ಕೊಡಗಿನ ಹುಡುಗಿ (actress rashmika mandanna) ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸಲೇ ಬೇಕೆಂದೇನಿಲ್ಲ; ಸುಮ್ಮನೆ ಅಲ್ಲಿಲ್ಲಿ ಸುಳಿದಾಡಿದರೂ, ಒಂದಷ್ಟು ಕಾಲ ಕಣ್ಣಿಗೆ ಕಾಣಿಸದಂತೆ ಗಾಯಬ್ ಆದರೂ ಕೂಡಾ ಹಠಾತ್ತನೆ ನಾನಾ ತೆರನಾದ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಟ್ರೋಲುಗಳು ಪುಟಿದೆದ್ದು ಕುಣಿದಾಡುತ್ತವೆ. ಆಕೆ ಅಲ್ಲಿಲ್ಲಿ ಕಾಣಿಸಿಕೊಂಡು ಒಂದೆರಡು ಮಾತಾಡಿದರೂ ವಿವಾದಗಳೇಳುತ್ತವೆ. ಅದ್ಯಾವ ಘಳಿಗೆಯಲ್ಲಿ (rakshith shetty) ರಕ್ಷಿತ್ ಶೆಟ್ಟಿ ಜೊತೆಗಿನ ಬಂಧವನ್ನು ಕಡಿದುಕೊಂಡಳೋ ಗೊತ್ತಿಲ್ಲ; ಆ ಕ್ಷಣದಿಂದಲೇ ಆಕೆಯ ನೆಮ್ಮದಿಗೆ ಬೆಂಕಿ ಬಿದ್ದಂತಾಗಿದೆ. ಆಗಾಗ ಆ ಬೆಂಕಿ ತಣ್ಣಗಾದಂತೆ ಕಂಡರೂ ಅದರ ಬೂದಿಯಿಂದ ಒಂದಷ್ಟು ಗಾಸಿಪ್ಪುಗಳು ಕೆನೆದು ಕುಣಿಯುತ್ತವೆ. ಹಾಗೆ ಹುಟ್ಟುವ ಕಲ್ಪಿತ ಗಾಸಿಪ್ಪುಗಳಲ್ಲಿ ರಶ್ಮಿಕಾ ವರ್ಚಸ್ಸು ಕುಂದುತ್ತಿದೆ ಎಂಬುದು ಪ್ರಧಾನವಾಗಿ ಸೇರಿಕೊಳ್ಳುತ್ತೆ!
ಕಿರಿಕ್ ಪಾರ್ಟಿ (kirik party movie) ಮೂಲಕ ಕನ್ನಡದ ಮಟ್ಟಿಗೆ ನ್ಯಾಷನಲ್ ಕ್ರಶ್ ಎಂಬಂತಾಗಿದ್ದಾಕೆ ರಶ್ಮಿಕಾ ಮಂದಣ್ಣ. ಆ ನಂತರ ಸೀದಾ ತೆಲುಗಿಗೆ ಎಂಟ್ರಿ ಕೊಟ್ಟಿದ್ದ ಈ ಹುಡುಗಿ ಬೆಳೆದು ನಿಂತ ಪರಿ ಇದೆಯಲ್ಲಾ? ಅದನ್ನು ಕಂಡು ಬೆಕ್ಕಸ ಬೆರಗಾಗದವರಿಲ್ಲ. ಘಟಾನುಘಟಿ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ರಶ್ಮಿಕಾಗೆ ಹಂತ ಹಂತವಾಗಿ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಅಂಥವರ ಮುಂದೆಲ್ಲ ರಶ್ಮಿಕಾ ಮಂಕಾಗಿದ್ದಾಳೆ, ಅವಕಾಶಕ್ಕೆ ತತ್ವಾರವಾಗುತ್ತಲೆ ಅಂತೆಲ್ಲ ಸುದ್ದಿ ಹಬ್ಬುತ್ತಲೇ ಬಂದಿವೆ. ಈ ಹಿಂದೆ ಮಂಗಳೂರು ಹುಡುಗಿ ಪೂಜಾ ಹೆಗ್ಡೆಯ ಮುಂದೆ (rashmika mandanna) ರಶ್ಮಿಕಾಳನ್ನು ಮಂಕುಬಡಿಸುಪ ಪ್ರಯತ್ನ ನಡೆದಿತ್ತು. ಶ್ರೀಲೀಲಾ ಎಂಟ್ರಿ ಕೊಟ್ಟೇಟಿಗೆ ಮಂದಣ್ಣಳ ಕ್ರೇಜು ಕಂಪ್ಲೀಟಾಗಿ ಮಗುಚಿಕೊಂಡಿತು ಎಂಬಂತೆ ಹುಯಿಲೆದ್ದು ಬಿಟ್ಟಿತ್ತು.
