ಅಭಿಷೇಕ್ ಬಚ್ಚನ್ (abhishek bacchan new movie) ಹೊಸಾ ಆವೇಗದೊಂದಿಗೆ ಮರಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಗಾಗ ಒಂದಷ್ಟು ಸಿನಿಮಾಗಳಲ್ಲಿ ಅಭಿಷೇಕ್ ನಟಿಸುತ್ತಾ ಬಂದಿದ್ದಾರೆ. ಆದರೆ ಪುಷ್ಕಳ ಗೆಲುವು ಮಾತ್ರ ಅವರ ಪಾಲಿಗೆ ದಕ್ಕುತ್ತಿಲ್ಲ. ಬಾಬ್ ಬಿಸ್ವಾಸ್ ನಂತರದಲ್ಲಿ ಅಭಿಷೇಕ್ (abhishek) ಅದೇಕೋ ಚಿತ್ರರಂಗದಿಂದ ದೂರವುಳಿದಂತಿದ್ದರು. ಇದೀಗ ಅವರ ಮುಂದೆ ವಿಶಿಷ್ಟ ಅವಕಾಶವೊಂದು ತೆರೆದುಕೊಂಡಿದೆ; `ಘೂಮರ್’ (ghoomer) ಚಿತ್ರದ ಮೂಲಕ. ಬಾಲಿವುಡ್‍ನ ವಿಶಿಷ್ಟ ನಿರ್ದೇಶಕ (director bhalki) ಭಾಲ್ಕಿ ಈ ಸಿನಿಮಾವನ್ನು ಕೈಗೆತ್ತಿಕೊಂಡಾಗಲೇ ಪ್ರೇಕ್ಷಕರು ಥ್ರಿಲ್ ಆಗಿದ್ದರು. `ಘೂಮರ್’ ಬಗ್ಗೆ ಅಗಾಧ ನಿರೀಕ್ಷೆ ತಂತಾನೇ ಮೂಡಿಕೊಂಡಿದ್ದರ ಹಿಂದೆ ಭಾಲ್ಕಿಯ ಪ್ರಭೆ ಖಂಡಿತವಾಗಿಯೂ ಇದ್ದೇ ಇದೆ. ಇದೀಗ ಈ ಚಿತ್ರದ ಟ್ರೈಲರ್ (ghoomer trailer) ಬಿಡುಗಡೆಗೊಂಡಿದೆ. ಈ ಮೂಲಕ ಭಾಲ್ಕಿ ವೃತ್ತಿ ಬದುಕಿಗೆ ಮತ್ತೊಂದು ಮಹಾ ಗೆಲುವು ಜಮೆಯಾಗೋ ಲಕ್ಷಣಗಳು ದಟ್ಟವಾಗಿ ಗೋಚರಿಸಲಾರಂಭಿಸಿವೆ.
ನಿಖರವಾಗಿ ಹೇಳೋದಾದರೆ, ಘೂಮರ್ ಟ್ರೈಲರ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಅದರಲ್ಲಿ ಕಾಣಿಸಿರುವ ಅಭಿಷೇಕ್ ನಟನಯ ಝಲಕ್ಕುಗಳನ್ನು ಕಂಡು ನಿಜಕ್ಕೂ ಅಚ್ಚರಿಗೊಂಡಿದ್ದಾರೆ. ಇದೀಗ ದಕ್ಷಿಣದ ಯಶಸ್ಸಿನ ಬಿರುಗಾಳಿಯ ಮುಂದೆ ಬಾಲಿವುಡ್ ತತ್ತರಿಸಿದಂತೆ ಕಾಣುತ್ತಿದೆ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಬಾಲಿವುಡ್ ಮಂದಿ ಕೂಡಾ ಸ್ವಪ್ರತಿಷ್ಠೆಯ ಮುಸುಕಿನಲ್ಲಿ ಅಂಥಾದ್ದೊಂದು ಇಮೇಜನ್ನು ಅನೂಚಾನವಾಗಿ ಕಾಪಿಟ್ಟುಕೊಂಡು ಬಂದಿದ್ದರು. ಅದೆಲ್ಲವೂ ಈಗ ದಕ್ಷಿಣದ ಗೆಲುವಿನ ಭರಾಟೆಯ ಮುಂದೆ ಮುಸುಕಾಗಿದೆ.
ಇಂಥಾ ಹೊತ್ತಿನಲ್ಲಿ ಬಾಲಿವುಡ್ ಮಂದಿ ಹೊಸಾ ಸಾಧ್ಯತೆಗಳತ್ತ ಕೈಚಾಚೋದು ಮಾತ್ರವೇ ಅಸ್ವಿತ್ವ ಉಳಿಸಿಕೊಳ್ಳುವ ದಾರಿ ಎಂಬಂಥಾ ವಿಶ್ಲೇಷಣೆಗಳೂ ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಪಲ್ಲಟಗಳ ಭಾಗವಾಗಿ ಸದ್ಯಕ್ಕೆ ಘೂಮರ್ ಚಿತ್ರ ಕಾಣಿಸುತ್ತಿದೆ.ಅದರ ನಿರ್ದೇಶಕ ಭಾಲ್ಕಿ ತಮ್ಮ ಇದುವರೆಗಿನ ಯಶಸ್ವೀ ಫಾರ್ಮುಲಾವನ್ನೇ ಒಂದಷ್ಟು ಹೊಳಪಾಗಿಸಿ ಭಿನ್ನ ಕಥೆಯೊಂದನ್ನು ಮುಟ್ಟಿದ್ದಾರೆ. ಅದು ಮನಮುಟ್ಟುವಂತಿದೆ ಎಂಬುದರ ಮುನ್ಸೂಚನೆ ಈ ಟ್ರೈಲರ್ ಮೂಲಕ ನಿಖರವಾಗಿಯೇ ಸಿಕ್ಕಿದೆ. ಹಾಗೆ ನೋಡಿದರೆ, ನಿರ್ದೇಶಕನಾಗಿ ಭಾಲ್ಕಿಯದ್ದು ಭಿನ್ನ ಯಾನ. ಅಮಿತಾಭ್ ಬಚ್ಚನ್ ಜೊತೆಗೆ ಬಾಲ್ಕಿ ಮಾಡಿದ್ದ `ಚೀನಿ ಕಮ್’, `ಪಾ’ ಚಿತ್ರಗಳು ಅದೆಂಥಾ ಕಥನ ಹೊಂದಿದ್ದವೆಂಬುದು ಗೊತ್ತೇ ಇದೆ. ಆ ನಂತರ ಅಷಯ್ ಕುಮಾರನ ಪ್ಯಾಡ್‍ಮನ್ ಚಿತ್ರ ನಿರ್ದೇಶನ ಮಡಿ ಗೆದ್ದಿದ್ದದ್ದೂ ಇದೇ ಭಾಲ್ಕಿ!
ಇಂಥಾ ನಿರ್ದೇಶಕ ಘೂಮರ್ ಚಿತ್ರದಲ್ಲಿ ಒಂದು ರಿಯಲಿಸ್ಟಿಕ್ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆದುಕೊಂಡು, ಅದರ ಮೂಲಕವೇ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಹಂಗೇರಿಯಾದ ಒಂಟಿ ಕೈ ಶೂಟರ್ ಕೆರೋಲಿ ಟ್ಯಾಕ್ಯಾಕ್ಸ್ ಬದುಕಿನಿಂದ ರೇರಣ ಪಡೆ ಭಾಲ್ಕಿ ಈ ಕಥೆ ಸೃಷ್ಟಿಸಿದ್ದಾರೆ. ಹಾಗಂತ ಆ ಶೂಟರ್ ಬದುಕಿನ ಕಥೆ ಇದಲ್ಲ. ಇಲ್ಲಿ ಆ ಪಾತ್ರ ಆಕ್ಸಿಡೆಂಟಿನಲ್ಲಿ ಒಂದು ಕೈ ಕಳೆದುಕೊಂಡ ಲೇಡಿ ಕ್ರಿಕೆಟರ್ ಆಗಿ ಮಾರ್ಪಾಟುಗೊಂಡಿದೆ. ಒಬ್ಬ ಕೋಚ್ ಬೆಂಬಲದಿಂದ ಒಂದು ಕೈನಲ್ಲೇ ಬೌಲರ್ ಆಗಿ ನೆಲೆ ಕಂಡುಕೊಳ್ಳುವ ಯಾನವನ್ನಿಲ್ಲಿ ಮನಮುಟ್ಟುವಂತೆ ದಾಖಲಿಸಿರುವ ಲಕ್ಷಣಗಳಿವೆ. ಕೋಚ್ ಆಗಿ ನಟಿಸಿರು ಅಭಿಷೇಕ್ ಅಂತೂ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅಂದಹಾಗೆ ಘೂಮರ್ ಅಂದರೆ ತಿರುಗುವ ಅಂತ ಅರ್ಥವಿದೆಯಂತೆ. ಈ ಟ್ರೈಲರ್ ನೋಡಿದವರೆಲ್ಲರ ಮನಸೀಗ ಆ ಸಿನಿಮಾದತ್ತಲೇ ತಿರುಗಿಕೊಂಡಿದೆ!