ಕಾಂತಾರ (kantara) ಚಿತ್ರದ ಮಹಾ ಗೆಲುವಿನ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೇಕೋ ಮಂಕು ಕವಿದಂತಾಗಿದೆ. ವಿಶ್ವವ್ಯಾಪಿಯಾಗಿ ಕನ್ನಡ ಚಿತ್ರವೊಂದು ಸದ್ದು ಮಾಡಿದ ನಂತರದಲ್ಲಿ ಚಿತ್ರರಂಗದ ದಿಕ್ಕೇ ಬದಲಾಗಬೇಕಿತ್ತು. ಆದರೆ, ಪ್ರಸ್ತುತ ಇಲ್ಲಿ ಚಾಲ್ತಿಯಲ್ಲಿರೋದು ಅಕ್ಷರಶಃ ದಿಕ್ಕೆಟ್ಟ ವಿದ್ಯಮಾನ. ಯಾಕೆಂದರೆ, ವಾರವೊಂದಕ್ಕೆ ಅರ್ಧ ಡಜನ್ನಿನಷ್ಟು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆಯಾದರೂ, ಅದ್ಯಾವುದರಲ್ಲಿಯೂ ಗೆದ್ದು ಬೀಗುವ ವಜನ್ನು ಕಾಣಿಸುತ್ತಿಲ್ಲ. (kgf) ಕೆಜಿಎಫ್ ಕಾಂತಾರದಂಥಾ ಸಿನಿಮಾ ನೋಡಿದ ಮಂದಿಗೆ ಅಷ್ಟು ಬೇಗನೆ ಬೇರೆ ಚಿತ್ರಗಳು ರುಚಿಸೋದಿಲ್ಲ. ಅದರ ನಡುವೆಯೂ ದೊಡ್ಡ ಮನಸ್ಸು ಮಾಡಿ ಸಿನಿಮಾ ಮಂದಿರಕ್ಕೆ ಬಂದ ಪ್ರೇಕ್ಷಕನಿಗೆ ಭೀಕರ ಅನುಭವ ನೀಡುವ ಸಿನಿಮಾ ಸಿಕ್ಕರೆ ಗತಿ ಏನಾಗಬೇಡ? ಸದ್ಯಕ್ಕೆ `ಅಪರೂಪ’ (aparoopa) ಅಂತೊಂದು ಸಿನಿಮಾ ಬಿಡುಗಡೆಗೊಂಡಿರೋದೇ ಇಷ್ಟೆಲ್ಲ ಪೀಠಿಕೆ ಹಾಕಲು ಪ್ರಧಾನ ಕಾರಣ!
ಒಂದಷ್ಟು ಆವೇಗದಿಂದ ಆನ್‍ಲೈನ್ ಪ್ರಮೋಷನ್ ಮಾಡಿ, ಪ್ರೇಕ್ಷಕರನ್ನು ಸೆಳೆದಿದ್ದ ಚಿತ್ರ ಅಪರೂಪ. ಇದನ್ನು ಜನ ಕೊಂಚ ಗಂಭೀರವಾಗಿ ಪರಿಗಣಿಸಲೂ ಕಾರಣವಿತ್ತು. ಇದು ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಹಿಂದೆ ಅರಸು, ಆಕಾಶ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ಮಹೇಶ್ ಬಾಬು. ಹಾಗಿದ್ದ ಮೇಲೆ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಅಪರೂಪದ ಬಗ್ಗೆ ನಿರೀಕ್ಷೆ ಮೂಡದಿರಲು ಸಾಧ್ಯವೇ? ಹೀರೋ ಹೊಸಬನಾದರೂ ಒಂದು ಮಟ್ಟಿಗೆ ಅಚ್ಚುಕಟ್ಟಾಗಿದ್ದ ಪೋಸ್ಟರುಗಳು, ಖುದ್ದು ಮಹೇಶ್ ಹಂಚಿಕೊಂಡಿದ್ದ ಒಂದಷ್ಟು ವಿಚಾರಗಳು ಸೇರಿಕೊಂಡು ಅಪರೂಪದ ಸುತ್ತ ಅನೂಹ್ಯ ಕುತೂಹಲವೊಂದು ಹರಳುಗಟ್ಟಿಕೊಂಡಿತ್ತು. ಅದಕ್ಕೆ ಸರಿಯಾಗಿ ಇದು ಅಪ್ಪು ಹಾಡಿರುವ ಕಡೇಯ ಹಾಡು ಇರೋ ಸಿನಿಮಾ ಅಂತಲೂ ಹಬ್ಬಿಸಲಾಗಿತ್ತು. ಅದೆಲ್ಲದರ ಬಲದಿಂದಲೇ ಸಿನಿಮಾ ಮಂದಿರ ಹೊಕ್ಕವರ ಮುಂದೆ ಪ್ರತ್ಯಕ್ಷವಾಗಿರೋದು ಅಕ್ಷರಶಃ ಅಪರೂಪದ ತಲೆನೋವೊಂದು ಹಠಾತ್ತನೆ ಅಮರಿಕೊಂಡ ಅನುಭವವಾಗಿದೆ. ಅದು ಪ್ರತೀ ಸೀನಿನಲ್ಲಿಯೂ ಉಲ್ಬಣಿಸುತ್ತಾ, ಸಿನಿಮಾ ಮುಗಿಸಿಕೊಂಡು ಮನೆ ಸೇರಿದ ಮೇಲೂ ಬೆಂಬಿಡದೆ ಕಾಡಿಬಿಟ್ಟಿದೆ!
