ವೆಂಕಟ್ ಭಾರದ್ವಾಜ್ (director venkat bhardwaj) ನಿರ್ದೇಶನದ `ನಗುವಿನ ಹೂಗಳ ಮೇಲೆ’ (naguvina hugala mele) ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಆರಂಭದಿಕಂದಲೂ ಸಾಕಷ್ಟು ನಿರೀಕ್ಷೆ ಮೂಡಿಸುತ್ತಾ ಸಾಗಿ ಬಂದಿದ್ದ ಈ ವಿಭಿನ್ನ ಪ್ರೇಮ ಕಥಾನಕವೀಗ ಪ್ರೇಕ್ಷಕರೆದುರು ಬಂದಿದೆ. ಸಾಮಾನ್ಯವಾಗಿ, ಸಿದ್ಧಸೂತ್ರದ ಚೌಕಟ್ಟು ಮೀರಿದ ಅದ್ಯಾವುದೇ ಸಿನಿಮಾವಾದರೂ ಪ್ರೇಕ್ಷಕರಲ್ಲೊಂದು ವಿಶೇಷ ಪ್ರೀತಿ ಇದ್ದೇ ಇರುತ್ತದೆ. ಒಂದಷ್ಟು ವ್ಯಾವಹಾರಿಕ ಸವಾಲುಗಳಾಚೆಗೂ ಕೂಡಾ, (naguvina hugala mele) ನಗುವಿನ ಹೂಗಳ ಮೇಲೆ ಗೆಲ್ಲುವ ಸೂಚನೆಗಳು ಗಾಢವಾಗಿವೆ. ಹೀಗೆ ಸಾಗಿ ಬಂದಿರುವ ಈ ಚಿತ್ರದ ಹಾಡೊಂದು ಬಿಡುಗಡೆಗೂ ಮುನ್ನಾ ದಿನ ಅನಾವರಣಗೊಂಡಿತ್ತು. ಅದರ ಘಮವೀಗ ಮೆಲ್ಲಗೆ ಸಂಗೀತಾಸಕ್ತರನ್ನೆಲ್ಲ ಆವರಿಸಿಕೊಳ್ಳುತ್ತಿದೆ!
ಅಷ್ಟಕ್ಕೂ ಒಂದು ಪ್ರೇಮ ಕಥಾನಕವೆಂದ ಮೇಲೆ ಅದರ ಹಾಡುಗಳತ್ತ ಪ್ರಧಾನವಾಗಿ ಪ್ರೇಕ್ಷಕರ ಗಮನ ಕೇಂದ್ರೀಕೃತವಾಗುತ್ತೆ. ಅಂಥಾದ್ದೊಂದು ಸೂಕ್ಷ್ಮದ ಅರಿವಿರೋದರಿಂದಲೇ ಇದರ ಪ್ರತೀ ಹಾಡುಗಳನ್ನೂ ವೆಂಕಟ್ ಭಾರದ್ವಾಜ್ ಅತ್ಯಂತ ಆಸ್ಥೆಯಿಂದ ರೂಪಿಸಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿಯೇ ಅನ್ವೇಷಣೆ ನಡೆಸಿದ್ದಾರೆ. ಅದರ ಫಲವಾಗಿ ಸಿಕ್ಕವರು ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹ್ತ. ಪಂಜಾಬಿನ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿರುವ ಮೆಹ್ತಾ ದೇಶಾದ್ಯಂತ ಪರಿಚಿತರು. ಅವರ ಸಾರಥ್ಯದಲ್ಲಿಯೇ ಲವ್ ಯು ಬೇಬಿ ಎಂಬ ಈ ಮುದ್ದಾದ ಹಾಡು ರೂಪುಗೊಂಡಿದೆ.
ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ಸಿದ್ಧಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಮುದ್ದು ಬೇಬಿ ಹಾಡು ಬಹು ಬೇಗನೆ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಅಂದಹಾಗೆ, ಈ ಚಿತ್ರವನ್ನು ತೆಲುಗು ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕರಾಗಿ ಗುರುತಿಸಿಕೊಂಡಿಕರುವ ಕೆ.ಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ಪ್ರತಿಭೆ, ನಿರ್ದೇಶನದ ಕಸುವನ್ನು ಮನಗಂಡು ಈ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರ ನಂಬಿಕೆ ನಿಜವಾಗಿ, ನಗುವಿನ ಹೂಗಳ ಗೆಲುವಿನ ಪರಿಮಳ ಹಬ್ಬಿಕೊಳ್ಳುವ ಲಕ್ಷಣಗಳು ಹೇರಳವಾಗಿವೆ!