ರಜನೀಕಾಂತ್ (rajanikant) ಅಭಿನಯದ ಜೈಲರ್ (jailer) ದೇಶಾದ್ಯಂತ ಧೂಳೆಬ್ಬಿಸುತ್ತಿದೆ. ಒಂದಷ್ಟು ಮಿತಿಗಳಾಚೆಗೂ ರಜನಿಯ ಈ ಚಿತ್ರ ಯಥಾ ಪ್ರಕಾರ ಹಬ್ಬದಂತೆ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ (director nelson) ನೆಲ್ಸನ್ ತಮ್ಮಿಷ್ಟದ ನಟನನ್ನು ಮಿಂಚಿಸಿರೋ ರೀತಿ ಕಂಡು ಅಭಿಮಾನಿಗಳೆಲ್ಲ ಫಿದಾ ಆಗಿ ಬಿಟ್ಟಿದ್ದಾರೆ. ಹಾಗೆ ನೋಡಿದರೆ, ಕಲೆಕ್ಷನ್ನು, ಕ್ರೇಜು ಸೇರಿದಂತೆ ಪ್ರತಿಯೊಂದರಲ್ಲಿಯೂ ಮುಂಚೂಣಿಯಲ್ಲಿರುವ (jailer movie) ಜೈಲರ್ ಸಾಕಷ್ಟು ಆಕರ್ಷಣೆಗಳನ್ನು ಒಡಲಲ್ಲಿಟ್ಟುಕೊಂಡಿದೆ. ಕನ್ನಡವೂ ಸೇರಿದಂತೆ ಬಹುತೇಕ ಭಾಷೆಗಳ ಪ್ರೇಕ್ಷಕರು ಜೈಲರ್ ಖದರ್ ಕಂಡು ಅಕ್ಷರಶಃ ಥ್ರಿಲ್ ಆಗಿದ್ದಾರೆ. ವಿಶೇಷೆಂದರೆ, ಈ ಚಿತ್ರದಲ್ಲಿ ಒಂದಷ್ಟು ನಿಮಿಷಗಳ ಕಾಲ ಕಾಣಿಸಿಕೊಂಡಿರೋ ಹ್ಯಾಟ್ರಿಕ್ ಹೀರೋ (shivarajkumar) ಶಿವರಾಜ್ ಕುಮಾರ್ ಮಾತ್ರ ನೋಡುಗರ ಮನಸಿಗಿಳಿದು, ಅಚ್ಚರಿದಾಯಕ ಕ್ರೇಜ್ ಒಂದನ್ನು ಹುಟ್ಟುಹಾಕಿದ್ದಾರೆ.
ಹಾಗೆ ನೋಡಿದರೆ, ಜೈಲರ್‍ನಲ್ಲಿ ಶಿವಣ್ಣ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆಂಬ ಸುದ್ದಿಯಾಗಿತ್ತಾದರೂ, ಅದರ ಸುತ್ತಾ ಹೇಳಿಕೊಳ್ಳುವಂಥಾ ಹೈಪುಗಳು ಸೃಷ್ಟಿಯಾಗಿರಲಿಲ್ಲ. ಶಿವರಾಜ್ ಕುಮಾರ್ ಕೂಡಾ ಜೈಲರ್ ನಲ್ಲಿನ ತಮ್ಮ ಪಾತ್ರದ ಬಗ್ಗೆ ವಿಶೇಷ ಒತ್ತು ಕೊಟ್ಟು ಎಲ್ಲಿಯೂ ಮಾತಾಡಿದ್ದೂ ಇಲ್ಲ. ಒಂದಷ್ಟು ಪೋಸ್ಟರುಗಳಲ್ಲಿ ಶಿವಣ್ಣ ಪಾತ್ರದ ಝಲಕ್ಕುಗಳು ಕಾಣಿಸಿಕೊಂಡಿದ್ದವಷ್ಟೇ. ಶಿವರಾಜ್ ಕುಮಾರ್ ಕಟ್ಟಾ ಅಭಿಮಾಮಾನಿಗಳನ್ನು ಹೊರತುಪಡಿಸಿ, ಮಿಕ್ಕುಳಿದ ಪ್ರೇಕ್ಷಕ ವರ್ಗದಲ್ಲಿ ಹೇಳಿಕೊಳ್ಳುವಂಥಾ ನಿರೀಕ್ಷೆ ಇರಲಿಲ್ಲ. ಆದರೆ, ಜೈಲರ್ ಚಿತ್ರದಲ್ಲಿನ ಶಿವಣ್ಣನ ನಟನೆಯ ಖದರ್ ಕಂಡು ಎಲ್ರೂ ಬೆಕ್ಕಸ ಬೆರಗಾಗಿದ್ದಾರೆ.
