ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (nelson dileep kumar) ಇದೀಗ ಮಹಾ ಗೆಲುವೊಂದರ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಜೈಲರ್ (jailer movie) ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ನಿನೊಂದಿಗೆ ವಾರಗಳನ್ನು ದಾಟಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿರುವ ಕ್ರೇಜ್ ಕಂಡು ರಜನೀಕಾಂತ್ (rajnikanth) ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ದೇಶವ್ಯಾಪಿ ಜೈಲರ್ ಹವಾ ಹಬ್ಬಿಕೊಂಡಿರುವ ಈ ಘಳಿಗೆಯಲ್ಲಿ ನಿರ್ದೇಶಕ ನೆಲ್ಸನ್ ನಿಜವಾದ ಹೀರೋನಂತೆ ಬಿಂಬಿತವಾಗಿದ್ದಾರೆ. ಇಂಥಾದ್ದೊಂದು ಗೆಲುವು ಎಂಥವರಿಗಾದರೂ ನಶೆಯೇರಿಸುತ್ತೆ. ನಡೆದು ಬಂದ ಹಾದಿಯತ್ತ ಕಡೆಗಣ್ಣಲೂ ನೋಡದೆ ಮೆರೆಯುವಂತೆ ಮಾಡುತ್ತದೆ. ಆದರೆ, ಇಂಥಾದ್ದೊಂದು ಸಮ್ಮೋಹಕ ಗೆಲುವಿಜ ಝಗಮಘದಲ್ಲಿ ನಿಂತಿದ್ದರೂ, ನಿರ್ದೇಶಕ ನೆಲ್ಸನ್ ಹಳೇ ಸೋಲೊಂದರ ನೆತ್ತಿ ನೇವರಿಸಿದ್ದಾರೆ. ಅದಕ್ಕೆ ಕಾರಣವಾದ ಅಂಶಗಳನ್ನು ತಡಕಾಡಿದ್ದಾರೆ!
ಇದು ಸ್ವಾರ್ಥದ ಜಗತ್ತು. ಇಲ್ಲಿ ಗೆಲುವಿಗೆ ಅಪ್ಪ ಅನ್ನಿಸಿಕೊಂಡು ಮೆರೆಯುವವರು ಸಾಕಷ್ಟಿದ್ದಾರೆ. ಆದರೆ ಅನಾಥವಾಗಿ ಬಿದ್ದ ಸೋಲನ್ನು ಎತ್ತಿ ಹೆಗಲಿಗಿಟ್ಟುಕೊಂಡು, ಇದು ನನ್ನದೇ ಅನ್ನುವಂಥಾ ಛಾತಿ ಇರುವವರು ಕಡಿಮೆ. ಅಂಥಾದ್ದೊಂದು ಅಪರೂಪದ ವ್ಯಕ್ತಿತ್ವವಾಗಿ ನೆಲ್ಸನ್ ಕಾಣಿಸುತ್ತಾರೆ. ಬೇರೆ ಯಾರೇ ಆಗಿದ್ದರೂ ಈ ಹೊತ್ತಿನಲ್ಲಿ ಬರೀ ಜೈಲರ್ ಗೆಲುವಿನ ಬಗ್ಗೆ ಮಾತಾಡುತ್ತಿದ್ದರು. ಆದರೆ, ನೆಲ್ಸನ್ ದಳಪತಿ ವಿಜಯ್ ಅಭಿನಯಿಸಿದ್ದ, ತಾನು ನಿರ್ದೇಶನ ಮಾಡಿದ್ದ ಬೀಸ್ಟ್ ಚಿತ್ರದ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಈ ಮೂಲಕ ತನ್ನನ್ನು ತಾನೇ ವಿಮರ್ಶೆಗೊಳಪಡಿಸಿಕೊಂಡಿದ್ದಾರೆ.
ಬೀಸ್ಟ್ ಗಾಗಿ ಬಹಳಷ್ಟು ಆಸ್ಥೆಯಿಂದ ನೆಲ್ಸನ್ ಕಾರ್ಯ ನಿರ್ವಹಿಸಿದ್ದರಂತೆ. ಕಥೆ ಮತ್ತು ಪಾತ್ರ ಸೃಷ್ಟಿಯನ್ನಂತೂ ಅತ್ಯಂತ ಜತನದಿಂದ ಮಾಡಿದ್ದರಂತೆ. ಆದರೆ ಕೋವಿಡ್ ಹಿಂಚುಮುಂಚಿನಲ್ಲಿದ್ದ ಕಾರಣದಿಂದ ಅಡಿಗಡಿಗೆ ಸವಾಲುಗಳೆದುರಾಗಿದ್ದವು. ಚಿತ್ರೀಕರಣದ ಹಂತದಿಂದಲೇ ಅಂಥಾದ್ದಕ್ಕೆಲ್ಲ ಎದೆಗೊಡುವಂಥಾ ಅನಿವಾರ್ಯತೆ ಬಂದೊದಗಿತ್ತು. ಆ ಬಳಿಕ ಬಿಡುಗಡೆಗೆ ತೀರ್ಮಾನಿಸಿದಾಗಲೂ ಕೂಡಾ ಕೆಜಿಎಫ್2 ಅಲೆಯ ಮುಂದೆ ಬೀಸ್ಟ್ ಮಂಕಾಗಿ ಬಿಟ್ಟಿತ್ತು. ಆರಂಭದಿಂದಲೇ ನೆಗೆಟಿವ್ ಅನಿಸಿಕೆಗಳು ಬರಲಾರಂಭಿಸಿದಾಗಲಂತೂ ನೆಲ್ಸನ್ ಒದ್ದಾಡುವಂತಾಗಿತ್ತಂತೆ. ಈವರೆಗಿನ ನಾಲಕ್ಕು ಸಿನಿಮಾಗಳ ಜರ್ನಿಯಲ್ಲಿ ನೆಲ್ಸನ್ ಗೆಲುವು ಕಂಡಿದ್ದಾರೆ. ಜೈಲರ್ ಅಂತೂ ಮಹಾ ಗೆಲುವಿನ ರೂವಾರಿಯಾಗಿದೆ. ಆದರೂ ಕೂಡಾ ನೆಲ್ಸನ್‍ರನ್ನು ಬೀಸ್ಟ್ ಚಿತ್ರದ ಹೀನಾಯ ಸೋಲಿನ ಕಹಿ ಕಾಡುತ್ತಿರುವಂತಿದೆ.