ಸಪ್ತ ಸಾಗರದಾಚೆ ಎಲ್ಲೋ (saptha sagaradache ello) ಎಂಬ ಗೋಪಾಕೃಷ್ಣ ಅಡಿಗರ (poet gopalakrishna adiga) ಕವಿತೆಯ ಸಾಲೊಂದು ಸಿನಿಮಾ ಶೀರ್ಷಿಕೆಯಾದಾಗಲೇ, ಸಿನಿಮಾ ಪ್ರೇಮಿಗಳ ಮನಸಲ್ಲಿ ಪುಳಕದ ಪತಂಗ ಸರಿದಾಡಲಾರಂಭಿಸಿತ್ತು. ಆ ಶೀರ್ಷಿಕೆಯಲ್ಲಿಯೇ ಒಟ್ಟಾರೆ ಕಥನದ ಭಾವ ತೀವ್ರತೆ, ಸೂಕ್ಷ್ಮವಂತಿಕೆ ಅನಾವರಣಗೊಂಡಿತ್ತು. ಹೇಳಿಕೇಳಿ ನೇರವಾಗಿ ಎದೆಗೆ ತಾಕುವ ಕಥೆಗಳನ್ನು ಮುಟ್ಟೋದರಲ್ಲಿ (director hemanth) ನಿರ್ದೇಶಕ ಹೇಮಂತ್ ನಿಸ್ಸೀಮ. ಹಾಗಿರುವಾಗ, ಸಪ್ತ ಸಾಗರದಾಚೆ ಅಂದಾಜಿಸಲಾಗದ ಬೆರಗುಗಳಿವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿತ್ತು. ಆ ನಂತರ ಒಂದಷ್ಟು ಹೊಳಹುಗಳನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿತ್ತಲ್ಲಾ? ತಾನೇ ತಾನಾಗಿ ಈ ಚಿತ್ರದ ಬಗೆಗೆ ಕುತೂಹಲ ಕಾವೇರಿಕೊಳ್ಳಲಾರಂಭಿಸಿತ್ತು. (rkshith shetty) ರಕ್ಷಿತ್ ಮತ್ತು ರುಕ್ಮಿಣಿ ವಸಂತ್ ಕಾಂಬಿನೇಷನ್ನು, ಪ್ರತಿಭಾನ್ವಿತ ತಂಡದ ಸಾಹಚರ್ಯ ಯಾವ ರೀತಿಯಲ್ಲಿ ಮೋಡಿ ಮಾಡಿರಬಹುದೆಂಬ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ; ನೋಡುಗರ ಕಣ್ಣಂಚಿಗಿಳಿದ ಹನಿಗಳು, ಯಾವುದೇ ಬಿಲ್ಡಪ್ಪುಗಳ ಹಂಗಿಲ್ಲದೆ ತಲ್ಲಣಿಸುವಂತೆ ಮಾಡುವ ಮ್ಯಾಜಿಕ್ಕಿನ ಮೂಲಕ!
ಪ್ರೇಮವೆಂಬುದು ಸಿನಿಮಾ ಚೌಕಟ್ಟಿಗೆ ಯಾವತ್ತಿದ್ದರೂ ತಾಜಾತನದಿಂದಲೇ ಒಗ್ಗಿಕೊಳ್ಳುವ ಮಾಯೆ. ಪ್ರೇಮ ಕಥನದ ಚುಂಗು ಹಿಡಿದು ಹೊರಟವರ ಕ್ರಿಯಾಶೀಲತೆ, ಸ್ವಂತಿಕೆಯ ಮೇಲೆ ಅದರ ಪರಿಣಾಮ ನಿಂತಿರುತ್ತೆ. ಆ ನಿಟ್ಟಿನಲ್ಲಿ ಹೇಳೋದಾದರೆ, ನಿರ್ದೇಶಕ ಹೇಮಂತ್ ಈ ಚಿತ್ರವನ್ನು ಮೆಲುವಾಗಿ ಆವರಿಸಿಕೊಂಡು ಬಿಡುವ ದೃಷ್ಯಕಾವ್ಯವಾಗಿಸುವಲ್ಲಿ ಗೆದ್ದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ತೆರೆಗಾಣುವ ಸುದ್ದಿ ಹೊರ ಬಿದ್ದಾಕ್ಷಣ ಇದು ಬೇಕಿತ್ತಾ ಎಂಬಂಥಾ ಪ್ರಶ್ನೆ ಹಲವರಲ್ಲಿ ಮೂಡಿಕೊಂಡಿತ್ತು. ಹಾಗೊಂದು ಪ್ರಶ್ನೆ ಮೂಡಿದ ಮನಸುಗಳಲ್ಲೇ, ಬಿ ಸೈಡ್ ಬಗ್ಗೆ ಕುತೂಹಲ ಮಿಸುಕಾಡುವಂತೆ ಮಾಡಿದೆ ಎಂದರೆ, ಸಪ್ತ ಸಾಗರದಾಚೆಯ ಬೆರಗುಗಳ ಬಗ್ಗೆ ಬೇರೇನೂ ವಿವರಿಸುವ ಅವಶ್ಯಕತೆಯಿಲ್ಲ.