ಕೇವಲ ಕನ್ನಡದ ಪ್ರೇಕ್ಷಕರು ಮಾತ್ರವಲ್ಲ; ಇದುವರೆಗೆ ಶಿವರಾಜ್ ಕುಮಾರ್ ಅವರ ಒಂದೇ ಒಂದು ಸಿನಿಮಾ ನೋಡದವರೂ ಕೂಡಾ ನರಸಿಂಹಾವತಾರಿ ಶಿವಣ್ಣನ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಪರಭಾಷಾ ಪ್ರೇಕ್ಷಕರನೇಕರು ಶಿವರಾಜ್ ಕುಮಾರ್ ಅವರ ನಟನೆಯನ್ನು ವಿಶೇಷವಾಗಿ ಉಲ್ಲೇಖಿಸುತ್ತಾ ಹಾಡಿ ಹೊಗಳುತ್ತಿದ್ದಾರೆ. ಕೆಲವೇ ಕೆಲ ನಿಮಿಷಗಳಲ್ಲಿ ಮಂಡ್ಯ ಸೀಮೆಯ ರೌಡಿ ನರಸಿಂಹನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡ ಬಗೆ ಇದೆಯಲ್ಲಾ? ಅದು ಯಾರನ್ನಾದರೂ ಅಚ್ಚರಿಗೀಡು ಮಾಡುವಂತಿದೆ. ಸಿಕ್ಕ ಸೀಮಿತಾವಧಿಯಲಿಯೇ, ಎಲ್ಲ ಮಿತಿಗಳನ್ನು ಮೀರಿಕೊಂಡು ತನ್ನ ಚಾತುರ್ಯವನ್ನು ಸಾಬೀತುಗೊಳಿಸೋದು, ನಟನೊಬ್ಬನ ಪಾಲಿಗೆ ಅಸಲೀ ಚಾಲೆಂಜ್. ಅದನ್ನು ತಣ್ಣಗಿನ ಅಬ್ಬರದ ಮೂಲಕ ಶಿವಣ್ಣ ಸಾಧಿಸಿಬಿಟ್ಟಿದ್ದಾರೆ.
ಯಾವಾಗ ಶಿವಣ್ಣನ ಪಾತ್ರದ ಬಗ್ಗೆ ಪರಿ ಪರಿಯಾಗಿ ಸದ್ದು ಮಾಡಲಾಂಭಿತೋ, ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ದಿಕ್ಕಿನ ಚರ್ಚೆಯೂ ಶುರುವಾಗಿದೆ. ಶಿವಣ್ಣನನ್ನು ಇಂಥಾ ಸ್ವರೂಪದಲ್ಲಿಯೂ ಕಾಣಿಸಬಹುದೆಂಬ ಮನಸ್ಥಿತಿ, ಕ್ರಿಯಾಶೀಲತೆ ಕನ್ನಡ ಚಿತ್ರರಂಗದ ಮಂದಿಗೇಕಿಲ್ಲ ಎಂಬರ್ಥದಲ್ಲಿ ಜನ ಸಂವಾದ ಉರುವಿಟ್ಟುಕೊಂಡಿದ್ದಾರೆ. ಅದರಲ್ಲಿ ಸತ್ಯವೂ ಇದೆ. ಇಂದ್ರ ಬಾಬು ಥರದ ಒಂದಷ್ಟು ಶಿವಣ್ಣನನ್ನು ಭಿನ್ನವಾಗಿ ಪ್ರೇಕ್ಷಕರೆದುರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಜೋಗಿ, ಟಗರು, ಮಫ್ತಿ ಮುಂತಾದ ಸಿನಿಮಾದ ಮೂಲಕವೂ ಆ ಥರದ ವಿದ್ಯಮಾನಗಳು ಘಟಿಸಿವೆ. ಆದರೆ, ಮಿಕ್ಕ ಸಿನಿಮಾ ಮಂದಿ ಅದೇ ಮಚ್ಚು ಲಾಂಗುಗಳಿಗೆ ಶಿವಣ್ಣನನ್ನು ಸೀಮಿತಗೊಳಿಸಿದ್ದಾರೆ. ಹಾಗಂತ ಇದರಲ್ಲಿ ಬರೀ ಸಿನಿಮಾ ಮಾಡೋ ಮಂದಿಯದ್ದೇ ತಪ್ಪಿದೆ ಅಂದುಕೊಳ್ಳುವಂತಿಲ್ಲ. ಶಿವರಾಜ್ ಕಮಾರ್ ಆಯ್ಕೆಯ ವಿಚಾರದಲ್ಲಿ ಅಡಿಗಡಿಗೆ ಎಡವುತ್ತಾ ಬಂದಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಭಿಮಾನಿಗಳೇ ಕೊಸರಿಕೊಳ್ಳುವಂಥಾ ಕಸಗಳನ್ನೂ ಕಣ್ಣಿಗೊತ್ತಿಕೊಂಡಂತೆ ಒಪ್ಪಿಕೊಂಡಿದ್ದಾರೆ.
ಒಂದು ಬಗೆಯ ಸಿನಿಮಾಗಳು ಗೆದ್ದರೆ, ಒಂದು ಶೇಡಿನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾದರೆ, ಅಂಥಾದ್ದರ ಬಾಲ ಹಿಡಿದು ಹೊರಡೋದು ಮಾತ್ರವಲ್ಲ; ಅದಕ್ಕೇ ನೇಣು ಹಾಕಿಕೊಂಡು ಬಿಡುವ ಮಹಾನ್ ಪ್ರತಿಭೆಗಳೂ ನಮ್ಮಲ್ಲಿವೆ. ಅಂಥಾ ಪ್ರಬೃತ್ತಿಗಳೆಲ್ಲ ಈಗಾಗಲೇ ಜೈಲರ್ ಚಿತ್ರದ ನರಸಿಂಹನ ಅವತಾರವನ್ನು ಬಗೆ ಬಗೆಯಲ್ಲಿ ಹಿಂಡಲು ತಯಾರಿ ಮಾಡಿಕೊಂಡಿರಲೂ ಬಹುದು. ನರಸಿಂಹನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆಯಲ್ಲಾ? ಶಿವಣ್ಣನನ್ನು ಅದಕ್ಕಿಂತಲೂ ಎಫೆಕ್ಟಿವ್ ಅನ್ನಿಸುವಂಥಾ ಪಾತ್ರದಲ್ಲಿ ಕಾಣಿಸಬೇಕು, ಪ್ರೇಕ್ಷಕರಿಗೆ ಸರ್‍ಪ್ರೈಸ್ ಕೊಡಬೇಕೆಂದು ಹೊರಡೋ ಕ್ರಿಯಶೀಲ ಮನಸುಗಳಿಗಿಲ್ಲಿ ಬರವಿದೆ. ಇದೆಲ್ಲ ಏನೇ ಇದ್ದರೂ ಪ್ಯಾನಿಂಡಿಯಾ ಮಟ್ಟದಲ್ಲಿ ಶಿವಣ್ಣನ ಖದರ್ ಹಬ್ಬಿಕೊಂಡಿದೆ. ಪರಭಾಷಾ ಮಂದಿ ಕೂಡಾ ಆ ಪಾತ್ರ ಇನ್ನಷ್ಟು ಕಾಣಿಸಿಕೊಳ್ಳಬೇಕಿತ್ತೆಂಬ ಬಯಕೆಯಿಟ್ಟುಕೊಂಡೇ ಚಿತ್ರಮಂದಿರಗಳಿಂದ ತೆರಳುತ್ತಿದ್ದಾರೆ. ಅಷ್ಟರಮಟ್ಟಿಗೆ ನಮ್ಮ ಶಿವಣ್ಣನ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿರೋದು ಎಲರೂ ಹೆಮ್ಮೆ ಪಡುವ ಸಂಗತಿ!