ಕನ್ನಡ ಚಿತ್ರರಂಗ (kannada filme industry) ಆಗಾಗ ಒಂದಷ್ಟು ಬಗೆಯ ಟ್ರೆಂಡುಗಳಿಗೆ, ಅಚಾನಕ್ಕಾಗಿ ಬೀಸುವ ಅಲೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಅದು ಯಾವುದೇ ಭಾಷೆಯ ಚಿತ್ರರಂಗದ ವಿಚಾರದಲ್ಲಾದರೂ ಜೀವಂತಿಕೆಯ ಲಕ್ಷಣ. ದುರಂತವೆಂದರೆ, ಕನ್ನಡ ಚಿತ್ರರಂಗದಲ್ಲಿ ಮಾತ್ರ ಅದೊಂದು ತೆರನಾದ ಜಾಢ್ಯ ಬಹು ಹಿಂದಿನಿಂದಲೂ ಇದೆ. ಒಂದು ಬಗೆಯ ಸಿನಿಮಾ ಗೆದ್ದರೆ ಇಲ್ಲಿ ಅಂಥಾದ್ದೇ ಚರ್ವಿತ ಚರ್ವಣ ಕಥೆಗಳ ರೀಲು ಸುತ್ತುವ ಉಮೇದು ಮೂಡಿಕೊಳ್ಳುತ್ತೆ. ಅದರ ಭಾಗವಾಗಿಯೇ (kgf movie) ಕೆಜಿಎಫ್ ನಂತರದಲ್ಲೊಂದು ಗಾಢ ಕತ್ತಲು ಆವರಿಸಿಕೊಂಡಿದ್ದನ್ನು ಆ ಸಿನಿಮಾ ಗೆಲುವಿನ ಪ್ರಭೆ ಮರೆಮಾಚಿತ್ತು. ಅದು ನಿಜಕ್ಕೂ ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂಬಂಥಾ ವಿಶ್ಲೇಷಣೆಗಳೀಗ ಕೇಳಿ ಬರುತ್ತಿವೆ. ಹಾಗಾದರೆ, ಅಂಥಾ ಅಪಾಯಗಳನ್ನು ದಾಟಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಇದೀಗ ತೆರೆಗಾಣಲು ತಯಾರಾಗಿರುವ (saramsha kannada movie) `ಸಾರಾಂಶ’ದಂಥಾ ಚಿತ್ರಗಳು ಉತ್ತರವಾಗಿ ನಿಲ್ಲುತ್ತವೆ!
ಒಂದು ಕಂಟಕವನ್ನು ದಾಟಿಕೊಳ್ಳಲು ಸಿಕ್ಕ ಹಾಯಿದೋಣಿಯ ರೂಪಕವಾಗಿ `ಸಾರಾಂಶ’ (saramsha movie) ಚಿತ್ರವನ್ನು ಬಿಂಬಿಸಲು ಕಾರಣವಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಆ ಚಿತ್ರದ (saramsha movie trailer) ಟ್ರೈಲರ್ ಮತ್ತು ಅದರ ಸುತ್ತ ಹಬ್ಬಿಕೊಂಡಿರುವ ಮೆಚ್ಚುಗೆಯ ಛಾಯೆಯೇ ಎಲ್ಲವನ್ನೂ ಹೇಳುವಂತಿವೆ. ಈಗಾಗಲೇ ನಟನಾಗಿ ಪರಿಚಿತರಾಗಿರುವ (director surya vasishta) ಸೂರ್ಯ ವಸಿಷ್ಠ ನಿರ್ದೇಶನ ಮಾಡಿರುವ ಚಿತ್ರ ಸಾರಾಂಶ. ಈಗಾಗಲೇ ಹಾಡುಗಳೂ ಸೇರಿದಂತೆ ನಾನಾ ಸ್ವರೂಪಗಳಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ತಂತಾನೇ ಸೆಳೆದುಕೊಂಡಿದೆ. ಇದೀಗ ಬಿಡುಗಡೆಗೊಂಡಿರೋ ಟ್ರೈಲರ್‍ನಲ್ಲಿ ಅಂದಾಜಿಗೆ ನಿಲುಕದ ಒಂದಷ್ಟು ಸಂಗತಿಗಳನ್ನು ಹರವುತ್ತಲೇ, ನಮ್ಮೊಳಗೇ ಇರುವ ಸುಪ್ತ ಜಗತ್ತಿನೊಳಗೆ ಕೈ ಹಿಡಿದು ಕರೆದೊಯ್ಯುವಂಥಾ ಮ್ಯಾಜಿಕ್ ಒಂದು ಅತ್ಯಂತ ಕ್ರಿಯಾಶೀಲವಾಗಿ ನಡೆದಿದೆ.
ಪಕ್ಕಾ ಕಮರ್ಶಿಯಲ್ ಉನ್ಮಾದಗಳನ್ನು ಎದೆಯ ಮಿದುವಿಗೆ ನವಿಲುಗರಿ ಸೋಕಿಸುವಂಥಾ ಸೂಕ್ಷ್ಮ ಕಥಾನಕದ ಮೂಲಕ ಹಿಡಿದಿಡುವುದು ಕಷ್ಟ. ಅದು ನಿರ್ದೇಶಕನ ಮುಂದಿರುವ ನಿಜವಾದ ಚಾಲೆಂಜ್. ನಿರ್ದೇಶಕ ಸೂರ್ಯ ವಸಿಷ್ಠ ಅತ್ಯಂತ ಲೀಲಾಜಾಲವಾಗಿ ಅದನ್ನು ಎದುರಿಸಿದ್ದಾರೆ. ಯಾವ ಆಡಂಬರವೂ ಇಲ್ಲದೆ ನೋಡುಗರನ್ನು ಕಥೆಯ ಸೆಳವಿಗಿ ಸಿಕ್ಕಿಸಿ, ಸಿನಿಮಾ ನೋಡಬೇಕೆಂಬ ಕಾತರ ಉಕ್ಕಿಸುವ ಜಾಣ್ಮೆಯೊಂದಿಗೆ ಈ ಟ್ರೈಲರ್ ಅನ್ನು ರೂಪಿಸಿದ್ದಾರೆ. ಅದೇ ಬಿಸುಪಿನೊಂದಿಗೆ ಇಡೀ ಸಿನಿಮಾ ಮೂಡಿ ಬಂದಿದ್ದರೆ ಖಂಡಿತವಾಗಿಯೂ ಕನ್ನಡ ಚಿತ್ರರಂಗದಲ್ಲಿ ಹೊಸ ವರ್ಷಕ್ಕೊಂದು ತಾಜಾ ಗೆಲುವಿನ ಮೈಲಿಗಲ್ಲು ಮೂಡಿಕೊಳ್ಳೋದರಲ್ಲಿ ಯಾವ ಸಂದೇಹವೂ ಇಲ್ಲ!
ಅಂದಹಾಗೆ, ಇದು ಕಥೆಗಾರನೊಬ್ಬ ತಾನು ಸೃಷ್ಟಿಸಿದ ಪಾತ್ರಗಳನ್ನು ತಾನೇ ಎದುರುಗೊಳ್ಳುವ, ಕಥೆಗಾರನಿಂದ ಕಥೆಯೋ ಅಥವಾ ಕಥೆಯಿಂದ ಕಥೆಗಾರನೋ ಎಂಬಂಥಾ ನಿಕಷಕ್ಕೊಡ್ಡಿಕೊಳ್ಳುವ ಸಂಕೀರ್ಣ ಕಥಾ ಮೂಲವಿರುವ ಚಿತ್ರ. ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅದರ ಜೊತೆಗೆರಡು ಬೊಂಬೆಗಳ ಪಾತ್ರಗಳ ಮೂಲಕ ಮತ್ತಷ್ಟು ಕೌತುಕ ಮೂಡಿಸಲಾಗಿದೆ. ಒಟ್ಟಾರೆಯಾಗಿ ಈ ಟ್ರೈಲರ್ ಈ ವರ್ಷದ ಹೊಸ ಬಗೆಯ ಪ್ರಯತ್ನವಾಗಿ ಮುಖ್ಯವಾಗುತ್ತದೆ. ಇದೇ ಫೆಬ್ರವರಿ 15ರಂದು ಬಿಡುಗಡೆಗೊಳ್ಳಲಿರುವ ಸಾರಾಂಶದ ಗೆಲುವಿನ ಮೂಲಕ ಮತ್ತೆ ಚಿತ್ರರಂಗದಲ್ಲೊಂದು ಹೊಸಾ ಹರಿವು ಸೃಷ್ಟಿಯಾಗುವ ಲಕ್ಷಣ ಕೂಡಾ ನಿಚ್ಚಳವಾದಂತೆ ಭಾಸವಾಗುತ್ತದೆ.
ಸಾರಾಂಶ ಟ್ರೈಲರ್ ಬಿಡುಗಡೆಗೊಂಡು ದಿನಗಳುರುಳುತ್ತಲೇ ಅದರ ಬಗೆಗಿನ ಕ್ರೇಜ್ ಕೂಡಾ ಹೆಚ್ಚುತ್ತಿದೆ. ಯಾಕೆಂದರೆ, ಅದು ಹೀರೋಯಿಸಮ್ಮಿನ ಮೇಲಾಟ, ಕತ್ತಲು, ರಕ್ತಪಾತ, ಕರ್ಕಶ ಸದ್ದುಗಳಿಂದ ಕಳಚಿಕೊಂಡು ತಾಜಾತನದಿಂದ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಒಟ್ಟಾರೆಯಾಗಿ, ಸದ್ಯದ ವಾತಾವರಣವೆಲ್ಲವೂ ಸಕಾರಾತ್ಮಕವಾಗಿರೋದು ಚಿತ್ರತಂಡದಲ್ಲೊಂದು ಗಾಢ ಭರವಸೆ ಮೂಡಿಸಿದೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪೆÇ್ರಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ್ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಅವರ ಛಾಯಾಗ್ರಹಣ ಸಾರಾಂಶದ ಶಕ್ತಿ ಎಂಬ ಮೆಚ್ಚುಗೆ ಚಿತ್ರತಂಡದ್ದು…