ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ ಪ್ರಭೆಯಲ್ಲಿಯೇ ನಟಿಯಾಗಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿರುವವರು (nimika ratnakar) ನಿಮಿಕಾ ರತ್ನಾಕರ್. ಚಾಲೆಂಜಿಂಗ್ ಸ್ಟಾರ್ ದರ್ಶನ್ (darshan) ಅಭಿನಯದ `ಕ್ರಾಂತಿ’ (kranthi) ಚಿತ್ರದಲ್ಲಿ ಶೇಖ್ ಇಟ್ ಪುಷ್ಪವತಿ ಎಂಬ ಹಾಡೊಂದು ಭಾರೀ ಜನಪ್ರಿಯಗೊಂಡಿತ್ತಲ್ಲಾ? ಅದರಲ್ಲಿ ದರ್ಶನ್ ಜೊತೆ ಹೆಜ್ಜೆ ಹಾಕುವ ಮೂಲಕ ಮುನ್ನೆಲೆಗೆ ಬಂದಿದ್ದಕೆ ನಿಮಿಕಾ. ಈಗಂತೂ ಪುಷ್ಪವತಿ ಎಂಬ ಬಿರುದು ಈಕೆಯ ಹೆಸರಿನ ಮುಂದೆ ಸೇರಿಕೊಂಡಿದೆ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಕೂಡಾ ನಿಮಿಕಾರನ್ನು ಆರಾಧಿಸಲಾರಂಭಿಸಿದ್ದಾರೆ. ಇದೀಗ (trishulam) ತ್ರಿಶೂಲಂ ಚಿತ್ರದ ನಾಯಕಿಯಾಗಿ, ಉಪ್ಪಿಗೆ ಜೋಡಿಯಾಗಿರುವ ನಿಮಿಕಾಗಿಂದು ಹುಟ್ಟುಹಬ್ಬದ ಸಂಭ್ರಮ!
ನಿಮಿಕಾ ಮೂಲತಃ ಮಂದಳೂರಿನ ಹುಡುಗಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ಶಾಲಾ ಕಾಲೇಜು ದಿನಗಳಲ್ಲಿಯೇ ಗಾಯನದಲ್ಲಿ ಆಸಕ್ತಿ ಹಿಒಂದಿದ್ದ ನಿಮಿಕಾ ಪಾಲಿಗೆ, ಆ ಕಾಲಕ್ಕೆ ಸಿಂಗರ್ ಆಗಬೇಕೆಂಬ ಮಹದಾಸೆ ಇತ್ತಂತೆ. ಆದರೆ, ಬದುಕಿನ ಸೆಳವಿಗೆ ಸಿಕ್ಕು ಇಂಜನಿಯರ್ ಆದ ಮೇಲೂ ಕೂಡಾ, ಆ ದಿಕ್ಕಿನಲ್ಲಿ ಪ್ರಯತ್ನ ಸದಾ ಚಾಲ್ತಿಯಲ್ಲಿತ್ತು. ಅದರ ಭಾಗವಾಗಿಯೇ ನಿಮಿಕಾ `ಮದಿಪು’ ಅಂತೊಂದು ತುಳು ಚಿತ್ರಕ್ಕೊಂದು ಹಾಡು ಹಾಡಿದ್ದರು. ಅದಾದ ಬಳಿಕ ನಟನೆಯತ್ತ ಆಸಕ್ತಿ ಬೆಳೇಸಿಕೊಂಡಿದ್ದ ನಿಮಿಕಾ, ರಾಮಧಾನ್ಯ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಹಾದಿಯಲ್ಲಿ ಅಚ್ಚರಿಯಂತೆ ಅವರನ್ನೆದುರುಗೊಂಡಿದ್ದದ್ದು ಕ್ರಾಂತಿ ಚಿತ್ರದ ಪುಷ್ಪವತಿ ಹಾಡಿನಲ್ಲಿ ದರ್ಶನ್ ಜೊತೆ ಕುಣಿಯುವ ಅವಕಾಶ!
ಆ ಹಾಡಂತೂ ನಿಮಿಕಾಗೆ ಇನ್ನಿಲ್ಲದಂತೆ ಪ್ರಚಾರ ತಂದುಕೊಟ್ಟಿದೆ. ದರ್ಶನ್ ಅಭಿಮಾನಿಗಳ ಅಮೋಘವಾದ ಪ್ರೀತಿಯೂ ದಕ್ಕಿದೆ. ಅಂಥಾ ಅಭಿಮಾನಿ ಬಳಗವಿಂದು ನಿಮಿಕಾರ ಮನೆಗಾಗಮಿಸಿ ಶುಭ ಕೋರಿದೆ. ನೆಚ್ಚಿನ ನಟಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆ. ಈ ಹುಟ್ಟುಹಬ್ಬದ ವಾತಾವರಣದಲ್ಲಿಯೇ ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ತ್ರಿಶೂಲಂ ಚಿತ್ರ ಚಿತ್ರೀಕರಣ ಮುಗಿಸಿಕೊಂಡಿರುವ ಖುಷಿಯೂ ನಮಿಕಾರ ಜೊತಗೂಡಿದೆ. ಸದ್ಯದ ಮಟ್ಟಿಗೆ ತ್ರಿಶೂಲಂ ಬಗ್ಗೆ ನಿಮಿಕಾ ಅಗಾಧ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ ಒಂದಷ್ಟು ಚೆಂದದ ಅನುಭವಗಳನ್ನು ಕೊಡಮಾಡಿದೆ. ಆರಂಭದಿಂದಲೂ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರನ್ನು ಆರಾಧಿಕಸುತ್ತಾ ಬೆಳೆದು ಬಂದವರು ನಿಮಿಕಾ. ತ್ರಿಶೂಲಂ ಚಿತ್ರದಲ್ಲಿ ಅದೇ ರವಿಮಾಮಾ ಜೊತೆ ತೆರೆಹಂಚಿಕೊಳ್ಳುವ ಸುಯೋಗ ಕೂಡಿ ಬಂದಿರೋದು ಆಕೆಯನ್ನು ಥ್ರಿಲ್ ಆಗಿಸಿದೆ.
ಶೇಕ್ ಇಟ್ ಪುಷ್ಪವತಿ ಹಾಡಿನ ಕಾರಣದಿಂದ ಕರ್ನಾಟಕದ ಕ್ರಶ್ ಆಗಿಯೂ ನಿಮಿಕಾ ರತ್ನಾಕರ್ ಪ್ರಸಿದ್ಧಿ ಪಡೆದುಕೊಂಡಿದ್ದರು. ತ್ರಿಶೂಲಂ ನಂತರದಲ್ಲಿ ಆ ಯಶದ ಪ್ರಭೆ ಮತ್ತಷ್ಟು ಪ್ರಜ್ವಲಿಸಬಹುದೆಂಬ ನಿರೀಕ್ಷೆ ನಿಮಿಕಾರಲ್ಲಿದೆ. ನಟನೆ ಎಂದ ಮೇಲೆ ಕಲೆಕೆ ಎಂಬುದು ನಿರಂತರ. ತ್ರ್ರಿಶೂಲಂ ಚಿತ್ರದಲ್ಲಿ ಓಂಪ್ರಕಾಶ್ ರಾವ್, ರವಿಚಂದ್ರನ್, ಉಪೇಂದ್ರ, ಸಾಧು ಕೋಕಿಲಾರಂಥಾ ನಿರ್ದೇಶಕರ ನಿರ್ದೇಶನವೂ ನಿಮಿಕಾಗೆ ಸಿಕ್ಕಿದೆ. ಅವರ ಕಡೆಯಿಂದಬಂದ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು ಚೆಂದಗೆ ನಟಿಸಿರುವ ಖುಷಿಯೂ ಅವರಲ್ಲಿದೆ. ಕಡಲ ತಡಿಯಿಂದ ಬಂದು, ಕನ್ನಡವೂ ಸೇರಿದಂತೆ ಬಾಲಿವುಡ್ ಮಟ್ಟದಲ್ಲಿ ನೆಲ ಕಡುಕೊಂಡ ಅನೇಕ ನಟ ನಟಿಯರಿದ್ದಾರೆ. ಆ ಸಾಲಿಗೆ ನಿಮಿಕಾ ಕೂಡಾ ಸೇರಿಕೊಳ್ಳುವಂತಾಗಲೆಂಬುದು ಹಾರೈಕೆ!