ಸಿನಿಮಾ ಜಗತ್ತಿನ ಭವಿಷ್ಯದ ನಿಲ್ದಾಣವಾಗಿ ಸದ್ಯಕೆ ಓಟಿಟಿ (ott) ಪ್ಲಾಟ್ ಫಾರ್ಮ್ ಗಮನ ಸೆಳೆಯುತ್ತಿದೆ. ಅದೊಂಥರಾ ಮಾಯೆಯಿದ್ದಂತೆ. ಒಂದು ಕಾಲದಲ್ಲಿ ಇದು ಬರಖತ್ತಾಗೋ ಐಡಿಯಾನಾ ಅಂತೊಂದು ಸಂಶಯ ಮೂಡಿಸಿದ್ದ ಓಟಿಟಿ (ott) ಇದೀಗ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿಕೊಂಡಿದೆ. ಬಹುಶಃ ಜಗತ್ತಿನ ಜೀವಕೋಟಿಗಳನ್ನು ಸಂಕಷ್ಟಕ್ಕೆ ತಳ್ಳಿದ್ದ ಕೊರೋನಾ ಮಹಾಮಾರಿಯೇ ಓಟಿಟಿ ಫ್ಲಾಟ್ ಫಾರ್ಮಿಗೆ ವರವಾದಂತಿದೆ. ಯಾಕೆಂದರೆ, ಕೊರೋನಾ (corona) ಕಾಲಘಟ್ಟದಲ್ಲಿಯೇ ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಗೊಂಡಿದ್ದವು. ಅಲ್ಲಿಯೇ ಯಶ ಕಂಡಿದ್ದವು. ಅದರ ದೆಸೆಯಿಂದ ಈಗ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳೂ ಒಂದಷ್ಟು ಕಾಲದ ಬಳಿಕ ಓಟಿಟಿ ಎಂಟ್ರಿ ಕೊಡುತ್ತವೆ; ಅದೃಷ್ಟ ಪರೀಕ್ಷೆಗಿಳಿಯುತ್ತವೆ.
ಇಷ್ಟೆಲ್ಲವನ್ನು ಯಾಕೆ ಹೇಳಬೇಕಾಯಿತೆಂದರೆ, ವಾರಗಳ ಹಿಂದೆ ತೆರೆಕಂಡು ಅಷ್ಟೇನೂ ಯಶ ಕಾಣದಿದ್ದ ಧೂಮಂ (dhoomam) ಚಿತ್ರವೀಗ ಓಟಿಟಿ ಹೊಸ್ತಿಲಿನಲ್ಲಿದೆ. ಇದು ಮಲೆಯಾಳಂ ಭಾಷೆಯಲ್ಲಿ ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನಿರ್ಮಾಣ ಮಾಡಿದ್ದ ಚಿತ್ರ. ಹೇಳಿಕೇಳಿ ಅದ್ಭುತ ಕಲಾವಿದ ಫಹಾದ್ ಫಾಸಿಲ್ ನಟನೆಯ ಚಿತ್ರ. ವಿಶಿಷ್ಟ ಕಥಾನಕವನ್ನೊಳಗೊಂಡಿದ್ದ ಧೂಮಂ ದೊಡ್ಡ ಮಟ್ಟದಲ್ಲಿಪಯೇ ಗೆಲುವು ಕಾಣುತ್ತದೆಂದು ನಿರೀಕ್ಷಿಸಲಾಗಿತ್ತು. ಅದು ಕನ್ನಡದಲ್ಲಿಯೂ ಬಿಡುಗಡೆಗೊಂಡಿತ್ತು. ಆದರೆ, ಅವತರಣಿಕೆಯಲ್ಲಿ ಹೇಳಿಕೊಳ್ಳುವಂಥಾ ಗೆಲುವು ಕಾಣಲಿಲ್ಲ. ಅತ್ತ ಮಲೆಯಾಳಿಗರಿಗಾದರೂ ಇಷ್ಟವಾಯಿತಾ ಅಂತ ನೋಡ ಹೋದರೆ, ಆ ದಿಕ್ಕಿನಿಂದಲೂ ಸಪ್ಪೆಯೆನಿಸುವಂಥಾ ವಾತಾವರಣವೇ ಕಾಣಿಸುತ್ತಿದೆ.
ಇಂಥಾ ಹೊತ್ತಿನಲ್ಲಿಯೇ ಧೂಮಂ ಓಟಿಟಿಗೆ ಎಂಟರಿ ಕೊಡಲು ತಯಾರಿನಡೆಯುತ್ತಿದೆ. ಈಗಾಗಲೇ ಒಂದಷ್ಟು ಸಂಸ್ಥೆಗಳ ಜೊತೆಗೆ ವ್ಯವಹಾರ ಕುದುರಿಸಿಕೊಳ್ಳುವ ಕಾರ್ಯದಲ್ಲಿ ಹೊಂಬಾಳೆ ಮಂದಿ ಬ್ಯುಸಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಧೂಮಂ ಇಷ್ಟರಲ್ಲಿಯೇ ಓಟಿಟಿಯಲ್ಲಿ ಪ್ರತ್ಯಕ್ಷವಾಗಲಿದೆ. ಇದುವರೆಗೂ ಗೆಲುವು ಕಾಣುತ್ತಾ ಬಂದಿರುವ ಹೊಂಬಾಳೆಗೆ ಧೂಮಂ ಮೂಲಕ ಒಂದಷ್ಟು ಹಿನ್ನಡೆಯಾಗಿರೋದು ನಿಜ. ಆದರೆ, ಕಡೇ ಕ್ಷಣದ ಭರವಸೆ ಎಂಬಂತೆ ಓಟಿಟಿ ಈ ಸಂಸ್ಥೆಯ ಮುಂದಿದೆ. ಯಾಕೆಂದರೆ, ಸಿನಿಮಾ ಮಂದಿರಗಳಲ್ಲಿ ಜೈಸಿಕೊಳ್ಳಲಾರದ ಒಂದಷ್ಟು ಚಿತ್ರಗಳು ಓಟಿಟಿಯಲ್ಲಿ ಚಿಗಿತುಕೊಂಡಿವೆ. ಧೂಮಂ ಕಥೆ ಏನಾಗಲಿದೆ ಎಂಬುದು ಸದ್ಯದ ಕುತೂಹಲ…