ಲೆಕ್ಕವಿಡಲಾರದಷ್ಟು ಪ್ರೇಮ ಕಥೆಗಳು (love stories) ಬಂದು ಹೋದರೂ ಕೂಡಾ ಆ ಬಗೆಯ ಚಿತ್ರಗಳ ಮೇಲಿನ ಮೋಹ ಮುಗಿಯುವಂಥಾದ್ದಲ್ಲ. ವಿಶಿಷ್ಟ ಒಳಗಣ್ಣು ಹೊಂದಿರುವ ನಿರ್ದೇಶಕನೋರ್ವ ಪ್ರೇಮ ಕಥೆಯನ್ನು ಕೈಗೆತ್ತಿಕೊಂಡರಂತೂ ನಿರೀಕ್ಷೆ ನೂರ್ಮಡಿಸುತ್ತೆ. ಸದ್ಯದ ಮಟ್ಟಿಗೆ ಆ ದಿಕ್ಕಿನಲ್ಲೊಂದು ನಿರೀಕ್ಷೆ ಮೂಡಿಸಿರುವ ಚಿತ್ರ (naguvina hoogala mele movie) `ನಗುವಿನ ಹೂಗಳ ಮೇಲೆ’. ಇದೇ ಫೆಬ್ರವರಿ 9ರಂದು ತೆರೆಗಾಣಲಿರುವ ಈ ಚಿತ್ರವನ್ನು (director venkat bharadwaj) ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಸದರಿ ಸಿನಿಮಾ ಈ ವರ್ಷದ ಶುರುವಾತನ್ನು ಸಮ್ಮೋಹಕ ಗೆಲುವೊಂದರ ಮೂಲಕ ಕಳೆಗಟ್ಟಿಸುವ ಎಲ್ಲ ಲಕ್ಷಣಗಳೂ ಸದ್ಯದ ಮಟ್ಟಿಗೆ ದಟ್ಟವಾಗಿವೆ!
ಯಾವುದೇ ಚಿತ್ರರಂಗದಲ್ಲಿ ಒಂದು ಬಗೆಯ ಅಲೆಯೆದ್ದಾಗ, ಅದುವೇ ಸನ್ನಿಯ ಸ್ವರೂಪ ಪಡೆದು ಎಲ್ಲವೂ ಅದರ ಓಘಕ್ಕೆ ತಕ್ಕುದಾಗಿ ಮುಂದುವರೆಯುತ್ತಿರುವಾಗ ಭಿನ್ನ ದಾರಿಯೊಂದರಲ್ಲಿ ಹೆಜ್ಜೆಯೂರೋದು ತ್ರಾಸದಾಯಕ ಸಂಗತಿ. ಗಟ್ಟಿಯಾದ ಪ್ರತಿಭೆಯಿದ್ದರೆ ಮಾತ್ರವೇ ಕಾಲೂರಿ ನಿಲ್ಲಲು ಸಾಧ್ಯವಾಗುತ್ತದೆ. ಅಂಥಾದ್ದೊಂದು ಕಸುವಿನ ಕಾರಣದಿಂದಲೇ ತಮ್ಮನ್ನು ತಾವು ನೆಲೆಗಾಣಿಸಿಕೊಂಡಿರುವವರು (director venkat bharadwaj) ನಿರ್ದೇಶಕ ವೆಂಕಟ್ ಭಾರದ್ವಾಜ್. ಈಗಾಗಲೇ ಒಂದಷ್ಟು ಸಿನಿಮಾಗಳ ಮೂಲಕ ಅವರ ಹಾದಿ ವಿಶಿಷ್ಟವಾದುದೆಂಬುದು ಸಾಬೀತಾಗಿದೆ. ಈ ಬಾರಿ ವೆಂಕಟ್ ನೋಡುಗರ ಮೈ ಮನಗಳಲ್ಲಿ ತಾಜಾ ಅನುಭೂತಿಯೊಂದನ್ನು ಪ್ರವಹಿಸುವಂತೆ ಮಾಡಬಲ್ಲ ಪರಿಶುದ್ಧ ಪ್ರೇಮಕಥಾನಕದೊಂದಿಗೆ ಮತ್ತೆ ಹಾಜರಾಗಿದ್ದಾರೆ.
