ನಾನಾ ಹೈಪುಗಳಾಚೆಗೂ (kannada movies) ಸಿನಿಮಾವೊಂದನ್ನು ಪ್ರೇಕ್ಷಕರಿಗೆ ರುಚಿಸುವಂತೆ ಕಟ್ಟಿಕೊಡುವಲ್ಲಿ ಎಡವುವವರಿದ್ದಾರೆ. ವಿಶಾಲ ಸಾಧ್ಯತೆಗಳ ಹೊರತಾಗಿಯೂ ಅಂಥಾ ಪ್ರಯತ್ನಗಳು ಮುಗ್ಗರಿಸುವಾಗ, ಮೂವತೈದು ನಿಮಿಷಗಳ ಕಿರುಚಿತ್ರವೊಂದು ಸದ್ದು ಮಾಡುತ್ತದೆಂಬುದೇ ರೋಮಾಂಚಕ ಸಂಗತಿ. ಅತೀವ ಸಿನಿಮಾ ವ್ಯಾಮೋಹ ಮತ್ತು ಹೊಸತೇನನ್ನೋ ಸೃಷ್ಟಿಸುವ ಧ್ಯಾನಕ್ಕೆ ಮಾತ್ರವೇ ಇಂಥಾ ರೋಮಾಂಚನಗಳು ಒಲಿಯಲು ಸಾಧ್ಯ. ಅಂಥಾದ್ದೊಂದು ಖುಷಿಯನ್ನು ಪ್ರತೀ ನೋಡುಗರಿಗೂ ಕೂಡಾ ಜೀವಸಖಿ (jeevasakhi filme) ಕೊಡಮಾಡಿದೆ. ಇದರೊದಿಗೆ ಸದರಿ ಕಿರುಚಿತ್ರದ ಮೂಲಕ ತನ್ನನ್ನು ತಾನೇ ಪರೀಕ್ಷೆಗೊಡ್ಡಿಕೊಂಡಿದ್ದ ಯುವ ನಿರ್ದೇಶಕ (director m sangamesh patil) ಕೆ. ಸಂಗಮೇಶ್ ಪಾಟೀಲ್ ಗೆ ಪ್ರಥಮ ಹೆಜ್ಜೆಯಲ್ಲಿಯೇ ಪ್ರೇಷಕರ ಪ್ರೀತಿ ದಕ್ಕಿದೆ!
ಸಾಮಾನ್ಯವಾಗಿ, ಸಿನಿಮಾ ಸರಹದ್ದಿನಲ್ಲಿ ಹುಟ್ಟು ಪಡೆಯುವ ಬಹುತೇಕ ಕಥನಗಳು ಪ್ರೀತಿಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಯಾಕೆಂದರೆ, ಅದು ಮುಟ್ಟಲು ಪ್ರಯತ್ನಿಸಿದಷ್ಟೂ ಅಗಾಧವಾಗುತ್ತಾ ಸಾಗುವ ಮುಗಿಲಿನಂಥಾದ್ದೇ ಅನೂಹ್ಯ ಮಾಯೆ. ಆದರೆ, ಪ್ರೀತಿಯ ಪ್ರತೀ ಸೂಕ್ಷ್ಮ ಫಲುಕುಗಳಿಗೂ ಕಣ್ಣಾಗುವ ಛಾತಿ ಇದ್ದವರು ಮಾತ್ರವೇ ಪ್ರೇಮ ಕಥನಕ್ಕೆ ಸಿನಿಮಾ ಚೌಕಟ್ಟು ಹಾಕಿ ಗೆದ್ದಿದ್ದಾರೆ. ಸದ್ಯ ಸಂಗಮ್ ಟಾಕೀಸ್ ಮೂಲಕ ಬಿಡುಗಡೆಗೊಂಡಿರುವ ಜೀವಸಖಿ ಅದನ್ನು ಸಾಧ್ಯವಾಗಿಸಿಕೊಂಡಂತೆ ಭಾಸವಾಗುತ್ತದೆ. ಒಂದು ಅಚ್ಚುಕಟ್ಟಾದ ಸಮಾರಂಭದಲ್ಲಿ ಮೂವತ್ತಾರು ನಿಮಿಷಗಳ ಈ ಕಿರುಚಿತ್ರ ಬಿಡುಗಡೆಗೊಂಡಿತ್ತು. ಅಲ್ಲಿ ಅದನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರೆಲ್ಲರಿಗೂ ಒಂದು ದೊಡ್ಡ ಸಿನಿಮಾ ಕೊಡಮಾಡಬಹದಾದ ಅನುಭೂತಿಯೊಂದನ್ನು ಜೀವಸಖಿ ಕೊಡಮಾಡಿದೆ.
