ನವಿರುಪ್ರೇಮದ ಪಕಳೆಗಳನ್ನು ಪ್ರೇಕ್ಷಕರ ಮನಸಿಗಂಟಿಸುವ ಮೂಲಕವೇ ದೊಡ್ಡ ಗೆಲುವೊಂದರ ರೂವಾರಿಯಾಗಿದ್ದವರು ನಿರ್ದೇಶಕ (shashank) ಶಶಾಂಕ್. ಮೊಗ್ಗಿನ ಮನಸು (moggina manasu) ಚಿತ್ರದ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದ ಅವರು, ಇದೀಗ `ಕೌಸಲ್ಯ ಸುಪ್ರಜಾ ರಾಮ’ (kousalya supraja rama) ಚಿತ್ರದ ಮೂಲಕ ಮ್ತೊಂದುಆಆಮದ ಕಥೆಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ನಾನಾ ರೀತಿಯಲ್ಲಿ ಸುದ್ದಿ ಮಾಡುತ್ತಾ, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಪ್ರೀಮಿಯರ್ ಶೋಗಳ ಮೂಲಕವೇ ಒಂದಷ್ಟು ಪಾಸಿಟಿವ್ ಘಮ ಪಸರಿಸಿದ್ದ ಕೌಸಲ್ಯ ಸುಪ್ರಜಾ ರಾಮ ತನ್ನ ಆಂತರ್ಯದ ಆಶಯದಂತೆಯೇ ಪ್ರೇಕ್ಷಕರನ್ನು ಆವರಿಸಿಕೊಳ್ಳುವಲ್ಲಿ ತಕ್ಕ ಮಟ್ಟಿಗೆ ಯಶ ಕಂಡಿದೆ!
ಶಶಾಂಕ್ ನಿರ್ದೇಶನದ ಚಿತ್ರವೆಂದ ಮೇಲೆ, ಅದು ಯಾವುದೇ ಜಾನರಿನದ್ದಾಗಿದ್ದರೂ ಕುಟುಂಬ ಸಮೇತವಾಗಿ ನೋಡಿಸಿಕೊಳ್ಳುವ ಗುಣ ಹೊಂದಿರುತ್ತದೆ. ಆ ನಂಬಿಕೆ ಕೌಸಲ್ಯ ಸುಪ್ರಜಾ ರಾಮ ಚಿತ್ರದ ಮೂಲಕವೂ ನಿಜವಾಯಿತಾ? ಟ್ರೈಲರ್‌ನಲ್ಲಿದ್ದ ಬಿಸುಪು ಒಂದಿಡೀ ಚಿತ್ರದಲ್ಲಿಯೂ ಅಡಕವಾಗಿದೆಯಾ? ಅಷ್ಟಕ್ಕೂ ಶಶಾಂಕ್ ಈ ಮೂಲಕ ಯಾವ ಥರದಲ್ಲಿ ಮ್ಯಾಜಿಕ್ ಮಾಡಿದ್ದಾರೆ? ಇಂಥಾ ಪ್ರಶ್ನಗಳನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರಿಗೆ ಒಂದಷ್ಟು ಕೊರತೆಗಳಾಚೆಗೂ ಮಧುರಾನುಭೂತಿ ನೀಡುವಲ್ಲಿ ಈ ಸಿನಿಮಾ ಗೆದ್ದಿದೆ. ಇದೀಗ ಚಿತ್ರರಂಗದಲ್ಲಿ ಬೇರೆಯದ್ದೇ ಧಾಟಿಯ ಭರಾಟೆ ಶುರುವಾಗಿದೆ. ಬಹುತೇಕರು ಆಕ್ಷನ್ ಗುಂಗಿಗೆ ಬಿದ್ದು, ಅದಕ್ಕೆ ತಕ್ಕುದಾದ ದೃಷ್ಯ ಹೊಸೆಯುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನತ್ತ ಹೊರಳಿಕೊಳ್ಳಲು ಶಶಾಂಕ್ ಮನಸು ಮಾಡಿರೋದೇ ಮೆಚ್ಚಿಕೊಳ್ಳುವಂಥಾ ವಿಚಾರ. ಆದರೆ, ಅದು ನಿರೀಕ್ಷಿತ ಪ್ರಮಾಣದ ತುದಿ ಮುಟ್ಟಿಲ್ಲ ಅನ್ನೋದೇ ತಕರಾರು!
ಹಾಗೆ ನೋಡಿದರೆ, ಟ್ರೈಲರ್‌ನಲ್ಲಿ ಕಾಣಿಸಿದ್ದಕ್ಕೂ ಮಧ್ಯಂತರದವರೆಗೆ ತೆರೆದುಕೊಳ್ಳುವ ದೃಷ್ಯಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಗಂಡಸ್ತನದ ಅಹಮ್ಮಿಕೆಯನ್ನು ಅಪಾದಮಸ್ತಕ ಹೊದ್ದುಕೊಂಡ ತಂದೆ, ಅಂಥಾ ಅಹಮ್ಮಿಕೆಯನ್ನೆಲ್ಲ ಗಾಢವಾದ ಪ್ರೀತಿಯ ಮೂಲಕವೇ ತಣಿಸುವ ಸ್ವಭಾವದ ಅಮ್ಮ ಮತ್ತು ಅದಾಗತಾನೇ ಜಗತ್ತಿನತ್ತ ಕಣ್ತೆರೆಯುತ್ತಿರೋ ಮಗ… ಅಪ್ಪನೆಂಬೋ ಪುರುಷಹಂಕಾರದ ಮೂಟೆ, ತನ್ನ ಬುದ್ಧಿಯನ್ನೇ ಮಗನಿಗೂ ಧಾರೆಯೆರೆದು ಬೆಳೆಸುತ್ತಾನೆ. ಬುದ್ಧಿ ಬಲಿಯುವ ಮುನ್ನವೇ ಗಂಡಸ್ತನದ ತಿಮಿರು ಮೂಡಿಸಿಕೊಂಡು ಬೆಳೆಯುವ ಮಗನ ವ್ಯಕ್ತಿತ್ವಕ್ಕೂ ಅದು ಅನಾಯಾಸವಾಗಿ ಅಂಟಿಕೊಳ್ಳುತ್ತೆ. ಅದು ಕಾಲೇಜು ಹಂತ ದಾಟಿ, ಕೆಲಸ ಹಿಡಿದ ಮೇಲೂ ಮುಂದುವರೆಯುತ್ತೆ.
ಈ ನಡುವೆ ಕಾಲೇಜಿನಲ್ಲೇ ಗಂಡಸ್ತನದ ಕಿರೀಟ ಹೊತ್ತುಕೊಂಡಿದ್ದ ನಾಯಕನನ್ನು ಹುಡುಗಿಯೊಬ್ಬಳು ಮೋಹಿಸುತ್ತಾಳೆ. ಹೇಗೋ ಕೊಸರಾಡಿಕೊಂಡು ನಾಯಕನೂ ಲವ್ವಲ್ಲಿ ಬೀಳುತ್ತಾನೆ. ಪ್ರೀತಿಯಿರುವ ಜಾಗವನ್ನು ಒಣ ಅಹಮ್ಮಿಕೆ ಆಳಲು ಸಾಧ್ಯವಾಗೋದಿಲ್ಲ. ಈ ಮಾತಿಗೆ ತಕ್ಕುದಾಗಿ ಪ್ರೀತಿಯಲ್ಲಿ ಬಿರುಕು. ಅದರ ಫಲವಾಗಿ ಬ್ರೇಕಪ್ಪು. ಅಹಮ್ಮಿಕೆಯ ಒಡಲಲ್ಲೇ ಪ್ರೀತಿ ಸಾಕಿಕೊಂಡರೂ, ಅದನ್ನು ತೋರ್ಪಡಿಸಿಕೊಳ್ಳಲಾಗದ ಒಣ ಜಂಭ ನಾಯಕನ ಮನಸನ್ನಾವರಿಸುತ್ತೆ. ಆ ನಂತರ ನಡೆಯುವ ಘಟನಾವಳಿಗಳೇ ಈ ಸಿನಿಮಾದ ಜೀವಾಳ. ಅದಾದ ಬಳಿಕ ಸೆಂಟಿಮೆಂಟಿನ ಕಥನಗಳು, ಅನಿರೀಕ್ಷಿತ ತಿರುವುಗಳು ಮೂಡಿಕೊಳ್ಳುತ್ತವೆ. ಅವೆಲ್ಲವೂ ಅನಾಯಾಸವಾಗಿ ನೋಡಿಸಿಕೊಳ್ಳುತ್ತವೆ.
