ಬಿಡುಗಡೆಗೂ ಮುನ್ನವೇ ನಾನಾ ಆಯಾಮಗಳಲ್ಲಿ ಅಬ್ಬರಿಸಿಕೊಂಡು ಬಂದಿದ್ದ ಚಿತ್ರ (toby movie) `ಟೋಬಿ’. ಹಾಗೆ ಟೋಬಿಯ ಹವಾ ಊರಗಲ ಹಬ್ಬಿಕೊಂಡಿದ್ದದ್ದು ಸಹಜವೇ. ಓರ್ವ ನಿರ್ದೇಶಕನಾಗಿ, ಕಲಾವಿದನಾಗಿ, ಬರಹಗಾರನಾಗಿ (raj b shetty) ರಾಜ್ ಶೆಟ್ಟಿ ಸೃಷ್ಟಿಸಿದ್ದ ಕ್ರೇಜ್ ಅಂಥಾದ್ದಿದೆ. ಅದಕ್ಕೆ ಸರಿಯಾಗಿ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಕಥೆಗಾರ (t k dayanand) ಟಿ.ಕೆ ದಯಾನಂದ್ ಟೋಬಿಯ ಜನಕನೆಂಬ ವಿಚಾರ ಗೊತ್ತಾದದ್ದೇ, ಈ ಸಿನಿಮಾದೆಡೆಗಿನ ನಿರೀಕ್ಷೆ ಮತ್ತಷ್ಟು ನಿಗಿ ನಿಗಿಸಿತ್ತು. ಇದೇ ಹುರುಪಿನಲ್ಲಿ ಚಿತ್ರತಂಡ ಇರುವ ಅಷ್ಟೂ ಅಚ್ಚರಿಗಳನ್ನು ಬಿಡುಗಡೆಗೂ ಮುನ್ನವೇ ಮೊಗೆ ಮೊಗೆದು ಪ್ರೇಕ್ಷಕರ ಮುಂದಿಡುತ್ತಾ ಬಂದಿತ್ತು. ಇದೀಗ ಟೋಬಿ ಬಿಡುಗಡೆಗೊಂಡಿದೆ. ಅಭಿಮಾನದಾಚೆಗೂ ಹಬ್ಬಿಕೊಂಡಿದ್ದ ನಿರೀಕ್ಷೆಗಳ ನೆತ್ತಿಯ ಮೇಲೆ ರಕ್ತ ಲೇಪನ ಭರಪೂರವಾಗಿಯೇ ನಡೆದಿದೆ!
ಈ ಚಿತ್ರ ತೆರೆದುಕೊಳ್ಳೋದೇ ಉತ್ತರ ಕನ್ನಡ ಸೀಮೆಯ ಕಮಟಾ ಎಂಬೂರಿನ ಪೊಲೀಸ್ ಠಾಣೆಯ ಮೂಲಕ. ಅಲ್ಲಿಗೆ ಹೊಸದಾಗಿ ಬಂದ ನರರಹಿತ ಪೊಲೀಸನೊಬ್ಬನ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆ ನೇರವಾಗಿ ಟೋಬಿಯ ಜಾಡು ಹಿಡಿಯುತ್ತೆ. ಒಂದು ಮಟ್ಟಿಗೆ ಮೊದಲಾರ್ಧವೇ ಪರವಾಗಿಲ್ಲ; ದ್ವಿತೀಯಾರ್ಧವಂತೂ ಅಧ್ವಾನ. ಅಲ್ಲಿ ದೃಷ್ಯಗಳು ಎತ್ತೆತ್ತಲೋ ಚಲಿಸುತ್ತವೆ. ಮಾರಿಯ ಅವತಾರದ ಟೋಬಿ, ಚಿಮ್ಮುವ ರಕ್ತ, ಖೂಳರ ಅಟ್ಟಹಾಸದ ನಡುವೆ ಪಾತ್ರಗಳ ಸಂವೇದನೆ, ಕಣ್ಣೀರುಗಳೆಲ್ಲವೂ ಮಾಸಲಾಗಿರುತ್ತವೆ. ಪ್ರೇಕ್ಷಕರ ಮನಸಿಗೆ ಅದಾಗಲೇ ಒಂದಷ್ಟು ಲೇಯರುಗಳ ರಕ್ತ ಮೆತ್ತಿಕೊಂಡಿರೋದರಿಂದ, ತೀವ್ರವಾಗಿ ಕಾಡುವ ಗುಣ ಹೊಂದಿದ್ದ ಒಂದಷ್ಟು ದೃಷ್ಯಗಳು ತಾಕದೆ ಉಳಿದುಬಿಡುತ್ತವೆ.
ಈ ಸಿನಿಮಾ ನಿರ್ದೇಶಕ ರಾಜ್ ಬಿ ಶೆಟ್ಟಿಯ ಪಟ್ಟದ ಶಿಷ್ಯ. ಹಾಗಿರುವಾಗ ಶೆಟ್ಟರು ತಾವೇ ನಿರ್ದೇಶನದಲ್ಲಿಯೂ ಕೈಯಾಡಿಸಿರುತ್ತಾರೆಂಬುದು ಬಹಿರಂಗ ಸತ್ಯ. ಆದರೆ, ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿರೋ ರಾಜ್ ಬಿ ಶೆಟ್ಟಿ ಕೂಡಾ ಯಾಕೆ ಯಾಮಾರಿದರೆಂಬ ಪ್ರಶ್ನೆಯೊಂದು ಪ್ರೇಕ್ಷಕರನ್ನೆಲ್ಲ ಬಿಡದೇ ಕಾಡುತ್ತೆ. ಇದರಾಚೆಗೆ ರಾಜ್ ಶೆಟ್ಟರ ನಟನೆ ಮಾತ್ರ ಖಂಡಿತಾ ಫಲ್ ಮಾಕ್ರ್ಸ್ ಪಡೆದುಕೊಳ್ಳುತ್ತೆ. ಈ ಮೂಲಕ ಅವರೋರ್ವ ಅಪರೂಪದ ಕಲಾವಿದ ಎಂಬುದು ಮತ್ತೆ ಸಾಬೀತಾಗುತ್ತದೆ. ಚೈತ್ರಾ ಆಚಾರ್ ಕೂಡಾ ಶೆಟ್ಟರಿಗೆ ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಇಷ್ಟಿದ್ದರೂ ಕೂಡಾ ಟೋಬಿ ಯಾವ ಹಂತದಲ್ಲಿಯೂ ನಿರೀಕ್ಷೆಯ ಮಟ್ಟ ಮುಟ್ಟುವುದಿಲ್ಲ. ಭರೀ ನಿರೀಕ್ಷೆಯಿಟ್ಟುಕೊಂಡು ಬಂದ ಪ್ರೇಕ್ಷಕರ ಮನ ತಣಿಸುವುದಿಲ್ಲ. ಅದು ಟೋಬಿಯ ಬಹುದೊಡ್ಡ ಕೊರತೆ.
