ಬ್ರಹ್ಮಗಂಟು 9brahmagantu serial) ಧಾರಾವಾಹಿಯ ನಾಯಕಿಯಾಗಿ ಕಿರುತೆಗೆ ಎಂಟ್ರಿ ಕೊಟ್ಟು ಪರಿಚಿತರಾಗಿರುವವರು (actress geetha bharathi bhat) ಗೀತಾ ಭಾರತಿ ಭಟ್. ತನ್ನ ಅಭಿನಯ ಚಾತುರ್ಯ, ಜೀವನಪ್ರೇಮದಿಂದ ಅಭಿಮಾನಿ ಬಳಗವನ್ನು ತನ್ನದಾಗಿಸಿಕೊಂಡಿರುವ ಗೀತಾರ ವೃತ್ತಿ ಬದುಕೀಗ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ. `ರವಿಕೆ ಪ್ರಸಂಗ’ ಎಂಬ ಸಿನಿಮಾ ಮೂಲಕ ಅವರು ನಾಯಕಿಯಾಗಿ ಆಗಮಿಸುತ್ತಿದ್ದಾರೆ. (director santhosh kodenkeri) ಸಂತೋಷ್ ಕೊಡೆಂಕೇರಿ ನಿರ್ದೇಶನದ ಈ ಚಿತ್ರ ಟೀಸರ್, ಟ್ರೈಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಮೇಲು ನೋಟಕ್ಕೆ ನಾನಾ ದಿಕ್ಕುಗಳತ್ತ ಆಲೋಚನೆ ಹೊರಳುವಂತೆ ಮಾಡುವ ಶೀರ್ಷಿಕೆಯ ಈ ಸಿನಿಮಾದಲ್ಲಿ ಗಹನವಾದುದೇನೋ ಇದೆ ಎಂಬುದು ಇದೀಗ ಪಕ್ಕಾ ಆಗಿದೆ. ಹೀಗೆ ಹಂತ ಹಂತವಾಗಿ ಕುತೂಹಲ ಮೂಡಿಸಿರುವ (ravike prasanga movie) `ರವಿಕೆ ಪ್ರಸಂಗ’ ಇದೇ ಫೆಬ್ರವರಿ 16ರಂದು ತೆರೆಗಾಣಲಿದೆ.
ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅವರೆಲ್ಲರ ನಡುವೆ ಮುಖ್ಯ ಪಾತ್ರದಲ್ಲಿ ನಟಿಸಿ, ಒಂದಿಡೀ ಚಿತ್ರದ ಕೇಂದ್ರ ಬಿಂದುವಾಗಿರುವವರು ಗೀತಾ ಭಾರತಿ ಭಟ್. ಗಟ್ಟಿಮೇಳ ಧಾರಾವಾಹಿ ಮತ್ತು ಕೆಲ ರಿಯಾಲಿಟಿ ಶೋಗಳ ಮೂಲಕ ಪ್ರಸಿದ್ಧರಾಗಿರುವ ಗೀತಾ ಪಾಲಿಗಿದು ಮಹತ್ವದ ಚಿತ್ರ. ಅಂದಹಾಗೆ ಈಚಿತ್ರಕ್ಕೆ ನಿರ್ದೇಶಕ ಸಂತೋಷ್ ಕೊಡೆಂಕೇರಿ ಅವರ ಮಡದಿ (pavana santhosh) ಪಾವನಾ ಸಂತೋಷ್ ಕಥೆ ಬರೆದಿದ್ದಾರೆ. ಇದಕ್ಕೆ ಸಿನಿಮಾ ರೂಪ ಕೊಡುವುದು ನಿಕ್ಕಿಯಾದಾಕ್ಷಣವೇ ಅವರು ಮುಖ್ಯ ಪಾತ್ರಕ್ಕಾಗಿ ಗೀತಾರನ್ನು ಸಂಪರ್ಕಿಸಿದ್ದರಂತೆ. ಹಾಗೆ ಪಾವನಾ ಒನ್ ಲೈನ್ ಹೇಳಿದಾಗಲೇ ಗೀತಾ ಥ್ರಿಲ್ ಆಗಿದ್ದರಂತೆ!