ಸುಘೋಶ್ ಮತ್ತು ಹೃತಿಕಾ ಇಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಹೀಗೆ ಹೊಸಬರ ಆಗಮನವಾಗಿ, ಮಹೇಶ್ ಬಾಬುರಂಥ ನುರಿತ ನಿರ್ದೇಶಕರ ಸಾಥ್ ಸಿಕ್ಕಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಅದನ್ನು ಆರಂಭಿಕ ದೃಷ್ಯದಿಂದ ಕಡೆಯವರೆಗೂ ಅಚ್ಚುಕಟ್ಟಾಗಿ ಸುಳ್ಳಾಗಿಸುತ್ತಾ ಸಾಗಿದ್ದೇ ನವನಟ ಸುಘೋಶನ ಬಹುದೊಡ್ಡ ಸಾಧನೆ. ಈ ಸಿನಿಮಾದಲ್ಲಿ ಕಥೆ ಸೇರಿದಂತೆ ಯಾವುದರಲ್ಲಿಯೂ ಹೊಸತನವಿಲ್ಲ. ಸಿನಿಮಾದಲ್ಲಿ ಲಾಜಿಕ್ಕು ಹುಡುಕಬಾರದು ನಿಜ. ಆದರೆ, ದೃಷ್ಯಗಳು ವಾಸ್ತವಕ್ಕೆ ಒಂದಿನಿತಾದರೂ ಹತ್ತಿರಾಗಿರಬೇಕಾದದ್ದು ಅನಿವಾರ್ಯ. ಸವಕಲು ಕಥೆ, ಪೇಲವ ನಟನೆ, ರೇಜಿಗೆ ಹುಟ್ಟಿಸುವ ನಿರೂಪಣೆ ಸೇರಿದಂತೆ ಒಂದಿಡೀ ಸಿನಿಮಾ ಮೇಲೆದ್ದು ಬರಲಾಗದಂತೆ ಕಮರಿಗೆ ಕೆಡವಲ್ಪಟ್ಟಿದೆ.
ಈ ಸಿನಿಮಾ ಆರಂಭವಾಗಿ ಒಂದಷ್ಟು ದೃಷ್ಯಗಳು ಕದಲುತ್ತಲೇ, ಈ ಕಥೆ ದೃಷ್ಯರೂಪ ಧರಿಸಿದ್ದರ ಹಿಂದಿನ ಹಿಕಮತ್ತುಗಳು ಒಂದೊಂದಾಗಿ ಗೋಚರಿಸಲಾರಂಭಿಸುತ್ತೆ. ಪ್ರತೀ ಪ್ರೇಕ್ಷಕರಿಗೂ ಕೂಡಾ ಕಾಸಿರುವ ಸುಘೋಶ್ ಹೀರೋ ಆಗುವ ತಲುಬಿಗೆ ಬಿದ್ದು ಈ ಅವಕಾಶ ಗಿಟ್ಟಿಸಿಕೊಂಡಿದ್ದು ಮತ್ತು ನಿರ್ದೇಶಕರು ಅದನ್ನು ಬಳಸಿಕೊಂಡೇ ಯರ್ರಾಬಿರ್ರಿ ರೀಲು ಸುತ್ತಿ ಬಿಸಾಡಿದ್ದರ ಸೂಚನೆಗಳು ಸ್ಪಷ್ಟವಾಗಲಾರಂಭಿಸುತ್ತೆ. ಯಾಕೆಂದರೆ, ಕಥೆಯೂ ಸೇರಿದಂತೆ ಯಾವುದರಲ್ಲಿಯೂ ಕಸುವಿಲ್ಲ. ಈ ಹೀರೋನ ನಟನೆಯಂತೂ ಪ್ರೇಕ್ಷಕರನ್ನು ಸುಸ್ತು ಹೊಡೆಸುತ್ತದೆ. ಪ್ರತೀ ಫ್ರೇಮಿನಲ್ಲಿಯೂ ಸುಘೋಶ್ ಮುಕ್ಕರಿದು ನಟಿಸಿದ್ದಾನೆ. ಆದರೂ ಅದು ಆ ಪಾತ್ರ ಬೇಡಿದ್ದರಲ್ಲಿ ಒಂದು ಪರ್ಸೆಂಟನ್ನೂ ಮುಟ್ಟಲು ಸಾಧ್ಯವಾಗದೆ ಏದುಸಿರು ಬಿಡುತ್ತಾನೆ. ಒಂದು ಹಂತದಲ್ಲಿ ಹೀರೋಗೇನಾದರೂ ಮೂಲವ್ಯಾಧಿಯ ಸಮಸ್ಯೆ ಇರಬಹುದಾ ಅಂತೊಂದು ಗುಮಾನಿ ಬಡಪಾಯಿ ನೋಡುಗರನ್ನು ಕಾಡಲಾರಂಭಿಸುತ್ತೆ!
ಇಡೀ ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದಕ್ಕೆ ಹತ್ತಾರು ಉದಾಹರಣೆಗಳನ್ನು ಕೊಡಬಹುದು. ಆದರೆ, ಒಂದು ದೃಷ್ಯವಿಲ್ಲಿ ಎಲ್ಲವನ್ನೂ ಅರುಹುತ್ತದೆ. ನಾಯಕನಿಗೆ ನಾಯಕಿಯ ಮೇಲೆ ವಿಪರೀತ ಲವ್ವಾಗಿ ಬಿಟ್ಟಿರುತ್ತೆ. ಹೇಗಾದರೂ ಮಾಡಿ ತನ್ನ ಪ್ರೇಮ ಬಾಧೆಯನ್ನು ಆಕೆಯ ಮುಂದೆ ಒದರುವ ಉತ್ಸಾಹದಲ್ಲಿದ್ದ ನಾಯಕ ನಾನಾ ಐಡಿಯಾಗಳನ್ನು ಹೆಣೆಯುತ್ತಾನೆ. ಕಡೆಗೂ ಆತನಿಗೆ ತನ್ನ ಸ್ನೇಹಿತ ಆಪತ್ಬಾಂಧವನಂತೆ ಕಾಣಿಸುತ್ತಾನೆ. ಯಾಕೆಂದರೆ, ಆತ ಹುಡುಗಿಯಿರುವ ಏರಿಯಾಕ್ಕೆ ಕೇಬಲ್ ನೆಟ್‍ವರ್ಕ್ ಆಫೀಸ್ ಇಟ್ಟುಕೊಂಡಿರುತ್ತಾನೆ. ಆ ಕೇಬಲ್ ನೆಟ್‍ವರ್ಕ್‍ನವನ ತಲೆ ತಿಂದ ನಾಯಕ ಈ ದಿನ ಮಗಧೀರ ಚಿತ್ರ ಕೇಬಲ್ಲಿನಲ್ಲಿ ಬರುವಂತೆ ಮಾಡಲು ಬೇಡಿಕೊಳ್ಳುತ್ತಾನೆ. ಆ ಚಿತ್ರದಲ್ಲಿ ರಾಮ್‍ಚರಣ್ ಮತ್ತು ಕಾಜಲ್ ಅಗರ್‍ವಾಲ್ ಕೈ ಕೈ ತಾಕಿದಾಗ ವಿದುತ್ ಸಂಚಾರವಾಗುತ್ತದಲ್ಲಾ? ಅದನ್ನೇ ಮತ್ತೆ ಮತ್ತೆ ಹಾಕುವಂತೆ ತಾಕೀತು ಮಾಡುತ್ತಾನೆ.
