ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ; ನೆಮ್ಮದಿಯೂ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಮೊನ್ನೆ ತಾನೇ ಮೈಸೂರಿನಲ್ಲಿ ಭೀಕರವಾಗಿ ಕೊಲೆಯಾಗಿ ಹೋದನಲ್ಲಾ ಟಿಕ್ ಟಾಕ್ ಸ್ಟಾರ್ ಸ್ಮೈಲಿ ನವೀನ? ಆತನ ಅಂತ್ಯಕ್ಕೂ ಹಠಾತ್ತನೆ ಹೆಸರು ಮಾಡಿಬಿಡುವ ಹುಮ್ಮಸ್ಸಿನ ನಿರ್ಧಾರವೇ ಪ್ರಧಾನ ಕಾರಣ. ಆ ಕೇಸಿನಲ್ಲೀಗ ಒಂದಷ್ಟು ಚಿಲ್ಟುಪಲ್ಟುಗಳು ಅಂದರ್ ಆಗಿದ್ದಾರೆ. ಆದರೆ, ಬೆಂಗಳೂರಿನ ಅಂಚಿನಲ್ಲಿ, ನೈಸ್ ರಸ್ತೆಯ ಇಕ್ಕೆಲದಲ್ಲಿ ಮೈಚಾಚಿಕೊಂಡ ಭಯಾನಕ ಭೂಗತ ಜಗತ್ತಿನ ಪರಿಚಯವಿರುವವರ ಚಿತ್ತ ಬೇರೆತ್ತಲೋ ನೆಟ್ಟುಕೊಂಡಿದೆ. ಅಂಥವರ ದೃಷ್ಟಿಯಲ್ಲಿ ಈ ಕೊಲೆಯ ಸೂತ್ರಧಾರಿಯಂತೆ ಕಾಣಿಸುತ್ತಿರುವಾತ ಪರಮೇಶ ಅಲಿಯಾಸ್ ಕೆಂಬತ್ತಳ್ಳಿ ಪರ್ಮಿ!
ಅರೇ… ಹಂತಕನೊಬ್ಬನ ವೃತ್ತಾಂತವನ್ನು ಇಲ್ಲೇಕೆ ಹರವಲಾಗುತ್ತಿದೆ ಅಂತೊಂದು ಪ್ರಶ್ನೆಯೊಂದು ನಿಮ್ಮಲ್ಲಿ ಮೂಡಿಕೊಂಡಿರಬಹುದು. ಅವನ್ಯಾರೋ ಕೆಂಬತ್ತಳ್ಳಿ ಪರ್ಮಿಗೂ, ಸಿನಿಮಾ ಜಗತ್ತಿಗೂ ಎತ್ತಣಿಂದೆತ್ತ ಸಂಬಂಧವೆಂಬ ಗೊಂದಲವೂ ಕಾಡಬಹುದು. ಖಂಡಿತವಾಗಿಯೂ ಇದೀಗ ಮೋಸ್ಟ್ ವಾಂಟೆಡ್ ರೌಡಿ ಅನ್ನಿಸಿಕೊಂಡಿರುವ, ಹಲವಾರು ಕೊಲೆ ಕೇಸುಗಳಲ್ಲಿ ಭಾಗಿಯಾಗಿರುವ ಪರ್ಮಿಗೂ, ಸಿನಿಮಾ ರಂಗಕ್ಕೂ ಕನೆಕ್ಷನ್ನುಗಳಿವೆ. 2006ರಲ್ಲಿ ಇಂದ್ರಜಿತ್ ಲಂಕೇಶ್ `ಐಶ್ವರ್ಯ’ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದರಲ್ಲಾ? ಆ ಸದರ್ಭದಲ್ಲಿ ಈ ಪರ್ಮಿ ಇಂದ್ರಜಿತ್ ಲಂಕೇಶ್ ಕಾರ್ ಡ್ರೈವರ್ ಆಗಿದ್ದ. ಹಾಗೆ ಆ ಕಾಲದಲ್ಲೇ ಸ್ಥಿತಿವಂತನಾಗಿದ್ದ ಪರಮೇಶ್ ಎಂಬ ಯುವಕ ಇಂದ್ರಜಿತ್ ಕಾರ್ ಡ್ರೈವರ್ ಆಗಿದ್ದರ ಹಿಂದೆ ನಟನಾಗಬೇಕೆಂಬ ತುಡಿತವಿತ್ತು!
ಆ ಕಾಲಕ್ಕೇ ಕೆಂಬತ್ತಹಳ್ಳಿ ಪ್ರದೇಶದಲ್ಲಿ ಪರ್ಮಿಯ ತಂದೆ ಒಂದಷ್ಟು ಜಮೀನಿನ ಒಡೆಯರಾಗಿದ್ದರು. ಆರಂಭದಿಂದಲೂ ಸುಖವಾಗಿಯೇ ಬೆಳೆದಿದ್ದ ಪರಮೇಶನಿಗೆ, ಆ ಹೊತ್ತಿನಲ್ಲಿ ಸಿನಿಮಾ ಬಗ್ಗೆ ಅತೀವವಾದ ಸೆಳೆತವಿತ್ತು. ನೋಡಲು ಹೀರೋ ಮೆಟೀರಿಯಲ್ ರೀತಿ ಕಾಣಿಸುತ್ತಿದ್ದ ಪರಮೇಶನ ಜಮೀನು, ಖ್ಯಾತ ಪತ್ರಕರ್ತ, ಸಾಹಿತಿ ಲಂಕೇಶರ ತೋಟಕ್ಕೆ ಆತುಕೊಂಡಂತಿತ್ತು. ಆ ದಿನಗಳಲ್ಲಿ ಪರಮೇಶ ದೂರದಿಂದಲೇ ಲಂಕೇಶರ ಮಕ್ಕಳನ್ನು ಬೆರಗಿನಿಂದ ನೋಡುತ್ತಿದ್ದ. ಬರ ಬರುತ್ತಾ ಸಿನಿಮಾ ನಿರ್ದೇಶಕನಾಗಿ ಅವತಾವೆತ್ತಿದ್ದ ಇಂದ್ರಜಿತ್ ಬಗೆಗೂ ಆತನೊಳಗೊಂದು ಕ್ರೇಜ್ ಮೂಡಿಕೊಂಡಿತ್ತು. ಹೇಗಾದರೂ ಮಾಡಿ ಇಂದ್ರಜಿತ್ ಜೊತೆ ಸೇರಿಕೊಂಡರೆ, ಸಿನಿಮಾ ಜಗತ್ತಿಗೆ ಎಂಟ್ರಿ ಸಿಗುತ್ತದೆ, ನಟನಾಗೋ ಆಕಾಂಕ್ಷೆ ಈಡೇರುತ್ತದೆಂಬ ಆಲೋಚನೆ ಬಂದಿದ್ದೇ, ಚಾಲಾಕಿ ಪರ್ಮಿ ಸೀದಾ ಬೇಲಿ ನೆಗೆದು ಇಂದ್ರಜಿತ್ ಸಮ್ಮುಖದಲ್ಲಿ ನಿಂತುಬಿಟ್ಟಿದ್ದ!
ಹಾಗೆ ಸಿನಿಮಾ ಕನಸು ಹೊತ್ತು, ಸ್ಟೈಲಿಶ್ ಆಗಿ ತನ್ನೆದುರು ನಿಂತಿದ್ದ ಪರಮೇಶನನ್ನು ಇಂದ್ರಜಿತ್ ತನ್ನ ಕಾರ್ ಡ್ರೈವರ್ ಆಗಿ ನೇಮಿಸಿಕೊಂಡಿದ್ದರೆಂಬ ಮಾತಿದೆ. ಆ ಕಾಲಕ್ಕೆ ಇಂದ್ರಜಿತ್ ಐಶ್ವರ್ಯ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ದೀಪಿಕಾ ಪಡುಕೋಣೆ ಆ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಳು. ಆ ಸಿನಿಮಾ ಚಿತ್ರೀಕರಣದುದ್ದಕ್ಕೂ ಇಂದ್ರಜಿತ್ ಸಾರಥಿಯಾಗಿದ್ದಾತ ಪರ್ಮಿ. ಪಾದರಸದಂಥಾ ಈ ಹುಡುಗ ಇಂದ್ರಜಿತ್ ಪಕ್ಕದಲ್ಲಿ ಕಾಣಿಸಿಕೊಂಡನೆಂದರೆ, ಎಲ್ಲರ ದೃಷ್ಟಿಯೂ ಆತನತ್ತ ತಿರುಗಿ ಬಿಡುತ್ತಿತ್ತು. ಅಂಥಾ ಸ್ಫುರದ್ರೂಪಿಯಾಗಿದ್ದ ಪರ್ಮಿ, ಪಕ್ಕದಲ್ಲಿ ಸುಳಿದವರನ್ನು ಛಕ್ಕನೆ ಕ್ಯಾಚು ಹಾಕಿಕೊಳ್ಳುವಂಥಾ ಚಾಲಾಕಿ. ಆ ಚಿತ್ರದ ಹಂತದಲ್ಲಿಯೇ ಸಿನಿಮಾ ಜಗತ್ತಿನ ಒಂದಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದ. ಕೆಲ ಸಿನಿಮಾ ಪತ್ರಕರ್ತರಿಗೂ ಖಾಸಾ ಅನ್ನುವಂತಾಗಿದ್ದ. ಆದರೆ, ಅಷ್ಟರಲ್ಲೇ ಇಂದ್ರಜಿತ್ ಆತನನ್ನು ದೂರ ಸರಿಸಿ ಬಿಟ್ಟಿದ್ದರು.
ಹಾಗೆ ಇಂದ್ರಜಿತ್ ಪಾಳೆಯದಿಂದ ದೂರಾದ ಬಳಿಕವೂ ಪರ್ಮಿ ನಟನಾಗುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಿಸಿದ್ದನಂತೆ. ಕೆಲ ಸಿನಿಮಾ ಪತ್ರಕರ್ತರ ಆಸುಪಾಸಿನಲ್ಲಿ ಸುಳಿಯುತ್ತಾ, ಅವಕಾಶಕ್ಕಾಗಿ ಹಾತೊರೆದಿದ್ದ. ಆ ಹೊತ್ತಿಗೆಲ್ಲ ಈ ಸಿನಿಮಾ ಜಗತ್ತು ಅಷ್ಟು ಸಲೀಸಾಗಿ ದಕ್ಕುವಂಥಾದ್ದಲ್ಲ ಎಂಬ ಸತ್ಯ ದರ್ಶನ ಪರ್ಮಿಗಾಗಿತ್ತೇನೋ. ಬಹುಶಃ ಇಂದ್ರಜಿತ್ ದೊಡ್ಡ ಮನಸು ಮಾಡಿ ಆತನಿಗೊಂದು ಸಣ್ಣ ಪಾತ್ರ ಕೊಟ್ಟಿದ್ದರೂ ಆತ ಬದುಕಿನ ದಿಕ್ಕು ಬದಲಾಗುತ್ತಿತ್ತೇನೋ. ಆ ಅವಕಾಶದ ಚುಂಗು ಹಿಡಿದು ಹೊರಟಿದ್ದರೆ ನಾಯಕನಾಗಿ ಅಲ್ಲದಿದ್ದರೂ ಖಳ ನಟನಾಗಿಯಾದರೂ ಪರ್ಮಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಿದ್ದ ಅನ್ನಿಸುತ್ತೆ. ಆದರೆ, ಅಂದುಕೊಂಡಿದ್ದನ್ನು ಮಾಡಲಾಗದ ನಿರಾಸೆ ಹೊತ್ತು ಮತ್ತೆ ಮನೆಗೆ ಹಿಂದಿರುಗಿದವನು ಕೆಲ ಸ್ನೇಹಿತರ ಪಟಾಲಮ್ಮು ಸೇರಿಕೊಂಡ. ಅಲ್ಲೊಬ್ಬ ಅನಾಹುತಕಾರಿ ಗುರುವೂ ಸಿಕ್ಕಿ ಬಿಟ್ಟಿದ್ದ!
ನಟನಾಗಬೇಕೆಂಬ ಆಸೆಯಿಂದ ಒಂದಷ್ಟು ಶೋಕಿಗಳನ್ನೂ ಅಂಟಿಸಿಕೊಂಡಿದ್ದ ಪರ್ಮಿಗೆ ವಯೋ ಸಹಜವಾಗಿ ಭೂಗತದ ಆಕರ್ಷಣೆಯಿತ್ತು. ಊರಿಗೆ ಹಿಂತಿರುಗಿದ ಮೇಲೆ ಒಂದಷ್ಟು ನಿರಾಸೆಯಿಂದ ಕುದಿಯುತ್ತಿದ್ದ ಪರ್ಮಿಗೆ ಒಂದು ಕಾಲದ ನಟೋರಿಯಸ್ ರೌಡಿ, ಯಲಚೇನಹಳ್ಳಿ ಸಂಜೀವನ ಶಿಷ್ಯ ನಿಮ್ಹಾನ್ಸ್ ರಾಜನ ನೆರಳು ಸಿಕ್ಕಿತ್ತು. ಆತನಿಂದಲೇ ಪರ್ಮಿಗೆ ಭೂಗತದ ಸೆಳೆತ ಮತ್ತಷ್ಟು ಬಲವಾಗಲಾರಂಭಿಸಿತ್ತು. ಆ ಹೊತ್ತಿಗಾಗಲೇ ಆವಲಹಳ್ಳಿ ಮಂಜ ಮುಂತಾದ ಸ್ನೇಹಿತರ ಹಿಂಡು ಪರ್ಮಿಯ ಸುತ್ತ ಗುಡ್ಡೆ ಬಿದ್ದಿತ್ತು. ಅದಕ್ಕೆ ಸರಿಯಾಗಿ ನೈಸ್ ರಸ್ತೆ ಹಾದು ಹೋದ ನಂತರದಲ್ಲಿ ಆ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ಗರಿಗೆದರಿಕೊಂಡಿತ್ತು. ಆ ದಂಧೆಗೆ ಈ ಸ್ನೇಹಿತರೆಲ್ಲ ಒಟ್ಟಾಗಿ ಕೈಯಿಟ್ಟಿದ್ದರು. ನೋಡ ನೋಡುತ್ತಲೇ ಒಂದು ಸೈಟಿಗಾಗಿ ಆ ಟೀಮು ಒಡೆದು ಸ್ನೇಹಿತರೇ ಬದ್ಧ ಶತ್ರುಗಳಾಗಿ ಬಿಟ್ಟಿದ್ದರು. ಆ ಸರಣಿ ಯಾವ ಪರಿಯಾಗಿ ಮುಂದುವರೆಯಿತೆಂದರೆ, ಈಗ ಪರ್ಮಿಯ ಕೈಗೆ ಹತ್ತಾರು ಕೊಲೆಗಳ ನೆತ್ತರು ಮೆತ್ತಿಕೊಂಡಿದೆ. ಒಂದು ಕಾಲದಲ್ಲಿ ನಟನಾಗುವ ಕನಸು ಕಂಡಿದ್ದ ಪರ್ಮಿಯೀಗ ನಟೋರಿಯಸ್ ರೌಡಿಯಾಗಿದ್ದಾನೆ. ಆ ನೆತ್ತರ ಹಾದಿಯಲ್ಲಿ ಮತ್ತೆಂದೂ ಹಿಂತಿರುಗಲಾರದಷ್ಟು ದೂರ ಕ್ರಮಿಸಿ ಬಿಟ್ಟಿದ್ದಾನೆ!