ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ ಕ್ಷಣದ ಅನಿವಾರ್ಯತೆಯನ್ನೇ ಫ್ಯಾಷನ್ ಆಗಿ ಪರಿಭಾವಿಸಿಕೊಂಡು, ಸಿಕ್ಕ ಸಣ್ಣ ಅವಕಾಶವನ್ನೇ ಗುರಿಯೆಡೆಗಿನ ಮೆಟ್ಟಿಲಾಗಿಸಿಕೊಳ್ಳೋ ಕಲೆಯನ್ನ ಪಳಗಿಸಿಕೊಂಡವರ ಪಾಲಿಗೆ ಕೊಂಚ ತಡವಾಗಿಯಾದರೂ ಕನಸೆಂಬುದು ನನಸಾಗಿ ಅಪ್ಪಿಕೊಳ್ಳುತ್ತೆ. ಅಂಥಾದ್ದೇ ಸೂಕ್ಷ್ಮ ಹಾದಿಯಲ್ಲಿ ಸಾಗಿ ಬಂದು, ಏಕಕಾಲದಲ್ಲಿಯೇ ನಟನಾಗಿ, ಸಿನಿಮಾ ವರದಿಗಾರ ನಿರೂಪಕನಾಗಿ ಗುರುತಿಸಿಕೊಂಡಿರುವ ಹುಡುಗ (mavalli karthik) ಮಾವಳ್ಳಿ ಕಾರ್ತಿಕ್. ಅವರೀಗ ದೇವರ ಹೆಸರಿನಲ್ಲಿ ಪ್ರಮಾಣ ಮಾಡುವ ಮೂಲ ಒಂದಷ್ಟು ಅಚ್ಚರಿಗೆ ಕಾರಣರಾಗಿದ್ದಾರೆ.
ಪ್ರಜಾ ಟಿವಿಯಲ್ಲಿ ಸಿನಿಮಾ ವರದಿಗಾರನಾಗಿ, ನಿರೂಪಕನಾಗಿ ಚಾಲ್ತಿಯಲ್ಲಿರುವವರು (mavalli karthik) ಮಾವಳ್ಳಿ ಕಾರ್ತಿಕ್. ಇದರ ನಡುವಲ್ಲಿಯೇ ನಟನಾಗಿಯೂ ಈಗೊಂದಷ್ಟು ವರ್ಷಗಳಿಂದ ತಾಲೀಮು ನಡೆಸುತ್ತಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಕಾರ್ತಿಕ್, ನಾಟಕಗಳ ಮೂಲಕವೇ ತಮ್ಮೊಳಗಿನ ಪ್ರತಿಭೆಯನ್ನು ಸಾಣೆ ಹಿಡಿದುಕೊಂಡವರು. ಅದರ ಬಲದಿಂದಲೇ ಒಂದಷ್ಟು ಸೀರಿಯಲ್ಲುಗಳು, ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿರೋ ಅವರಿಗೀಗ ಅಪರೂಪದ ಅವಕಾಶವೊಂದು ಒಪದಗಿ ಬಂದಿದೆ. `ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂ£ಬ ಚಿತ್ರದಲ್ಲಿ ಚೆಂದದ ಪಾತ್ರವೊಂದಕ್ಕೆ ಕಾರ್ತಿಕ್ ಜೀವ ತುಂಬಿದ್ದಾರೆ. ಗುರುಪ್ರಸಾದ್ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾವೀಗ ಶೀರ್ಷಿಕೆ ಮತ್ತು ಒಟ್ಟಾರೆ ಕಥೆಯ ಬಗೆಗಿನ ಒಂದಷ್ಟು ಹೊಳಹುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಒಂದೊಳ್ಳೆ ಪಾತ್ರದ ಮೂಲಕ ಈ ಸಿನಿಮಾ ಭಾಗವಾಗಿಕರುವ ಖುಷಿ ಮಾವಳ್ಳಿ ಕಾರ್ತಿಕ್ ರಲ್ಲಿದೆ.