ಗೆಳೆಯನ ಲವ್ವಿಗೆ ಸಹಾಯ ಮಾಡೋ ಉತ್ಸಾಹದಲ್ಲಿ ಆ ಸ್ನೇಹಿತ ಹಾಗೆಯೇ ಮಾಡುತ್ತಾನೆ. ಅದನ್ನು ನಾಯಕಿಯೂ ಲಕ್ಷಣವಾಗಿ ಕೂತು ನೋಡುತ್ತಾಳೆ. ಅದಾಗಿ ಮಾರನೇ ದಿನ ನಾಯಕಿ ಜಾಗಿಂಗ್ ಹೊರಟಾಗ ನಾಯಕನೂ ಹಿಂಬಾಲಿಸುತ್ತಾನೆ. ತನ್ನ ಆಪಲ್ ಸ್ಮಾರ್ಟ್‍ವಾಚನ್ನು ವೈಬ್ರೇಷನ್ ಮೋಡಿನಲ್ಲಿಟ್ಟು ಆಕೆಯ ಕೈಗೆ ಕೈ ತಾಕಿಸುತ್ತಾನೆ. ಆಗೊಂದು ಕೃತಕ ವಿದ್ಯುತ್ ಸಂಚಾರವಾದದ್ದೇ, ಈತನಿಗೂ ತನಗೂ ಏನೋ ಕನೆಕ್ಷನ್ನಿದೆ ಅನ್ನೋ ಭಾವ ನಾಯಕಿಯನ್ನು ಕಾಡುತ್ತದೆ. ಅದೊಂದೇ ಸೀನಿನ ಬಲದಿಂದ ಲವ್ವು ಕುದುರಿಕೊಳ್ಳುತ್ತದೆ. ಈ ಸೀನು ಕಲ್ಪಿಸಿಕೊಂಡರೇನೇ ಇಂದೆಂಥಾ ಹಳಸಲು ಸಿನಿಮಾ ಅನ್ನೋದು ಮನದಟ್ಟಾಗುತ್ತದೆ. ವಿಶೇಷವೆಂದರೆ, ಒಂದಿಡೀ ಚಿತ್ರದಲ್ಲಿ ಕೊಂಚ ಕ್ರಿಯೇಟಿವಿಟಿಯ ಗಂಧವಿರುವ ಸೀನೂ ಕೂಡಾ ಅದೇ ಅನ್ನೋದು ದುರಂತ ಸತ್ಯ!
ಕಾಸಿರುವ ಮಂದಿಗೆÉ ಸಿನಿಮಾ ಹೀರೋ ಆಗುವ ತಲುಬು ಹತ್ತಿಕೊಳ್ಳೋದು ಹೊಸತಲ್ಲ. ಅದರಲ್ಲಿ ತಪ್ಪೂ ಇಲ್ಲ. ಆದರೆ, ಒಂದು ಕಮರ್ಶಿಯಲ್ ಚಿತ್ರ ಮಾಡಿದಾಗ ಅದಕ್ಕೆ ಬೇಕಾದ ಕನಿಷ್ಠ ತಯಾರಿಯನ್ನಾದರೂ ಮಾಡಿಕೊಳ್ಳಲೇ ಬೇಕಾಗುತ್ತದೆ. ಯಾಕೆಂದರೆ, ಜನ ಹತ್ತಾರು ಸಂಕಷ್ಟದ ನಡುವೆಯೂ ಪ್ರೀತಿಯಿಂದ ಕಾಸು ಕೊಟ್ಟು ಸಿನಿಮಾ ನೋಡುತ್ತಾರೆ. ಇಂಥಾ ಕನಿಷ್ಠ ಖಬರೂ ಈ ಚಿತ್ರದ ನಾಯಕನಿಗಿದ್ದಂತಿಲ್ಲ. ಆತನಿಂದ ಒಂದು ಮಟಟಿಗಾದರೂ ನಟನೆ ತೆಗೆಸುವ ತಾಳ್ಮೆ ಮಹೇಶ್ ಬಾಬುಗೂ ಇರಲಿಲ್ಲವೆನಿಸುತ್ತದೆ. ಒಟ್ಟಾರೆಯಾಗಿ, ಅಪರೂಪ ಚಿತ್ರವನ್ನು ಕಷ್ಟಪಟ್ಟು ನೋಡಿದ ಮೇಲೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಒಂದೇ; ಹಿರಿಯ ನಿರ್ದೇಶಕ ಮಹೇಶ್ ಬಾಬು ಯಾಕಿಂಥಾ ಬರಗೆಟ್ಟ ಸಿನಿಮಾ ಮಾಡಿದರು?