ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಒಂದು ಡಬಲ್ ಮೀನಿಂಗ್ ಡೈಲಾಗು ಹೊಂದಿರೋ ಸಿನಿಮಾ ತಕ್ಕ ಮಟ್ಟಿಗೆ ಗೆದ್ದಾಗ, ಆ ಶೈಲಿಯ ಗಬ್ಬು ಹೊಳೆ ಗಾಂಧಿನಗರದ ತುಂಬಾ ಹರಿದಾಡಿತ್ತು. ಅದರ ಹಾವಳಿಯಿಂದ ನೈಜ ಅಭಿರುಚಿಯೇ ಕೊಚ್ಚಿಕೊಂಡು ಹೋಗೋ ಪರಿಸ್ಥಿತಿಯೂ ಬಂದೊದಗಿದ್ದಿದೆ. ಹಾಗಿರುವಾಗ, ಕಾಂತಾರದಂಥಾ ಸೂಪರ್ ಹಿಟ್ ಸಿನಿಮಾ ತೆರೆಗಂಡ ನಂತರ ಅಂಥಾ ಕಾಯಿಲೆ ಉಲ್ಬಣಿಸದಿರಲು ಸಾಧ್ಯವೇ?
ಕಾಂತಾರ (kanthara movie) ಚಿತ್ರ ತೆರೆಗಂಡ ನಂತರದಲ್ಲಿ ಕರಾವಳಿ, ಮಲೆನಾಡು ಭಾಗದ ಆರಾಧ್ಯ ದೈವವವಾದ ಪಂಜುರ್ಲಿಗೊಂದು ಸ್ಟಾರ್ ವ್ಯಾಲ್ಯೂ ಬಂದಿದೆ. ಶೆಟ್ಟರು ಮಾಡಿರುವ ಒಂದಷ್ಟು ರಿಯಲ್ ಸ್ಟಂಟುಗಳಿಂದಾಗಿ ದೈವ ಪಾತ್ರಿಗಳ ಕಿಮ್ಮತ್ತೂ ಕೊಂಚ ಏರಿಕೊಂಡಿದೆ. ದುರಂತವೆಂದರೆ, ಜುಟ್ಟು ಕೆದರಿಕೊಂಡು ಮೈ ಕುಣಿಸುವ ಕೆಲ ಕಳ್ಳ ನರ್ತಕರ ನಸೀಬೂ ಕೂಡಾ ಕಾಂತಾರದ ಪ್ರಭೆಯಲ್ಲಿ ಲಕಲಕಿಸಿದೆ. ಇದೆಲ್ಲಾ ಹಾಗಿರಲಿ; ಸಿನಿಮಾ ವಿಚಾರಕ್ಕೆ ಬಂದರೆ, ದೈವದ ಇರುವಿಕೆ ಕೂಡಾ ಈಗ ಗೆಲುವಿನ ಫಾರ್ಮುಲಾದಂತಾಗಿ ಬಿಟ್ಟಿದೆ. ಇದರ ಭಾಗವಾಗಿಯೇ ಸಿಕ್ಕ ಸಣ್ಣ ಗ್ಯಾಪಿನಲ್ಲಿ ದೈವಲೀಲೆ ತೋರಿಸುವ ಹೊಸಾ ವರಸೆಯೊಂದು ಚಾಲ್ತಿಗೆ ಬಂದಹಾಗಿದೆ!
ಸದ್ಯದ ಮಟ್ಟಿಗೆ ಹೇಳೋದಾದರೆ, ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಗೆ ಕೂಡಾ ಅಂಥಾದ್ದೇ ಗುಂಗು ಹತ್ತಿದಂತಿದೆ. ಸತ್ಯಂ ಅಂತೊಂದು ಸಿನಿಮಾದಲ್ಲಿ ರಂಜನಿ ನಟಿಸುತ್ತಿದ್ದಾರೆಂಬ ಸುದ್ದಿನ ಹರಿದಾಡಿತ್ತು. ಗಣಪ ಖ್ಯಾತಿಯ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರು ಈ ಸಿನಿಮಾದಲ್ಲಿ ರಂಜನಿ ನಾಯಕಿಯಾಗಿದ್ದಾರೆ. ಹಾರರ್, ಮಾಸ್ ಅಂಶಗಳನ್ನು ಒಳಗೊಂಡಿರೋ ಈ ಸಿನಿಮಾದಲ್ಲಿ ದೈವಲೀಲೆಯೂ ಇದೆ ಎಂಬುದೀಗ ಜಾಹೀರಾಗಿದೆ. ನಿರ್ದೇಶಕರು ಒಂದಷ್ಟು ಅನುಭವಸ್ಥರಾಗಿರೋದರಿಂದ, ಸತ್ಯಂನಲ್ಲಿ ಗಿಮಿಕ್ಕುಗಳು ನಡೆದಿರಲಿಕ್ಕಿಲ್ಲ ಎಂಬ ನಂಬಿಕೆ ಇದೆ. ಅಂತೂ ಘಟ್ಟದ ಆಚೀಚೆ ಹಬ್ಬಿಕೊಂಡಿದ್ದ ಪಂಜುರ್ಲಿಯ ಪ್ರಭೆಯೀಗ ರಾಜಧಾನಿಗೂ ದಾಟಿಕೊಂಡಿದೆ!