ಇಲ್ಲಿರೋದು ಮಧ್ಯಮ ವರ್ಗದ ಎರಡು ಮನಸುಗಳ ನಡುವೆ ಪ್ರವಹಿಸುವ ಗಾಢ ಪ್ರೇಮ. ವಿನಾ ಕಾರಣ ರೊಮ್ಯಾಂಟಿಕ್ ಅಂಶಗಳನ್ನು ಬೆರೆಸದೆ, ಬಿಲ್ಡಪ್ಪುಗಳಲ್ಲಿ ದೃಷ್ಯಗಳನ್ನು ಮೆರೆಸದೆ ಸಹಾಜಾತಿ ಸಹಜವಾಗಿ ಭಾವನೆಗಳು ಇಲ್ಲಿ ಅನುರಣಿಸುತ್ತವೆ. ಸಿನಿಮಾ ಶುರುವಾಗುತ್ತಲೇ ನಾಯಕ ನಾಯಕಿಯ ಪ್ರೇಮ ಕಥೆ ತೆರೆದುಕೊಳ್ಳುತ್ತದೆ. ಆಕೆ ಕಡಲೂರಿನಿಂದ ಬಂದ ಹುಡುಗಿ. ಗಿಜಿಗುಡುವ ಊರಲ್ಲಿ ನಿಂತಿದ್ರೂ ಕಡನ್ನೇ ಧ್ಯಾನವಾಗಿಸಿಕೊಂಡವಳು. ಆತ ಬದುಕಿಗಾಗಿ ಒಂದು ವೃತ್ತಿ ಮಾಡುತ್ತಾ, ಶ್ರೀಮಂತಿಕೆಯ ವಾತಾವರಣದಲ್ಲಿದ್ದರೂ ಮಧ್ಯಮ ವರ್ಗದ ತಲ್ಲಣಗಳನ್ನು ಹಾಸಿ ಹೊದ್ದಂತಿರುವ ಹುಡುಗ. ಆದರೆ, ಆತನನ್ನು ಆವರಿಸಿಕೊಂಡ ಪ್ರೇಮ ಎಲ್ಲ ಮಿತಿಗಳನ್ನು ಮೀರಿ, ಅಸಾಧ್ಯವೆಂಬುದರತ್ತ ಕೈ ಚಾಚುವಂತೆ ಮಾಡುತ್ತೆ.
ಅದು ನೈಜ ಪ್ರೇಮಕ್ಕಿರುವ ನಿಜವಾದ ಶಕ್ತಿ. ಪ್ರೀತಿಸಿದ ಜೀವವನ್ನು ದಕ್ಕಿಸಿಕೊಳ್ಳಲು ಅದು ಎಂಥಾ ಸಾಹಸಕ್ಕೂ ಪ್ರೇರೇಪಿಸಿ ಬಿಡುತ್ತೆ. ಅದರ ಸೆಳವಿಗೆ ಸಿಕ್ಕು ಮಹತ್ತರವಾದನ್ನು ಸಾಧಿಸಿದವರಿದ್ದಾರೆ. ಸೋಲಿನ ಹುದುಲಿಂದಲೇ ಪುಟಿದೆದ್ದು ಗೆದ್ದವರೂ ಇದ್ದಾರೆ. ಅದೆಲ್ಲವೂ ಹೆಜ್ಜೆಯೂರುವ ಹಾದಿಯನ್ನ ಅವಲಂಬಿಸಿರುತ್ತೆ. ಇಲ್ಲಿ ನಾಯಕ ತನ್ನ ಜತ್ತಿನಂಥವಳ ಕನಸು ನನಸು ಮಾಡಲು ತುಳಿದ ಹಾದಿ ಯಾವುದು? ಅದು ಆತನನ್ನು ಯಾವ ತೀರಕ್ಕೆ ಕರೆದೊಯ್ದು ಬಿಡುತ್ತೆ? ಇಂಥಾ ಪ್ರಶ್ನೆಗಳಿಗೆ ಸಿಗಬಹುದಾದ ಉತ್ತರವೇ ಒಂದಿಡೀ ಸಿನಿಮಾದ ಸಾರ. ಅದು ಹಪುಗಳಾಚೆಗೂ ಕಳೆಗಟ್ಟಿಕೊಂಡಿದೆ ಎಂಬುದೇ ಸಪ್ತ ಸಾಗರದಾಚೆಯ ನಿಜವಾದ ಸಾರ್ಥಕತೆ.