ಗಮನೀಯ ಅಂಶವೆಂದರೆ, ರಾಜ್ ಶೆಟ್ಟಿ ಗರುಡ ಗಮನ ವೃಷಭ ವಾಹನದ ಗೆಲುವನ್ನು ಮನಸಲ್ಲಿಟ್ಟುಕೊಂಡೇ, ದಯಾನಂದ್ ಅವರ ಕೆಗೆ ಸಿನಿಮಾ ರೂಪ ಕೊಟ್ಟಿದ್ದಾರೆ. ಅದರ ಫಲವಾಗಿಯೇ ಟೋಬಿಯ ಮೇಲೆ ಗರುಡನ ಛಾಯ ಪ್ರತೀ ಸೀನುಗಳಲ್ಲಿಯೂ ಕಾಣಿಸುತ್ತೆ. ಹಾಗೆ ನೋಡಿದರೆ, ಕಾಂತಾರದ ಕ್ಲೈಮ್ಯಾಕ್ಷಿನಲ್ಲಿಯೂ ಶೆಟ್ಟರು ಅದೇ ಪಟ್ಟು ಪ್ರದರ್ಶಿಸಿದ್ದರು. ಗರುಡ ಗಮನದ ಫಾರ್ಮುಲಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೂ ಟೋಬಿಯ ಖದರ್ರು ಬೇರೆಯದ್ದಿರುತ್ತಿತ್ತೋ ಏನೋ… ಆದರೆ, ಟೋಬಿಗಿಲ್ಲಿ ಆ ಖದರ್ರು ಕೂಡಾ ಇಲ್ಲ. ರಾಜ್ ಶೆಟ್ಟಿ ಗರುಡಗಮನ ವೃಷಭ ವಾಹನದಲ್ಲಿ ನೆಲದ ಘಮಲು ಬೆರೆತ ಕಥೆಗೆ ಕಮರ್ಶಿಯಲ್ ಸ್ಪರ್ಶ ನೀಡಿ ಗೆದ್ದಿದ್ದರು. ಇಲ್ಲಿಯೂ ಸಹ ಅವೆರಡೂ ಇಮೇಜುಗಳನ್ನು ಒಟ್ಟೊಟ್ಟಿಗೆ ಮ್ಯಾನೇಜು ಮಾಡಲು ಹೋಗಿ ಶೆಟ್ಟರು ಮುಗ್ಗರಿಸಿದಂತಿದೆ.
ಇನ್ನುಳಿದಂತೆ ತೀರಾ ನಿಧಾನಗತಿಯ ಚಲನೆ ಕೂಡಾ ಟೋಬಿಗೆ ಕೈ ಕೊಟ್ಟಿದೆ. ಅದು ಸಿನಿಮಾ ಮಂದಿರವನ್ನು ಕೆಲ ಘಟ್ಟಗಳಲ್ಲಿ ಅಸಹನೆಯಾಗಿ ಆವರಿಸಿಕೊಂಡು ಬಿಡುತ್ತದೆ. ಅಂಥಾ ದೃಷ್ಯಗಳಲ್ಲಿ ಪ್ರೇಕ್ಷಕರು ವಿಲಗುಟ್ಟೋದನ್ನು ನೋಡಿದಾಗ, ಇದು ಓಟಿಟಿಗೆ ಮಾತ್ರವೇ ಸಹ್ಯವಾಗಬಹುದೇನೋ ಅನ್ನಿಸುತ್ತೆ. ಯಾಕೆಂದರೆ, ಅಲಿ ಫಾಸ್ಟ್ ಫಾರ್ವರ್ಡ್ ಆಪ್ಷನ್ನಿರುತ್ತದೆ. ಇನ್ನುಳಿದಂತೆ ಚಿತ್ರತಂಡ ಪ್ರಮೋಷನ್ನಿನಲ್ಲಿ ಬಿಂಬಿಸಿದ್ದ ರೀತಿಗೂ, ಸಿನಿಮಾದೊಳಗಿನ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯಾಕೆಂದರೆ, ಕುರಿಯೊಂದು ಮಾರಿಯಾಗುವ ರೂಪಕವನ್ನಿಟ್ಟುಕೊಂಡು ಟೋಬಿ ಪಾತ್ರವನ್ನು ಬಿಂಬಿಸಲಾಗಿತ್ತು. ಆದರೆ, ಸಿನಿಮಾದಲ್ಲಿ ಮಾತ್ರ ಕುರಿಯಂತೆ ಒತ್ತಾಯಪೂರ್ವಕವಾಗಿ ಬಿಂಬಿಸಿದ್ದ ಮಾರಿಯೇ ಎದುರಾಗುತ್ತೆ. ಟೋಬಿ ಅನ್ನೋದೊಂದು ಪಕ್ಕಾ ವೈಲೆಂಟ್ ಪಾತ್ರ. ಒಂದು ವೇಳೆ ಕುರಿಯೊಂದು ಮಾರಿಯಾಗೋ ಅಲೀ ಕಾನ್ಸೆಪ್ಟ್ ಇದ್ದಿದ್ದರೆ ಅದರ ಮಜವೇ ಬೇರೆಯದ್ದಿರುತ್ತಿತ್ತೇನೋ.
