ಕನ್ನಡ ಚಿತ್ರರಂಗದಲ್ಲೀಗ (pan india) ಪ್ಯಾನಿಂಡಿಯಾ ಸಿನಿಮಾಗಳ ಭರಾಟೆ ಬಿರುಸು ಪಡೆದುಕೊಂಡಿದೆ. ಇದೇ ಹೊತ್ತಿನಲಿ ದಕ್ಷಿಣ (south) ಭಾರತೀಯ ಚಿತ್ರರಂಗದಲ್ಲಿಯೂ ಕೂಡಾ ಅಂಥಾದ್ದೊಂದು ಉತ್ಸಾಹದ ಕಿಡಿ ಹೊತ್ತಿಕೊಂಡಿದೆ. ಸದ್ಯಕ್ಕೆ ಬೇರೆಲ್ಲ ಭಾಷೆಗಳಿಗಿಂತಲೂ ತೆಲುಗು (tollywood) ಚಿತ್ರರಂಗದಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ಒಂದಷ್ಟು ತಯಾರಿಗಳು ನಡೆಯುತ್ತಿವೆ. ಘಟಾನುಘಟಿ ಸ್ಟಾರ್‌ಗಳೆಲ್ಲ ಬದಲಾವಣೆಯತ್ತ ಮುಖ ಮಾಡಿದ್ದಾರೆ. ಅದರ ಭಾಗವಾಗಿಯೇ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹೆಸರು ಮಾಡುವಂಥಾ ಭಿನ್ನ ಕಥಾನಕಗಳಿಗಾಗಿ ತಡಕಾಡಲಾರಂಭಿಸಿದ್ದಾರೆ. ಒಂದು ಹಂತದಲ್ಲಿ ಸಲಾರ್ (salaar) ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದವು. (prabas) ಪ್ರಭಾಸ್ ಪ್ಯಾನಿಂಡಿಯಾ ಚಿತ್ರಗಳ ಮುಂಚೂಣಿಯಲ್ಲಿದ್ದ. ಇದೀಗ ಆ ರೇಸಿನಲ್ಲಿ ಮೆಘಾ ಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ರಾಮ್ ಚರಣ್, ಜ್ಯೂನಿಯರ್ ಎನ್‌ಟಿಆರ್ ಮುಂತಾದ ಸ್ಟಾರ್‌ಗಳೆಲ್ಲ ಬಂದು ನಿಂತಿದ್ದಾರೆ.
ಬಾಹುಬಲಿ೨, ಆರ್‌ಆರ್‌ಆರ್, ಪುಷ್ಪಾ ಮುಂತಾದ ಚಿತ್ರಗಳು ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಗೆಲುವು ಕಂಡಿದ್ದವು. ಬಾಕ್ಸಾಫೀಸ್‌ನಲ್ಲಿಯೂ ಇವುಗಳ ದಾಖಲೆಯನ್ನು ಸಲೀಸಾಗಿ ಸರಿಗಟ್ಟಲು ಸಾಧ್ಯವಾಗುವಂತಿಲ್ಲ. ಆ ಗೆಲುವಿನ ಆವೇಗದಲ್ಲಿ ಇದುವರೆಗೂ ತೆಲುಗು ಚಿತ್ರರಂಗ ಪುಳಕಗೊಳ್ಳುತ್ತಿದೆ. ಈ ಕಾರಣದಿಂದಲೇ ತೆಲುಗು ಚಿತ್ರರಂಗದ ಸ್ಟಾರ್‌ಗಿರಿಯ ಪ್ರಭೆ ರಾಷ್ಟ್ರಮಟ್ಟದಲ್ಲಿ ಮಿರುಗುತ್ತಿದೆ. ಒಂದರ್ಥದಲ್ಲಿ ಅದು ದೇಶದ ಗಡಿ ದಾಟಿಯೂ ಹಬ್ಬಿಕೊಂಡಿದೆ. ವಿದೇಶಗಳಲ್ಲಿಯೂ ಕೂಡಾ ತೆಲುಗು ಸಿನಿಮಾಗಳಿಗೆ ಭರ್ಜರಿ ಓಪನಿಂಗ್ ಸಿಗುತ್ತಿದೆ. ತೆಲುಗಿನ ಹೀರೋಗಳಿಗೆ ವಿದೇಶದಲ್ಲಿಯೂ ಭರ್ಜರಿ ಫ್ಯಾನ್ ಬೇಸ್ ಕೂಡಾ ಸೃಷ್ಟಿಯಾಗಿದೆ.
ರಾಜಮೌಳಿಯ ಮುಂದಿನ ನಡೆ ಏನೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಸಿನಿಮಾದಿಂದ ಸಿನಿಮಾಗೆ ಬೇರೆ ಬಗೆಯಲ್ಲಿ ಅಚ್ಚರಿ ಮೂಡಿಸುವ ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವ ಸುದ್ದಿ ಈಗಾಗಲೇ ಹೊರಬಿದ್ದಿದೆ. ನಿರೀಕ್ಷೆಯಂತೆಯೇ ಅದೂ ಕೂಡಾ ಪ್ಯಾನಿಂಡಿಯಾ ಸಿನಿಮಾವಾಗಲಿದೆ. ಅದಕ್ಕಾಗಿನ ತಯಾರಿಯೀಗ ಭರ್ಜರಿಯಾಗಿಯೇ ನಡೆಯುತ್ತಿದೆ. ಡಿಸೆಂಬರ್ ಹೊತ್ತಿಗೆಲ್ಲ ರಾಜಮೌಳಿ ಅಖಾಡಕ್ಕಿಳಿಯಲಿದ್ದಾರೆ. ಇದೇ ಹೊತ್ತಿನಲ್ಲಿ ರಾಜಮೌಳಿ ಜೊತೆ ಸೇರಿ ಆರ್ ಆರ್ ಆರ್ ಎಂಬ ಬಿಗ್ ಹಿಟ್ ಚಿತ್ರದಲ್ಲಿ ನಟಿಸಿದ್ದ ಜ್ಯೂನಿಯರ್ ಎನ್‌ಟಿಆರ್ ಕೂಡಾ ಮತ್ತೊಂದು ಪ್ಯಾನಿಂಡಿಯಾ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ವಾರ್೨ ಎಂಬ ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಹೃತಿಕ್ ರೋಶನ್ ಮುಂತಾದವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಖಸೆಂಬರ್ ಹೊತ್ತಿಗೆಲ್ಲಾ ಈ ಸಿನಿಮಾದ ಚಿತ್ರೀಕರಣ ಚಾಲೂ ಆಗಲಿದೆ.
