ಪ್ರೀತಿಯೆಂಬುದು ಸಿನಿಮಾ ಪಾಲಿಗೆ ಸದಾ ಕಾಲವೂ ತಾಜಾತನ ಉಳಿಸಿಕೊಳ್ಳುವ ಮಾಯೆ. ಪ್ರೇಮದ ಸುತ್ತಲೇ ಸಾವಿರಾರು ಕಥೆಗಳು ಹುಟ್ಟಿದರೂ, ಆ ಒರತೆ ಆವತ್ತಿಗೂ ಬತ್ತೋದಿಲ್ಲವೇನೋ… ಬಹುಶಃ ಅಂಥಾದ್ದೊಂದು ಜೀವಂತಿಕೆ ಇರೋದರಿಂದಲೇ ಬೇರೆ ಬೇರೆ ಆಯಾಮಗಳೊಂದಿಗದು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದೆ. ಒಂದಷ್ಟು ಕ್ರಿಯಾಶೀಲತೆ, ಹೊಸತನವಿದ್ದು ಬಿಟ್ಟರೆ ಗೆಲುವು ದಕ್ಕಿಸಿಕೊಳ್ಳುವುದು ಕಷ್ಟವೇನಲ್ಲ. ಯಾಕೆಂದರೆ, ತೆರೆಯ ಮೇಲೆ ಸರಿಯುವ ಪ್ರೇಮ ಕಥನಗಳ ಮೂಲಕ, ತಮ್ಮ ಭಾವನೆಗಳನ್ನು ಹುಡುಕುವ, ಅದನ್ನು ತಮ್ಮದೇ ಎಂದು ಪರಿಭಾವಿಸಿ ಸಂಭ್ರಮಿಸುವ ಬಹುದೊಡ್ಡ ಪ್ರೇಕ್ಷಕ ವರ್ಗ ಇಲ್ಲಿದೆ. ಆ ವರ್ಗವನ್ನು ತಣಿಸುವಂಥಾ ಲಕ್ಷಣಗಳೊಂದಿಗೀಗ (naguvina hoogala mele) `ನಗುವಿನ ಹೂಗಳ ಮೇಲೆ’ ಎಂಬ ಚಿತ್ರ ಒಂದಷ್ಟು ಸದ್ದು ಮಾಡುತ್ತಿದೆ.
ಇದು ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಸಿನಿಮಾ ಮೂಲಕ ಕಿರುತೆರೆಯಿಂದ ಮತ್ತೋರ್ವ ಹೀರೋನ ಆಗಮನವಾಗಿದೆ. ಗಟ್ಟಿಮೇಳ ಎಂಬ ಧಾರಾವಾಹಿಯಲ್ಲಿ ವಿಕ್ರಾಂತ್ ಎಂಬ ಪಾತ್ರ ನಿರ್ವಹಿಸುತ್ತಾ ಒಂದಷ್ಟು ಜನಪ್ರಿಯತೆ ಗಳಿಸಿಕೊಂಡಿರುವಾತ ಅಭಿ ದಾಸ್. ಅಲ್ಲಿ ಲವವವಿಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಭಿ ನಗುವಿನ ಹೂಗಳ ಮೇಲೆ ಮೂಲಕ ನಾಯಕನಾಗಿದ್ದಾರೆ. ಶರಣ್ಯ ಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಹಾಡೊಂದರ ಮೂಲಕ ನಗುವಿನ ಹೂಗಳು ಪ್ರೇಕ್ಷಕರ ಮನಸಿಗೆ ಹತ್ತಿರಾಗಿವೆ. ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಚಿತ್ರತಂಡ ತೆರೆದಿಟ್ಟಿದೆ.
ಅಭಿ ಮತ್ತು ಶರಣ್ಯ ಇಬ್ಬರಿಗೂ ಇದು ನಾಯಕ ನಾಯಕಿಯರಾಗಿ ಮೊದಲ ಚಿತ್ರ. ಈ ಸಿನಿಮಾ ಇದೀಗ ಒಂದಷ್ಟು ನಿರೀಕ್ಷೆ ಮೂಡಿಸಿರೋದಕ್ಕೆ ನಿರ್ದೇಶಕರ ಹಿನ್ನೆಲೆಯೂ ಕಾರಣವಾಗುತ್ತದೆ. ನಿರ್ದೇಶಕ ವೆಂಕಟ್ ಭಾರಧ್ವಾಜ್ ಈ ಹಿಂದೆ ಆಮ್ಲೆಟ್, ಕೆಂಪಿರುವೆ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಆ ಮೂಲಕ ಭಿನ್ನ ಕಥಾನಕ, ನಿರೂಪಣಾ ಶೈಲಿಯ ಜಾಡು ಹಿಡಿದಿದ್ದರು. ಈ ಕಾರಣದಿಂದಲೇ ನಗುವಿನ ಹೂಗಳ ಮೇಲೆ ಕೂಡಾ ವಿಶೇಷ ಕಥನವನ್ನು ಒಳಗೊಂಡಿರಬಹುದುÉಂಬಂಥಾ ನಂಬಿಕೆ ಮೂಡಿಕೊಂಡಿದೆ. ಅಂದಹಾಗೆ ಈಗ ಜನಪ್ರಿಯತೆ ಗಳಿಸಿಕೊಂಡಿರುವ ಈ ಸಿನಿಮಾದ ಹಾಡಿಗೆ ಕವಿ ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದಾರೆ.