ಸಿನಿಮಾವೆಂಬ ಪ್ರಭಾವಿ ಮಾಧ್ಯಮವನ್ನು ರಾಜಕೀಯ ಅಜೆಂಡಾಗಳಿಗೆ ಬಳಸಿಕೊಳ್ಳುವ ವ್ಯಾಧಿಯೀಗ ಭಾರತೀಯ ಚಿತ್ರರಂಗದಲ್ಲಿ ಶುರುವಾಗಿ ಬಿಟ್ಟಿದೆ. ಸದ್ಯದ ಮಟ್ಟಿಗೆ ಆ ಪರಂಪರೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವಾತ (bollywood) ಬಾಲಿವುಡ್ ನಿರ್ದೇಶಕ (vivek agnihotri) ವಿವೇಕ್ ಅಗ್ನಿಹೋತ್ರಿ. ಕಾಶ್ಮೀರಿ ಪಂಡಿತರ ಹೆಸರಲ್ಲಿ ಕಪೋಲಕಲ್ಪಿತ ಕಥೆ ಕಟ್ಟಿ, ಅದಕ್ಕೆ ದೇಶಭಕ್ತಿಯ ಭ್ರಮೆ ಬೆರೆಸಿ ಸಿನಿಮಾವಾಗಿಸಿದ್ದಾತ ಅಗ್ನಿಹೋತ್ರಿ. ಅದನ್ನು ಒಂದು ಪಕ್ಷ ತನ್ನ ಅಜೆಂಡಾಗಳಿಗೆ ಸರಿಕಟ್ಟಾಗಿಯೇ ಬಳಸಿಕೊಂಡಿತ್ತು. ಆ ನಂತರ ಸತ್ಯದ ಭೂಮಿಕೆಯಲ್ಲಿ ಈತ ನಾನಾ ಅಗ್ನಿ ಪರೀಕ್ಷೆಗಳನ್ನೇ ಎದುರಿಸುವಂತಾಗಿತ್ತು. ಕೋರ್ಟ್ ಕೂಡಾ ಅಗ್ನಿಹೋತ್ರಿಗೆ (agnihotri) ತಪರಾಕಿ ಕೊಟ್ಟಿದ್ದೂ ಆಗಿತ್ತು. ಇದೀಗ ಮಣಿಪುರದಲ್ಲಿ ನಡೆದ ಹೇಯ ಘಟನೆ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಆದರೆ, ಸತ್ಯಕಥೆಗೆ ತಡಕಾಡುವಂತೆ ಪೋಸು ಕೊಡುವ ಅಗ್ನಿಹೋತ್ರಿ ನವರಂದ್ರಗಳನ್ನೂ ಅದುಮಿಹಿಡಿದಂತೆ ತೆಪ್ಪಗಾಗಿದ್ದಾನೆ!
ಹಾಗೆ ನೋಡಿದರೆ, ಈ ಸಿನಿಮಾ ಮಂದಿ ಇಂಥಾ ರಕ್ಕಸ ಕೃತ್ಯ ನಡೆದಾಗೆಲ್ಲ ನಾಜೂಕಿನ ನಡೆ ಅನುಸರಿಸುತ್ತಾರೆ. ಎಲ್ಲೋ ಒಂದಿಷ್ಟು ಮಂದಿ ಬಿಟ್ಟರೆ, ಮಿಕ್ಕುಳಿವರೆಲ್ಲ ಸಮಾಜಿಕ ಸ್ಥಿತ್ಯಂತರಗಳಿಗೆ ಮಿಡಿಯಲಾಗದೆ ಜಡ್ಡುಗಟ್ಟಿದವರೇ. ಆಳುವ ಪಕ್ಷಗಳ ವಿರೋಧ ಕಟ್ಟಿಕೊಂಡು ಬಚಾವಾಗಲಾರೆವೆಂಬ ಭಯ ಅವರನ್ನು ನರಸತ್ತ ಸ್ಥಿತಿಗೆ ತಳ್ಳಿ ಬಿಡುತ್ತದೆ. ಅವರ ಕಥೆಯೆಲ್ಲ ಹಾಳುಬಿದ್ದು ಹೋಗಲಿ. ಸತ್ಯ ಘಟನೆಯನ್ನು ಹುಡುಕಾಡೋ ಅಗ್ನಿಹೋತ್ರಿ ಯಾಕೆ ಮುಗುಮ್ಮಾಗಿದ್ದಾನೆಂದು ಅನೇಕ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಕೆಲ ಮಂದಿ ಈಗ ಮಣಿಪುರ್ ಫೈಲ್ಸ್ ಸಿನಿಮಾ ಮಾಡ್ತೀರಾ ಅಂತೊಂದು ಪ್ರಶ್ನೆಯನ್ನ ನೇರವಾಗಿಯೇ ಕೇಳಿದ್ದಾರೆ.
ಇಂಥಾದ್ದನ್ನೆಲ್ಲ ಹ್ಯಾಂಡಲ್ ಮಾಡೋ ಕಲೆಗಾರಿಕೆ ಗೊತ್ತಿರುವ ಅಗ್ನಿಹೋತ್ರಿ ನಯವಾಗಿಯೇ ಅದಕ್ಕುತ್ತರಿಸಿದ್ದಾನೆ. ಆದರೆ, ಆತ ಈ ಜನುಮದಲ್ಲಿ ಮಣಿಪುರ ಫೈಲ್ಸ್ ಸಿನಿಮಾ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೂ ತಪ್ಪಿತಸ್ಥರನ್ನು ನಾಯಕರನ್ನಾಗಿಸಿ, ಆಡಳಿತಾರೂಢ ಪಕ್ಷಕ್ಕೆ ಬಕೀಟು ಹಿರಿಯುತ್ತಾನೆಂಬುದು ಯಾರಿಗಾದರೂ ತಿಳಿಯದಿರೋದಿಲ್ಲ. ಸಿನಿಮಾ ಮಂದಿಯ ಮಾತು ಹಾಗಿರಲಿ, ಸಾಕ್ಷಾತ್ತು ಮೋದಿಯೇ ಹೊತ್ತುರಿಯುತ್ತಿರುವ ಮಣಿಪುರದತ್ತ ಅಂಡು ತಿರುಗಿಸಿ ಮೌನಮುಖಿಯಾಗಿದ್ದಾರೆ. ಮಣಿಪುರದಲ್ಲಿ ಅವರದ್ದೇ ಪಕ್ಷವಿದ್ದರೂ ಆ ಬಗ್ಗೆ ತುಟಿಪಿಟಕ್ ಅನ್ನುತ್ತಿಲ್ಲ. ಇಂಥಾ ವಾತಾವರಣದಲ್ಲಿ ಮಣಿಪುರದಂಥಾ ಘಟನಾವಳಿಗಳು ಮರುಕಳಿಸುತ್ತಿರುತ್ತವೆ. ಅಗ್ನಿಹೋತ್ರಿಯಂಥವರಿಗೆ ಮಿಥ್ಯದ ರೀಲು ಸುತ್ತಲೊಂದು ಸರಕು ಸಿಗುತ್ತಲೇ ಇರುತ್ತದೆ!