ಯಾಕೆಂದರೆ, ಬಯಸದೆಯೇ ಒಂದೊಳ್ಳೆ ಪಾತ್ರ ಸಿಕ್ಕಿದ, ತನಗೊಪ್ಪುವ ಕಥೆಯೇ ದಕ್ಕಿದ ಖುಷಿ ಗೀತಾರನ್ನು ಆರಂಭದಲ್ಲೇ ಆವರಿಸಿಕೊಂಡಿತ್ತು. ರವಿಕೆ ಪ್ರಸಂಗ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ, ಹಠಾತ್ತನೆ ಕೆಲವರ ಚಿತ್ರ ಬೇರೆ ವಿಚಾರೆಗಳತ್ತ ವಾಲಬಹುದು. ಆದರೆ, ಇಲ್ಲಿರೋದು ಅದಕ್ಕೆ ಹೊತಾದ, ಯಾರ ಅಂದಾಜಿಗೂ ಸಲೀಸಾಗಿ ನಿಲುಕದ ಸೂಕ್ಷ್ಮ ಕಥಾನಕ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಅದರ ಆಂತರ್ಯ ಹೊಳೆದಿದ್ದರೂ ಕೂಡಾ, ಒಟ್ಟಾರೆ ಕಥೆ ಸೊಗಸಾಗಿದೆ. ಅದು ಎಲ್ಲ ವಯೋಮಾನದವರನ್ನೂ ಕಾಡಲಿದೆ ಎಂಬ ನಂಬಿಕೆ ಗೀತಾ ಭಾರತಿಯದ್ದು. ಅದು ಒಂದಿಡೀ ಚಿತ್ರತಂಡದ ನಂಬುಗೆಯೂ ಹೌದು.
ರವಿಕೆ ಎಂಬುದೇ ಹೆಂಗಳೆಯರ ಪಾಲಿಗೆ ಆತ್ಮಕ್ಕಂಟಿದ ಆಪ್ಯಾಯ ನಂಟಿದೆ. ಅದರ ಆಚೀಚೆ ಮೆಚ್ಚುಗೆ, ಅಸಮಾಧಾನ ಬೆರೆತ ಮಿಶ್ರ ಭಾವಗಳೂ ತುಂಬಿಕೊಂಡಿವೆ. ನಿಖರವಾಗಿ ಹೇಳಬೇಕೆಂದರೆ ಹೆಣ್ಣು ಜೀವಗಳ ಭಾವನಾತ್ಮಕ ಅಂಶಗಳೆಲ್ಲವೂ ರವಿಕೆಯೊಂದಿಗೆ ತಟಿಕೆ ಹಾಕಿಕೊಂಡಿರುತ್ತದೆ. ಅದರ ಸುತ್ತ ಜರುಗುವ, ಎಲ್ಲರ ಬದುಕಿಗೂ ಹತ್ತಿರಾದ ಕಥೆ ಇಲ್ಲಿದೆಯಂತೆ. ಈಗಾಗಲೇ ನೂರಾರು ಆಡ್ ಫಿಲಂಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ, ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ಸಂತೋಷ್ ಕೊಡೆಂಕೇರಿ ಪಾಲಿಗೆ ಈ ಕಥನಕ್ಕೊಂದು ಸಿನಿಮಾ ಚೌಕಟ್ಟು ಹಾಕೋದು ಸವಾಲಿನ ವಿಚಾರವೇ. ಯಾಕೆಂದರೆ, ಇಂಥಾ ಕಥೆಗಳನ್ನು ಮನೋರಂಜನೆಯೂ ಸೇರಿದಂತೆ ಯಾವುದಕ್ಕೂ ಕೊರತೆಯಾಗದಂತೆ ಕಟ್ಟಿ ಕೊಡುವುದೇ ಒಂದು ಸಾಹಸ. ಅದರಲ್ಲಿ ಅವರು ಗೆದ್ದಂತಿದೆ. ಆ ಛಾಯೆ ರವಿಕೆ ಪ್ರಸಂಗದ ಟ್ರೈಲರಿನಲ್ಲಿ ಢಾಳಾಗಿಯೇ ಕಾಣಿಸಿದೆ.
ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.