ಹಾಗಾದರೆ, ಈ ಸಿನಿಮಾ ಕಥೆ ಏನು? ಇದು ಯಾವ ಬಗೆಯ ಚಿತ್ರ? ಮಾವಳ್ಳಿ ಕಾರ್ತಿಕ್ ಇಲ್ಲಿ ಯಾವ ಛಾಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳೋದು ಸಹಜ. ಆದರೆ, ಅದರ ಬಗ್ಗೆ ಯಾವುದೆಂದರೆ ಯಾವ ವಿಚಾರವನ್ನೂ ಬಿಟ್ಟುಕೊಡದಂತೆ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ಇದೆಲ್ಲದರಾಚೆಗೆ, ಒಂದಿಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಮೊದಲಾಗಿ ದಾಖಲಾಗುವ ಅಚ್ಚರಿಗಳು ಇದರಲ್ಲಿವೆಯೆಂಬ ಭರವಸೆ ಚಿತ್ರತಂಡದಲ್ಲಿ ಹಣಕಿ ಹಾಕುತ್ತಿದೆ. ಈ ಸಮಾಜಕ್ಕೆ ಕನ್ನಡಿ ಹಿಡಿದಂಥಾ ಕಥೆ, ಹಲವಾರು ಪ್ರಯೋಗಾತ್ಮಕ ಅಂಶಗಳೊಂದಿಗೆ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಬೇಗ ಬೇಗನೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡು, ಮುಂದಿನ ವರ್ಷದ ಆರಂಭದಲ್ಲಿಯೇ ತೆರೆಗಾಣಿಸುವ ಸಾಧ್ಯತೆಗಳೂ ಇದ್ದಾವೆ.
ಹಾಗೆ ನೋಡಿದರೆ, ಇಂಥಾ ಸಿನಿಮಾದ ಭಾಗವಾಗುವ ಅವಕಾಶ ಸಲೀಸಾಗಿ ಸಿಕ್ಕಿ ಬಿಡುವುದಿಲ್ಲ. ಹಾಗೊಂದು ಅವಕಾಶ ಮಾವಳ್ಳಿ ಕಾರ್ತಿಕ್ ಗೆ ದಕ್ಕಿದ್ದರ ಹಿಂದೆ ಮತ್ತದೇ ರಂಗಭೂಮಿಯ ನಂಟಿದೆ. ಕಾರ್ತಿಕ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ದಿನಮಾನದಲ್ಲಿಯೇ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್ ಪರಿಚಿತರಾಗಿದ್ದರು. ಆ ನಂತರದ ಅವಧಿಯಲ್ಲಿ ಸಿನಿಮಾದ ಪರಿಧಿಯಲ್ಲಿಯೇ ಒಂದಷ್ಟು ಮಾತುಕತೆಗಳೂ ಚಾಲ್ತಿಯಲ್ಲಿರುತ್ತಿದ್ದವಂತೆ. ವಿ. ನಾಗೇಂದ್ರ ಪ್ರಸಾದ್ ಜೊತೆ ಅಸೋಸಿಯೇಟ್ ಆಗಿ ಬಹು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದವರು ಗುರುಪ್ರಸಾದ್ ಚಂದ್ರಶೇಖರ್. ಆ ಅನುಭವದ ಮೂಸೆಯಲ್ಲಿ ಸೂಕ್ಷ್ಮ ಪದರುಗಳಿರುವ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ಸಿನಿಮಾಗೆ ತಯಾರಾಗಿದ್ದ ಗುರುಪ್ರಸಾದ್, ಅದರಲ್ಲೊಂದು ಪಾತ್ರಕ್ಕೆ ಜೀವ ತುಂಬುವ ಅವಕಾಶವನ್ನು ಕಾರ್ತಿಕ್ ಗೆ ಕೊಟ್ಟಿದ್ದಾರೆ.
ಹೀಗೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಚಿತ್ರದ ಭಾಗವಾಗಿರುವ ಮಾವಳ್ಳಿ ಕಾರ್ತಿಕ್, ಸಿನಿಮಾ ಕನಸಿನ ಚುಂಗು ಹಿಡಿದು ಅವುಡುಗಚ್ಚಿ ಒಂದಷ್ಟು ದೂರವನ್ನು ಈಗಾಗಲೇ ಕ್ರಮಿಸಿದ್ದಾರೆ. ತಂದೆ ತಾಯಿಯ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಾಗಿದ್ದರೂ, ಕಾರ್ತಿಕ್ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಲಾಲ್ ಭಾಗ್ ಮಗ್ಗುಲಲ್ಲಿರುವ ಮಾವಳ್ಳಿ ಕಾರ್ತಿಕ್ ಪಾಲಿನ ಬೆರಗಿನ ಏರಿಯಾ. ಈ ಕ್ಷಣಕ್ಕೂ ತಾನು ಅಪ್ಪಟ ಬೆಂಗಳೂರಿನ ಹುಡುಗನೆಂಬ ಹೆಮ್ಮೆಯೂ ಆತನಲ್ಲಿದ್ದಂತಿದೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯತ್ತ ಆಕರ್ಷಿತರಾಗಿದ್ದ ಕಾರ್ತಿಕ್, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಆ ಕಾಲದಲ್ಲಿಯೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದರು.