ನವಿರಾದ ಪ್ರೇಮ ಕಥನವನ್ನು ಒಳಗೊಂಡಿರು ಈ ಕಿರುಚಿತ್ರದಲ್ಲಿ ಹೆಣ್ಣು ಮನಸಿನ ಒಳತೋಟಿಗಳಿವೆ. ಪ್ರೀತಿಯನ್ನು ಸುತ್ತುವರೆವಗಳಿವೆ. ಅದೆಲ್ಲವನ್ನು ದೃಷ್ಯರೂಪಕ್ಕಿಳಿಸುವಲ್ಲಿ, ಪ್ರೇಕ್ಷಕರತ್ತ ತಾಜಾತನ ಮುಕ್ಕಾಗದಂತೆ ದಾಟಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅದರ ಫಲವಾಗಿಯೇ ಸಾಮಾಜಿಕ ಜಾಲತಾಣದ ತುಂಬೆಲ್ಲ ಜೀವಸಖಿಯ ಪ್ರಭೆ ಹಬಿಕೊಂಡಿದೆ. ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡ ಚಿತ್ರಗಳ ಬಗ್ಗೆ ಬಾಯಿಂದ ಬಾಯಿಗೆ ಒಳ್ಳೆ ಮಾತುಗಳು ಹಬ್ಬಿಕೊಳ್ಳುತ್ತವಲ್ಲಾ? ಅದೇ ಆವೇಗದಲ್ಲಿ ಜೀವಸಖಿ ಜೀಕಾಡುತ್ತಿದ್ದಾಳೆ. ಬಹುತೇಕ ಎಲ್ಲ ಅಭಿರುಚಿಯ ಪ್ರೇಕ್ಷಕರನ್ನೂ ಒಳಗೊಳ್ಳುತ್ತಾ ಮುಂದುವರೆಯುತ್ತಿದ್ದಾಳೆ.
ಹೀಗೆ ಚೆಂದದ ಕಿರುಚಿತ್ರದ ಮೂಲಕ ಗಮನ ಸೆಳೆದಿರುವ ಸಂಗಮೇಶ್ ಪಾಟೀಲ್, ಈಗ್ಗೆ ಐದು ವರ್ಷಗಳಿಂದ ನಾನಾ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿದ್ದವರು. ನಿರ್ದೇಶಕನಾಗಬೇಕೆಂಬ ಹಂಬಲದೊಂದಿಗೆ ಸಾಗಿ ಬಂದಿದ್ದ ಸಂಗಮೇಶ್ ಒಂದು ದೊಡ್ಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಮುನ್ನ, ಈ ಕಿರುಚಿತ್ರದ ಮೂಲಕ ತನ್ನನ್ನು ತಾನೇ ಪರೀಕ್ಷೆಗೊಡ್ಡಿಕೊಂಡಿದ್ದಾರೆ. ಪ್ರೇಕ್ಷಕರ ಕಡೆಯಿಂದ ಫುಲ್ ಮಾರ್ಕ್ಸ್ ಸಿಗುತ್ತಿರೋದರಿಂದ ಆರಂಭಿಕ ಗೆಲುವು ದಕ್ಕುತ್ತಿರುವ ಖುಷಿಯಲ್ಲಿದ್ದಾರೆ. ಅಂದಹಾಗೆ ಒಂದೊಳ್ಳೆ ತಂಡದ ಸಾಹಚರ್ಯದೊಂದಿಗೆ ಸಂಗಮೇಶ್ ಈ ಕಿರುಚಿತ್ರವನ್ನು ರೂಪಿಸಿದ್ದಾರೆ. ಸುನೀಲ್ ಎಲ್ ಎಸ್ ಆರ್ ಸಂಕಲನ, ಜೀವನ್ ಎಸ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಅಕ್ಷಯ್ ಬಿಂದುಸಾರ ಪ್ರಚಾರ, ರವಿ ಕರಳ್ಳಿ ವಿ ಎಫ್ ಎಕ್ಸ್, ರವಿ ಹಿರೇಮಠ್ ಸೌಂಡ್ ಡಿಸೈನ್ ವಿನ್ಯಾಸ ಈ ಚಿತ್ರಕ್ಕಿದೆ. ಸದ್ಯ ಒಂದು ಬಿಗ್ ಪ್ರಾಜೆಕ್ಟಿಗಾಗಿ ಸಂಗಮೇಶ್ ಅಣಿಗೊಳ್ಳುತ್ತಿದ್ದಾರೆ…