ನೆಲಮೂಲದ ಕಥೆಯೊಂದು ದೃಷ್ಯರೂಪ ಧರಿಸಿಕೊಳ್ಳುವುದೇ ರೋಮಾಂಚಕ ವಿದ್ಯಮಾನ. ಸಹನೀಯ ಅಂಶವೆಂದರೆ, ಒಂದು ದೊಡ್ಡ ಗುಂಪು ಸಿದ್ಧಸೂತ್ರಗಳ ಸೆಳವಿಗೆ ಸಿಕ್ಕು ಮೆರವಣಿಗೆ ಹೊಟರುವಾಗ, ಮತ್ತೊಂದಷ್ಟು ಮನಸುಗಳು ಅದರ ಬಾಜಿನಲ್ಲಿ ನಿಂತು ಭಿನ್ನ ಕಥಾನಕವನ್ನು ಧ್ಯಾನಿಸುತ್ತವೆ. ನಮ್ಮ ನಡುವಿದ್ದೂ ಅರಿವಿಗೆ ನಿಲುಕದ ಸಿನಿಮಾ ಕಟ್ಟಿ, ಪ್ರೇಕ್ಷಕರ ಬೊಗಸೆಗಿಟ್ಟು ಅಚ್ಚರಿಗೀಡು ಮಾಡುತ್ತವೆ. ಅಂಥಾದ್ದೊಂದು ಕ್ರಿಯಾಶೀಲ ಮನಃಸ್ಥಿತಿ ಹೊಂದಿರುವವರು (sreeni hanumantharaju) ಶ್ರೀನಿ ಹನುಮಂತರಾಜು. ಈ ಯುವ ನಿರ್ದೇಶಕನ ನಿರ್ದೇಶನ ಮಾಡಿರುವ (ambuja) `ಅಂಬುಜ’ ಚಿತ್ರ ಆರಂಭದಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸುದ್ದಿ ಕೇಂದ್ರದಲ್ಲಿತ್ತು. ಇದೀಗ ಅಂಬುಜ ಪ್ರಾಮಿಸಿಂಗ್ ಟ್ರೈಲರ್ ಮೂಲಕ ಅಬ್ಬರಿಸಿದ್ದಾಳೆ. ಇದರೊಂದಿಗೆ ಈ ಸಿನಿಮಾದ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ!
ಉತ್ತರ ಕರ್ನಾಟಕ ಸೀಮೆಯ ಲಂಬಾಣಿ ತಾಂಡಾದ ಹೆಣ್ಣುಮಗಳೊಬ್ಬಳ ಸುತ್ತ ಜರುಗುವ ಕಥಾನಕ ಅಂಬುಜ ಚಿತ್ರದ ಜೀವಾಳ. ಅದು ಎಂಥಾ ಗುಣಲಕ್ಷಣಗಳನ್ನು ಒಳಗೊಂಡಿದೆ? ಕಥೆಯನ್ನು ನಿರ್ದೇಶಕರು ಯಾವ ರೀತಿಯಲ್ಲಿ ನಿರೂಪಿಸಿದ್ದಾರೆ? ಇದು ಯಾವ ಬಗೆಯ ಚಿತ್ರ ಎಂಬಿತ್ಯಾದಿ ಪ್ರಶ್ನೆಗಳು ಈವರೆಗೂ ಪ್ರೇಕ್ಷಕರನ್ನು ಕಾಡುತ್ತಿದ್ದವು. ಅದೆಲ್ಲದಕ್ಕೂ ಜಾಣ್ಮೆಯಿಂದ ಉತ್ತರಿಸುತ್ತಲೇ, ಸಿನಿಮಾಗಳಾಗಿ ಕಾಯುವ ಸಂಭ್ರಮವನ್ನು ದುಪ್ಪಟ್ಟುಗೊಳಿಸುವಲ್ಲಿ ಚಿತ್ರತಂಡ ಗೆದ್ದಿದೆ. ಯಾಕೆಂದರೆ, ಈ ಟ್ರೈಲರ್ ಆ ಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಆರಂಭದಲ್ಲಿ ಬೇರೆ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚಿದ್ದ ಅಂಬುಜ, ವಿಶಿಷ್ಟ ಅನುಭೂತಿ ನೀಡಬಲ್ಲ ಚಿತ್ರವಾಗಿತ್ತದೆಂಬ ನಂಬಿಕೆ ಸದರಿ ಟ್ರೈಲರ್ ಮೂಲಕ ನಿಚ್ಚಳವಾಗಿದೆ.
ಈಗಾಗಲೇ ಕಿರುತೆರೆ ಜಗತ್ತಿನಲ್ಲಿ ಹೆಸರುವಾಸಿಯಾಗಿ, ರಿಯಾಲಿಟಿ ಶೋಗಳಲ್ಲಿಯೂ ಮಿಂಚುತ್ತಿರುವ ರಜನಿ ಈ ಸಿನಿಮಾದ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾಲಿಗಿದು ಮೊದಲ ಚಿತ್ರ. ಇನ್ನುಳಿದಂತೆ ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಿರುವ ಶುಭಾ ಪೂಂಜಾ ಪಾಲಿಗಿದು ಐವತ್ತನೇ ಚಿತ್ರ. ದಾಸ ಪುರಂದರ ಅಂತೊಂದು ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತ ಗಳಿಸಿರುವ ದೀಪಕ್ ಸುಬ್ರಮಣ್ಯ ನಾಯಕನಾಗಿ, ಸವಾಲಿನ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ, ಕೆಜಿಎಫ್ ಫೇಮಿನಗೋವಿಂದೇಗೌಡ ಕೂಡಾಕೆಯುದ್ದಕ್ಕೂ ಕ್ಯಾರಿಯಾಗುವ ಚೆಂದದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ, ಪದ್ಮಜಾ ರಾವ್, ಬೇಬಿ ಆಕಾಂಕ್ಷಾ, ಮುಂಬೈನ ಮಾಡಲ್ ಜಗದೀಶ್ ಹಲ್ಕುಡೆ, ಸಂದೇಶ್ ಶೆಟ್ಟಿ, ನಿಶಾ ಹೆಗ್ಡೆ, ಗುರುದೇವ ನಾಗರಾಜ್ ಮುಂತಾದವರ ತಾರಾಗಣದಿಂದ ಅಂಬುಜ ಚಿತ್ರ ಕಳೆಗಟ್ಟಿಕೊಂಡಿದೆ.
ಈ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ನಿರ್ಮಾಣ ಮಾಡಿರುವವರು ಕಾಶಿನಾಥ್ ಡಿ ಮಡಿವಾಳರ್. ಲೋಕೇಶ್ ಭೈರವ ಮತ್ತು ಶಿವ್ರಕಾಶ್ ಸಹನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸನಿಮಾ ನಿರ್ಮಾಣವೆಂಬುದು ಪಕ್ಕಾ ವ್ಯವಹಾರ. ಇಂಥಾ ಜಗತ್ತಿನಲ್ಲಿರುವವರಿಗೆ ಸಾಹಿತ್ಯದಂಥಾ ಕ್ರಿಯಾಶೀಲ ಮಾಧ್ಯಮವನ್ನು ಸೋಕುವ ಮನಃಸ್ಥಿತಿ ಇರುವುದಿಲ್ಲ ಎಂಬಂಥಾ ನಂಬಿಕೆ ಮಾಮೂಲು. ಆದರೆ ಕಾಶಿನಾಥ್ ಮಾತ್ರ ಅದಕ್ಕೆ ಅಪವಾದದಂತಿದ್ದಾರೆ. ಯಾಕೆಂದರೆ, ಅಂಬುಜ ಕಥೆಗೆ ಹುಟ್ಟು ಕೊಟ್ಟವರೇ ಅವರು. ಈ ಚಿತ್ರಕ್ಕೆ ಕಥೆ, ಸಾಹಿತ್ಯವನ್ನು ಕಾಶಿನಾಥ್ ಒದಗಿಸಿಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಭಿನ್ನ ಅಭಿರುಚಿಯ ನಿರ್ಮಾಪಕರೊಬ್ಬರ ಆಗಮನವಾದಂತಿದೆ.
ಇನ್ನು ಈ ಸಿನಿಮಾ ಬಗ್ಗೆ ಒಂದಷ್ಟು ವಿಶೇಷತೆಗಳನ್ನು ಚಿತ್ರತಂಡ ಪಟ್ಟಿ ಮಾಡುತ್ತದೆ. ಈ ಹಿಂದೆಂದೂ ನೀವು ನೋಡಿರದ, ಹೆಜ್ಜೆ ಹೆಜ್ಜೆಯಲ್ಲಿಯೂ ಬೆಚ್ಚಿ ಬೀಳಿಸುವ ವಿಶಿಷ್ಟ ಕಥಾಹಂದರ ಇಲ್ಲಿದೆ ಎಂಬುದು ಚಿತ್ರತಂಡದ ಭವಸೆ. ಈ ಥರದ ಅಪರಾಧ ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಿರುವ ಜಗತ್ತಿನ ಮೊದಲ ಚಿತ್ರ ಅಂಬುಜಾ ಅಂತಲೂ ಚಿತ್ರತಂಡ ಆತ್ಮವಿಶ್ವಾಸದಿಂದಲೇ ಹೇಳುತ್ತದೆ. ಕಾಮಿಡಿ, ಲವ್, ಹಾರರ್, ಥ್ರಿಲ್ಲರ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಈ ಸಿನಿಮಾ, ಸರ್ವ ವರ್ಗದ ಪ್ರೇಕ್ಷಕರಿಗೂ ಹಿಡಿಸಲಿದೆ ಎಂಬ ಭರವಸೆಯೂ ಚಿತ್ರತಂಡದಲ್ಲಿದೆ. ಇನ್ನುಳಿದಂತೆ ಒಂದಷ್ಟು ಮೊದಲುಗಳು ಅಂಬುಜಾ ಅಕೌಂಟಿಗೆ ಜಮೆಯಾಗುತ್ತವೆ. ಎತ್ತಿನಬುಜ ಎಂಬ ಭಯಾನಕ ಮತ್ತು ಸುಂದರ ಜಾಗದಲ್ಲಿ ಚಿತ್ರೀಕರಣಗೊಂಡಿರೋ ಮೊದಲ ಚಿತ್ರವಿದು. ಈ ಮಹಿಳಾ ಪ್ರಧಾನವಾದ ಚಿತ್ರ, ಪ್ರತಿಯೊಂದರಲ್ಲಿಯೂ ಹೊಸತನವನ್ನೊಳಗೊಂಡಿದೆಯಂತೆ. ಹೀಗೆ ಟ್ರೈಲರ್ ಮೂಲಕ ಥ್ರಿಲ್‍ಗೊಳಿಸಿರುವ ಅಂಬುಜ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ.