ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ ಮಿಂಚುವ ಇರಾದೆ ಹೊಂದಿದ್ದರೆ, ಮತ್ತೆ ಕೆಲವರಲ್ಲಿ ವಿಶೇಷ ಪಾತ್ರಗಳ ಮೂಲಕ ಪೇಕ್ಷಕರ ಮನಸಿಗಿಳಿಯುವ ತಪನೆಯಿರುತ್ತದೆ. ಅಂಥಾ ವಿರಳ ಮತ್ತು ಅಪರೂಪದ ಕಲಾವಿದರ ಸಾಲಿನಲ್ಲಿ ರಜನಿ (rajani) ಕೂಡಾ ಸೇರಿಕೊಳ್ಳುತ್ತಾರೆ. ರಜನಿ ಕಿರುತೆರೆ ಪ್ರೇಕ್ಷಕರ ಪಾಲಿಗೆ ಚಿರಪರಿಚಿತ ನಟಿ. ಕಿರುತೆರೆಯಲ್ಲಿ ಒಂದಷ್ಟು ಯಶ ಕಂಡಿದ್ದ ಅಮೃತವರ್ಶಿಣಿ (amruthavarshini) ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿದ್ದವರು ರಜನಿ. ಆ ಬಳಿಕ ಕಿರುತೆರೆ ಜಗತ್ತಿನಲ್ಲಿಯೇ ಹಲವು ಆಯಾಮಗಳಲ್ಲಿ ಸಕ್ರಿಯರಾಗಿದ್ದ ಅವರೀಗ `ಅಂಬುಜ’ ಚಿತ್ರದ ನಾಯಕಿಯಾಗಿ, ವಿಶಷ್ಟ ಪಾತ್ರವೊಂದರ ಮೂಲಕ ಹಿರಿತೆರೆಯ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ.
ಸಾಮಾನ್ಯವಾಗಿ, ನಟಿಯರನೇಕರು ಏಕಾಏಕಿ ಪಕ್ಕಾ ಕಮರ್ಶಿಯಲ್ ಪ್ರಕಾರದ ಸಿನಿಮಾದಲ್ಲಿ ಅವಕಾಶ ಸಿಕ್ಕು ಮಿಂಚಿಬಿಡುವ ಆಲೋಚನೆಯಲ್ಲಿರುತ್ತಾರೆ. ಅಂಥವರ ನಡುವೆ, ನಾಯಕಿ ಪಾತ್ರ ಸಿಗದಿದ್ದರೂ ಪರವಾಗಿಲ್ಲ; ಸಣ್ಣ ಪಾತ್ರವಾದರೂ ಅದು ನೋಡುಗರ ಮನಸಲ್ಲುಳಿಯಬೇಕೆಂಬ ತುಡಿತ ಹೊಂದಿರುವವರು ವಿರಳ. ಆ ಯಾದಿಯಲ್ಲಿ ರಜನಿ ನಿಸ್ಸಂದೇಹವಾಗಿಯೂ ಸೇರ್ಪಡೆಗೊಳ್ಳುತ್ತಾರೆ. ವಿಶೇಷವೆಂದರೆ, ಆರಂಭಿಕ ಹೆಜ್ಜೆಯಲ್ಲಿಯೇ ಅವರಿಗೆ ಅಂಬುಜ ಚಿತ್ರದ ಮೂಲಕ ದೊಡ್ಡ ಅವಕಾಶವೇ ಸಿಕ್ಕಿದೆ. ಲಂಬಾಣಿ ಹುಡುಗಿಯಾಗಿ, ನಾನಾ ಶೇಡುಗಳಿರುವ ಪಾತ್ರವೊಂದಕ್ಕೆ ಜೀವ ತುಂಬಿರುವ ಖುಷಿ, ಪ್ರಧಾನ ಪಾತ್ರವೇ ಸಿಕ್ಕಿರುವ ಧನ್ಯತೆ ರಜನಿಗಿದೆ.