ಎಳೇ ಮನಸುಗಳು ಮಾತ್ರವಲ್ಲ; ಮಾಗಿದ ಜೀವಗಳನ್ನೂ ತಾಕಬಲ್ಲ ಕಥೆ ಈ ಚಿತ್ರದಲ್ಲಿದೆಯಂತೆ. ಆ ಪ್ರೇಮ ಕಥಾನಕವೀಗ ಪ್ರಧಾನವಾಗಿ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಈಗಾಗಲೇ ಬಿಡುಗಡೆಗೊಂಡಿರುವ ಅಷ್ಟೂ ಹಾಡುಗಳು ಕೂಡಾ ಕೇಳುಗರನ್ನು ಕಾಡಿವೆ. ಈ ಮೂಲಕ ವೆಂಕಟ್ ಭಾರದ್ವಾಜ್ ನಗುವಿನ ಹೂಗಳ ಮೇಲೆ ಚಿತ್ರದ ಹಾಡುಗಳನ್ನು ಯಾವತ್ತಿಗೂ ಆವರಿಸಿಕೊಳ್ಳುವಂತೆ ರೂಪಿಸಿದ್ದಾರೆ. ಬೇರೆ ವಿಚಾರಗಳಂತೆಯೇ ಹಾಡುಗಳನ್ನು ಸಿದ್ಧಪಡಿಸೋ ನಿಟ್ಟಿನಲ್ಲಿಯೂ ಚಿತ್ರತಂಡ ಅಪಾರವಾಗಿ ಶ್ರಮ ವಹಿಸಿದೆ. ಈ ಹಾಡುಗಳಿಗೆ ಸಮ್ಮೋಹಕ ಸ್ಪರ್ಶ ನೀಡುವ ಸಲುವಾಗಿಯೇ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತಾರ ಆಗಮನವಾಗಿದೆ!
ಲವ್ ಫ್ರಾನ್ ಮೆಹತಾ ಪಂಜಾಬ್ ಸೀಮೆಯ ಪ್ರಸಿದ್ಧ ಸಂಗೀತ ನಿರ್ದೇಶಕ. ಮೆಹತಾರ ಸಾರಥ್ಯದಲ್ಲಿ ಕನ್ನಡದ ಸೂಕ್ಷ್ಮ ಒಳನೋಟದ ಕವಿ ಚಿದಂಬರ ನರೇಂದ್ರ, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ, ನರೇಂದ್ರ ಬಾಬು ಮುಂತಾದವರ ಸಾಹಿತ್ಯ ಕಳೆಗಟ್ಟಿಕೊಂಡಿದೆ. ಆಯಾ ಹಾಡಿನ ಭಾವಕ್ಕೆ ತಕ್ಕಂಥಾ ಧ್ವನಿ ಹುಡುಕುವಲ್ಲಿಯೂ ಇಲ್ಲಿ ಹೊಸತವಿದೆ. ಇಂಡಿಯನ್ ಐಡಲ್ ರನ್ನರ್ ಅಪ್ ಆಗಿರುವ ತೇಜೇಂದರ್ ಸಿಂಗ್, ನಿಹಾರಿಕಾ, ಮೇಘನಾ ಭಟ್ ಮತ್ತು ಕೇರಳ ಮೂಲದ ವಿಮಲ್ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇಂಥಾದ್ದೊಂದು ತಪನೆಯಿಂದಲೇ ನಗುವಿನ ಹೂಗಳ ಮೇಲೀಗ ಮೆಲೋಡಿಯಸ್ ಮೆರವಣಿಗೆ ಹೊರಟಿದೆ. ಆ ಪಥದಲ್ಲೀಗ ಈ ಚಿತ್ರದ ಪಾಲಿಗೆ ಗೆಲುವಿನ ಗಮ್ಯ ತುಂಬಾ ಹತ್ತಿರವಾದಂತೆನಿಸುತ್ತಿದೆ!
