ಕನ್ನಡ ಚಿತ್ರರಂಗಕ್ಕೆ ಮತ್ತೆ ಸಾವಿನ ಸೂತಕ ಕವುಚಿಕೊಂಡಿದೆ. ಅಪ್ಪು (puneeth rajkumar) ಇನ್ನಿಲ್ಲವಾದ ನೋವು ಜಿನುಗುತ್ತಿರುವಾಗಲೇ, ಅವರ ಸೊಸೆ, (vijay raghavendra) ವಿಜಯ ರಾಘವೇಂದ್ರರ ಮಡದಿ ಸ್ಪಂದನಾ (spandana) ಮತ್ತದೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹತ್ತಾರು ಪ್ರಶ್ನೆಗಳು ಉತ್ತರ ಕಾಣದೆ ಮೌನಮುಖಿಯಾಗಿವೆ. ಇದೇ ಹೊತ್ತಿನಲ್ಲಿ ಕೇರಳ ಮತ್ತು ತಮಿಳುನಾಡು ಚಿತ್ರರಂಗಕ್ಕೂ ಈಗ ಅಂಥಾದ್ದೇ ಒಂದು ಆಘಾತ ಎದುರಾಗಿಬಿಟ್ಟಿದೆ. ಮಲೆಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಅನೇಕ ಯಶಸ್ವೀ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ (director siddique) ಸಿದ್ಧಿಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಜನಿಸಿ, ಹಲವಾರು ಕಷ್ಟ ಕೋಟಲೆಗಳನ್ನೆದುರಿಸಿ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದವರು ಸಿದ್ಧಿಕಿ. ಕಾಬೂಲಿವಾಲ, ಗಾಡ್‌ಫಾದರ್‌ನಂಥಾ ಎವರ್‌ಗ್ರೀನ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಸಿದ್ಧಿಕಿ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈಗೊಂದಷ್ಟು ವರ್ಷಗಳಿಂದೀಚೆಗೆ ನೇಪಥ್ಯಕ್ಕೆ ಸರಿದಂತಿದ್ದ ಸಿದ್ಧಿಕಿಗೆ ನಿನ್ನೆ ದಿನ ಬೆಳಗಿನ ಹೊತ್ತಿಗೆಲ್ಲ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ವದ್ಯರು ಶತಪ್ರಯತ್ನ ನಡೆಸಿದರೂ ಕೂಡಾ ಉಪಯೋಗವಾಗಿರಲಿಲ್ಲ. ಸಿದ್ಧಿಕಿರಾತ್ರಿಯ ಹೊತ್ತಿಗೆಲ್ಲ ಉಸಿರು ನಿಲ್ಲಿಸಿದ್ದರು.
ಸಾಮಾನ್ಯ ಹುಡುಗನಾಗಿ, ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡೇ ಬೆಳೆದು ನಿಂತವು ಸಿದ್ಧಿಕಿ. ಅಂಥಾ ಪ್ರಯತ್ನದ ಫಲವಾಗಿಯೇ ೧೯೮೬ರಲ್ಲಿ ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್ ಚಿತ್ರಕ್ಕೆ ಚಿತ್ರಕಥೆ ಬರೆಯುವ ಅವಕಾಶ ಒದಗಿ ಬಂದಿತ್ತು. ಆ ಕಾಲಕ್ಕೆ ಹಿಟ್ ಆಗಿದ್ದ ಆ ಸಿನಿಮಾ ಸಿದ್ಧಿಕಿ ಪಾಲಿಗೆ ಹೊಸಾ ದಿಕ್ಕು ತೋರಿಸಿತ್ತು. ಆ ಬಳಿವೂ ಅದೇ ಹಾದಿಯಲ್ಲಿ ಮುಂದುವರೆದು ಬಂದಿದ್ದ ಸಿದ್ಧಿಕಿ, ೧೯೮೯ರಲ್ಲಿ ತೆರೆ ಕಂಡಿದ್ದ ರಾಮ್ ಜಿ ರಾವ್ ಸ್ಪೀಕಿಂಗ್ ಚಿತ್ರದ ಮೂಲಕ ಕನಸು ನನಸು ಮಾಡಿಕೊಂಡಿದ್ದರು. ಅದು ಅವರ ನಿರ್ದೇಶನದ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಆ ನಂತರ ತಮಿಳು, ತೆಲುಗು, ಹಿಂದಿಲ್ಲಿಯೂ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದ ಸಿದ್ಧಿಕಿ ಇನ್ನು ನೆನಪು ಮಾತ್ರ…