ಅವರೇ ಹೇಳುವ ಪ್ರಕಾರ ಇದೊಂದು ಚಾಲೆಂಜಿಂಗ್ ಪಾತ್ರ. ತಯಾರಿಯಿಲ್ಲದ ಹೊರತು ಆಳಕ್ಕಿಳಿದ ಆವಾಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂಥಾ ಕ್ಯಾರೆಕ್ಟರ್ ಅದು. ಅದಕ್ಕಾಗಿ ಮಾಡಿಕೊಂಡ ತಯಾರಿಗಳೇ ನಟಿಯಾಗಿ ರಜನಿಗೆ ಹೊಸಾ ಅನುಭವಗಳನ್ನು ಕಟ್ಟಿಕೊಟ್ಟಿದೆ. ಕೇವಲ ನಟನೆ ಮಾತ್ರವಲ್ಲ; ಲಂಬಾಣಿ ಶೈಲಿಯ ಉಡುಗೆಯನ್ನು ತೊಟ್ಟುಕೊಳುವುದು ಕೂಡಾ ರಜನಿ ಪಾಲಿಗೆ ಸವಾಲಾಗಿತ್ತು. ಆ ಕಾಸ್ಟ್ಯೂಮು ತಯಾರಾದ ಬಗ್ಗೆಯೇ ರಜನಿ ರಸವತ್ತಾದ ಪ್ರಸಂಗವೊಂದನ್ನು ಹಂಚಿಕೊಳ್ಳುತ್ತಾರೆ. ಪರಿಪೂರ್ಣವಾದ ಲಂಬಾಣಿ ಉಡುಗೆಯನ್ನು ಆ ಸಮುದಾಯದ ನುರಿತವರಿಂದ ಸ್ಟಿಚ್ ಮಾಡಿಸಲು ನಿರ್ದೇಶಕರು ತೀರ್ಮಾನಿಸಿದ್ದರು. ನಿರ್ಮಾಪಕರೂ ಅದಕ್ಕೆ ಅಸ್ತು ಅಂದಿದ್ದರು. ಆ ಪಾತ್ರ ಅತ್ಯಂತ ಸಹಜವಾಗಿ ಮೂಡಿ ಬರಬೇಕೆಂಬುದು ಸದರಿ ತೀರ್ಮಾನದ ಉದ್ದೇಶವಾಗಿತ್ತು. ನಮಗೆ ಲಂಬಾಣಿ ಉಡುಗೆಗಳು ಅಪರಿಚಿತವೇನಲ್ಲ. ಆದರೆ ಅದನ್ನು ತಯಾರಿಸೋದೊಂದು ಸುದೀರ್ಘವಾದ ಪ್ರಕ್ರಿಯೆ. ಒಂದೇ ಒಂದು ಉಡುಗೆಯ ತಯಾರಿಗೆ ಭರ್ತಿ ಆರು ತಿಂಗಳು ಹಿಡಿದಿತ್ತಂತೆ!
ಇನ್ನು ಆ ಸಮುದಾಯದ ಮಹಿಳೆಯರು, ಹೆಣ್ಣುಮಕ್ಕಳ ಹಾವಭಾವಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸವಾಲೂ ಕೂಡಾ ರಜನಿಗೆದುರಾಗಿತ್ತು. ಗದಗಿನ ತಾಂಡಾವೊಂದರಲ್ಲಿ ಚಿತ್ರೀಕರಣ ನಡೆಸೋದಾಗಿ ತೀರ್ಮಾನವಾದದ್ದೇ, ರಜನಿ ತಾಂಡಾಗೆ ಎಂಟರಿ ಕೊಟ್ಟಿದ್ದರು. ಆ ನಂತರ ಬಹುಕಾಲ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಆ ಪಾತ್ರವನ್ನು ಒಳಗಿಳಿಸಿಕೊಂಡಿದ್ದರು. ಆ ನಂತರ ಚಿತ್ರೀಕರಣ ಶುರುವಾದದ್ದೇ ಕಾಸ್ಟ್ಯೂಮಿನ ಅಸಲೀ ಕಿಮ್ಮತ್ತು ರಜನಿಯ ಅನುಭವಕ್ಕೆ ಬರಲಾರಂಭಿಸಿತ್ತು. ಯಾಕೆಂದರೆ, ಮೇಲುನೋಟಕ್ಕೆ ವಿಶೇಷವಾಗಿ ಕಾಣಿಸುವ ಆ ಸಮುದಾಯದ ಹೆಂಗಳೆಯರು ಧರಿಸೋ ಬಟ್ಟೆ ಊಹೆಗೆ ನಿಲುಕದಷ್ಟು ಭಿನ್ನವಾಗಿರುತ್ತದೆ. ರಜನಿಗಾಗಿ ಆರು ತಿಂಗಳು ಕಾಲ ತಯಾರಾಗಿದ್ದ ಲಂಬಾಣಿ ಶೈಲಿಯ ದಿರಿಸು ಇಪ್ಪತೈದು ಕೇಜಿಗೂ ಅಧಿಕ ತೂಕವಿತ್ತು.