ಅಂದಹಾಗೆ, ಈ ಚಿತ್ರದಲ್ಲಿ ಅಭಿದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಕಿರುತೆರೆಯ ಮೂಲಕ ಒಂದಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವವರು ಅಭಿದಾಸ್. ಇನ್ನು ಸೋಶಿಯಲ್ ಮೀಡಿಯಾ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿರುವ ಶರಣ್ಯಾ ಶೆಟ್ಟಿ ಈ ಚಿತ್ರದ ಮೂಲಕವೇ ಪೂರ್ಣಪ್ರಮಾಣದ ನಾಯಕಿಯಾಗಿದ್ದಾರೆ. ಈ ಜೋಡಿ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ ಎಂದರೆ, ಅದಕ್ಕೆ ಪ್ರಧಾನ ಕಾರಣ ಹಾಡುಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಹಾಗಂತ ಇದನ್ನು ಬರೀಯ ಪ್ರೇಮ ಕಥನ ಅಂದುಕೊಳ್ಳುವಂತಿಲ್ಲ. ವೆಂಕಟ್ ಭಾರದ್ವಾಜ್ ಅವರ ಕಸುಬುದಾರಿಕೆಯ ಅರಿವಿರುವವರ್ಯಾರೂ ಹಾಗಂದುಕೊಳ್ಳಲು ಸಾಧ್ಯವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಬದುಕಿಗೆ ಹತ್ತಿರಾದಂಥಾ, ಪ್ರತೀ ನೋಡುಗರ ಪಾಲಿಗೆ ಆಪ್ಯಾಯವಾಗಬಲ್ಲಂಥಾ ಅನೇಕ ಅಂಶಗಳು ಈ ಕಥೆಯಲ್ಲಿ ಅಡಕವಾಗಿವೆಯಂತೆ.
ಇನ್ನುಳಿದಂತೆ, ರಂಗಭೂಮಿ ಪ್ರತಿಭೆ ಅಭಿಷೇಕ್ ಅಯ್ಯಂಗಾರ್ ಈ ಚಿತ್ರದ ಮೂಲಕ ಸಂಭಾಷಣಾ ಕಾರರಾಗಿದ್ದಾರೆ. ಈ ಮೂಲಕ ಸಂಭಾಷಣೆಯಲ್ಲಿಯೂ ಕೂಡಾ ಹೊಸಾ ಅನ್ವೇಷಣೆ ಮಾಡಲಾಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಕೇವಲ ಹಾಡುಗಳ ವಿಚಾರದಲ್ಲಿ ಮಾತ್ರವಲ್ಲ; ಪ್ರತಿಯೊಂದರಲ್ಲಿಯೂ ನಗುವಿನ ಹೂಗಳ ಮೇಲೆ ಹೊಸತನ ತೊನೆದಾಡುವಂತೆ ಮಾಡಲಾಗಿದೆ. ಇದರ ಸೌಂಡ್ ರೇಕಾರ್ಡಿಂಗ್ ಅನ್ನು ಲಂಡನ್ನಿನಲ್ಲಿ ನಡೆಸಲಾಗಿದೆ. ಅದು ತಾಂತ್ರಿಕವಾಗಿಯೂ ಕೂಡಾ ಈ ಚಿತ್ರ ಭಿನ್ನವಾಗಿದೆ ಎಂಬುದರ ಸಂಕೇತ. ಹೀಗೆ ಬಿಡುಗಡೆಯ ಹೊಸ್ತಿಲಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ತೆಲುಗಿನ ಪ್ರಸಿದ್ಧ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.