ಸಂಸದೆ ಸುಮಲತಾ (sumalatha birthday party) ಬರ್ತ್‍ಡೇ ಪಾರ್ಟಿಯ ಸುತ್ತ ಒಂದಷ್ಟು ವಿದ್ಯಮಾನಗಳು ಘಟಿಸಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ (sudeep-darshan) ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸ್ನೇಹ ಹಳಸಿಕೊಂಡಿತ್ತಲ್ಲ? ಆ ನಂತರ ಒಬ್ಬರು ಕಾಣಿಸಿಕೊಂಡ ಸಮಾರಂಭದಲ್ಲಿ ಮತ್ತೊಬ್ಬರು ಕಾಣಿಸುತ್ತಿರಲಿಲ್ಲ. ಅವರಿಬ್ಬರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾಗಳ ತುಂಬೆಲ್ಲ (fans war) ಕದನವೆಂಬುದು ಮಾಮೂಲಾಗಿ ಬಿಟ್ಟಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಆ ಕದನ ಸಭ್ಯತೆಯ ಪರಿಧಿ ದಾಟಿ ಅಸಹ್ಯ ಹುಟ್ಟಿಸಿ ಬಿಟ್ಟಿತ್ತು. ಎರಡೂ ದಿಕ್ಕಿನ ವಿಸರ್ಜನೆಗಳಿಂದಾಗಿ, ಸೋಶಿಯಲ್ ಮೀಡಿಯಾ ಎಂಬುದು ಪಾಯಿಖಾನೆಯಂತಾಗಿದ್ದರೂ ಈ ನಟರಿಬ್ಬರೂ ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದರು. ಇದೀಗ (sumalatha ambareesh) ಸುಮಲತಾ ಬರ್ತ್‍ಡೇ ಪಾರ್ಟಿಯ ನೆಪದಲ್ಲಿ ಈ ಇಬ್ಬರೂ ಮತ್ತೆ ಒಂದಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೆಲ ಮಂದಿಯಂತೂ ಕಿಚ್ಚ-ದರ್ಶನ್ ಜೊತೆಗೂಡಿದರೆ, ಕನ್ನಡ ಚಿತ್ರರಂಗದಲ್ಲೊಂದು ಕ್ರಾಂತಿಯಾಗುತ್ತದೆ ಎಂಬಂಥಾ ಭ್ರಾಂತಿಯಲ್ಲಿ ನರಳುತ್ತಿದ್ದಾರೆ!
ಮೊನ್ನೆಯಷ್ಟೇ ದರ್ಶನ್ ಮಾಧ್ಯಮದವರೊಂದಿಗೂ ರಾಜಿಯಾಗಿದ್ದರು. ಎಲ್ಲವೂ ಸುಸೂತ್ರವಾಗಿ ನಡೆದರೆ ಕಿಚ್ಚನ ಕೈ ಕುಲುಕಿ, ಮತ್ತೆ ಸ್ನೇಹ ಪರ್ವವನ್ನು ಮುಂದುವರೆಸಿದರೂ ಅಚ್ಚರಿಯೇನಿಲ್ಲ. ಒಂದು ವೇಳೆ ಈ ಸ್ನೇಹ ಮತ್ತೆ ಬೆಸೆದುಕೊಂಡರೆ, ಅಭಿಮಾನಿಗಳ ಹೆಸರಲ್ಲಿ ಕಿತ್ತಾಡುವವರ ಅಬ್ಬರ ಕೊಂಚ ತಗ್ಗಬಹುದು. ಸೋಶಿಯಲ್ ಮೀಡಿಯಾದ ತುಂಬಾ ಒಂದಷ್ಟು ಸಹ್ಯ ವಾತಾವರಣ ಮೂಡಬಹುದು. ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ತಂದಿಡುತ್ತಿದ್ದ ಕೆಲ ಆಲ್ಕಾಟಿ ಆಸಾಮಿಗಳು ನಿರುದ್ಯೋಗಿಗಳಾಗಬಹುದು. ಕಿಚ್ಚ ಮತ್ತು ದರ್ಶನ್ ಇಂಥಾ ಮಾನಸಿಕ ಒತ್ತಡಗಳಿಂದ ಹೊರಬಂದು ತುಸು ನಿಸೂರಾಗಬಹುದು. ಅದರ ಹೊರತಾಗಿ ಈ ಸ್ನೇಹದ ಮರು ಕೂಡಿಕೆಯಿಂದ ಮತ್ಯಾವ ಸೀಮೆಗಿಲ್ಲದ ಕ್ರಾಂತಿಯೂ ಆಗೋದಿಲ್ಲ!
ಹೀಗೆ ಕಿಚ್ಚಾ ಮತ್ತು ದರ್ಶನ್ ಸ್ನೇಹ ಕೂಡಿಕೊಳ್ಳುತ್ತದೆಂಬ ಸೂಚನೆ ಸಿಕ್ಕಾಕ್ಷಣವೇ, ಕೆಂ ಮಂದಿ ಅವರಿಬ್ಬರನ್ನೂ ಸೇರಿಸಿಕೊಂಡು ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಸನ್ನದ್ಧರಾಗಿರುವ ಸುದ್ದಿಯಿದೆ. ಹಾಗೊಂದು ವೇಳೆ, ದರ್ಶನ್ ಮತ್ತು ಸುದೀಪ್ ಒಟ್ಟಿಗೆ ನಟಿಸಲು ಒಪ್ಪಿಕೊಂಡರೂ ಅದನ್ನು ಚಾಲಾಕಿ ಚತುರ ರಾಕ್ ಲೈನ್ ವೆಂಕಣ್ಣನೇ ಪ್ರೊಡ್ಯೂಸು ಮಾಡೋದಂತೂ ಪಕ್ಕಾ. ಆದರೆ, ಈ ಇಬ್ಬರು ಸ್ಟಾರ್ ನಟರನ್ನು ಒಂದು ಸಿನಿಮಾದಲ್ಲಿ ಒಟ್ಟುಗೂಡಿಸಬೇಕೆಂದರೆ, ಅದಕ್ಕೆ ಬೇರೆಯದ್ದೇ ತೆರನಾದ ಖದರ್ ಇರುವ ನಿರ್ದೇಶಕ ಬೇಕೇ ಬೇಕು. ಇದೀಗ ಆ ಕಸುವ ಯಾರಿಗಿದೆ ಎಂಬ ದಿಕ್ಕಿನಲ್ಲಿಯೂ ಒಂದಷ್ಟು ಚರ್ಚೆಗಳು ಶುರುವಾಗಿವೆ. ಇಂಥಾ ಬೆಳವಣಿಗೆಗಳ ನಡುವೆ ಅಯೋಗ್ಯ ಖ್ಯಾತಿಯ ಯುವ ನಿರ್ದೇಶಕ ಮಹೇಶ್ ಭಯಂಕರ ಜೋಕೊಂದನ್ನು ಸಿಡಿಸುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದಾನೆ!
ನೀನಾಸಂ ಸತೀಶ್ ನಟನೆಯ ಅಯೋಗ್ಯ ಎಂಬ ಸಿನಿಮಾ ಮೂಲಕ ನಿರ್ದೇಶಕನಾಗಿ ಅವತರಿಸಿದ್ದಾತ ಮಹೇಶ್. ಆ ಸಿನಿಮಾ ಗೆಲುವು ಕಂಡಿತ್ತು. ಹಾಗೆ ಮೊದಲ ಹೆಜ್ಜೆಯಲ್ಲಿಯೇ ಒಂದು ಮಟ್ಟದ ಗೆಲುವು ಕಂಡಿದ್ದ ಎಳಸು ಸ್ವಭಾವದ ಮಹೇಶನ ತಲೆ ಭುಜದ ಮೇಲೆ ನಿಲ್ಲಲಾರದಂತೆ ಗಿರಕಿ ಹೊಡೆಯಲಾರಂಭಿಸಿತ್ತು. ಮಹಾನ್ ಚಾಲಾಕಿಯೂ, ಚುರುಕುತನ ಹೊಂದಿರುಇವವನೂ ಆಗಿರುವ ಮಹೇಶ ಆ ನಂತರ ಮೆತ್ತಗೆ ಮೆರೆಯಲಾರಂಭಿಸಿದ್ದ ಅಂತೊಂದು ಆರೋಪ ಗಾಂಧಿನಗರದಲ್ಲಿ ಹಬ್ಬಿಕೊಂಡಿತ್ತು. ಪೋಸು ಕೊಡೋದರಲ್ಲಿ ಜೋಗಿ ಪ್ರೇಮ್ ನನ್ನೇ ಈತ ಮೀರಿಸುತ್ತಾನೆಂಬ ಮಾತುಗಳೂ ಹರಿದಾಡಿದ್ದವು. ನಂತರ ರೋರಿಂಗ್ ಸ್ಟಾರ್ ಶ್ರೀ ಮುರುಳಿಯ ಮದಗಜ ಅಂತೊಂದು ಚಿತ್ರ ಮಾಡಿದ್ದ ಮಹೇಶ, ನಗೆಪಾಟಲಿಗೀಡಾಗಿದ್ದ. ಯಾಕೆಂದರೆ, ಮದಗಜ ಸಿನಿಮಾ ಮಂದಿರದ ಹೊಸ್ತಿಲಲ್ಲೇ ಮಗುಚಿಕೊಂಡಿತ್ತು!
