ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ ಸ್ಟಾರರ್ ಸಿನಿಮಾಗಳ ತಪನೆಯೂ ಕೂಡಾ ಒಂದಾಗಿ ಗುರುತಿಸಿಕೊಳ್ಳುತ್ತದೆ. ತಮ್ಮಿಷ್ಟದ ನಟರೆಲ್ಲರನ್ನೂ ಒಂದೇ ಫ್ರೇಮಿನಲ್ಲಿ, ಒಂದಿಡೀ ಸಿನಿಮಾದಲ್ಲಿ ನೋಡುವಂತಾದರೆ ಅದಕ್ಕಿಂತಲೂ ಖುಷಿ ಬೇರೇನಿದೆ? ಆದರೆ, ಕನ್ನಡದ ಮಟ್ಟಿಗೆ ಅಂಥಾ ಖುಷಿ ಸಿಕ್ಕಿದ್ದು ತುಂಬಾನೇ ವಿರಳ. ಗಮನೀಯ ಅಂಶವೆಂದರೆ, ಹಾಗೆ ಸಿಕ್ಕ ಸಣ್ಣ ಖುಷಿಗಳಲ್ಲಿ (shivarajkumar) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರ ಇದ್ದೇ ಇದೆ. ಇದೀಗ ಹುಟ್ಟುಹಬ್ಬದ ಘಳಿಗೆಯಲ್ಲಿ ಶಿವಣ್ಣನ ಕಡೆಯಿಂದ (shivanna) ಸಮಸ್ತ ಪ್ರೇಕ್ಷಕರೂ ಸಂಭ್ರಮಿಸುವಂಥಾ ಸುದ್ದಿ ಜಾಹೀರಾಗಿದೆ!
ಆ ಸುದ್ದಿಯನ್ನಾಧರಿಸಿ ಹೇಳುವುದಾದರೆ, ಕನ್ನಡ ಸಿನಿಮಾ ಪ್ರೇಮಿಗಳಿಗೆ ಡಬಲ್ ಧಮಾಕಾವೇ ಎದುರಾಗಲಿದೆ. ಯಾಕೆಂದರೆ, ಶಿವಣ್ಣ ಒಂದರ ಹಿಂದೊಂದರಂತೆ ಎರಡೆರಡು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲೊಂದು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನದ್ದು. ಈ ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶನ ಮಾಡಲಿದ್ದಾರೆ. ಎಂ.ಬಿ ಬಾಬು ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕಾಗಿ ಈಗಾಗಲೇ ಒಂದಷ್ಟು ತಯಾರಿಗಳು ನಡೆದಿವೆ. ಕಥೆ ಯಾವ ಬಗೆಯದ್ದ? ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆಂಬುದೂ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಇಷ್ಟರಲ್ಲಿಯೇ ಥ್ರಿಲ್ ಆಗುವಂಥಾ ಉತ್ತರ ಸಿಗಲಿದೆ.
ಇನ್ನುಳಿದಂತೆ ಮತ್ತೊಂದು ಚಿತ್ರದಲ್ಲಿ ಕೃಷ್ಣ ಅಜೇಯ್ ರಾವ್ ಶಿವಣ್ಣನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಚಾರದಲ್ಲಿಯೂ ಸಾಕಷ್ಟು ಕೆಲಸ ಕಾರ್ಯಗಳು ನಡೆಯುತ್ತಿವೆ. ಅದೂ ಕೂಡಾ ಬಿಗ್ ಬಜೆಟ್ ಚಿತರವೆಂದೇ ಹೇಳಲಾಗುತ್ತಿದೆ. ಈ ಸಿನಿಮಾ ಮೂಲಕ ಅಜೇಯ್ ರಾವ್ ನಸೀಬು ಬದಲಾಗುವ ನಿರೀಕ್ಷೆಗಳೂ ಇದ್ದಾವೆ. ಈವರೆಗೂ ಹಲವಾರು ಬಾರಿ ಕೃಷ್ಣಾವತಾರವೆತ್ತಿದರೂ ಕೂಡಾ ಅಜೇಯ್‍ರ ಪಾಲಿಗೊಂದು ದೊಡ್ಡ ಗೆಲುವು ದಕ್ಕಿರಲಿಲ್ಲ. ಪಕ್ಕಾ ಮಾಸ್ ಮೂಡಿನಲ್ಲಿ ಅಬ್ಬರಿಸಿದರೂ ಯಾವ ಫಾಯಿದೆಯೂ ಗಿಟ್ಟಿರಲಿಲ್ಲ. ಹೀಗಿರುವಾಗ ಅಜೇಯ್‍ಗೆ ಶಿವಣ್ಣನೊಂದಿಗೆ ನಟಿಸುವ ಅವಕಾಶ ಕೂಡಿ ಬಂದಿದೆ. ಅಂತೂ ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಖುಷಿಯ ಸುಗ್ಗಿಯಾಗೋ ಸೂಚನೆಗಳು ಗಾಢವಾಗಿ ಗೋಚರಿಸಲಾರಂಭಿಸಿವೆ!