ಹೀರೋ ಕ್ಯಾರೆಕ್ಟರಿಗಿಲ್ಲಿ ಚಾಲೆಂಜುಗಳೇ ಇಲ್ಲ. ರಾಜ್ ಶೆಟ್ಟಿ ಯಾವ ಭಿನ್ನ ಗೆಟಪ್ಪಿನಲ್ಲಿಯೂ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡೋದಿಲ್ಲ. ಅದೆಲ್ಲವನ್ನೂ ಬಿಡುಗಡೆಯ ಪೂರ್ವದಲ್ಲಿಯೇ ತೆರೆದಿಟ್ಟಿರೋದರಿಂದ, ಒಂದು ಸಿನಿಮಾದ ನಿಜವಾದ ಮುದವೇ ಮರೆಯಾದಂತಿದೆ. ಒಂದು ಕೋನದಲ್ಲಿ ಆರ್ಟ್ ಮೂವಿಯಂತೆ ಗೋಚರಿಸೋ ಈ ಚಿತ್ರದಲ್ಲಿ, ಪಕ್ಕಾ ಕಮರ್ಶಿಯಲ್ ಜಾಡಿನ ಫೈಟುಗಳು ಪ್ರೇಕ್ಷಕರನ್ನು ಕೆಕರುಮಕರಾಗಿಸುತ್ತವೆ. ರಾಜ್ ಶೆಟ್ಟಿ ಈ ಸಿನಿಮಾದಲ್ಲಿ ಸ್ಕ್ರಿಫ್ಟ್, ಸ್ಕ್ರೀನ್ ಪ್ಲೇನಲ್ಲಿಯೂ ಎಡವಿದ್ದಾರೆ. ತಮ್ಮ ಪಾತ್ರದಲ್ಲಿ ತಾವು ತನ್ಮಯರಾಗಿ ನಟಿಸುತ್ತಾ, ಮಿಕ್ಕುಳಿದವುಗಳನ್ನು ಕಡೆಗಣಿಸಿದಂತೆಯೇ ಭಾಸವಾಗುತ್ತೆ. ಇನ್ನುಳಿದಂತೆ ಮಿಥುನ್ ಮುಕುಂದನ್ ಬಿಜಿಎಂ ಕೂಡಾ, ರಾಜ್ ಶೆಟ್ಟಿ ನಟನೆಯಷ್ಟೇ ಪರಿಣಾಮಕಾರಿಯಾಗಿದೆ. ನೆಲಮೂಲದ ಕಥೆಗಳನ್ನು ಹೆಕ್ಕಿ ತರುವಲ್ಲಿ ನಿಸ್ಸೀಮರಾದ ಟಿ.ಕೆ ದಯಾನಂದ್ ಅವರ ಕಥೆಯೂ ಚೆನ್ನಾಗಿದೆ. ಆದರೆ, ಅದು ಹಾಳೆಯಿಂದ ದೃಷ್ಯಕ್ಕಿಳಿಯುವಲ್ಲಿ ಅಸಲೀ ಕಸುವು ಕಳೆದುಕೊಂಡಿದೆ. ಒಟ್ಟಾರೆಯಾಗಿ ರಾಜ್ ಶೆಟ್ಟಿ ಕಡೆಯಿಂದ ಮಹತ್ತರವಾದುದೇನನ್ನೋ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿರೋದಂತೂ ನಿಜ!