ಅದ್ಯಾವ ಕ್ಷೇತ್ರವೇ ಇರಲಿ; ಕರುನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಮಾತಾಡೋದು, ಕನ್ನಡದ ಬಗೆಗೊಂದು ಅಭಿಮಾನ ಹೊಂದಿರೋದು ಮಾಮೂಲಿ. ಆದರೆ, ಕನ್ನಡದಿಂದಲೇ ಅನ್ನಾಹಾರ ಕಂಡುಕೊಂಡ ಎಳಸು ನಟಿಯರು ಕೂಡಾ ಭಾಷೆಯ ಮೇಲಿನ ಅಭಿಮಾನ ಅಂತ ಬಂದಾಗ ತಿಮಿರು ಪ್ರದರ್ಶಿಸೋದೇ ಹೆಚ್ಚು. ಇಂಥವರ ಸಂತೆಯಲ್ಲಿ ಪರಭಾಷೆಗಳಿಂದ ಆಗಮಿಸಿದ ನಟಿಯರೇ ಎಷ್ಟೋ ವಾಸಿ ಅನ್ನಿಸಿ ಬಿಡುತ್ತೆ. ಯಾಕೆಂದರೆ, ಹಾಗೆ ಯಾವುದೇ ರಾಜ್ಯದಿಂದ ಬಂದ ನಟಿಯರಿಗೆ ಈ ನೆಲದ ಮೇಲೆ, ಅಕಾರಣ ಪ್ರೀತಿ ಕೊಟ್ಟ ಭಾಷೆಯ ಮೇಲೆ ಅಗಾಧ ಪ್ರೀತಿಯಿರುತ್ತೆ. ಸ್ವಲ್ಪ ಕಾಲದಲ್ಲೇ ಕನ್ನಡ ಕಲಿತು ಮಾತಾಡಲು ಪ್ರಯತ್ನಿಸೋ ಗುಣದಲ್ಲಿಯೇ ಆ ಪ್ರೀತಿ ಜಾಹೀರಾಗುತ್ತೆ. ಆ ರೀತಿ ಬೇರೆ ರಾಜ್ಯದಿಂದ ಬಂದು ಕನ್ನಡದ ಮೇಲೆ ಅತೀವ ಅಭಿಮಾನ ಹೊಂದಿರುವವರಲ್ಲಿ (pooja gandhi) ಪೂಜಾ ಗಾಂಧಿ ಕೂಡಾ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ.
ಮುಂಗಾರು ಮಳೆ (mungaru male kannada movie) ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‍ಗೆ (golden star ganesh) ನಾಯಕಿಯಾಗಿ ಪರಿಚಯಗೊಂಡಾಕೆ ಪೂಜಾ ಗಾಂಧಿ. ಆರಂಭದಲ್ಲಿ ಸಂಜನಾ ಗಾಂಧಿ ಅಂತ ಗುರುತಿಸಿಕೊಂಡಿದ್ದ ಆಕೆ, ಆ ನಂತರದಲ್ಲಿ ಪೂಜಾ ಅಂತ ಹೆಸರು ಬದಲಿಸಿಕೊಂಡಿದ್ದೂ ಆಗಿತ್ತು. ಒಂದಷ್ಟು ಸಿನಿಮಾ, ಆ ಸಂಖ್ಯೆಯನ್ನೇ ಮೀರಿಸುವಂಥಾ ವಿವಾದಗಳಾಚೆಗೀಗ, ಹೊಸಾ ಪೂಜಾ ಗಾಂಧಿಯ ಪರಿಚಯವಾಗಲಾರಂಭಿಸಿದೆ. ಒಂದಷ್ಟು ವರ್ಷಗಳಿಂದ ನಟನೆಯಿಂದ ದೂರವಾದಂತಿರುವ ಪೂಜಾ ಇದೀಗ ತನ್ನೊಳಗಿನ ಅಸೀಮ ಕನ್ನಡ ಪ್ರೇಮದಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಕೇವಲ ಕನ್ನಡ ಕಲಿಯೋದು ಮಾತ್ರವಲ್ಲ; ಕನ್ನಡದಲ್ಲಿಯೇ ಸುಸ್ಪಷ್ಟವಾಗಿ ಬರೆಯೋದನ್ನೂ ಕಲಿತುಕೊಂಡಿರುವ ಪೂಜಾ ನಿಜಕ್ಕೂ ಅಚ್ಚರಿ ಮೂಡಿಸಿದ್ದಾರೆ.
ಹೀಗೆ ಕನ್ನಡ ಕಲಿಯುವತ್ತು ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ಪೂಜಾರನ್ನು ಆಕೆಯ ತಾಯಿ ಕೂಡಾ ಹಿಂಬಾಲಿಸಿದ್ದಾರೆ. ಆ ತಾಯಿಯೂ ಪೂಜಾಳಂತೆಯೇ ಕನ್ನಡದಲ್ಲಿ ಬರೆಯೋದನ್ನೂ ಕಲಿತುಕೊಂಡಿದ್ದಾರೆ. ಇದು ನಿಜಕ್ಕೂ ಅತ್ಯಂತ ಹೆಮ್ಮೆಯ ಸಂಗತಿ. ನಮಗೆ ಅಪರಿಚಿತವಾದ ಯಾವುದೇ ಒಂದು ಭಾಷೆಯನ್ನು ಕಲಿಯೋದಕ್ಕೆ ಧ್ಯಾನದಂಥಾ ಮನಃಸ್ಥಿತಿ ಬೇಕಾಗುತ್ತದೆ. ಅದರಲ್ಲಿಯೂ ಆ ಲಿಪಿಯಲ್ಲಿಯೇ ಬರವಣಿಗೆ ಮಾಡುವಷ್ಟು ಪಳಗಬೇಕೆಂದರೆ, ಅದೊಂದು ಸುದೀರ್ಘ ಯಾನ. ಅದನ್ನು ಪೂಜಾ ಶ್ರದ್ಧೆಯಿಂದಲೇ ಕ್ರಮಿಸುತ್ತಿದ್ದಾರೆ. ಒಂದು ಕಾಲದಲ್ಲಿ ವಿವಾದದ ಹುಡುಗಿ ಅನ್ನಿಸಿಕೊಂಡಿದ್ದ ಪೂಜಾಳ ಈ ರೂಪಾಂತರ ಯಾರೇ ಆದರೂ ಮೆಚ್ಚಿಕೊಳ್ಳುವಂಥಾದ್ದು ಎಂಬುದರಲ್ಲಿ ಎರಡು ಮಾತಿಲ್ಲ…