ಇಲ್ಲಿ ಮಧ್ಯಮ ವರ್ಗದ ಕನವರಿಕೆಗಳಿಗೆ, ಶ್ರೀಮಂತಿಕೆಯ ಠೇಂಕಾರ, ಹುನ್ನಾರಗಳು ಮುಖಾಮುಖಿಯಾಗುತ್ತವೆ. ಸಂವೇದನೆ ಕಳೆದುಕೊಂಡು, ಯಾರನ್ನ ಪಣಕ್ಕಿಟ್ಟಾದರೂ ಕಂಟಕದಿಂದ ಪಾರಾಗುವ ಕಾಂಚಾಣದ ಮನಸಲತ್ತುಗಳು ಕಂಗಾಲಾಗಿಸುತ್ತವೆ. ಓರ್ವ ನಿರ್ದೇಶಕನಾಗಿ ಪ್ರತೀ ಸೂಕ್ಷ್ಮವನ್ನೂ ಪರಿಗಣಿಸಿ, ಈ ಸಿನಿಮಾವನ್ನು ರೂಪಿಸಿರುವ ನಿರ್ದೇಶಕರು ನಿಜಕ್ಕೂ ಅಚ್ಚರಿ ಮೂಡಿಸುತ್ತಾರೆ. ಮೊದಲಾರ್ಧದ ತುಂಬಾ ನಾಯಕ, ನಾಯಕಿಯ ನಡುವಿನ ಮಧುರ ಪ್ರೇಮದ ಕನವರಿಕೆಯಲ್ಲಿಯೇ ಸಾಗುತ್ತದೆ. ದೃಷ್ಯಗಳು ಸರಿಯುತ್ತ ಕುತೂಹಲ ಹರಳುಗಟ್ಟುತ್ತಾ, ದ್ವಿತೀಯಾರ್ಧ ದಾಟಿಕೊಂಡ ನಂತರ ಅದು ಅಕ್ಷರಶಃ ನಿಗಿನಿಗಿಸುತ್ತೆ. ಇತ್ತೀಚಿನ ದಿನಮಾನದಲ್ಲಿ ನಾಯಕ ನಾಯಕಿಯರ ಕೆಮಿಸ್ಟ್ರಿಯೊಂದಿಗೆ ಗೆದ್ದ ಪ್ರೇಮ ಕಥನಗಳು ವಿರಳ. ಆ ಸಾಲಿಗೆ ನಿಸ್ಸಂದೇಹವಾಗಿಯೂ ಸಪ್ತ ಸಾಗರಾದಾಚೆ ಎಲ್ಲೋ ಸೇರಿಕೊಳ್ಳುತ್ತೆ. ಕ್ಲೈಮ್ಯಾಕ್ಸಿನ ಹೊತ್ತಿಗೆಲ್ಲ ನಿರ್ದೇಶಕ ದುನಿಯಾ ಸೂರಿಯ ಫಾರ್ಮುಲಾಕ್ಕೆ ಪಕ್ಕಾದಂತೆ ಕಾಣಿಸುವ ನಿರ್ದೇಶಕರು, ಸೈಡ್ ಬಿಯ ತುಣುಕುಗಳ ಮೂಲಕ ಕುತೂಹಲವನ್ನು ಕಾಪಿಟ್ಟುಕೊಳ್ಳುತ್ತಾರೆ. ಮೊದಲ ಭಾಗ ನೋಡಿದವರಲ್ಲೆಲ್ಲ ಎರಡನೇ ಭಾಗ ನೋಡುವ ಉತ್ಕಟ ತುಡಿತವೊಂದು ಊಟೆಯೊಡೆಯುತ್ತೆ.