ರಾಮ್ ಚರಣ್ ಇದೀಗ ಶಂಕರ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆ ಜೊತೆಗೇ ಮತ್ತೊಂದು ಪ್ಯಾನಿಂಡಿಯಾ ಸಿನಿಮಾವನ್ನೂ ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಅದನ್ನು ಯುವ ನಿರ್ದೇಶಕ ಬುಚಿ ಬಾಬು ನಿರ್ದೇಶನ ಮಾಡಲಿದ್ದಾರೆ. ಇದಕ್ಕಾಗಿನ ತಯಾರಿ ಕೂಡಾ ಅವ್ಯಾಹತವಾಗಿ ನಡೆಯುತ್ತಿದೆ. ಸದರಿ ಸಿನಿಮಾ ಕೂಡಾ ಇದೇ ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣಕ್ಕಿಳಿಯಲಿದೆ. ಇದರ ತಾರಾಗಣ ಮತ್ತುತಾಂತ್ರಿಕ ವರ್ಗ ಕೂಡಾ ತೆಲುಗು ಪ್ರೇಕ್ಷಕರನ್ನು ಥ್ರಿಲ್ ಆಗಿಸಿದೆ. ಈಗಾಗಲೇ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಬಾಬು, ರಾಮ್‌ಚರಣ್ ಕಾಂಬಿನೇಷನ್ನಿನಲ್ಲಿ ಕಮಾಲ್ ಮಾಡುತ್ತಾರೆಂಬ ನಂಬಿಕೆ ಬಲವಾಗಿ ಬಿಟ್ಟಿದೆ. ಅಂದಹಾಗೆ, ಈ ಚಿತ್ರಕ್ಕೆ ಎ ಆರ್ ರೆಹಮನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಹೀಗೆ ತೆಲುಗಿನ ಯುವ ನಟರೆಲ್ಲ ಭರ್ಜರಿಯಾಗಿ ಪ್ಯಾನಿಂಡಿಯಾ ಚಿತ್ರಗಳತ್ತ ವಾಲಿಕೊಂಡಿರುವಾಗಲೇ, ಮೆಘಾ ಸ್ಟಾರ್ ಚಿರಂಜೀವಿ ಕೂಡಾ ಹೊಸಾ ಉತ್ಸಾಹದೊಂದಿಗೆ ಎಂಟ್ರಿ ಕೊಡಲು ಸಜ್ಜುಗೊಂಡಿದ್ದಾರೆ. ಈ ಹಿಂದೆ ಬಿಂಬಿಸಾರ ಸಿನಿಮಾ ನಿರ್ದೇಶನ ಮಾಡಿ ಹೆಸರಾಗಿದ್ದ ಮಲ್ಲೀಡಿ ವಸಿಷ್ಟ ನಿರ್ದೇಶನದ ಚಿತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ವರ್ಷಗಳ ಹಿಂದೆ ಸೈರಾ ನರಸಿಂಹ ರೆಡ್ಡಿ ಅಂತೊಂದು ಪ್ಯಾನಿಂಡಿಯಾ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದರು. ದೊಡ್ಡ ಮಟ್ಟದಲ್ಲಿ ಹೈಪುಗಳು ಸೃಷ್ಟಿಯಾಗಿದ್ದರೂ ಕೂಡಾ ಆ ಚಿತ್ರ ಹೇಳಿಕೊಳ್ಳುವಂಥಾ ಗೆಲುವು ಕಂಡಿರಲಿಲ್ಲ. ಆ ನಂತರ ಸುದೀರ್ಘ ಕಾಲ ಮರೆಯಾಗಿದ್ದ ಚಿರು ಇದೀಗ ಮಲ್ಲೀಡಿ ವಸಿಷ್ಠ ಹೇಳಿದ ಕೆಯನ್ನು ಮೆಚ್ಚಿಕೊಂಡು ನಟಿಸಲು ಮುಂದಾಗಿದ್ದಾರೆ. ಈ ಚಿತ್ರ ಕೂಡಾ ಡಿಸೆಂಬರಿನಿಂದ ಚಿತ್ರೀಕರಣಗೊಳ್ಳಲಿದೆ. ಈ ಎಲ್ಲ ವಿದ್ಯಮಾನಗಳನ್ನು ಆಧರಿಸಿ ಹೇಳೋದಾದರೆ, ಈ ವರ್ಷದ ಅಂಚಿನಿಂದ ತೆಲುಗು ಚಿತ್ರರಂಗ ಮತ್ತಷ್ಟು ಆವೇಗದೊಂದಿಗೆ ಮೈಕೊಡವಿಕೊಳ್ಳಲಿದೆ!