ಶ್ರೀನಿ ಹನುಂತರಾಜು ನಿರ್ದೇಶನದ ಅಂಬುಜ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಸಾಗಬಹುದಾದ ಸಮ್ಮೋಹಕ ಹಾದಿಯಿದೆಯಲ್ಲಾ? ಈ ಸಿನಿಮಾ ಅದರಲ್ಲಿಯೇ ಪರಿಣಾಮಕಾರಿಯಾಗಿ ಹಾದು ಬಂದಿದೆ. ಬೇರ್ಯಾವುದೋ ಮಾಯೆಯ ಬೆಂಬಿದ್ದು ಸಿನಿಮಾ ನಿರ್ಮಾತೃಗಳೆಲ್ಲ ರೇಸಿನಲ್ಲಿರುವಾಗ, ಮಹಿಳಾ ಪ್ರಧಾನ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿದೆ. ಆ ನಿರ್ವಾತ ಸ್ಥಿತಿಯನ್ನು ನೀಗುವಂತೆ ಇದೀಗ ಅಂಬುಜ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಸಿನಿಮಾ ಮಂದಿರಗಳತ್ತ ಮೆರವಣಿಗೆ ಹೊರಟಿದೆ. ಶುಭಾ ಪೂಂಜಾ ಒಂದಷ್ಟು ಸಮಯದ ನಂತರ ಈ ಸಿನಿಮಾದಲ್ಲಿ ಮನಸಿಗಿಳಿಯುವ ಪಾತ್ರ ಮಾಡಿರುವ ಲಕ್ಷಣಗಳಿವೆ. ಸೀರಿಯಲ್ಲುಗಳಲ್ಲಿ ಹೆಸರಾಗಿದ್ದ ರಜನಿನ ಕೂಡಾ ಅಂಥಾದ್ದೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವೆಂದರೆ, ಕಾಮಿಡಿ ಕಿಲಾಡಿಗಳು ಶೋನಿಂದ ಬೆಳಕಿಗೆ ಬಂದು, ಕೆಜಿಎಫ್ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿರುವ ಪ್ರತಿಭಾನ್ವಿತ ನಟ ಗೋವಿಂದೇಗೌಡ ಕೂಡಾ ಈ ಚಿತ್ರದಲ್ಲಿ ಚೆಂದದ್ದೊಂದು ಪಾತ್ರವಾಗಿದ್ದಾರೆ.
ಸಿನಿಮಾ, ರಂಗಭೂಮಿ ವಲಯದಲ್ಲಿ ಪ್ರೀತಿಯಿಂದ ಜಿಜಿ ಅಂತ ಜನಜನಿತವಾಗಿರುವವರು ಗೋವಿಂದೇಗೌಡ. ಹಳ್ಳಿಗಾಡೊಂದರಲ್ಲಿ ಹುಟ್ಟಿ, ತಬ್ಬಲಿತನವನ್ನು ಬೆನ್ನಿಗಂಟಿಸಿಕೊಂಡು ಬೆಳೆದ ಜಿಜಿ ಈಗ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಒಟ್ಟೊಟ್ಟಿಗೆ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ಜಿಜಿ, ಅಂಬುಜಾ ಚಿತ್ರವನ್ನು ತನ್ನ ವೃತ್ತಿ ಬದುಕಿನ ಮಹತ್ವದ ಸಿನಿಮಾವೆಂತಲೂ ಪರಿಭಾವಿಸಿಕೊಂಡಿದ್ದಾರೆ. ಯಾಕೆಂದರೆ, ಇಲ್ಲಿ ಕಾಮಡಿಯಾಚೆಗೆ ಹರವುಳ್ಳ, ಸಿನಿಮಾದುದ್ದಕ್ಕೂ ಚಲಿಸುವ, ಒಟ್ಟಾರೆ ಕಥೆಯ ಆತ್ಮಕ್ಕೆ ಅಂಟಿಕೊಂಡು ಸಾಗುವ ಅಪರೂಪದ ಪಾತ್ರವೊಂದು ಅವರಿಗೆ ಸಿಕ್ಕಿದೆಯಂತೆ. ಈ ಪಾತ್ರದ ಜೊತೆಜೊತೆಗೇ ಕುತೂಹಲವೂ ಹರಳುಗಟ್ಟಿಕೊಳ್ಳುವಂತಿದೆಯಂತೆ. ನಿಜ, ಕಲಾವಿದನ ಪಾಲಿದೆ ಪ್ರತಿಯೊಂದು ಸಿನಿಮಾ ಕೂಡಾ ಮಹತ್ವದ್ದೇ. ಆದರೆ, ಮಹಿಳಾ ಪ್ರಧಾನ ಚಿತ್ರವೆಂಬ ಚೌಕಟ್ಟಿನಾಚೆಗೆ ಹೊಸತನ ಹೊದ್ದು ಹಬ್ಬಿಕೊಂಡಿರುವ ಅಂಬುಜಾ ಬಗ್ಗೆ ಗೋವಿಂದೇಗೌಡರೊಳಗೆ ವಿಶೇಷ ನಿರೀಕ್ಷೆಗಳಿರೋದಂತೂ ಸತ್ಯ!
ನಿರ್ದೇಶಕ ಶ್ರೀನಿ ನಿರ್ಮಾಪಕರು ಬರೆದ ಕಥೆಗೆ ಸಿನಿಮಾ ಫ್ರೇಮು ಹಾಕಲು ಎಷ್ಟು ಪರಿಶ್ರಮ ಪಟ್ಟಿದ್ದಾರೋ, ಅಷ್ಟೇ ಎಚ್ಚರಿಕೆಯನ್ನು ಪಾತ್ರ ವರ್ಗದ ಆಯ್ಕೆಯ ವಿಚಾರದಲ್ಲಿಯೂ ಪ್ರದರ್ಶಿಸಿದ್ದಾರೆ. ಅದೊಂದು ಪಾತ್ರ ಸೃಷ್ಟಿಯಾಗುತ್ತಲೇ ಜಿಜಿ ಅದಕ್ಕೆ ಸೂಕ್ತವೆಂಬ ಭಾವವೊಂದು ಅವರೊಳಗೆ ಮೂಡಿಕೊಂಡಿತ್ತು. ನಂತರ ಇಂಥಾದ್ದೊಂದು ಪಾತ್ರ ಮುಖಾಮುಖಿಯಾಗುತ್ತಲೇ ಜಿಜಿ ಕೂಡಾ ಅತ್ಯಂತ ಉತ್ಸಾಹದಿಂದ ಅದನೊಪ್ಪಿಕೊಂಡಿದ್ದರಂತೆ. ಒಂದು ಕಥೆ, ಪಾತ್ರದ ಬಗ್ಗೆ ಕೇಳಿದ ಕ್ಷಣದಲ್ಲಿ ಸುಂದರ ಕಲ್ಪನೆಯೊಂದು ಹುಟ್ಟಿಕೊಳ್ಳುತ್ತದಲ್ಲಾ? ಅದನ್ನು ಮೀರಿ ಅಂಬುಜ ಚಿತ್ರ ಮೂಡಿ ಬಂದಿದೆ ಎಂಬ ತುಂಬು ಖುಷಿ ಜಿಜಿಯವರಲ್ಲಿದೆ.
ಗೋವಿಂದೇಗೌಡ ಯಾವುದೇ ಸಿನಿಮಾದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆಂದರೆ, ಅದರ ಬಗೆಗೊಂದು ನಿರೀಕ್ಷೆ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ, ಯಾವುದೇ ಪಾತ್ರವನ್ನಾದರೂ ದಿ ಬೆಸ್ಟ್ ಎಂಬಂತೆ ನನಿಭಾಯಿಸಬಲ್ಲ ಛಾತಿ ಜಿಜಿಗಿದೆ. ಒಂದು ಕಾಲದಲ್ಲಿ ನಟನೆ ಮತ್ತು ರಂಗಭೂಮಿಯ ಹುಚ್ಚುಹತ್ತಿಸಿಕೊಂಡು ಬೆಂಗಳೂರಿನ ಒಡಲು ಸೇರಿಕೊಂಡಿದ್ದವರು ಜಿಜಿ. ಬಹುಶಃ ಅಂಥಾದ್ದೊಂದು ಹುಚ್ಚಿಲ್ಲದೇ ಹೋದರೆ ಕಲೆಯ ಜಾಡು ಹಿಡಿದು ಹೊರಡುವ, ಅದರಿಂದಲೇ ಬದುಕನ್ನೂ ಕಟ್ಟಿಕೊಳ್ಳುವ ಹುಂಬತನವೊಂದು ಹುಟ್ಟಲು ಸಾಧ್ಯವಿಲ್ಲ. ಅದನ್ನು ಸ್ವಂತವಾಗಿಸಿಕೊಂಡಿದ್ದ ಜಿಜಿ ಮೊದಲಿಗೆ ರಂಗಭೂಮಿ ಪರಿಸರದ ತೆಕ್ಕೆಗೆ ಜಾರಿದ್ದರು.
ಶಾಂತಲ ಕಲಾ ಸರಸ್ವತಿ, ಶಾಂತಲಾ ಕಲಾ ಸಂಘ ಮುಂತಾದ ಹವ್ಯಾಸಿ ನಾಟಕ ತಂಡಗಳ ಸಾಹಚರ್ಯ ಜಿಜಿಗೆ ಸಿಕ್ಕಿತ್ತು. ಅಲ್ಲಿಯೇ ಆಂಜನೇಯ ಎಂಬ ಗುರುವಿನ ಸಾನಿಧ್ಯವೂ ಲಭಿಸಿತು. ಅವರ ಮಾರ್ಗದರ್ಶನದೊಂದಿಗೆ ಅಲ್ಲಿಯೇ ಏನೇನು ಕಲಿಯುವ ಸಾಧ್ಯತೆಗಳಿವೆಯೋ ಅದೆಲ್ಲದಕ್ಕೂ ತೆರೆದುಕೊಡವರು ಜಿಜಿ. ಆ ಬಳಿಕ ಲೈಟಿಂಗ್ಸ್, ಹಿನ್ನೆಲೆ ಗಾಯನ, ನಟನೆ, ನಿರ್ದೇಶನ, ಸ್ಕ್ರಿಪ್ಟ್ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಳ್ಳಲು ಪ್ರಯತ್ನಿಸಿದ್ದರು. ಹಾಗೆ ಒಂದು ಹಂತಕ್ಕೆ ಅನುಭವ ತುಂಬಿಕೊಂಡ ನಂತರವಷ್ಟೇ ಜಿಜಿ ತನ್ನೊಳಗಿನ ಕನಸಾಗಿದ್ದ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡುವ ಮನಸು ಮಾಡಿದ್ದರು. ಆಗ ಸಿಕ್ಕವರು ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್.
ಹಾಗೆ ವಿ. ಮನೋಹರ್ ಅವರ ಗರಡಿ ಸೇರಿಕೊಂಡ ಜಿಜಿಗೆ ಅನೂಹ್ಯ ಜಗತ್ತೊಂದರ ಪರಿಚಯವಾಗಿತ್ತು. ಮನೋಹರ್ ಅವರ ಅಸಿಸ್ಟೆಂಟ್ ಆಗಿ ಒಂದಷ್ಟು ಸಿನಿಮಾಗಳಿಗೆ ಕೆಲಸ ಮಾಡಿ, ಹಾಡನ್ನೂ ಬರೆಯಲಾರಂಭಿಸಿದ್ದರು. ಈ ಸಿನಿಮಾ ಯಾನದಲ್ಲಿಯೇ ನವರಸನಾಯಕ ಜಗ್ಗೇಶ್ ಪರಿಚಯವಾಗಿದ್ದರು. ಅವರ ಸಲಹೆ ಸೂಚನೆಗಳ ಮೇರೆಗೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸುವ ಅವಕಾಶವ ಜಿಜಿಗೆ ಸಿಕ್ಕಿತ್ತು. ಅದುವರೆಗೂ ಎಲೆಮತೆಯ ಕಾಯಿಯಂತಿದ್ ಗೋವಿಂದೇಗೌಡರ ಪಾಲಿಗೆ ಭಾಗ್ಯದ ಬಾಗಿಲು ತೆರೆದಂತಾಗಿದ್ದು ಆವಾಗಿನಿಂದಲೇ. ಆ ಶೋನಲ್ಲಿ ಚೆಂದದ ನಟನೆಯಿಂದ ಜಿಜಿ ಪ್ರೇಕ್ಷಕರ ಮನಗೆದ್ದಿದ್ದರು. ಅದೇ ಪ್ರಭೆಯಲ್ಲಿ ಕೆಜಿಎಫ್ ಸರಣಿಯಲ್ಲಿ ಅವಕಾಶವೂ ಸಿಕ್ಕಿತ್ತು.
comedy kiladigaluಅಲ್ಲಿಂದಾಚೆಗೆ ಗೋವಿಂದೇ ಗೌಡರ ವೃತ್ತಿಬದುಕಿನ ದಿಕ್ಕು ಬದಲಾಗಿದೆ. ಬದುಕಿನ ಅನಿಶ್ಚಿತತೆಗಳೆಲ್ಲವೂ ನೀಗಿದಂತಾಗಿ ಕೈ ತುಂಬಾ ಅವಕಾಶದೊಂದಿಗೆ ಮುಂದುವರೆಯುತ್ತಿದ್ದಾರೆ. ಸದ್ಯಕ್ಕೆ ನಮೋ ಭೂತಾತ್ಮ, ಯೋಗರಾಜ್ ಭಟ್ ನಿರ್ದೇಶನದ ನಮೋ ಭೂತಾತ್ಮ ಮುಂತಾದ ಸಿನಿಮಾಗಳ ಜೊತೆಗೆ, ತೆಲುಗು ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇನ್ನೊಂದಷ್ಟು ಸಿನಿಮಾಗಳಲ್ಲಿಯೂ ನಟಿಸುವವರಿದ್ದಾರೆ. ಹೀಗೆ ಕೈ ತುಂಬಾ ಅವಕಾಶಗಳನ್ನು ಹೊಂದಿರುವ ಜಿಜಿ, ಸದ್ಯಕ್ಕೆ ಅಂಬುಜ ಚಿತ್ರದತ್ತ ನಿರೀಕ್ಷೆಯ ನೋಟ ನೆಟ್ಟಿದ್ದಾರೆ.