ನಂತರದ ದಿನಗಳಲ್ಲಿ ಹವ್ಯಾಸಿ ರಂಗಭೂಮಿಯತ್ತ ಹೊರಳಿಕೊಂಡಿದ್ದ ಕಾರ್ತಿಕ್, ಸಮುದಾಯ, ರಂಗ ನಿರಂತರ, ಪ್ರಸಂಗ, ಕಲಾವೇದಿಕೆ, ಬಿಟಿಇ ಮುಂತಾದ ತಂಡಗಳಲ್ಲಿ ಭಾಗಿಯಾಗಿದ್ದರು. ಒಂದಷ್ಟು ನಾಟಕಗಳಲ್ಲಿ ಅಭಿನ ಯಿಸುವ ಮೂಲಕ ನಟನಾಗಿ ಪಳಗಿಕೊಂಡಿದ್ದರು. ಅದಾದ ನಂತರ ಅವರನ್ನು ಬಹುವಾಗಿ ಸೆಳೆದಿದ್ಚದು ಬಣ್ಣದ ಜಗತ್ತು. ಅಂಬಾರಿ ಅಂತೊಂದು ಧಾರಾವಾಹಿಯಲ್ಲಿ ನಟಿಸಿ, ಮತ್ತೊಂದಷ್ಟು ಅವಕಾಶ ಬಾಚಿಕೊಂಡಿದ್ದ ಕಾರ್ತಿಕ್ ತನ್ನ ಭವಿಷ್ಯವೇನಿದ್ದರೂ ಚಿತ್ರರಂಗದಲ್ಲಿಯೇ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದರ ಭಾಗವಾಗಿಯೇ ಮೂಕವಿಸ್ಮಿತ, ಕಿನಾರೆ, ಧಮಾಕ, ತೂತು ಮಡಿಕೆ, ದಿ. ಮಂಜುನಾಥನ ಗೆಳೆಯರು, ಗಜಾನನ ಗ್ಯಾಂಗ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿಯೂ ತನ್ನ ಇರುವಿಕೆ ಸಾಬೀತುಪಡಿಸುವ ಜಾಣ್ಮೆ ಹೊಂದಿರುವ ಕಾರ್ತಿಕ್ ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಯಾದಿಯಲ್ಲಿವೆ. ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಚಿತ್ರವಂತೂ ಅವರನ್ನು ಹಲವು ಸೂಕ್ಷ್ಮಗಳಿಂದಾಗಿ ಸೆಳೆದುಕೊಂಡಿದೆ. ಈ ಸಿನಿಮಾ ಗೆಲ್ಲಬೇಕೆಂಬ ಗಾಢ ಹಂಬಲವೂ ಅವರಲ್ಲಿದೆ.
ಹೀಗೆ ನಟನಾಗಬೇಕೆಂಬ ಗುರಿಯಿಟ್ಟುಕೊಂಡು ಹೊರಟು, ಆ ಹಾದಿಯ ಹರಿವಿನಲ್ಲೇ ಸಿನಿಮಾ ವರದಿಗಾರ, ನಿರೂಪಕನಾಗುವ ಅವಕಾಶವನ್ನೂ ಕಾರ್ತಿಕ್ ಪಡೆದುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಅವೆರಡನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ವೃತ್ತಿಯ ಒತ್ತಡಗಳ ನಡುವ ರಂಗಭೂಮಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲವೆಂಬ ಕೊರಗು, ಎರಡು ದೋಣಿಗಳ ಮೇಲೆ ಕಾಲಿಟ್ಟರೂ ಬದುಕನ್ನು ಬ್ಯಾಲೆನ್ಸು ಮಾಡುತ್ತಿರುವ ತೃಪ್ತಿ ಮತ್ತು ನಟನಾಗಿ ನೆಲೆ ಕಂಡುಕೊಳ್ಳುವ ಗಾಢ ಭರವಸೆ ಕಾರ್ತಿಕ್ ರಲ್ಲಿದೆ. ತೀವ್ರವಾಗಿ ಪ್ರಯತ್ನಿಸಿದರೆ ನಟನಾಗಿ ಬೆಳೆಯಬಲ್ಲ ಕಸುವು ಕಾರ್ತಿಕ್ ಗೆ ಇದ್ದಂತಿದೆ. ಅವರ ಕನಸು ನನಸಾಗಲೆಂಬುದು ಹಾರೈಕೆ!