ಹೀಗೆ ಎರಡು ಭಾಗಗಳಲ್ಲಿ ಸಿನಿಮಾವೊಂದನ್ನು ರೂಪಿಸುವಾಗ ನಾನಾ ರೀತಿಯಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ಅದೆಲ್ಲವನ್ನೂ ನಿರ್ದೇಶಕರು ಲೀಲಾಜಾಲವಾಗಿಯೇ ನಿಭಾಯಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದರೆ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಪಾತ್ರದಲ್ಲಿಯೇ ಲೀನಾವಾದಂತೆ ಕಾಣುತ್ತಾರೆ. ಈ ಹುಡುಗಿ ರುಕ್ಮಿಣಿಯಂಥಾ ಪ್ರತೀ ಫ್ರೇಮಿನಲ್ಲಿಯೂ ಒಳಗಿಳಿಯುತ್ತಾಳೆ. ಹಾಗೆ ಪಾತ್ರಗಳೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸಿದ ಫಾಯಿದೆ ನಿರ್ದೇಶಕರಿಗೂ ಸಲ್ಲುತ್ತದೆ. ಸೂಕ್ಷವಂತಿಕೆ ಇರುವ ಪ್ರೇಕ್ಷಕರನ್ನೆಲ್ಲ ಕ್ಷಣಾರ್ಧದಲ್ಲಿ ಆವರಿಸಿಕೊಳ್ಳುವ ಗುಣ ಹೊಂದಿರುವ ಈ ಸಿನಿಮಾ, ಭಿನ್ನ ಆಸಕ್ತಿಯ ನೋಡುಗರಿಗೂ ಸಲೀಸಾಗಿ ರುಚಿಸುತ್ತದೆ ಅನ್ನುವಂತಿಲ್ಲ. ಆದರೆ ಎಲ್ಲ ವರ್ಗದವರನ್ನೂ ಆವರಿಸಿಕೊಳ್ಳುವಂಥಾ ಭಾವತೀವ್ರತೆಯಂತೂ ಖಂಡಿತಾ ಇಲ್ಲಿದೆ. ಸಂಭಾಷಣೆಗೂ ಕೂಡಾ ಅಂಥಾದ್ದೊಂದು ಕಸುವಿದೆ.
ಹಾಗಾದರೆ, ಎಲ್ಲ ಕೋನಗಳಿಂದಲೂ ಸಪ್ತ ಸಾಗರದಾಚೆ ಎಲ್ಲೋ ಪರಿಪೂರ್ಣ ಚಿತ್ರವಾ? ಕೊರತೆಗಳಿಲ್ಲವಾ ಅಂತ ನೋಡ ಹೋದರೆ, ಒಂದಷ್ಟು ವಿಚಾರಗಳು ಗಮನಕ್ಕೆ ಬರುತ್ತವೆ. ಆ ಯಾದಿಯಲ್ಲಿ ದೊಡ್ಡ ಕೊರತೆಯಾಗಿ ಕಾಣಿಸೋದು ಹಾಡುಗಳು. ಈ ಸಿನಿಮಾದಲ್ಲಿ ಹಿಟ್ ಹಾಡುಗಳಿಲ್ಲ. ಈ ಬಗೆಯ ಸಿನಿಮಾಗಳ ಗೆಲುವಿನಲ್ಲಿ ಅದರ ಪಾಲೂ ಖಂಡಿತಾ ಇರುತ್ತದೆ. ಆದರೇಕೋ ಚರಣ್ ರಾಜ್ ಅದರತ್ತ ಗಮನ ಹರಿಸಿಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲವರು ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಕಾಸ್ಟ್ಯೂಮು, ಒಟ್ಟಾರೆ ಲುಕ್ಕಿನ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಪಾತ್ರವನ್ನು ಬೊಟ್ಟು ಮಾಡದಂತೆ ರೂಪಿಸುವಲ್ಲಿಯೂ ನಿರ್ದೇಶಕರು ಒಂದಷ್ಟು ಎಚ್ಚರ ತಪ್ಪಿದಂತೆ ಭಾಸವಾಗುತ್ತೆ. ಆದರೆ ಒಟ್ಟಾರೆ ಸಿನಿಮಾದ ಅಂದವೆಂಬುದು ಒಂದಷ್ಟು ತಪ್ಪುಗಳು ಮತ್ತು ಕೊರತೆಯನ್ನು ಮಾಫಿ ಮಾಡಿ, ದೃಷ್ಯಗಳಲ್ಲಿ ಲೀನವಾಗುವಂತೆ ಮಾಡಿ ಬಿಡುತ್ತದೆ. ಒಟ್ಟಾರೆಯಾಗಿ, ಇದು ಈ ಕಾಲಮಾನದ ಒಂದೊಳ್ಳೆ ಪ್ರೇಮ ಕಥಾನಕ. ಸಿನಿಮಾ ನೋಡಿಯಾದ ಮೇಲೂ ಗಾಢ ಪ್ರೇಮದ ಪರಾಗ ಮನಸಿಗಂಟಿಕೊಳ್ಳುತ್ತೆ. ಪ್ರೀತಿಯ ಕಿರುಬೆರಳು ಉಣುಚಿಕೊಂಡ ಕರುಳ ಸಂಕಟ ನಮ್ಮದೇ ಅನ್ನಿಸಿ ಬಿಡುತ್ತೆ. ಬಿ ಸೈಡ್ ನೋಡೋ ಹಂಬಲದೊಂದಿಗೆ, ಬೊಗಸೆಯ ತುಂಬಾ ಭಾವದ ಕಡಲೊಂದು ಭೋರ್ಗರೆದಂತೆ ಭಾಸವಾಗುತ್ತೆ. ಇದಕ್ಕಿಂತ ಸಾರ್ಥಕತೆ ಮತ್ತೇನಿದೆ?