ಇಂಥಾ ಮಹೇಶ ಸುದೀಪ್ ಹಾಗೂ ದರ್ಶನ್ ಒಪ್ಪಿಗೆ ಕೊಟ್ಟರೆ ರಾತ್ರಿ ಹಗಲಾಗೋದರೊಳಗೆ ಕಥೆ ಬರೆದು, ಮಾರನೇ ದಿನ ಮುಂಜಾನೆಹೊತ್ತಿಗೆಲ್ಲ ನಿರ್ದೇಶನ ಮಾಡಲು ತಾನು ರೆಡಿ ಎಂಬರ್ಥದಲ್ಲಿ ಮಾತಾಡಿರುವ ಸುದ್ದಿಯೊಂದು ಹೊರ ಬಿದ್ದಿದೆ. ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿರೋ ಈ ಸುದ್ದಿ ನಿಜವೇ ಆಗಿದ್ದರೆ, ಅದನ್ನು ಮಹೇಶ ಹೇಳಿದ್ದೇ ಸತ್ಯವಾಗಿದ್ದರೆ, ಅದು ಈ ಸಂವತ್ಸರದ ಬಹುದೊಡ್ಡ ಕಾಮಿಡಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಿಜ, ಮಹೇಶನ ಪ್ರತಿಭೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಈ ಕ್ಷಣಕ್ಕೆ ಎರಡು ಮದಗಜಗಳನ್ನು ಒಟ್ಟೊಟ್ಟಿಗೆ ಸಂಭಾಳಿಸುವ ಯಾವ ಕಸುವೂ ಆತನಿಗಿಲ್ಲ. ಯಾಕೆಂದರೆ, ಶ್ರೀ ಮುರುಳಿ ಎಂಬ ಸಾಧಾರಣ ಗಜವನ್ನೇ ಮ್ಯಾನೇಜು ಮಾಡಲಾಗದೆ ಈ ಮಹೇಶ ಕೈ ಚೆಲ್ಲಿದ್ದ!
ಸದ್ಯಕ್ಕೆ ಇಂಥಾದ್ದೊಂದು ಜೋಕು ಮಾಡಿರುವ ಮಹೇಶ, ಇದೀಗ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾನೆ. ಅದಾಗಲೇ ಅಭಿಷೇಕ್ ನನ್ನು ಹಾಡಿ ಹೊಗಳುತ್ತಾ ಮೂದಲಿಕೆಗೂ ಒಳಗಾಗುತ್ತಿದ್ದಾನೆ. ಹೇಳಿಕೇಳಿ ಈ ಅಭಿಷೇಕ್ ನಟನಾಗಿ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆತನಿಂದ ನಟನೆ ತೆಗೆಸುವಲ್ಲಿ ನಾಗಣ್ಣನಂಥಾ ನಾಗಣ್ಣನೇ ಅಮರ್ ಚಿತ್ರದ ಸಂದರ್ಭದಲ್ಲಿ ನಿತ್ರಾಣಗೊಂಡಿದ್ದರು. ಲಾಂಗ್ ಶಾಟ್ ಇಡುವ ಮೂಲಕ ಅಭಿಷೇಕನ ಎಕ್ಸ್‍ಪ್ರೆಷನ್ನು ಕಾಣಿಸದಂತೆ ಮ್ಯಾನೇಜು ಮಾಡಿದ್ದರು. ಇದೀಗ ಮಹೇಶ ಚಿತ್ರವಿಚಿತ್ರ ಕವಚಗಳನ್ನು ಮುಕಮುಸುಡಿಗೆಲ್ಲ ಕವುಚುವ ಮೂಲಕ, ನಾಗಣ್ಣನ ಐಡಿಯಾವನ್ನು ಮತ್ತೊಂದು ಲೆವೆಲ್ಲಿಗೇರಿಸಿರೋ ಲಕ್ಷಣಗಳಿದ್ದಾವೆ. ಹಾಗೆ ನೋಡಿದರೆ, ಆ ಚಿತ್ರದ ಬಗ್ಗೆ ಯಾರಿಗೂ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿಲ್ಲ. ಮಹೇಶನ ಎರಡನೇ ಚಿತ್ರ ಮದಗಜ ಖುದ್ದು ಆತನೇ ಹೇಳಿದಂತೆ ಬೂಬ್ಸ್ ಬಂಪ್ಸ್ ಬರಿಸುವಲ್ಲಿ ವಿಫಲವಾಗಿದೆ. ಮೂರನೇ ಚಿತ್ರ ಇನ್ನಷ್ಟೇ ತೆರೆಗಾಣಬೇಕಿದೆ. ಅಷ್ಟರಲ್ಲೇ ದರ್ಶನ್ ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡ್ತೀನಿ ಅನ್ನುತ್ತಿದ್ದಾನೆ ಮಹೇಶ. ಅದೇನಾದರೂ ನಿಜವಾದರೆ ಬಡಪಾಯಿ ಪ್ರೇಕ್ಷಕರು ಮತ್ತೊಂದು ಬೂಬ್ಸ್ ಬಂಪ್ಸ್ ಅನುಭವಕ್ಕೆ ಅಣಿಗೊಳ್ಳಬೇಕಾಗಬಹುದು!