ಸಾಹಸ ಸಿಂಹ ಡಾ.ವಿಷ್ಣುವರ್ಧನ್ (dr vishnuvardhan) ಎಂಬ ದೈತ್ಯ ವ್ಯಕ್ತಿತ್ವದ ಆಪ್ತ ನೆರಳು, ಅದರ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ದಕ್ಕಿದ್ದ ಅಪ್ರಯತ್ನಪೂರ್ವಕ ಮೈಲೇಜು ಮತ್ತು ನಟನಾಗಿ ನೆಲೆ ಕಂಡುಕೊಳ್ಳಬಹುದಾದ ಒಂದಷ್ಟು ಪ್ರತಿಭೆ… ಇಷ್ಟೆಲ್ಲ ಇದ್ದರೂ ಕೂಡಾ ನಾಯಕನಾಗಿ ಕಾಲೂರಿ ನಿಲ್ಲುವಲ್ಲಿ ಎಡವುತ್ತಾ ಬಂದಿದ್ದವರು (anirudh jatkar) ಅನಿರುದ್ಧ್ ಜಟ್ಕರ್. ಹೀಗೆ ಹಿರಿತೆರೆಯಲ್ಲಿ ಏದುಸಿರು ಬಿಡುತ್ತಾ, ಒಂದಷ್ಟು ವರ್ಷಗಳ ಕಾಲ ಮರೆಯಾದಂತಿದ್ದ ಅನಿರುದ್ಧ್ ಪಾಲಿಗೆ ಜೊತೆ ಜೊತೆಯಲಿ ಅಂತೊಂದು ಸೀರಿಯಲ್ಲು ಅಕ್ಷರಶಃ ವರವಾಗಿ ಸಿಕ್ಕಿತ್ತು. ಅಲ್ಲೂ ವರಾತ ಶುರುವಿಟ್ಟುಕೊಂಡು, ವಿವಾದವೊಂದನ್ನು ಮಮೇಲೆಳೆದುಕೊಂಡಿದ್ದವರು ಅನಿರುದ್ಧ್. ಆ ನಂತರದಲ್ಲಿ ಅನಿರುದ್ಧನ ಅಭಿಮಾನಿಗಳಲ್ಲಿದ್ದದ್ದು ಮುಂದೇನೆಂಬ ಪ್ರಶ್ನಾರ್ಥಕ ಭಾವ. ಅದಕ್ಕೀಗ (chef chidambara) `ಚೆಫ್ ಚಿದಂಬರ’ನ ಸ್ವರೂಪದಲ್ಲಿ ರೋಮಾಂಚಕ ಉತ್ತರವೇ ಸಿಕ್ಕಿಬಿಟ್ಟಿದೆ!
ಒಂದು ಅಗ್ನಿಪರೀಕ್ಷೆಯಂಥಾ ಕಾಲಮಾನ ಬಹುತೇಕರ ಬದುಕಿಲ್ಲಿ ಆಯಾಚಿತವಾಗಿ ಎದುರಾಗಿ ಬಿಡೋದಿದೆ. ಅದಕ್ಕೆ ಹೇಗೆ ಎದೆಗೊಟ್ಟು ಮುಂದುವರೆಯುತ್ತೇವೆ? ಆದ ಅವಮಾನಗಳನ್ನು ಅದೆಷ್ಟು ಕೆಚ್ಚಿನಿಂದ ಎದುರುಗೊಳ್ಳುತ್ತೇವೆ, ಅದೆಂಥಾ ಆಕ್ರೋಶವನ್ನು ಮನಸಿಗೆ ತುಂಬಿಕೊಂಡು ಮೇಲೆದ್ದು ನಿಲ್ಲುತ್ತೇವೆಂಬುದರ ಮೇಲೆ ಮುಂಬರುವ ಮಹಾ ಗೆಲುವೊಂದರ ಸೂಕ್ಷ್ಮ ಅಡಗಿರುತ್ತೆ. ಜೊತೆ ಜೊತೆಯಲಿ ಸೀರಿಯಲ್ ವಿವಾದದಲ್ಲಿ ಅನಿರುದ್ಧನ ಈಗೋ ಕೆಲಸ ಮಾಡಿದ್ದದ್ದು ನಿಜ. ಆದರೆ, ಅದರ ಆಸುಪಾಸಿನಲ್ಲಿಯೇ ಒಂದಷ್ಟು ಟೀಕೆಗಳು, ಮೂದಲಿಕೆಗಳು ಕೇಳಿ ಬಂದವಲ್ಲಾ? ಅದೆಲ್ಲವಕ್ಕೂ ಕಾರ್ಯರೂಪದಲ್ಲೇ ಉತ್ತರಿಸುವ ನಿರ್ಧಾರಕ್ಕೆ ಅನಿರುದ್ಧ ಬಂದಂತಿದೆ. ಅದು ನಿಜಕ್ಕೂ ತೂಕದ ನಿರ್ಧಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಸದ್ಯ ಸದ್ದು ಮಾಡುತ್ತಿರುವ ಚೆಫ್ ಚಿದಂಬರ ಚಿತ್ರ ತನ್ನ ಮೇಲೆ ಬಂದಿದ್ದ ಆರೋಪಗಳೆಲ್ಲವಕ್ಕೆ ಕೊಟ್ಟಿರೋ ಕ್ರಿಯಾಶೀಲ ಉತ್ತರವಾಗಿ ಕಾಣಿಸುತ್ತಿದೆ!
ಒಂದು ಮೂಲದ ಪ್ರಕಾರ, ಜೊತೆ ಜೊತೆಯಲಿ ಸೀರಿಯಲ್ ವಿವಾದದ ನಂತರ ಅನಿರುದ್ಧ್ ಮುಂದೆ ಸಿನಿಮಾ ಅವಕಾಶಗಳ ಸಂತೆಯೇ ನೆರೆದಿತ್ತು. ಅದು ಆ ಧಾರಾವಾಹಿ ಅನಿರುದ್ಧ್ ಗೆ ಕೊಡಮಾಡಿದ್ದ ನೇಮು ಫೇಮುಗಳ ಪರಿಣಾಮ. ಹೇಗೂ ಅನಿರುದ್ಧ್ ಜೊತೆಜೊತೆಯಲಿ ಸೀರಿಯಲ್ ಕಾಣದಿಂ ಖ್ಯಾತಿಯ ಉತ್ತುಂಗಕ್ಕೇರಿದ್ರು. ಅವರನ್ನು ನಾಯಕನನ್ನಾಗಿಸಿಕೊಂಡು ಸಿನಿಮಾ ಮಾಡಿದರೆ ತಕ್ಕ ಮಟ್ಟಿನ ಗೆಲುವಿಗೆ ತತ್ವಾರವಿಲ್ಲ ಎಂಬುದು ಅನೇಕರ ಲೆಕ್ಕಾಚಾರವಾಗಿತ್ತು. ಅಂಥಾ ವ್ಯಾವಹಾರಿಕ ಉದ್ದೇಶದ ಸರಕುಗಳನ್ನೆಲ್ಲ ತಣ್ಣಗೆ ನಿರಾಕರಿಸುತ್ತಾ ಬಂದಿದ್ದವರು ಅನಿರುದ್ಧ್. ಅದು ನಿಜಕ್ಕೂ ಜಾಣ ನಡೆ. ಅದರ ಫಲವೆಂಬಂತೆ ಕಡೆಗೂ ಚೆಫ್ ಚಿದಂಬರ ಎಂಬ ಭಿನ್ನ ಕಥಾನಕವೊಂದು ಅವರನ್ನರಸಿ ಬಂದಿದೆ.
ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವವರು ಆನಂದ್ ರಾಜ್. ಈಗಾಗಲೇ ಇದರ ಕಥಾನಕ ಭಿನ್ನವಾಗಿಎ ಎಂಬಂಥಾ ಸ್ಪಷ್ಟ ಕುರುಹುಗಳು ಜಾಹೀರಾಗಿವೆ. ಫಸ್ಟ್ ಲುಕ್ ಹೊರ ಬಂದಾಗಲೇ ಪ್ರೇಕ್ಷಕರು ಅರತ್ತ ಅಚ್ಚರಿಯ ನೋಟ ಬೀರಿದ್ದರು. ಇದೀಗ ಕ್ಯಾರೆಟರ್ ಟೀಸರ್ ಕೂಡಾ ಹೊರ ಬಂದಿದೆ. ಅದರಲ್ಲಿ ಕಾಣಿಸಿರುವ ಕೆಲವೊಂದು ಅಂಶಗಳು ಚೆಫ್ ಚಿದಂಬರನನ್ನು ನಿರೀಕ್ಷೆಯ ಉತ್ತುಂಗಕ್ಕೇರಿಸಿ ನಿಲ್ಲಿಸಿದೆ. ಈ ಮೂಲಕ ನಿರ್ದೇಶಕರು ಹೊಸತೊಂದು ಲೋಕವನ್ನು ತೆರೆದಿಡೋದು ಖಚಿತ ಎಂಬ ಭರವಸೆಯೂ ಮೂಡಿಕೊಂಡಿದೆ. ಅನಿರುದ್ಧ್ ಭಿನ್ನ ಬಗೆಯ ಪಾತ್ರವನ್ನು ನಿರ್ವಹಿಸಿರೋದೂ ನಿಚ್ಛಳವಾಗಿದೆ.
ಹಾಗಾದರೆ, ಈ ಸಿನಿಮಾ ಯಾವ ಬಗೆಯದ್ದು? ಕಥಾ ಹಂದರ ಹೇಗಿರಲಿದೆ ಅಂತೆಲ್ಲ ಪ್ರಶ್ನೆಗಳೇಳೋದು ಸಹಜ. ಇದೊಂದು ಡಾರ್ಕ್ ಕಾಮಿಇ ಬೇಸಿನ ಚಿತ್ರ. ಒಂದು ಕೊಲೆಯ ಸುತ್ತ ಇಲ್ಲಿನ ದೃಷ್ಯಗಳು ಕದಲುತ್ತವಂತೆ. ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ರೂಪ ಡಿಎನ್ ನಿರ್ಮಾಣ ಮಾಡತ್ತಿರುವ ಚೆಫ್ ಚಿದಂಬರನಿಗೆ ಶರತ್ ಲೋಹಿತಾಶ್ವ ಸೇರಿದಂತೆ ಘಟಾನುಘಟಿ ಕಲಾವಿದರ ದಂಡು ಸಾಥ್ ಕೊಟ್ಟಿದೆ. ಒಟ್ಟಾರೆಯಾಗಿ, ಚೆಫ್ ಚಿದಂಬರನಾಗಿ ಅನಿರುದ್ಧ್ ಜಟ್ಕರ್ ಮೇಲೆದ್ದು ನಿಲ್ಲುವ, ಗೆದ್ದು ಓರಿಸುವ ಲಕ್ಷಣಗಳು ಸದ್ಯಕ್ಕಂತೂ ಢಾಳಾಗಿ ಕಾಣಿಸುತ್ತಿವೆ. ಪ್ರೇಕ್ಷಕ ವಲಯವಂತೂ ಈ ಸಿನಿಮಾಕ್ಕಾಗಿ ಥ್ರಿಲ್ ಆಗಿ ಕಾಯುತ್ತಿದೆ. ಎಲ್ಲರ ನಿರೀಕ್ಷೆಗಳೂ ನಿಜವಾದೀತಾ ಎಂಬುದಕ್ಕೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ!