ಕನಿಷ್ಠ ಮಾನವೀಯತೆಯ ನೆಲೆಯಲ್ಲಿ ಆಲೋಚಿಸುವ ಶಕ್ತಿ ಇಲ್ಲದ ಪಡೆಯೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಂಡಿದೆ. ಅಂಥಾ ಎಲಿಮೆಂಟುಗಳ ಪಾಲಿಗೆ ಯಾರದ್ದೋ ದುಃಖ, ಖಾಸಗೀ ಬದುಕಿನ ಕಿಸುರು, ಮತ್ಯಾರದ್ದೋ ಬಗೆಗಿನ ಗಾಳಿಸುದ್ದಿಗಳೆಲ್ಲವೂ ಮೈಲೇಜು ನೀಡುವ ಸರಕುಗಳಷ್ಟೇ. ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಗಾಸಿಪ್ಪುಗಳು ಮಾಮೂಲು. ಅದು ಪ್ರಿಂಟ್ ಮೀಡಿಯಾ ಜಮಾನದಿಂದಲೂ ಚಾಲ್ತಿಯಲ್ಲಿದ್ದಂಥಾದ್ದೇ. ಆದರೆ, ಸಾಮಾಜಿಕ ಜಾಲತಾಣಗಳ ಭರಾಟೆಗಳಲ್ಲಿ ಅದು ಸೂಕ್ಷ್ಮತೆಯ ಗಡಿ ದಾಟಿಕೊಂಡಿದೆ. ಅದರ ಫಲವಾಗಿಯೇ ಇದೀಗ ಅತೀವ ಯಾತನೆಯ ಕಾಯಿಲೆಯೊಂದಕ್ಕೆ ತುತ್ತಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಮಂತಾ (samantha) ಬಗೆಗೂ ಚಿತ್ರವಿಚಿತ್ರ ರೂಮರುಗಳು ಹಬ್ಬಿಕೊಳ್ಳುತ್ತಿವೆ.
ಅದರ ಭಾಗವಾಗಿಯೇ ಇತ್ತೀಚೆಗೆ ಟಾಲಿವುಡ್ ಸೀಮೆಯಿಂದ ಭಯಂಕರ ಸುದ್ದಿಯೊಂದು ಹರಡಿಕೊಂಡಿತ್ತು. ಸೂಪರ್ ಸ್ಟಾರ್ ಒಬ್ಬ ಸಮಂತಾಳ ಚಿಕಿತ್ಸಾ ವೆಚ್ಚವಾದ ಇಪ್ಪತೈದು ಕೋಟಿಗೆ ವ್ಯವಸ್ಥೆ ಮಾಡಿದ್ದಾನೆಂಬುದು ಆ ರೂಮರಿನ ಸಾರಾಂಶ. ಯಾವಾಗ ಸಮಂತಾಳ ಖಾಸಗಿ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತೋ, ಆ ಕ್ಷಣದಿಂದಲೇ ಆಕೆಯ ಬಗ್ಗೆ ಚಿತ್ರವಿಚಿತ್ರ ಅಂತೆಕಂತೆಗಳು ಹುಟ್ಟಿಕೊಂಡಿದ್ದವು. ಆಕೆ ಯಾರ ಪಕ್ಕದಲ್ಲಿ ಕಾಣಿಸಿಕೊಂಡರೂ ಸಂಬಂಧವನ್ನೇ ಕಲ್ಪಿಸುವ ಕೀಳು ಮಟ್ಟಕ್ಕೂ ಕೆಲ ಮಂದಿ ಇಳಿದಿದ್ದರು. ಆದರೆ, ಅದ್ಯಾವುದಕ್ಕೂ ಸಮಂತಾ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ, ಮೊದಲ ಸಲ ಈ ಇಪ್ಪತೈದು ಕೋಟಿ ಮ್ಯಾಟರಿನ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಪ್ರಿಯಿಸಿದ್ದಾಳೆ.
ತಾನು ಚಿಕಿತ್ಸೆ ಪಡೆದುಕೊಳ್ಳುತ್ತಿರೋದು ನಿಜ. ಆದರೆ ಅದಕ್ಕೆ ಇಪ್ಪತೈದು ಕೋಟಿ ಖರ್ಚಾಗುತ್ತದೆಂಬುದೊಂದು ಕಲ್ಪನೆಯಷ್ಟೇ. ತನ್ನ ದುಡಿಮೆಯ ಒಂದಷ್ಟು ಭಾಗವನ್ನಷ್ಟೇ ಚಿಕಿತ್ಸೆಗೆಂದು ಬಳಸಿರೋದಾಗಿ ಸಮಂತಾ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ತನಗೆ ಬಂದಿರೋದು ಒಂಷ್ಟು ಜನರನ್ನು ಕಾಡುವ ಕಾಯಿಲೆಯೇ. ಅದರ ಸುತ್ತ ಹೀಗೆ ಬೇಕಾಬಿಟ್ಟಿ ರೂಮರುಗಳನ್ನು ಹಬ್ಬಿಸೋದು ಸರಿಯಲ್ಲ ಎಂಬರ್ಥದಲ್ಲಿ ಆಕೆ ಬರೆದುಕೊಂಡಿದ್ದಾಳೆ. ಸೂಕ್ಷ್ಮವಾಗಿ ನೋಡಿದರೆ, ಆ ಸ್ಪಷ್ಟೀಕರಣದ ಹಿಂದೆಯೂ ನೋವಿದೆ. ಯಾಕೆಂದರೆ, ಇಪ್ಪತೈದು ಕೋಟಿ ಮ್ಯಾಟರಿನ ಮೂಲಕ ಅದ್ಯಾರೋ ಸೂಪರ್ ಸ್ಟಾರ್ ಜೊತೆ ಸಮಂತಾಗೆ ಅಫೇರಿದೆ ಎಂಬಂತೆ ಬಿಂಬಿಸುವ ಹುನ್ನಾರವೂ ಇಲ್ಲದಿಲ್ಲ. ಸದ್ಯ ಸಮಂತಾ ಅದಕ್ಕೆ ಬ್ರೇಕ್ ಹಾಕಿದ್ದಾಳೆ.