ವರ್ಷಾಂತರದ ಹಿಂದೆ ಕಾಸ್ಟಿಂಗ್ ಕೌಚ್ (casting couch) ಅಂತೊಂದು ಅಭಿಯಾನ ಭಾರತೀಯ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸಿನಿಮಾದ ಮರೆಯಲ್ಲಿ ತೀಟೆ ತೀರಿಸಿಕೊಳ್ಳುವ ಸ್ವಭಾವದ ಕೆಲ ನಿರ್ದೇಶಕರು, ಕಾಮುಕ ನಿರ್ಮಾಪಕರ ಬಣ್ಣ ಈ ಅಭಿಯಾನದ ಮೂಲಕವೇ ಬಯಲಾಗಿ ಹೋಗಿತ್ತು. ಕೆಲ ನಟಿಯರು ಬಿಡುಬೀಸಾಗಿ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಮಾತಾಡಿದ್ದೇ, ಚಿತ್ರರಂಗವನ್ನು ಲಾಗಾಯ್ತಿನಿಂದಲೂ ಆಳುತ್ತಾ ಬಂದಿರುವ ಪುರುಷ ಪ್ರಧಾನ ವ್ಯವಸ್ಥೆಯ ಬುಡ ಅದುರಿತ್ತು. ಅದು ಹಾಗೆಯೇ ಮುಂದುವರೆದಿದ್ದರೆ ಬಹುಶಃ ಇನ್ನೂ ಅನೇಕ ಅತಿರಥಮಹಾರಥರೇ ಲಂಗೋಟಿಗೂ ಗತಿಯಿಲ್ಲದಂತೆ ಬೀದಿಯಲಿ ನಿಲ್ಲಬೇಕಾಗುತ್ತಿತ್ತೇನೋ. ಆದರೆ, ಒಳಗೊಳಗೇ ಕಾಣದ ಶಕ್ತಿಗಳು ಆ ಅಭಿಯಾನದ ಕತ್ತು ಹಿಸುಕಿದರೂ, ಆಗೊಮ್ಮೆ ಈಗೊಮ್ಮೆ ಕೆಲ ಗಟ್ಟಿಗಿತ್ತಿಯರು ಆ ಬಗ್ಗೆ ಮಾತಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿಯ (suchitara krishnamurthi) ಸರದಿ ಬಂದಿದೆ!
ಇತ್ತೀಚೆಗಷ್ಟೇ ಸುಚಿತ್ರಾ ಕೃಷ್ಣಮೂರ್ತಿಯ ಖಾಸಗೀ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. ಸಿನಿಮಾ ರಂಗದಲ್ಲಿ ಮಾಮೂಲೆಂಬಂತೆ ಆಕೆ ಗಂಡನಿಂದ ವಿಚ್ಚೇದನ ಪಡೆದುಕೊಂಡಿದ್ದರು. ಈ ಮೂಲಕ ಸುದೀರ್ಘವಾದ ಸಾಹಚರ್ಯವೊಂದು ಕೊನೆಗೊಂಡಿರುವ ಸಂಕಟದಲ್ಲಿದ್ದಾರೆ ಸುಚಿತ್ರಾ. ಇದೆಲ್ಲದರ ನಡುವೆ ಆಕೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಸಿದ್ಧಾರ್ಥ ಕಣ್ಣನ್ ಎಂಬವರೊಂದಿಗೆ ಮಾತಾಡುತ್ತಾ ಸುಚಿತ್ರಾ ತಾನು ಒಂದು ಕಾಲದಲ್ಲಿ ಕಂಡುಂಡ ಕಹಿ ಘಟನೆಗಳ ಬಗ್ಗೆ ಮಾತಾಡಿದ್ದಾರೆ. ಅಪ್ಪ ಪಕ್ಕದ ರೂಮಿನಲ್ಲಿದ್ದಾರೆಂದರೂ, ಈ ರಾತ್ರಿ ನನ್ನೊಂದಿಗಿರು ಅಂದಿದ್ದ ಲಜ್ಜೆಗೇಡಿ ನಿರ್ಮಾಪಕನೊಬ್ಬನ ಬಗ್ಗೆ ಹೇಳಿಕೊಂಡಿದ್ದಾರೆ. ಆಘಾತಕಾರಿ ಅಂಶವೆಂದರೆ, ಕೇಲವ ಒಬ್ಬ ನಿರ್ಮಾಪಕ ಮಾತ್ರವಲ್ಲದೇ, ಹಲವರಿಂದ ಆ ಥರದ ಮಾನಸಿಕ ಹಿಂಸೆ ಅನುಭವಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಸುಚಿತ್ರಾ ಹೇಳಿಕೊಂಡಿರುವ ಪ್ರಕಾರ, ಆಕೆ ನಟಿಯಾಗಿದ್ದ ಬಹುಪಾಲು ವರ್ಷಗಳಲ್ಲಿ ಅಡಿಗಡಿಗೆ ಇಂಥಾ ಮಾನಸಿಕ ಕಿರುಕುಳಗಳು ಸಾಕಷ್ಟು ನಡೆದಿವೆ. ಹೀಗೆ ಕಾಸ್ಟಿಂಗ್ ಕೌಚ್ ಮೂಲಕ ಸುದ್ದಿಯಲ್ಲಿರುವ ಸುಚಿತ್ರಾ ಕೃಷ್ಣಮೂರ್ತಿ ಶಾರೂಖ್ ಖಾನ್ ಅಭಿನಯದ ಕಭಿ ಹಾಂ ಕಭಿ ನಾ ಚಿತ್ರದ ಮೂಲಕ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡಿದ್ದರು. ಆ ನಂತರದಲ್ಲಿ ಗಾಯಕಿಯಾಗಿ, ನಟಿಯಾಗಿ ಒಂದಷ್ಟು ಪ್ರಸಿದ್ಧಿಯನ್ನೂ ಪಡೆದುಕೊಂಡಿದ್ದರು. ಒಟ್ಟಾರೆಯಾಗಿ ಸುಚಿತ್ರ ಹೇಳಿಕೆಯ ಮೂಲಕ ಕಾಸ್ಟಿಂಗ್ ಕೌಚ್ ಎಂಬುದು ಸಾರ್ವಕಾಲಿಕ ಪಿಡುಗಿನಂತೆಯೇ ಗೋಚರಿಸುತ್ತದೆ. ಹೆಣ್ಣನ್ನು ಭೋಗದ ವಸ್ತುವಿನಂತೆ ಕಾಣುವ ಸಿನಿಮಾ ರಂಗದ ಕೆಲ ಕೀಚಕರಿಗೆ ತಕ್ಕ ಶಾಸ್ತಿಯಾಗದ ಹೊರತು ಅದು ಮುಂದುವರೆಯುತ್ತಲೇ ಇರುತ್ತದೆ…