ರಾಮ್ ಗೋಪಾಲ್ ವರ್ಮಾನ (ramgopal varma) ಖಾಸಾ ಗೆಣೆಕಾರ, ನಿರ್ದೇಶಕ ಪುರಿ ಜಗನ್ನಾಥ್ (puri jagannath) ಕೂಡಾ ಬಿಡುಬೀಸಾದ ನಡವಳಿಕೆಯಿಂದ ಹೆಸರಾಗಿರುವವರು. ಸಿನಿಮಾ ರಂಗದ ಆಂತರಿಕ ವಿದ್ಯಮಾನಗಳನ್ನೂ ವಿಶ್ಲೇಷಣೆಗೊಳಪಡಿಸುತ್ತಾ, ಅಭಿಪ್ರಾಯ ಹಂಚಿಕೊಳ್ಳುವ ಸ್ವಭಾವದ ಪುರಿ ಪಾಲಿಗೆ ಪುಷ್ಕಳ ಗೆಲುವು ದಕ್ಕಿ ಬಹು ಕಾಲ ಕಳೆದಿದೆ. ಬಹುಶಃ ಕೊರೋನಾ ಕಾಲದಲ್ಲಿ ಏಕಾಏಕಿ (tollywood drugs case) ಡ್ರಗ್ಸ್ ಕೇಸಿನಲ್ಲಿ ತಗುಲಿಕೊಳ್ಳದಿದ್ದರೆ, ಆ ಬಗೆಗಿನ ಮಾನಸಿಕ ಹಿಂಸೆಗಳು ಬಾಧಿಸದೇ ಹೋಗಿದ್ದರೆ, ಪುರಿ ಇಷ್ಟು ಹೊತ್ತಿಗೆಲ್ಲ ಕೊಂಚ ಗೆಲುವು ಕಂಡು ಉಬ್ಬುತ್ತಿತ್ತೇನೋ. ಆದರೆ, ಡ್ರಗ್ಸ್ ಕೇಸು, ಅದರ ವಿಚಾರಣೆಗಳಿಂದ ಸೀದು ಹೋದಂತಿದ್ದ ಪುರಿ ಪಾಲಿಗೀಗ ಬಿಗ್ ರಿಲೀಫು ಸಿಕ್ಕಿದೆ!
ಕನ್ನಡ ಚಿತ್ರರಂಗದಲ್ಲಿ ಕೊರೋನಾ ಬಾಧೆಯ ಆಸುಪಾಸಿನಲ್ಲೇ ಡ್ರಗ್ಸ್ ಕೇಸು (tollywood drug case) ಸದ್ದು ಮಾಡಿತ್ತಲ್ಲ? ಅದಕ್ಕೂ ಕೊಂಚ ಮುನ್ನವೇ ಈ ಡ್ರಗ್ಸ್ ಕೇಸಿನ ಸುಳಿಗೆ ಸಿಕ್ಕಿ ಟಾಲಿವುಡ್ ಅದುರಿ ಹೋಗಿತ್ತು. ಅನೇಕ ನಟ ನಟಿಯರ ಮೇಲೆ ತನಿಖಾಧಿಕಾರಿಗಳು ರೇಡು ನಡೆಸಿದ್ದರು. ಅದರಲ್ಲಿಯೂ ತೆಲುಗಿನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಹೆಸರು ಡ್ರಗ್ಸ್ ಕೇಸಿನಲ್ಲಿ ಕೇಳಿ ಬರುತ್ತಲೇ ಸಂಚಲನ ಸೃಷ್ಟಿಯಾಗಿತ್ತು. ವರ್ಷಾಂತರಗಳಿಂದ ನಿರಂತರವಾಗಿ ಪುರಿಯನ್ನು ವಿಚಾರಣೆಗೊಳಪಡಿಸಲಾಗುತ್ತಿತ್ತು. ಕಡೆಗೂ ಇದೀಗ ಆತನಿಗೆ ಬಿಗ್ ರಿಲೀಫ್ ಸಿಕ್ಕಿದೆ. ವಿಚಾರಣೆಯ ಭಾಗವಾಗಿ ಪುರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗೊಳಪಡಿಸಿತ್ತು. ಹಲವು ಹಂತಗಳಲ್ಲಿ ಈ ಪ್ರಕ್ರಿಯೆ ನಡೆದು, ಕಡೆಗೂ ಈಗ ಪುರಿಯ ದೇಹದಲ್ಲಿ ಯಾವುದೇ ಮಾದಕ ವಸ್ತುಗಳ ಅಂಶವಿಲ್ಲ, ಆತನ ಮೇಲಿರೋ ಆರೋಪಕ್ಕೆ ದೇಹದಲ್ಲಿ ಯಾವುದೇ ಆಧಾರಗಳು ಸಿಕ್ಕಿಲ್ಲವೆಂದು ಸ್ಪಷ್ಟಪಡಿಸಿದೆ. ಈ ಮೂಲಕ ಇನ್ನೇನು ಕಾನೂನು ಕುಣಿಕೆಗೆ ತಗುಲಿಕೊಳ್ಳುವ ಭಯದಲ್ಲಿದ್ದ ಪುರಿ ನಿರಾಳವಾಗಿದ್ದಾರೆ.
ಈ ಪ್ರಕರಣದಲ್ಲಿ ಪುರಿ ಜಗನ್ನಾಥ್ ಮತ್ತು ನಟತರುಣ್ ಅವರನ್ನು ಏಕಕಾಲದಲ್ಲಿಯೇ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರಧಿಯನ್ನಾಧರಿಸಿ, ನಾಂಪಲ್ಲಿ ನ್ಯಾಯಾಲಯ ಪುರಿ ಮೇಲಿದ್ದ ಪ್ರಕರಣವನ್ನೇ ವಜಾಗೊಳಿಸಿದೆ. ಇದು ಪುರಿ ಪಾಲಿಗೆ ತಾತ್ಕಾಲಿಕ ಗೆಲುವು. ಯಾಕೆಂದರೆ, ಇನ್ನೂ ಕೂಡಾ ಟಾಲಿವುಡ್ ಡ್ರಗ್ ಕೇಸು ಹಲವು ಮಜಲುಗಳಲ್ಲಿ ಮೈ ಮುರಿಯುತ್ತಿದೆ. ಇನ್ಯಾವುದೋ ದಿಕ್ಕಿಂದ ಸಾಗಿ ಬಂದ ತನಿಖೆ ಪುರಿಯ ಬುಡದಲ್ಲಿ ಲ್ಯಾಂಡ್ ಆದರೆ, ಆತ ಮತ್ತೊಮ್ಮೆ ತನಿಖೆ ಎದುರಿಸಬೇಕಾಗಬಹುದು. ಇದೆಲ್ಲ ಏನೇ ಇದ್ದರೂ ಈ ಕ್ಷಣಕ್ಕೆ ಪುರಿ ಬೀಸೋ ದೊಣ್ಣೆಯಿಂದ ಪಾರಾಗಿಗೆ. ನಶೆಯ ನಡುಕ ಆತನ ನೆತ್ತಿಯಿಂದಿಳಿದಿದೆ!