ಕಮರ್ಶಿಯಲ್ ಸಿನಿಮಾಗಳಲ್ಲಿ ನಯಕಿಯಾಗಿ, ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳಬೇಕು… ಅದಾಗ ತಾನೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಯನ್ನು ನಿಲ್ಲಿಸಿ ಕೇಳಿದರೂ ಇಂಥಾದ್ದೊಂದು ಸುಪ್ತ ಬಯಕೆ ಸ್ಪಷ್ಟವಾಗಿಯೇ ಹೊಮ್ಮಿಕೊಳ್ಳುತ್ತೆ. ಅದು ಸದ್ಯದ ಮಟ್ಟಿಗೆ ಸಾರ್ವತ್ರಿಕ ಮನಃಸ್ಥಿತಿ. ಇಂಥವರ ನಡುವೆ ಪಾತ್ರ ಯಾವುದೇ ಇದ್ದರೂ ಸರಿ; ಅದು ಸವಾಲಿನದ್ದಾಗಿರಬೇಕು, ಪೇಕ್ಷಕರ ಮನಸಿಗೆ ನಾಟುವಂತಿರಬೇಕೆಂಬ ಬಯಕೆ ಹೊಂದಿರುವ ನಟ ನಟಿಯರ ಸಂಖ್ಯೆ ತೀರಾ ವಿರಳ. ಆ ಯಾದಿಯಲ್ಲಿ ಸದ್ಯದ ಮಟ್ಟಿಗೆ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿರುವವರು (archana kottige) ಅರ್ಚನಾ ಕೊಟ್ಟಿಗೆ. ಆರಂಭದಿಂದ ಇಲ್ಲಿಯವರೆಗೂ ವಿಶಿಷ್ಟವಾದ ಪಾತ್ರಗಳಲ್ಲಿಯೇ ಅರ್ಚನಾ ಗುರುತಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಳ್ಳುವ ಒಟ್ಟಾರೆ ಸಿನಿಮಾಗಳಲ್ಲಿ ಒಂದಷ್ಟರಲ್ಲಾದರೂ (archana) ಅರ್ಚನಾರ ಇರುವಿಕೆ ಇದ್ದೇ ಇರುತ್ತದೆ ಎಂಬಂಥಾ ವಾತಾವರಣವಿದೆ. ಇನ್ನು ಮುಂದಂತೂ ಅರ್ಚನಾ ಕೊಟ್ಟಿಗೆ ನಟಿಸಿರುವ ಚಿತ್ರಗಳೆಲ್ಲ ಒಟ್ಟೊಟ್ಟಿಗೇ ಬಿಡುಗಡೆಗೊಳ್ಳಲು ತಯಾರಾಗಿವೆ!
ಇತ್ತೀಚೆಗೆ ಬಿಡುಗಡೆಗೊಂಡು ಒಂದಷ್ಟು ಯಶಸ್ವೀ ಪ್ರದರ್ಶನ ಕಾಣುತ್ತಿರುವ ಚಿತ್ರ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಅದರಲ್ಲಿಯೂ ಚೆಂದದ್ದೊಂದು ಪಾತ್ರವನ್ನು ಅರ್ಚನಾ ನಿಭಾಯಿಸಿದ್ದಾರೆ. ಅದೂ ಕೂಡಾ ನೋಡುಗರೆಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ. ಈ ಹಿಂದೆ ಬಿಡುಗಡೆಗೊಂಡು ಭಾರೀ ಕ್ರೇಜ್ ಸೃಷ್ಟಿಸಿದ್ದ `ಹೊಂದಿಸಿ ಬರೆಯಿರಿ’ ಚಿತ್ರದಲ್ಲಿಯೂ ಕೂಡಾ ಅರ್ಚನಾ ಒಂದು ಪಾತ್ರವಾಗಿದ್ದರು. ಹೀಗೆ ಬಿಡುಗಡೆಗೊಳ್ಳುವ ಬಹುತೇಕ ಭಿನ್ನ ಬಗೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ಪಾಲಿಗೆ ಮುಂಬರುವ ದಿನಗಳೆಲ್ಲವೂ ಸುಗ್ಗಿ ಸಂಭ್ರಮವನ್ನು ತಂದೊಡ್ಡುವ ಸಾಧ್ಯತೆಗಳಿದ್ದಾವೆ. ಯಾಕೆಂದರೆ, ಈಗೊಂದಷ್ಟು ವರ್ಷಗಳಿಂದೀಚೆಗೆ ಅರ್ಚನಾ ಧ್ಯಾನಸ್ಥರಾಗಿ ನಟಿಸಿದ್ದ ಚಿತ್ರಗಳೆಲ್ಲವೂ ಸರದಿಯೋಪಾದಿಯಲ್ಲಿ ಬಿಡುಗಡೆಗೊಳ್ಳಲು ಸನ್ನದ್ಧವಾಗಿವೆ.
ಬಯಲುಸೀಮೆ, ಜುಗಲ್ಬಂಧಿ, ಎಲ್ರ ಕಾಲೆಳೆಯುತ್ತೆ ಕಾಲ ಮುಂತಾದ ಚಿತ್ರಗಳೀಗ ಬಿಡುಗಡೆಗೆ ಸನ್ನದ್ಧಗೊಂಡಿವೆ. ಅದೆಲ್ಲದರಲ್ಲಿಯೂ ಥರ ಥರದ ಪಾತ್ರಗಳನ್ನು ಅರ್ಚನಾ ಕೊಟ್ಟಿಗೆ ನಿಭಾಯಿಸಿದ್ದಾರೆ. ಜುಗಲ್ಬಂಧಿ ಚಿತ್ರದಲ್ಲಿ ನೆಗೆಟಿವ್ ಶೇಡಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಬಯಲುಸೀಮೆ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ನಟಿಸಿದ್ದಾರೆ. ಎಲ್ರ ಕಾಲೆಳೆಯುತ್ತೆ ಕಾಲ ಸಿನಿಮಾದಲ್ಲಿ ಅರ್ಚನಾ ರ್ಯಾಪರ್ ಚಂದನ್ ಶೆಟ್ಟಿ ಜೋಡಿಯಾಗಿ ನಟಿಸಿದ್ದಾರೆ. ಡಬ್ಬ ಬಡಿಯುತ್ತೇ ಒಂದಷ್ಟು ಸದ್ದು ಮಾಡುತ್ತಾ ಬಂದಿರುವ ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ನಟನೆಗೂ ಇಳಿದಿದ್ದಾರೆ. ಇಲ್ಲಿ ಅರ್ಚನಾ ಕೊಟ್ಟಿಗೆ ಬಜಾರಿ ಹುಡುಗಿಯಾಗಿ ಚಂದನ್‍ಗೆ ಸಾಥ್ ಕೊಟ್ಟಿದ್ದಾರಂತೆ.
ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರದಲ್ಲೊಂದು ಪಾತ್ರ ನಿರ್ವಹಿಸುವ ಮೂಲಕ ನಟಿಯಾಗಿ ಪ್ರವರ್ಧಮಾನಕ್ಕೆ ಬಂದಿದ್ದವರು ಅರ್ಚನಾ ಕೊಟ್ಟಿಗೆ. ಹಾಂತ ಅದನ್ನ ಅವರ ಮೊದಲ ಇತ್ ಅಂದುಕೊಳ್ಳುವ ಹಾಗಿಲ್ಲ. ಐಟಿ ಕ್ರೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಚನಾ 2018ರಲ್ಲಿಯೇ ಅರಣ್ಯಕಾಂಡ್ ಅಂತೊಂದು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಮೇಡ್ ಇನ್ ಬೆಂಗಳೂರು, ಡಿಯರ್ ಸತ್ಯಾ, ಹೊಂದಿಸಿ ಬರೆಯಿರಿ, ಕಟಿಂಗ್ ಶಾಪ್ ಮುಂತಾದ ಚಿತ್ರಗಳಲ್ಲಿಯೂ ಅರ್ಚನಾ ಬಣ್ಣ ಹಚ್ಚಿದ್ದಾರೆ. ಗಮನೀಯ ಅಂಶವೆಂದರೆ, ಅರ್ಚನಾ ಕೊಟ್ಗೆ ಈ ವರೆಗೆ ನಟಿಸಿರುವ ಸಿನಿಮಾಗಳೆಲ್ಲವೂ ಭಿನ್ನ ಜಾಡಿನವುಗಳೇ. ಪಾತ್ರ ಯಾವುದೇ ಇದ್ದರೂ ಅದು ಪ್ರೇಕ್ಷಕರನ್ನು ಕಾಡುವಂತಿರಬೇಕು, ಒಳ್ಳೆ ನಟಿಯಾಗಿ ಗುರುತಿಸಿಕೊಳ್ಳಬೇಕೆಂಬ ಉತ್ಕಟ ಹಂಬಲ ಅರ್ಚನಾರಿಗಿದೆ. ಅದಕ್ಕೆ ಸರಿಯಾದ ಅವಕಾಶಗಳೇ ಅವರನ್ನು ಅರಸಿ ಬರುತ್ತಿವೆ.