ಅಷ್ಟು ತೂಕದ ಬಟ್ಟೆ ಧರಿಸಿ, ಗಂಟೆಗಟ್ಟಲೆ ಚಿತ್ರೀಕರಣದಲ್ಲಲಿ ಭಾಗಿಯಾಗೋದೊಂದು ಸವಾಲು. ಅದರಲ್ಲಿಯೂ ಅದೇ ಬಟ್ಟೆ ಧರಿಸಿ ಹಾಡೊಂದಕ್ಕೆ ಹೆಜ್ಜೆ ಹಾಕಬೇಕಾಗಿ ಬಂದಾಗ ರಜನಿಗೂ ಒಂದಷ್ಟು ಅಳುಕು ಮೂಡಿತ್ತಂತೆ. ಮೋಹನ್ ಮಾಸ್ಟ್ ಕೋರಿಯೋಗ್ರಫಿ ಮಾಡಿದ್ದ ಆ ಹಾಡಿಗಾಗಿ ನಾಲಕ್ಕು ರಾತ್ರಿ ನಿರಂತರವಾಗಿ ಚಿತ್ರೀಕರಣ ನಡೆದಿತ್ತಂತೆ. ಒಟ್ಟಾರೆ ಹತ್ತಕ್ಕೂ ಹೆಚ್ಚು ದಿನಗಳ ಆ ಭಾಗದ ಚಿತ್ರೀಕರಣವನ್ನು ರಜನಿ ಅಕ್ಷರಶಃ ಸಂಭ್ರಮಿಸಿದ್ದಾರೆ. ಅದು ಒಟ್ಟಾರೆ ಚಿತ್ರದ ಪ್ರಧಾನ ಅಂಶವಾಗಿದೆ ಹಾಗೂ ಅದಕ್ಕೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆಂಬ ಧನ್ಯತಾ ಭಾವ ಅವರಲ್ಲಿದೆ. ಇನ್ನುಳಿದಂತೆ ಆ ಪಾತ್ರ ಹರವು ಕೂಡಾ ವಿಸ್ತಾರವಾದದ್ದು. ಭಾವನಾತ್ಮಕವಾಗಿ ಮನಸಿಗಿಳಿಯುತ್ತಲೇ ನಾನಾ ಬಗೆಯಲ್ಲಿ ಕಾಡುವ ಗುಣಗಳನ್ನು ರಜನಿಯ ಪಾತ್ರ ಹೊಂದಿದೆಯಂತೆ.
maja talkiesಮೂಲತಃ ತುಮಕೂರಿನವರಾದ ರಜನಿ ಪಾಲಿಗೆ ಓರ್ವ ನಟಿಯಾಗಿ ಅಂಬುಜ ವಿಶೇಷ ಚಿತ್ರ. ಈ ಮೂಲಕ ಇಷ್ಟು ವರ್ಷಗಳ ಕಾಲದ ಸುದೀರ್ಘ ಪಯಣವೊಂದು ಸಾರ್ಥಕಗೊಂಡಂತಾಗಿದೆ. ಅಮೃತವರ್ಶಿಣಿ ಎಂಬ ಧಾರಾವಾಹಿಯ ನಾಯಕಿಯಾಗಿ ನಟನೆಗಿಳಿದ್ದಿದ್ದ ರಜನಿ ಬಹುಮುಖ ಪ್ರತಿಭೆ. ನೃತ್ಯ, ನಟನೆ, ಗಾಯನ ಹೀಗೆ ಎಲ್ಲದಕ್ಕೂ ಸೈ ಅನ್ನುವವರು ರಜನಿ. ಅಮೃತವರ್ಶಿಣಿ ಧಾರಾವಾಹಿಯ ನಂತರದಲ್ಲಿ ಮಜಾ ಟಾಕೀಸ್ ಶನಲ್ಲಿಯೂ ಆಕೆ ಕಾಣಿಸಿಕೊಂಡಿದ್ದರು. ಡ್ಯಾನ್ಸಿಂಗ್ ಶೋ ಮೂಲಕವೂ ಪ್ರಸಿದ್ಧಿ ಪಡೆದುಕೊಂಡಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಹಿಟ್ಲರನ ಮನದನ್ನೆ ಅಂತರಾ ಪಾತ್ರದಲ್ಲಿಯೂ ರಜನಿ ನಟಿಸುತ್ತಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಅಂಬುಜ ಚಿತ್ರ ಇದೇ ಜುಲೈ 21ರಂದು ಬಿಡುಗಡೆಗೊಳ್ಳಲಿದೆ.