿರ್ದೇಶಕರಾದ ನಾಗ್ ವೆಂಕಟ್ ಕೂಡಾ ಅದೇ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗ್ ವೆಂಕಟ್, ಮೂರ್ನಾಲಕ್ಕು ವರ್ಷಗಳ ಹಿಂದೆಯೇ ಸಿನಿಮಾ ರಂಗಕ್ಕೆ ಆಗಮಿಸಿದ್ದರು. ಈ ಅವಧಿಯಲ್ಲಿ ಹಲವಾರು ಕಿರುಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ತಮ್ಮೊಳಗಿನ ಪ್ರತಿಭೆಯನ್ನು ಸಾಣೆ ಹಿಡಿದುಕೊಂಡಿದ್ದ ನಾಗ್ ವೆಂಕಟ್ ಕೈಲಾಸ ಮೂಲಕ ನಿರ್ದೇಶಕರಾಗಿದ್ದಾರೆ. ಕ್ರೈಂ ಕಾಮಿಡಿ ಜಾನರಿನ ಈ ಸಿನಿಮಾವನ್ನು ಒಂದೊಳ್ಳೆ ಕಥೆಯೊಂದಿಗೆ ಕಟ್ಟಿಕೊಟ್ಟಿದ್ದಾರಂತೆ. ಅದರ ಒಂದಷ್ಟು ಕುರುಹುಗಳು ಈ ಟ್ರಾನ್ಸ್ ವೀಡಿಯೋ ಸಾಂಗಿನಲ್ಲಿ ಸ್ಪಷ್ಟವಾಗಿಯೇ ಕಾಣಿಸಿವೆ.
ಇದೀಗ ಕೈಲಾಸ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿಕೊಂಡಿದೆ. ಇನ್ನು ಬಾಕಿ ಉಳಿದುಕೊಂಡಿರೋದು ಒಂದಷ್ಟು ಕೆಲಸ ಕಾರ್ಯಗಳು ಮಾತ್ರ. ಅದೆಲ್ಲವನ್ನೂ ಬೇಗನೆ ಮುಗಿಸಿಕೊಂಡು ತಿಂಗಳೊಪ್ಪತ್ತಿನಲ್ಲಿ ತೆರೆಗಾಣಿಸುವ ಯೋಜನೆ ಚಿತ್ರತಂಡದ್ದು. ಪ್ರೇಮಿಗಳ ದಿನಕ್ಕೆ ಗಿಫ್ಟ್ ಎಂಬಂತೆ ಒಂದು ಹಾಡನ್ನು ಬಿಡುಗಡೆ ಮಾಡಿ, ಇದೇ ತಿಂಗಳ 24ರಂದು ಟ್ರೈಲರ್ ಲಾಂಚ್ ಮಾಡಲು ಭೂಮಿಕೆ ಸಿದ್ಧಗೊಂಡಿದೆ. ಇದು ಹೇಳಿಕೇಳಿ ಕ್ರೈ ಕಾಮಿಡಿ ಜಾನರಿನ ಸಿನಿಮಾ. ಹಾಗಿರೋದರಿಂದಲೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಹಿಂದೆ ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ.