ಹೆಚ್ಚೇನಲ್ಲ; ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ (shabbasha movie) `ಶಭ್ಬಾಷ್’ ಚಿತ್ರ ಸೆಟ್ಟೇರಿತ್ತು. ಹಿರಿಯ ನಿರ್ದೇಶಕ (director om saiprakash) ಓಂ ಸಾಯಿ ಪ್ರಕಾಶ್ ತಮ್ಮ ನೆಚ್ಚಿನ ಶಿಷ್ಯ (director rudrashiva) ರುದ್ರಶಿವನ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಚಾಲನೆ ನೀಡಿದ್ದರು. ಅದಾಗುತ್ತಲೇ ಸೀದಾ ಚಿತ್ರೀಕರಣದ ಅಖಾಡಕ್ಕಿಳಿದಿದ್ದ ರುದ್ರಶಿವ ಇದೀಗ ಮೊದಲ ಹಂತದ ಚಿತ್ರೀಕರಣ ಸುಸೂತ್ರವಾಗಿ ಮುಗಿಸಿಕೊಂಡು, ಎರಡನೇ ಹಂತದ ಚಿತ್ರೀಕರಣಕ್ಕಾ ತಯಾರಾಗಿ ಬಿಟ್ಟಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ, ಅಂದುಕೊಂಡಂ ಲೊಕೇಶನ್ನುಗಳಲ್ಲಿ, ಹಲವಾರು ಸಾಹಸಗಳಿಗೆ ಒಡ್ಡಿಕೊಂಡು ಈ ಚಿತ್ರೀಕರಣ ಮುಗಿಸಿಕೊಂಡ ರಸವತ್ತಾದ ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ನಿರ್ದೇಶಕ ರುದ್ರಶಿವ ಅಂದುಕೊಂಡಂತೆಯೇ ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನ ಆಸುಪಾಸಿನ ಸುಂದರ ಪ್ರದೇಶಗಳಲ್ಲಿ ಆರಂಭಿಸಿದ್ದಾರೆ. ಆರೇಳು ದಿನಗಳ ಕಾಲ ಅಲ್ಲಿಯೇ ಅವ್ಯಾಹತವಾಗಿ ಚಿತ್ರೀಕರಣ ಮುಗಿಸಿಕೊಂಡ ನಂತರ, ಇಡೀ ತಂಡ ಚೆನ್ನಗಿರಿಯ ಪ್ರಸಿದ್ಧ ಶಾಂತಿಸಾಗರ ಪ್ರದೇಶಕ್ಕೆ ತೆರಳಿದೆ. ಅಲ್ಲಿನ ಪ್ರಾಕೃತಿಕ ಸೌದರ್ಯದ ನಡುವೆ ಚಿತ್ರೀಕರಣ ಸಾಂಘವಾಗಿ ನೆರವೇರಿದೆ. ಈ ಶಾಂತಿಸಾಗರ ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತೀ ದೊಡ್ಡ ಕೆರೆಯೆಂಬ ಹೆಗ್ಗಳಿಕೆಯೂ ಅದಕ್ಕಿದೆ.
ಈ ಕೆರೆ ಸಾಮಾನ್ಯವಾದುದಲ್ಲ; ಅದಕ್ಕೂ ಹನ್ನೆರಡನೇ ಶತಮಾನಕ್ಕೂ ನೇರಾನೇರ ಕನೆಕ್ಷನ್ನುಗಳಿದ್ದಾವೆ. ಇಲ್ಲಿಯ ಆ ಕಾಲದಲ್ಲಿ ಸ್ವರ್ಗಾವತಿ ಎಂಬ ಹೆಸರಿತ್ತೆಂಬ ಪ್ರತೀತಿಯಿದೆ. ಆ ಸೀಮೆಯ ದೊರೆ ವಿಕ್ರಮರಾಜನ ಮಗಳು ಶಾಂತವ್ವ ತನಗಾದ ಸಾಮಾಜಿಕ ಅವಮಾನಕ್ಕೆ ಪ್ರತೀಕಾರವಾಗಿ ಈ ಬೃಹತ್ ಕೆರೆಯನ್ನು ಸೃಷ್ಟಿಸಿದ್ದಳಂತೆ. ಇಂಥಾ ಕೆರೆಗೆ ಸೂಳೆ ಕೆರೆ ಎಂದೇ ಲಾಗಾಯ್ತಿನಿಂದ ಕರೆಯಲಾಗುತ್ತಿತ್ತು. ಅದಕ್ಕೀಗ ಶಾಂತಿಸಾಗರವೆಂಬ ನಾಮಕರಣವಾಗಿ, ಅದುವೇ ಜನಜನಿತವಾಗಿದೆ. ಇಂಥಾ ಪ್ರದೇಶದಲ್ಲಿ ಎರಡು ಬೆಟ್ಟಗಳ ನಡುವೆ ಸರ್ ಎಂ. ವಿಶ್ವೇಶ್ವರಯ್ಯನವರು ಒಂದು ಸೇತುವೆ ಕಟ್ಟಿದ್ದಾರೆ. ಅದು ಈ ಪ್ರದೇಶದ ಪ್ರಧಾನ ಆಕರ್ಷಣೆ. ಅತ್ಯಂತ ಎತ್ತರದಲ್ಲಿರುವ ಆ ಪ್ರದೇಶದಲ್ಲಿ ಚಿತ್ರೀಕರಣ ನಡೆಸೋದು ರಿಸ್ಕಿನ ಕೆಲಸ. ಕೆಲವೇ ಕೆಲ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವೇ ಅಲ್ಲಿಗೆ ಹೋಗಲು ಸಾಧ್ಯವಾಗಿತ್ತು. ಅಂಥಾ ಪ್ರದೇಶದಲ್ಲಿ ಅಂದುಕೊಂಡಂತೆಯೇ ಚಿತ್ರೀಕರಣ ನಡೆಸಲಾಗಿದೆಯಂತೆ.
ಅಂಥಾದ್ದೊಂದು ಅಮೋಘ ಅನುಭವ ದಕ್ಕಿಸಿಕೊಂಡ ನಂತರ ಚಿತ್ರತಂಡ ಮತ್ತದೇ ಉತ್ಸಾಹದಿಂದ ಆಸುಪಾಸಿನ ಹಳ್ಳಿಗಳ ದೇವಾಲಯ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಅಲ್ಲಿಯೇ ಆಕ್ಷನ್ ಡ್ರಾಮಾ ಜಾನರಿನ ಶಭ್ಬಾಷ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಮಾಪ್ತಿಗೊಂಡಿದೆ. ಏಸ್22 ಬ್ಯಾನರಿನಡಿಯಲ್ಲಿ ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. `ಕ’ ಹಾಗೂ ಮಳೆಬಿಲ್ಲು ಚಿತ್ರಗಳಲ್ಲಿ ನಟಿಸಿದ್ದ ಶರತ್ ಬಹುಕಾಲದ ನಂತರ ಈ ಚಿತ್ರದ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ನಿಸರ್ಗ ನಾಯಕಿಯಾಗಿ ಜೊತೆಯಾಗಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡೇಟಿಗೆ ಮತ್ತಷ್ಟು ಬೆರಗಿನ ವಿಚಾರಗಳು ಪ್ರೇಕ್ಷಕರನ್ನು ತಲುಪಲಿದ್ದಾವೆ!