ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ನಟನಾಗಿ ನೆಲೆ ಕಂಡುಕೊಂಡಿರುವವರು (action prince dhruva sarja) ಧ್ರುವಾ ಸರ್ಜಾ. 2012ರಲ್ಲಿ (addhuri movie) ಅದ್ದೂರಿ ಎಂಬ ಚಿತ್ರದ ಮೂಲಕ ಲಾಂಚ್ ಆಗಿದ್ದ ಧ್ರುವ, ನೋಡ ನೋಡುತ್ತಲೇ ದೊಡ್ಡ ಪ್ರಮಾಣದ ಯುವ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದರು. ಆ ಯಾನವೀಗ ಮಾರ್ಟಿನ್ ಮೂಲಕ ಮತ್ತೊಂದು ಮಗ್ಗುಲಿನತ್ತ ಹೊರಳಿಕೊಳ್ಳುವ ಕುರುಹುಗಳು ಸ್ಪಷ್ಟವಾಗಿವೆ.
ಧ್ರುವಾ ಸರ್ಜಾರನ್ನು ನಾಯಕನನ್ನಾಗಿ ಅದ್ದೂರಿಯಾಗಿಯೇ ಲಾಂಚ್ ಮಾಡಿದ್ದವರು ನಿರ್ದೇಶಕ ಎ.ಪಿ ಅರ್ಜುನ್. ಆ ನಂತರದಲ್ಲಿ ಧ್ರುವಾ ತಿರುಗಿ ನೋಡಿದ್ದೇ ಇಲ್ಲ. ಇದೀಗ ಒಂದು ದಶಕದ ನಂತರ ಮತ್ತೆ ಮಾರ್ಟಿನ್ ಮೂಲಕ ಆ ಜೋಡಿಯ ಸಮಾಗಮವಾಗಿದೆ. ಹೇಳಿಕೇಳಿ ಮಾರ್ಟಿನ್ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಧ್ರುವಾ ಪ್ಯಾನಿಂಡಿಯಾ ಮಟ್ಟ ಮುಟ್ಟಲಿದ್ದಾರೆ. ಈಗ ಹಬ್ಬಿಕೊಂಡಿರುವ ಪಾಸಿಟಿವ್ ಟಾಕ್ ಗಳನ್ನು ಗಮನಿಸಿದರೆ, ಮಾರ್ಟಿನ್ ಗೆ ದೊಡ್ಡ ಮಟ್ಟದ ಗೆಲುವು ಲಭಿಸುವುದು ನಿಕ್ಕಿಯಾಗಿದೆ. ಹಾಗೊಂದು ವೇಳೆ ಅದು ನಿಜವಾದರೆ, ಧ್ರುವಾ ಕೂಡಾ ರಾಕಿಂಗ್ ಸ್ಟಾರ್ ಯಶ್ ಹಾದಿಯಲ್ಲಿ ಬಲವಾಗಿ ಹೆಜ್ಜೆಯೂರೋದು ಪಕ್ಕಾ.
ಫ್ಯಾನ್ ಬೇಸ್ ವಿಚಾರಕ್ಕೆ ಬಂದರೂ ಧ್ರುವಾ ಸರ್ಜಾ ಖದರ್ ನಿಗಿನಿಗಿಸುವಂತಿದೆ. ಹೊಸಾ ಜನರೇಷನ್ನು ಧ್ರುವಾರನ್ನು ಹುಚ್ಚೆದ್ದು ಹಚ್ಚಿಕೊಳ್ಳುತ್ತಿದೆ. ಮಾರ್ಟಿನ್ ಏನಾದರೂ ಅಂದುಕೊಂಡಂತೆ ಮೂಡಿ ಬಂದಿದ್ದರೆ, ಕರುನಾಡಲ್ಲಿ ಧ್ರುವ ಅಭಿಮಾನಿಗಳ ಬಳಗ ಮತ್ತಷ್ಟು ಹಿಗ್ಗಲಿಸುತ್ತೆ. ಅದು ಪ್ಯಾನಿಂಡಿಯಾ ಮಟ್ಟಕ್ಕೂ ಹಬ್ಬಿಕೊಳ್ಳುತ್ತೆ. ಕೆಜಿಎಫ್ ಬಂದ ನಂತರ ಮತ್ತೊಂದಷ್ಟು ಪ್ಯಾನಿಂಡಿಯಾ ಸಿನಿಮಾಗಳು ಬಂದಿವೆ. ಆದರೆ ಕಾಂತಾರದ ಹೊರತಾಗಿ ಮತ್ಯಾವುವೂ ಬರಖತ್ತಾಗಿಲ್ಲ. ಈಗಿರುವ ವಾತಾವರಣವನ್ನ ಆಧರಿಸಿ ಹೇಳೋದಾದರೆ, ಮಾರ್ಟಿನ್ ಕೂಡಾ ಕೆಜಿಎಫ್ ಸಾಲಿಗೆ ಸೇರಿಕೊಂಡರೂ ಅಚ್ಚರಿಯೇನಿಲ್ಲ!