ಬಾಹುಬಲಿಯಂಥಾ (bahubali movie) ಬಹುದೊಡ್ಡ ಹಿಟ್ ಸಿನಿಮಾ ಕೊಟ್ಟ ನಂತರವೂ (prabhas) ಪ್ರಭಾಸ್ ವೃತ್ತಿ ಬದುಕಿನ ಹಾದಿ ಜಟಿಲವಾಗುತ್ತಾ ಸಾಗಿದೆ. ಆದಿಪುರುಷನಂಥಾ (adipurush) ದಟ್ಟ ದರಿದ್ರ ಸಿನಿಮಾಗಳನ್ನು ಆತ ಅವ್ಯಾವ ಸೌಭಾಗ್ಯಕ್ಕೆ ಒಪ್ಪಿಕೊಳ್ಳುತ್ತಾನೋ, ಅದ್ಯಾವ ಮಾನದಂಡವಿಟ್ಟುಕೊಂಡು ಕೆಲ ಹೊಸಾ ಚಿತ್ರಗಳಿಗೆ ಪ್ರಭಾಸ್ ಸಹಿ ಹಾಕುತ್ತಾನೋ ಭಗವಂತನೇ ಬಲ್ಲ. ಆದರೆ, ಆದಿಪುರುಷ್ ಚಿತ್ರ ಪ್ರಭಾಸ್ (prabhas new movie) ವೃತ್ತಿ ಬದುಕಿಗೆ ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ. ಅದು ಯಾವ ಪರಿಯಾಗಿ ಡ್ಯಾಮೇಜು ಮಾಡಿದೆ ಎಂದರೆ, ಮತ್ತೆ ಫಾರ್ಮಿಗೆ ಬರಬೇಕೆಂದರೆ, ಬಾಹುಬಲಿಯಂಥಾ ಮತ್ತೊಂದು ಗೆಲುವು ಬೇಕೇ ಬೇಕಾಗಿದೆ. ಅದು (salaar) ಸಲಾರ್ ಮೂಲಕ ಸಿಗಲಿದೆಯಾ? ಅನ್ನೋ ಪ್ರಶ್ನೆಗೆ ಆತ್ಮವಿಶ್ವಾಸ ತುಂಬಿದ ನಿಖರ ಉತ್ತರವಂತೂ ಸದ್ಯಕ್ಕೆ ಸಿಗುವಂತಿಲ್ಲ!
ಪ್ರಶಾಂತ್ ನೀಲ್ ಕೆಜಿಎಫ್ ಸರಣಿಯ ದೊಡ್ಡ ಗೆಲುವಿನ ನಂತರದಲ್ಲಿ ಕೈಗೆತ್ತಿಕೊಂಡಿರುವ ಸಿನಿಮಾ ಸಲಾರ್. ಅದು ಆರಂಭಿಕವಾಗಿ ಸೃಷ್ಟಿಸಿದ್ದ ಹೈಪುಗಳಿಗೂ, ಈಗ ಹೆಡೆಯೆತ್ತಿ ನಿಂತಿರುವ ಮಂಕು ಮಂಕು ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ನಡುವೆ ಚಿತ್ರತಂಡದ ಕಡೆಯಿಂದ ಒಂದಷ್ಟು ಚಿತ್ರವಿಚಿತ್ರವಾದ ನಿರ್ಧಾರಗಳು ಜಾಹೀರಾಗುತ್ತಿವೆ. ಸಲಾರ್ ಚಿತ್ರದ ಹಾಡುಗಳಿಗಾಗಿ ಅಭಿಮಾನಿಗಳೆಲ್ಲ ಕಾದು ಕೂತಿದ್ದಾರೆ. ಹಂತ ಹಂತವಾಗಿ ಹಾಡುಗಳು ಬಿಡುಗಡೆಯಾದಾವೆಂಬ ಆಸೆ ಬಹುತೇಕರಲ್ಲಿದೆ. ಆದರೀಗ ಸಲಾರ್ ಚಿತ್ರತಂಡ ಅದಕ್ಕೂ ತಣ್ಣೀರೆರಚಿದೆ.
ಸಲಾರ್ ಬಿಡುಗಡೆಗೂ ಮುನ್ನ ಒಂದೇ ಒಂದು ಹಾಡು ಕೂಡಾ ಲಾಂಚ್ ಆಗೋದಿಲ್ಲ ಎಂಬಂಥಾ ಸುದ್ದಿಯೊಂದು ಹೊರಬಿದ್ದಿದೆ. ಅದನ್ನು ಚಿತ್ರತಂಡ ಕೂಡಾ ಅನುಮೋದಿಸಿದೆ. ಯಾವುದೇ ಸಿನಿಮಾಗಳ ಪಾಲಿಗಾದರೂ ಹಾಡುಗಳು ಬೂಸ್ಟಿಂಗ್ ಡೋಸ್ ಇದ್ದಂತೆ. ಆ ಕಾರಣದಿಂದಲೇ ಹಾಡುಗಳನ್ನು ಸಿನಿಮಾಗಳ ಆಹ್ವಾನ ಪತ್ರಿಕೆ ಎಂದೇ ಪರಿಗಣಿಸಲಾಗುತ್ತದೆ. ಕೆಜಿಎಫ್ ಸರಣಿಯಲ್ಲೂ ಕೂಡಾ ಹಾಡುಗಳ ಮೂಲಕವೇ ಸಂಚಲನ ಸೃಷ್ಟಿಸಲಾಗಿತ್ತು. ಆದರೆ ಅದೇ ಪ್ರಶಾಂತ್ ನೀಲ್ ಅದ್ಯಾಕೆ ಹಾಡುಗಳನ್ನು ಬಿಡುಗಡೆಗೊಳಿಸದಿರುವ ತೀರ್ಮಾನಕ್ಕೆ ಬಂದಿದ್ದಾರೋ ಗೊತ್ತಾಗುತ್ತಿಲ್ಲ. ಸಲಾರ್ ಬಗ್ಗೆ ಪುಂಖಾನುಪುಂಖವಾಗಿ ನೆಗೆಟೀವ್ ರೂಮರ್‍ಗಳು ಹಬ್ಬಿಕೊಳ್ಳುತ್ತಿವೆ. ಚಿತ್ರತಂಡದ ನಡೆ ಅದೆಲ್ಲವನ್ನೂ ನಿಜವೆಂದು ಸಾಕ್ಷೀಕರಿಸುವಂತೆ ಕಾಣಿಸುತ್ತಿರೋದು ಸುಳ್ಳಲ್ಲ!