ಹಾಗಾದರೆ, ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ? ಕೊಡಗಿನ ಹುಡುಗಿ ಎದುರಾಳಿಗಳ ಆರ್ಭಟದೆದಿರು ಅದುರಿ ಹೋಗಿದ್ದಾಳಾ? ಹೀಗೆ ನಾನಾ ಪ್ರಶ್ನೆಗಳನ್ನಿಟ್ಟುಕೊಂಡು ಹುಡುಕ ಹೋದರೆ, ಬೇರೊಂದು ಆಯಾಮದ ವಾಸ್ತವ ತೆರೆದುಕೊಳ್ಳುತ್ತೆ. ಸದ್ಯಕ್ಕೆ ಆಕೆಯ ಕೈಲಿರೋ ಸಿನಿಮಾಗಳ ಸಂಖ್ಯೆಯೇ ಎಲ್ಲವನ್ನೂ ಖುಲ್ಲಂಖುಲ್ಲ ಜಾಹೀರು ಮಾಡುವಂತಿದೆ. ಅದರನ್ವಯ ಹೇಳೋದಾದರೆ, ಈ ಕ್ಷಣಕ್ಕೆ ಮೂರು ಬಿಗ್ ಬಜೆಟ್ಟಿನ ಚಿತ್ರಗಳಿಗೆ ರಶ್ಮಿಕಾ ಸಹಿ ಹಾಕಿದ್ದಾಳೆ. ಅದಕ್ಕಾಗಿ ಭರದಿಂದ ತಯಾರಿಯೂ ನಡೆಯುತ್ತಿದೆ. ತೆಲುಗುನಾಡಿನ ವಾತಾವರಣವನ್ನಾಧರಿಸಿ ಹೇಳೋದಾದರೆ, ಇನ್ನೊಂದಷ್ಟು ವರ್ಷ ರಶ್ಮಿಕಾ ಹವಾ ಅನೂಚಾನವಾಗಿ ಮುಂದುವರೆಯುವಂತಿದೆ. ಹಲವು ವಿವಾದಗಳಾಚೆಗೂ ಆಕೆ ಮತ್ತೆ ಪುಟಿದೆದ್ದಿದ್ದಾಳೆ. ನಿಖರವಾಗಿ ಹೇಳಬೇಕೆಂದರೆ, ಕೆಡವಲು ನಿಂತರ ಮುಂದೆಯೇ ಕೊಡಗಿನ ಹುಡುಗಿಗೆ ಮತ್ತೆ ಗೆಲುವಿನ ಕೋಡು ಮೂಡಿದೆ. ಇದೆಲ್ಲವೂ ಕೂಡಾ ಅದ್ಯಾರು ಬಂದರೂ ರಶ್ಮಿಕಾ ಮಂದಣ್ಣಳನ್ನು ಮಂಕು ಮಾಡಲಾಗೋದಿಲ್ಲ ಎಂಬ ವಾಸ್ತವಕ್ಕೆ ಕನ್ನಡಿ ಹಿಡಿಯುವಂತೆ ಭಾಸವಾಗುತ್ತದೆ!