ಪುರುಷ ಘನತೆಯನ್ನು ನೆತ್ತಿ ಮೇಲಿಟ್ಟುಕೊಂಡು, ಹೆಣ್ಣನ್ನು ನಿಕೃಷ್ಟವಾಗಿ ಕಾಣೋ ನಾಯಕನಿಗೆ ಎಂಥಾ ಹುಡುಗಿ ಬಾಳ ಸಂಗಾತಿಯಾಗಿ ಸಿಗುತ್ತಾಳೆ? ಆ ನಂತರದಲ್ಲಿ ಎಂತೆಂಥಾ ವಿದ್ಯಮಾನಗಳು ಜರುಗುತ್ತವೆಂಬುದರಲ್ಲಿಯೇ ಈ ಚಿತ್ರದ ಆತ್ಮವಿದೆ. ಅದರೊಳಗೆ ಮನಸಿಗೆ ತಾಕುವ, ಬದುಕಲ್ಲಿ ಅಳವಡಿಸಿಕೊಳ್ಳಬೇಕೆನ್ನಿಸುವ ಒಂದಷ್ಟು ಪಲ್ಲಟಗಳೂ ಎದುರಾಗುತ್ತವೆ. ಡಾರ್ಲಿಂಗ್ ಕೃಷ್ಣ ಇಲ್ಲಿ ಭಿನ್ನ ಶೇಡಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕವರು ಯಾಯವನ್ನೂ ಸಲ್ಲಿಸಿದ್ದಾರೆ. ಬೃಂದಾ ಆಚಾರ್ಯ ತನ್ನ ಇಮೇಜಿಗೆ ತಕ್ಕಂತೆ ನಟಿಸಿದ್ದಾರೆ. ಇನ್ನುಳಿದಂತೆ, ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾಎಂಬುದನ್ನೇ ಚಿತ್ರತಂಡ ಮರೆಮಾಚಿಕೊಂಡು ಬಂದಿತ್ತು. ಆದರೆ, ಆಕೆಯ ಪಾತ್ರವೇ ಇಲ್ಲಿ ಮಹಾ ತಿರುವುಗಳನ್ನು ತಂದೊಡ್ಡುತ್ತದೆ. ಅದರ ಮೂಲಕವೇ ಕುಂಟುತ್ತಾ ಸಾಗೋ ಕಥೆಗೊಂದು ಓಘ ಕೊಡುತ್ತಾ, ಜೊತೆ ಜೊತೆಗೆ ಒಂದಷ್ಟು ಗಂಭೀರ ವಿಚಾರಗಳನ್ನೂ ಶಶಾಂಕ್ ದಾಟಿಸಿದ್ದಾರೆ. ಆ ಪಾತ್ರದ ಸುತ್ತಲೇ ಈ ಸಮಾಜಕ್ಕೆ, ಅಲ್ಲಿ ಹಾಸುಹೊಕ್ಕಾಗಿರುವ ಮನಸ್ಥಿತಿಗಳಿಗೆ ಕನ್ನಡಿಯನ್ನೂ ಹಿಡಿದಿದ್ದಾರೆ.
ಇನ್ನುಳಿದಂತೆ, ಕಾಲೇಜೂ ಸೇರಿದಂತೆ ಒಂದಷ್ಟು ದೃಷ್ಯಾವಳಿಗಳು ಅದೇಕೋ ಪೇಲವವೆನ್ನಿಸುತ್ತವೆ. ಮೊದಲಾರ್ಧಕ್ಕೆ ಇನ್ನಷ್ಟು ಆವೇಗವಿದ್ದಿದ್ದರೆ ಮತ್ತೊಂದಷ್ಟು ಮುದವಿರುತ್ತಿತ್ತು. ಇಂಥಾ ಮಿತಿಗಳಾಚೆಗೂ ಕೌಸಲ್ಯ ಸುಪ್ರಜಾ ರಾಮಾ ಈ ದಿನಮಾನದ ಮಟ್ಟಿಗೆ ಕೊಂಚ ಅಪರೂಪದ ಚಿತ್ರವಾಗಿ ಕಾಣಿಸುತ್ತದೆ. ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ನೋಡಿ ನಿಸೂರಾಗುವಂಥಾ ಅವಕಾಶವನ್ನೂ ಕಲ್ಪಿಸಿದೆ. ಶಶಾಂಕ್ ಕನ್ನಡ ಚಿತ್ರರಂಗದಲ್ಲಿ ಭಿನ್ನ ಪಥದ ಜಾಡು ಹಿಡಿದು ಹೊರಟಿರುವ ನಿರ್ದೇಶಕ. ಚಿತ್ರದಿಂದ ಚಿತ್ರಕ್ಕೆ ಅವರು ಪಕ್ವವಾಗುತ್ತಾ ಬಂದಿದ್ದಾರೆ. ಈ ಕಥೆ, ನಿರೂಪಣೆ, ಮತ್ತು ದೃಷ್ಯ ಕಟ್ಟುವ ಬಗೆಯಲ್ಲಿ ಒಂದಷ್ಟು ಪರಿಣಾಮಕಾರಿಯಾಗಿ ಆಲೋಚಿಸಿದ್ದರೆ, ಈ ಚಿತ್ರ ಮತ್ತೊಂದಷ್ಟು ಚೆಂದಗೆ ಮೂಡಿ ಬರುತ್ತಿತ್ತೇನೋ… ಒಟ್ಟಾರೆಯಾಗಿ ಕೌಸಲ್ಯ ಸುಪ್ರಜಾ ರಾಮ ಕುಟುಂಬ ಸಮೇತವಾಗಿ ಒಂದು ಸಲ ನೋಡಬಹುದಾದ ಚಿತ್ರ…