ಬರಿಗೈಯಲ್ಲಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು, ಯಾವ ಗಾಡ್‍ಫಾದರ್‍ಗಳೂ ಇಲ್ಲದೆ ಸಾಧಿಸಿ ತೋರಿಸಿದವರ ದಂಡೊಂದು ಕನ್ನಡ ಚಿತ್ರರಂಗದಲ್ಲಿದೆ. ಕೊಂಚ ಕೆದಕಿದರೂ ಸಾಕು; ಅಂಥವರ ಬದುಕಿನ ಅತ್ಯಂತ ಕಠಿಣ ಹಾದಿಯ ಕರುಣಾಜನಕ ಕಥಡೆಗಳು ದಂಡಿದಂಡಿಯಾಗಿ ಹೊರಬೀಳುತ್ತವೆ. ಆ ವಿವರಗಳೆಲ್ಲವೂ ಸಾಧಿಸುವ ಛಲ ಹೊಂದಿರುವ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗುತ್ತವೆ. ಇದೇ ಹೊತ್ತಿನಲ್ಲಿ ಮತ್ತೊಂದು ವರ್ಗವೂ ಇದೇ ಗಾಂಧಿನಗರದಲ್ಲಿ ಕಣ್ಣಿಗೆ ರಾಚುತ್ತದೆ. ಅದು ಕಟ್ಟುಮಸ್ತಾದ ಕೌಟುಂಬಿಕ ಹಿನ್ನೆಲೆ, ಕಾಸಿನ ಜೊತೆ ಜೊತೆಗೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರ ವರ್ಗ. ಹೇಗೋ ಅಪ್ಪನ ಹೆಸರಲ್ಲಿ ಒಂದಷ್ಟು ಅವಕಾಶ ಗಿಟ್ಟಿಸಿಕೊಂಡು, ಅದೃಷ್ಟದಂಥಾ ಮಾಯೆಯ ಚುಂಗು ಹಿಡಿದು ಹೊರಟ ವರ್ಗವದು. ತಯಾರಿ, ಪರಿಶ್ರಮಗಳ ಪರಿವೆಗಳಿಲ್ಲದ ಆ ಸಾಲಿಗೆ ಸೇರಿಕೊಳ್ಳುವಾತ ಡೈನಾಮಿಕ್ ಸ್ಟಾರ್ (devaraj) ದೇವರಾಜ್ ಸುಪುತ್ರ (prajwal devaraj) ಪ್ರಜ್ವಲ್ ದೇವರಾಜ್!
ಪ್ರಜ್ವಲ್ ಪಾಲಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಬಹುದಾದ ಎಲ್ಲ ಅವಕಾಶಗಳಿದ್ದವು. ಒಂದಷ್ಟು ಮಿತಿಗಳಾಚೆಗೂ ಕೈಚಾಚುವ ದಾರಿಗಳೂ ಆತನ ಮುಂದಿದ್ದವು. ಆದರೆ, ಸಿನಿಮಾ ಒಪ್ಪಿಕೊಳ್ಳುವ ಜಾಣ್ಮೆ, ಒಪ್ಪಿದ ಸಿನಿಮಾಗಳ ಪಾತ್ರಕ್ಕಾಗಿ ಅವಿರತವಾಗಿ ತಯಾರಾಗುವ ಛಾತಿಗಳೆಲ್ಲ ಪ್ರಜ್ವಲ್ ಜಾಯಮಾನಕ್ಕೆ ಒಗ್ಗುವಂಥವಲ್ಲ. ಈತನ ವೃತ್ತಿಬದುಕಿನ ಹಾದಿಯನ್ನೊಮ್ಮೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಸಿಕ್ಸರ್ ಅಂತೊಂದು ಸಿನಿಮಾ ಮೂಲಕ 2007ರಲ್ಲಿ ಹೀರೋ ಆಗಿ ಲಾಂಚ್ ಆಗಿದ್ದ ಪ್ರಜ್ವಲ್, ಒಂದಷ್ಟು ಭರವಸೆ ಮೂಡಿಸಿದ್ದ. ಆದರೆ, ಆ ಸಿನಿಮಾ ಹೇಳಿಕೊಳ್ಳುವಂಥಾ ಗೆಲುವು ದಾಖಲಿಸಲಿಲ್ಲ. ಆ ವರ್ಷವೇ ಈತ ನಟಿಸಿದ್ದ ಮತ್ತೆರಡು ಸಿನಿಮಾಗಳ ತೆರೆಂಗಂಡಿದ್ದವು. ಅಲ್ಲಿಂದಿದುವರೆಗೂ ಪ್ರಜ್ವಲ್ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾನೆ. ಆದರೆ ಹೇಳಿಕೊಳ್ಳುವಂಥಾ ಒಂದೇ ಒಂದು ಗೆಲುವೂ ಕೈ ಹಿಡಿದಿಲ್ಲ.
ಹೀಗೆ ಏಳು ಬೀಳಿನ ಹಾದಿಯಲ್ಲಿ ತಲೆ ಕೆಡಿಸಿಕೊಳ್ಳದೆ ಸಾಗಿ ಬಂದಿದ್ದ ಪ್ರಜ್ವಲ್ ಇದೀಗ ಏಕಾಏಕಿ ಪಥ ಬದಲಿಸಿದ ಲಕ್ಷಣಗಳಿದ್ದಾವೆ. ಅದರಲ್ಲಿ ಆತ ನಿಜಕ್ಕೂ ಗಂಭೀರವಾಗಿರೋದೇ ಹೌದಾದರೆ, ಖಂಡಿತವಾಗಿಯೂ ಪ್ರಜ್ವಲ್ ಒಂದಷ್ಟು ಸಮ್ಮೋಹಕ ಗೆಲುವುಗಳ ರೂವಾರಿಯಾಗೋದರಲ್ಲಿ ಯಾವ ಅಚ್ಚರಿಯೂ ಇಲ್ಲ. ತತಸ್ಮ ತದ್ಬವದಂಥಾ ಸಿನಿಮಾ ಒಪ್ಪಿಕೊಂಡಿರುವ ಪ್ರಜ್ವಲ್, ಅದರ ಬೆನ್ನಲ್ಲಿಯೇ ಮತ್ತೊಂದು ಸಿನಿಮಾಗೂ ಓಕೆ ಅಂದಿದ್ದಾರೆ. ಒಂದು ಮೂಲದ ಪ್ರಕಾರ ಅದೂ ಕೂಡಾ ಭಿನ್ನ ಬಗೆಯ ಚಿತ್ರ. ಸಾಕಷ್ಟು ತಯಾರಿ ಮಾಡಿಕೊಂಡೇ ಆತ ಅಖಾಡಕ್ಕಿಳಿಯಬೇಕಿದೆ. ಒಟ್ಟಾರೆಯಾಗಿ, ಇದೀಗ ಪ್ರಜ್ವಲ್ ವೃತ್ತಿ ಬದುಕಿನ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿರುವಂತಿದೆ. ಇದು ನಿಜಕ್ಕೂ ಒಳ್ಳೇ ಬೆಳವಣಿಗೆ.